ಮೀಸಲಾತಿ ಜಗಳ | ಪ್ರವರ್ಗ 2 ಎಗೆ ಪಂಚಮಸಾಲಿ ಸೇರಿಸಿದರೆ ಹೋರಾಟ; ಸರ್ಕಾರಕ್ಕೆ ಹಿಂದುಳಿದ ವರ್ಗ ಜಾತಿಗಳ ಒಕ್ಕೂಟ ಎಚ್ಚರಿಕೆ
2ಎ ಮೀಸಲಾತಿಗೆ ಪಟ್ಟು ಹಿಡಿದು ಪಂಚಮಸಾಲಿ ಸಮುದಾಯ ಹೋರಾಟ ತೀವ್ರಗೊಳಿಸಿರುವ ಬೆನ್ನಲ್ಲೇ 2ಎ ಮೀಸಲಾತಿಗೆ ಪಂಚಮಸಾಲಿ ಸಮುದಾಯವನ್ನು ಸೇರಿಸಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ರಾಜ್ಯ ಹಿಂದುಳಿದ ಜಾರಿಗಳ ಒಕ್ಕೂಟ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.;
ಬೆಳಗಾವಿಯಲ್ಲಿ ಪಂಚಮಸಾಲಿ ಸಮುದಾಯ ಪ್ರವರ್ಗ- 2ಎ ಮೀಸಲಾತಿಗಾಗಿ ನಡೆಸಿದ ಸಂಘರ್ಷ ಯಾತ್ರೆ ಹಿಂಸಾರೂಪ ಪಡೆದುಕೊಂಡಿದೆ. ಸದ್ಯಕ್ಕೆ ಹಿಂದುಳಿದ ವರ್ಗಗಳ ಆಯೋಗ ವರದಿ ನೀಡದ ಹೊರತು ಮೀಸಲಾತಿ ಕಲ್ಪಿಸುವ ಪ್ರಶ್ನೆಯೇ ಇಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದ ಬಳಿಕ ಪ್ರತಿಭಟನೆಯನ್ನು ಇದೀಗ ಮತ್ತೊಮ್ಮೆ ರಾಜ್ಯವ್ಯಾಪಿ ವಿಸ್ತರಿಸಲು ಪಂಚಮಸಾಲಿ ಸಮುದಾಯ ನಿರ್ಧರಿಸಿದೆ.
ಒಂದೆಡೆ 2ಎ ಮೀಸಲಾತಿಗೆ ಪಟ್ಟು ಹಿಡಿದು ಪಂಚಮಸಾಲಿ ಸಮುದಾಯ ಹೋರಾಟ ತೀವ್ರಗೊಳಿಸಿದ್ದರೆ, ಮತ್ತೊಂದೆಡೆ 2ಎ ಮೀಸಲಾತಿಯನ್ನು ಪಂಚಮಸಾಲಿ ಸಮುದಾಯಕ್ಕೆ ನೀಡಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ರಾಜ್ಯ ಹಿಂದುಳಿದ ಜಾರಿಗಳ ಒಕ್ಕೂಟ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಡಾ.ನಾಗನಗೌಡ ಸಮಿತಿ, ಎಲ್.ಜಿ. ಹಾವನೂರು ಆಯೋಗ, ವೆಂಕಟಸ್ವಾಮಿ ಹಿಂದುಳಿದ ವರ್ಗಗಳ 2ನೇ ಆಯೋಗ, ನ್ಯಾಯಮೂರ್ತಿ ಓ.ಚಿನ್ನಪ್ಪರೆಡ್ಡಿ ಸಮಿತಿಯು ಪಂಚಮಸಾಲಿ ಸಮುದಾಯ ಮುಂದುವರಿದ ಸಮಾಜ ಎಂದು ವರದಿ ನೀಡಿವೆ. ಹೀಗಿರುವಾಗ ಹಿಂದುಳಿದ ವರ್ಗಗಳಿಗೆ ನೀಡುತ್ತಿರುವ ಪ್ರವರ್ಗ 2 ಎ ಮೀಸಲಾತಿಯನ್ನು ಪಂಚಮಸಾಲಿ ಸಮುದಾಯಕ್ಕೆ ನೀಡಬಾರದು. ಆಗೊಮ್ಮೆ ನೀಡಿದ್ದೇ ಆದರೆ ರಾಜ್ಯವ್ಯಾಪಿ ಹಿಂದುಳಿದ ವರ್ಗ ಜಾತಿಗಳ ಒಕ್ಕೂಟ ಉಗ್ರ ಹೋರಾಟ ರೂಪಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ ಎಚ್ಚರಿಕೆ ನೀಡಿದೆ.
ಸಿಎಂಗೆ ಸಲ್ಲಿಸಿದ ಮನವಿಯಲ್ಲೇನಿದೆ?
2002ರಿಂದ ಹಿಂದುಳಿದ ವರ್ಗಗಳನ್ನು "ಪ್ರವರ್ಗ-1, ಪ್ರವರ್ಗ-2ಎ, ಪ್ರವರ್ಗ-2ಬಿ, ಪ್ರವರ್ಗ-3ಎ ಮತ್ತು ಪ್ರವರ್ಗ-3ಬಿ ಎಂದು ವಿಂಗಡಿಸಿ, ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ 32ರಷ್ಟು ಮೀಸಲಾತಿ ನಿಗದಿಪಡಿಸಲಾಗಿದೆ. 2002 ರಿಂದಲೂ ಇದೇ ಮೀಸಲಾತಿ ಪ್ರಕ್ರಿಯೆ ಜಾರಿಯಲ್ಲಿದೆ. ಪಂಚಮಸಾಲಿ ಸಮುದಾಯ ಪ್ರಸ್ತುತ ಪ್ರವರ್ಗ-3ಬಿ ಅಡಿ ಮೀಸಲಾತಿ ಪಡೆಯುತ್ತಿದೆ. ಆದರೆ, ಈ ಸಮುದಾಯವನ್ನು ಪ್ರವರ್ಗ-2ಎ ಗೆ ಸೇರಿಸಿದರೆ ಶೇ 15 ರಷ್ಟು ಮೀಸಲಾತಿ ಪಡೆಯುತ್ತಿರುವ ಸಮುದಾಯಗಳಿಗೆ ಅನ್ಯಾಯವಾಗಲಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಪ್ರವರ್ಗ 2ಎ ಗೆ ಸೇರಿಸಬಾರದು ಎಂದು ಒಕ್ಕೂಟ ಅಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ ಹಾಗೂ ಪ್ರಧಾನ ಕಾರ್ಯದರ್ಶಿ ಎಣ್ಣೆಗೆರೆ ಆರ್. ವೆಂಕಟರಾಮಯ್ಯ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.
2022-23ರಲ್ಲಿ ಅಂದಿನ ಬಿಜೆಪಿ ಸರ್ಕಾರ ಪ್ರವರ್ಗ-2ಬಿ ಅಡಿಯಿರುವ ಮುಸ್ಲಿಮರ ಶೇ 4ರಷ್ಟು ಮೀಸಲಾತಿ ರದ್ದುಪಡಿಸಿ, ಹೊಸದಾಗಿ ಪ್ರವರ್ಗ-2ಸಿ ಮತ್ತು ಪ್ರವರ್ಗ-2ಡಿ ಎಂದು ವರ್ಗಿಕರಿಸಿ, ತಲಾ ಶೇ 2ರಷ್ಟು ಮೀಸಲಾತಿ ನೀಡಿತ್ತು. ಬಿಜೆಪಿ ಸರ್ಕಾರದ ಆದೇಶವನ್ನು ಮುಸ್ಲಿಂ ಸಮುದಾಯ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ ಬಳಿಕ ರಾಜ್ಯ ಸರ್ಕಾರ 2002 ರ ಆದೇಶವನ್ನೇ ಪಾಲಿಸುವುದಾಗಿ ಹೇಳಿಕೆ ದಾಖಲಿಸಿದೆ. ಜೊತೆಗೆ ಹೊಸದಾಗಿ ಸೃಜಿಸಿರುವ ಪ್ರವರ್ಗ 2ಸಿ ಹಾಗೂ 2ಡಿ ಪ್ರಕರಣ ಕೂಡ ವಿಚಾರಣೆಗೆ ಬಾಕಿಯಿದೆ.
ರಾಘವೇಂದ್ರ ಡಿ.ಜಿ. ವರ್ಸಸ್ ಸ್ಟೇಟ್ ಆಫ್ ಕರ್ನಾಟಕ ಪ್ರಕರಣದಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಪವರ್ಗ 2ಎ ಗೆ ಯಾವುದೇ ಸಮುದಾಯ ಸೇರ್ಪಡೆ ಮಾಡಬಾರದೆಂದು ಕೋರಿರುವ ರಿಟ್ ಅರ್ಜಿ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನ್ಯಾಯಾಲಯದ ಅನುಮತಿಯಿಲ್ಲದೇ ಮೀಸಲಾತಿ ಪ್ರಮಾಣ ಬದಲಾವಣೆ ಮತ್ತು ಯಾವುದೇ ಸಮುದಾಯಗಳನ್ನು ಪ್ರವರ್ಗ-2ಎಗೆ ಸೇರಿಸುವುದು ಅಥವಾ ಕೈ ಬಿಡುವುದಿಲ್ಲ ಎಂದು ೨೦೨೩ ಮಾರ್ಚ್ ೨೩ ರಂದು ಪ್ರಮಾಣ ಪತ್ರ ಸಲ್ಲಿಸಿದೆ. ಅದರಂತೆ ಪ್ರಕರಣ ವಿಚಾರಣೆ ಬಾಕಿ ಇದೆ. ಹೀಗಿರುವಾಗ ಯಾವುದೇ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಬಾರದು ಎಂದು ಒತ್ತಾಯಿಸಿದ್ದಾರೆ.
ಮುಂದುವರಿದ ಸಮಾಜ ಪಂಚಮಸಾಲಿ
ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಪಂಚಮಸಾಲಿ ಲಿಂಗಾಯತ ಸಮುದಾಯ ಮುಂದುವರಿದ ಸಮುದಾಯವಾಗಿದೆ ಎಂದು ಡಾ. ನಾಗನಗೌಡ ಸಮಿತಿ, ಎಲ್.ಜಿ. ಹಾವನೂರು ಆಯೋಗದ ವರದಿ, ವೆಂಕಟಸ್ವಾಮಿ ಹಿಂದುಳಿದ ವರ್ಗಗಳ 2ನೇ ಆಯೋಗದ ವರದಿ, ನ್ಯಾಯಮೂರ್ತಿ ಓ.ಚಿನ್ನಪ್ಪರೆಡ್ಡಿ ವರದಿಯಲ್ಲಿ ಹೇಳಲಾಗಿದೆ. ಆದ್ದರಿಂದ ಪಂಚಮಸಾಲಿ ಲಿಂಗಾಯತ ಸಮುದಾಯವನ್ನು ಪ್ರವರ್ಗ-2ಎ ಸೇರಿಸಬಾರದು. ಒಂದು ವೇಳೆ ಸೇರಿಸಿದರೆ ಪ್ರವರ್ಗ-2ಎ ಅಡಿ ಬರುವ ಹಿಂದುಳಿದ ಜಾತಿಗಳಾದ ಆಗಸ, ಸವಿತಾ ಸಮಾಜ, ತಿಗಳ, ಈಡಿಗ, ಕುರುಬ, ದೇವಾಂಗ ಇತರೆ ಜಾತಿಗಳಿಗೆ ಮೀಸಲಾತಿ ಸಿಗುವುದಿಲ್ಲ. ಪಂಚಮಸಾಲಿ ಸಮುದಾಯವೇ ಮೀಸಲಾತಿಯ ಲಾಭ ಪಡೆಯಲಿದೆ ಎಂದು ಹಿಂದುಳಿದ ಜಾತಿಗಳ ಒಕ್ಕೂಟ ಆತಂಕ ವ್ಯಕ್ತಪಡಿಸಿದೆ.