ಮಂಡ್ಯ ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿರುವ ವಿಚಾರ ರಾಜ್ಯಾದ್ಯಂತ ಸದ್ದು ಮಾಡಿತ್ತು. ಈ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಮತ್ತೆ ಮತ್ತೆ ಘಟಿಸುತ್ತಿದ್ದು, ಇನ್ನೊಂದು ಭ್ರೂಣಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಮಾವಿನಕೆರೆ ಗ್ರಾಮದ ತೋಟದ ಮನೆಯಲ್ಲಿ ಹೆಣ್ಣುಭ್ರೂಣ ಪತ್ತೆ ದಂಧೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಭ್ರೂಣಲಿಂಗ ಪತ್ತೆ ಮಾಡುತ್ತಿದ್ದಾಗಲೇ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದರಿಂದ ಆರೋಪಿಗಳಿಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಗುರುವಾರ ತಡರಾತ್ರಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮೋಹನ್ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ, ಮನೆಯಲ್ಲಿ ಅಬಾರ್ಷನ್ ಕಿಟ್, ಸ್ಕ್ಯಾನಿಂಗ್ ಯಂತ್ರ ಪತ್ತೆಯಾಗಿದೆ. ಇದೇ ವೇಳೆ ಸ್ಥಳದಲ್ಲಿ ಹಾಸನ ಮೂಲದ ಗರ್ಭಿಣಿಯೂ ಇದ್ದರು. ಭ್ರೂಣಲಿಂಗ ಪತ್ತೆಗಾಗಿ ಗರ್ಭಿಣಿಯನ್ನು ಕರೆತರಲಾಗಿತ್ತು. ಗರ್ಭಿಣಿ ಮೂರನೇ ಹೆಣ್ಣುಭ್ರೂಣ ಅಬಾರ್ಷನ್ಗೆ ಬಂದಿದ್ದರು ಎಂಬುದು ತಿಳಿದುಬಂದಿದೆ.
ಆರೋಗ್ಯ ಇಲಾಖೆ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸದ್ಯ ಅಬಾರ್ಷನ್ ಕಿಟ್, ಸ್ಕ್ಯಾನಿಂಗ್ ಯಂತ್ರವನ್ನು ಸೀಜ್ ಮಾಡಿ, ಗರ್ಭಿಣಿಯ ಪತಿಯನ್ನು ಬಂಧಿಸಿದ್ದಾರೆ. ಸ್ಕ್ಯಾನಿಂಗ್ ಮಾಡುತ್ತಿದ್ದ ಪ್ರಮುಖ ಆರೋಪಿ ಅಭಿಷೇಕ್ ಪರಾರಿಯಾಗಿದ್ದಾನೆ. ಮನೆ ಮಾಲೀಕ ಧನಂಜಯ್ ಆರೋಗ್ಯ ಇಲಾಖೆ ಗ್ರೂಪ್ ಡಿ ಸಿಬ್ಬಂದಿ ಎನ್ನಲಾಗಿದೆ. ಈ ಹಿಂದೆ ಮಂಡ್ಯದ ಆಲೆಮನೆ ಹಾಗೂ ಆಸ್ಪತ್ರೆಗಳಲ್ಲಿ ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ದಂಧೆ ನಡೆಯುತ್ತಿತ್ತು.