FEDERAL EXPLAINER | ಪೋಕ್ಸೊ ಕಾಯ್ದೆ ಎಂದರೇನು? ಯಾಕೆ ಅದು ಅಷ್ಟೊಂದು ಮುಖ್ಯ?

ಅಪ್ರಾಪ್ತ ವಯಸ್ಸಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಘಟನೆಗಳು ನಡೆದಾಗೆಲ್ಲಾ ಪೋಕ್ಸೊ ಕಾಯ್ದೆ ಮತ್ತು ಅದರ ಗಂಭಿರತೆಯ ಕುರಿತ ಚರ್ಚೆಗಳು ಮುನ್ನೆಲೆಗೆ ಬರುತ್ತವೆ. ಅಷ್ಟಕ್ಕೂ ಈ ಕಾಯ್ದೆ ಏನು? ಏನಿದರ ಮಹತ್ವ? ಎಂಬ ಕುರಿತ ವಿವರ ಇಲ್ಲಿದೆ..;

Update: 2024-03-15 13:25 GMT
ಅಪ್ರಾಪ್ತ ವಯಸ್ಸಿನ ಬಾಲಕಿ / ಬಾಲಕ

Pocso Act ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಮುಖಂಡ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಪೋಕ್ಸೊ (POCSO ACT- ಲೈಂಗಿಕ ದೌರ್ಜನ್ಯದ ವಿರುದ್ಧ ಮಕ್ಕಳ ರಕ್ಷಣೆ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಏನಿದು ಪೋಕ್ಸೊ ಕಾಯ್ದೆ ? ಯಾಕೆ ಇದು ಪ್ರಮುಖ ? ಈ ಕಾಯ್ದೆಯ ಸ್ವರೂಪವೇನು ? ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ಏನಿದು ಪೋಕ್ಸೊ ಕಾಯ್ದೆ ?

ಅಪ್ರಾಪ್ತ ವಯಸ್ಸಿನ ಮಕ್ಕಳ ಹಿತರಕ್ಷಣೆ ಉದ್ದೇಶದಿಂದ ಪೋಕ್ಸೊ ಕಾಯ್ದೆ ಜಾರಿ ಮಾಡಲಾಯಿತು. 2012ರಲ್ಲಿ (Protection of Children from Sexual Offences Act) ಪೋಕ್ಸೊ ಜಾರಿಗೆ ತರಲಾಗಿದೆ.

ಅಪ್ರಾಪ್ತ ಮಕ್ಕಳನ್ನು ಎಲ್ಲ ರೀತಿಯ ಲೈಂಗಿಕ ದೌರ್ಜನ್ಯ, ಅಪರಾಧಗಳಿಂದ ರಕ್ಷಿಸುವುದು ಕಾಯ್ದೆಯ ಮುಖ್ಯ ಉದ್ದೇಶವಾಗಿದ್ದು, ಇದರ ಮತ್ತೊಂದು ಅಂಶವೆಂದರೆ ಇದರಲ್ಲಿ ಯಾವುದೇ ಲಿಂಗ ತಾರತಮ್ಯ ಇರುವುದಿಲ್ಲ. ಬಾಲಕಿ ಹಾಗೂ ಬಾಲಕರಿಬ್ಬರನ್ನೂ ಲೈಂಗಿಕ ದೌರ್ಜನ್ಯದ ಸಂತ್ರಸ್ತರು ಎಂದು ಗುರುತಿಸಲಾಗುತ್ತದೆ. ಇನ್ನು ಪೋಕ್ಸೊ ಕಾಯ್ದೆಯ ಸೆಕ್ಷನ್‌ 35ರ ಪ್ರಕಾರ, ಪ್ರಕರಣದ ವಿಚಾರಣೆಗೆ ಕಾಲಮಿತಿ ನಿಗದಿ ಮಾಡಲಾಗಿದೆ. ಕೇಸ್ ದಾಖಲಾದ ದಿನದಿಂದ 30 ದಿನಗಳ ಒಳಗೆ ಹೇಳಿಕೆ ದಾಖಲಿಸಿಕೊಳ್ಳಬೇಕು ಹಾಗೂ ಅಪರಾಧ ನಡೆದಿದೆ ಎಂದು ತಿಳಿದ ದಿನದಿಂದ 1 ವರ್ಷದ ಅವಧಿಯ ಒಳಗಾಗಿ ವಿಚಾರಣೆ ಮುಗಿಸಬೇಕು.

ಪೋಕ್ಸೊ ಕಾಯ್ದೆಯ ಲಕ್ಷಣಗಳೇನು ?

ಪೋಕ್ಸೊ ಕಾಯ್ದೆಯ ಪ್ರಮುಖ ಲಕ್ಷಣಗಳು ಇಂತಿವೆ:

* ಪೋಕ್ಸೊ ಕಾಯ್ದೆಯು ಪ್ರಮುಖವಾಗಿ ಸಂತ್ರಸ್ತ ಬಾಲಕ ಅಥವಾ ಬಾಲಕಿಗೆ ಪರಿಹಾರವನ್ನು ಒದಗಿಸುವುದನ್ನು ಖಚಿತಪಡಿಸುತ್ತದೆ.

* ಈ ಕಾಯ್ದೆಯ ಅಡಿಯಲ್ಲಿ ಒಮ್ಮೆ ಪ್ರಕರಣ ದಾಖಲಾದರೆ, ಆರೋಪಿಗೆ ಲೈಂಗಿಕ ಕ್ರಿಯೆ ನಡೆಸುವ ಉದ್ದೇಶ ಇತ್ತು ಎಂದೇ ಪರಿಗಣಿಸಲಾಗುತ್ತದೆ.

* ಈ ಕಾಯ್ದೆಯ ಮೂಲಕ ಮಕ್ಕಳ ಸ್ನೇಹಿ ಪ್ರಕ್ರಿಯೆಗೆ ಒಳಪಡಿಲಾಗುತ್ತದೆ.

* ಪೋಕ್ಸೊ ಅಡಿ ದಾಖಲಾದ ಎಲ್ಲಾ ಪ್ರಕರಣಗಳನ್ನು ಪೋಕ್ಸೊ ನ್ಯಾಯಾಲಯಗಳು ಮಾತ್ರವೇ ವಿಚಾರಣೆ ನಡೆಸುತ್ತವೆ.

* ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಸ್ಪರ್ಶ ಸಹಿತ ಅಥವಾ ಸ್ಪರ್ಶ ರಹಿತ, ಪೋರ್ನೋಗ್ರಫಿಕ್ ಕ್ರೈಮ್ ಸೇರಿದಂತೆ ಪ್ರತ್ಯಕ್ಷ ಹಾಗೂ ಪರೋಕ್ಷ ಅಂಶಗಳನ್ನು

ಈ ಕಾಯ್ದೆ ಒಳಗೊಂಡಿದೆ.

* ಒಂದೊಮ್ಮೆ ಮನೆಯಲ್ಲೇ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದರೆ, ಸಂತ್ರಸ್ತರಾದ ಬಾಲಕ ಅಥವಾ ಬಾಲಕಿಯನ್ನು ಸ್ಥಳಾಂತರಿಸಲಾಗುತ್ತದೆ. ಮಕ್ಕಳ ಕಲ್ಯಾಣ ಆಯೋಗವು

ಸಂತ್ರಸ್ತರ ಕಾಳಜಿ ಹಾಗೂ ರಕ್ಷಣೆ ನೀಡಬೇಕಾಗುತ್ತದೆ.

ಸಂತ್ರಸ್ತರ ಮಾಹಿತಿ ಬಹಿರಂಗಪಡಿಸಿದರೆ ಏನಾಗುತ್ತದೆ?

ಪೋಕ್ಸೊ ಕಾಯ್ದೆಯಲ್ಲಿ ಮುಖ್ಯವಾಗಿ ಸಂತ್ರಸ್ತ ಬಾಲಕ ಅಥವಾ ಬಾಲಕಿಯ ಮಾಹಿತಿಯನ್ನು ಯಾವುದೇ ಕಾರಣಕ್ಕೂ ಬಹಿರಂಗಪಡಿಸಬಾರದು. ಕಾಯ್ದೆಯ ಸೆಕ್ಷನ್ 23ರ ಅನುಸಾರ, ಸಂತ್ರಸ್ತರ ಗುರುತನ್ನು ಬಿಟ್ಟುಕೊಡಬಾರದು. ಇನ್ನು ಸ್ಥಾಪಿತ ವಿಶೇಷ ಕೋರ್ಟ್ ಅನುಮತಿಯ ಹೊರತಾಗಿ ಸಂತ್ರಸ್ತರ ಮಾಹಿತಿಯನ್ನು ಯಾವುದೇ ಕಾರಣಕ್ಕೂ ಬಹಿರಂಗಪಡಿಸುವಂತಿಲ್ಲ. ಈ ನಿಯಮವನ್ನು ಉಲ್ಲಂಘನೆ ಮಾಡಿದೆ ಗಂಭೀರವಾದ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಅಲ್ಲದೇ ಮಾಧ್ಯಮಗಳು ಮಾತ್ರವಲ್ಲದೇ ಸೋಷಿಯಲ್ ಮೀಡಿಯಾದಲ್ಲೂ ಮಾಹಿತಿಯನ್ನು ಹಂಚಿಕೊಳ್ಳುವಂತಿಲ್ಲ.

ಪೋಕ್ಸೊ ಕಾಯ್ದೆಯಡಿ ದೂರು ದಾಖಲಾದರೆ ಸಂತ್ರಸ್ತರ ಹೆಸರನ್ನು ಯಾವುದೇ ಕಾರಣಕ್ಕೂ ಬಹಿರಂಗಪಡಿಸುವಂತಿಲ್ಲ. ಅವರ ವಿಳಾಸ, ಹೆಸರು ಅಥವಾ ಅವರು ಎಲ್ಲಿ ನೆಲೆಸಿದ್ದಾರೆ ಎನ್ನುವ ಸುಳಿವು ನೀಡುವ ಅಂಶಗಳನ್ನೂ ಬಹಿರಂಗಪಡಿಸುವಂತಿಲ್ಲ. ಸಂತ್ರಸ್ತರ ಚಿತ್ರಗಳನ್ನು ಹಂಚಿಕೊಳ್ಳುವಂತಿಲ್ಲ. ಗೌಪ್ಯತೆ ಕಾಪಾಡಿಕೊಳ್ಳದೆ ಇದ್ದರೆ ಅಥವಾ ಮಾಹಿತಿ ಹಂಚಿಕೊಂಡರೆ ಸಂಬಂಧಪಟ್ಟವರಿಗೆ 6ರಿಂದ 1 ವರ್ಷದ ವರೆಗೆ ಜೈಲು ಶಿಕ್ಷೆ ಅಥವಾ ಭಾರೀ ದಂಡವನ್ನೂ ವಿಧಿಸುವುದಕ್ಕೆ ಕಾನೂನಿನಲ್ಲಿ ಅವಕಾಶ ಇದೆ.

ವಿಚಾರಣೆ ಪ್ರಕ್ರಿಯೆ ಯಾವ ರೀತಿ ನಡೆಯುತ್ತದೆ ?

ಪೋಕ್ಸೊ ಪ್ರಕರಣವನ್ನು ಗಂಭೀರ ಹಾಗೂ ಸೂಕ್ಷ್ಮವಾಗಿ ನಿಭಾಯಿಸಲಾಗುತ್ತದೆ. ವಿಚಾರಣೆಯ ಹಂತದಲ್ಲಿ ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರದಂತೆ

ಎಚ್ಚರಿಕೆ ವಹಿಸಲಾಗುತ್ತದೆ. ಮಕ್ಕಳನ್ನೂ ಸೂಕ್ಷ್ಮವಾಗಿ ಪ್ರಶ್ನಿಸಲಾಗುತ್ತದೆ. ಪೋಕ್ಸೊ ಕಾಯ್ದೆಯ ಪ್ರಮುಖ ಅಂಶಗಳು ಈ ರೀತಿ ಇವೆ

* ಈ ಪ್ರಕರಣದ ವಿಚಾರಣೆ ನಡೆಸುವ ಪೊಲೀಸ್ ಅಧಿಕಾರಿ ಸಮವಸ್ತ್ರ ಧರಿಸಿರುವಂತಿಲ್ಲ

* ವಿಚಾರಣೆಯನ್ನು ನಡೆಸುವ ವೇಳೆ ಸಂತ್ರಸ್ತ ಬಾಲಕ ಅಥವಾ ಬಾಲಕಿಯನ್ನು ಆರೋಪಿಯ ಸಂಪರ್ಕಕ್ಕೆ ಬರದಂತೆ ನೋಡಿಕೊಳ್ಳಲಾಗುತ್ತದೆ

* ಮಕ್ಕಳ ಸ್ನೇಹಿ ಪರಿಸರಕ್ಕೆ ಆದ್ಯತೆ ನೀಡಲಾಗುತ್ತದೆ

* ಸಂತ್ರಸ್ತ ಮಗುವನ್ನು ರಾತ್ರಿ ವೇಳೆ ಪೊಲೀಸ್ ಠಾಣೆಯಲ್ಲಿ ಉಳಿಸಿಕೊಳ್ಳಬಾರದು

* ತನಿಖಾಧಿಕಾರಿ ಮಗುವಿನ ಮಾಹಿತಿ ಗೌಪ್ಯವಾಗಿರಿಸಬೇಕು

* ಉಳಿದ ಪ್ರಕರಣಗಳಲ್ಲಿ ಅನುಸರಿಸುವ ಮಾದರಿಯಲ್ಲಿ ಎಲೆಕ್ಟ್ರಾನಿಕ್ ಸಾಧನ ಬಳಸಬೇಕು. ಆಡಿಯೋ ಹಾಗೂ ವಿಡಿಯೋದ ಮೂಲಕ ಹೇಳಿಕೆ ಪಡೆದುಕೊಳ್ಳಬೇಕು

* ವಿಚಾರಣೆ ನಡೆಸುವ ಸಂದರ್ಭದಲ್ಲಿ ಬಿಡುವು ನೀಡಬೇಕು

* ಅವಶ್ಯಕತೆ ಇದೆ ಎಂದು ಅನಿಸಿದರೆ, ಅನುವಾದಕರನ್ನು ನೇಮಿಸಿಕೊಳ್ಳಬೇಕು

* ವಿಚಾರಣಾ ಕೋರ್ಟ್‌ಗೆ ಸಂತ್ರಸ್ತ ಮಗುವನ್ನು ಪದೇಪದೆ ಕರೆಯುವಂತಿಲ್ಲ. ಇದನ್ನು ವಿಶೇಷ ಕೋರ್ಟ್ ನಿಗಾ ವಹಿಸುತ್ತದೆ

* ವಿಚಾರಣೆ ಸಂದರ್ಭದಲ್ಲಿ ಮಗುವಿಗೆ ಗಾಬರಿಯಾಗುವಂತಹ ಅಥವಾ ಭಯ ಬೀಳುವಂತಹ ಪ್ರಶ್ನೆಗಳನ್ನು ಕೇಳುವಂತಿಲ್ಲ

* ಮಗುವಿಗೆ ಭರವಸೆ ಅಥವಾ ನಂಬಿಕೆ ಇರುವವರ ಸಮ್ಮಖದಲ್ಲಿಯೇ ಹೇಳಿಕೆ ಪಡೆಯಬೇಕು. (ಪೋಷಕರು, ತಂದೆ- ತಾಯಿ) 

ಪೋಕ್ಸೊ ಕಾಯ್ದೆಯ ವ್ಯಾಪ್ತಿಗೆ ಬರುವ ವಿಷಯಗಳು ಯಾವುವು ?

ಪೋಕ್ಸೊ ಕಾಯ್ದೆಯಲ್ಲಿ ಹಲವು ಸೂಕ್ಷ್ಮವಾದ ವಿಷಯಗಳನ್ನು ಸೇರಿಸಲಾಗಿದೆ. ಈ ಕಾಯ್ದೆಯ ಪ್ರಕಾರ 18 ವರ್ಷದ ಒಳಗಿನ ಎಲ್ಲರನ್ನು ಮಕ್ಕಳು ಎಂದು ಪರಿಗಣಿಸಲಾಗುತ್ತದೆ. ಎಲ್ಲಾ ರೀತಿಯ ಲೈಂಗಿಕ ದೌರ್ಜನ್ಯವನ್ನು ಪೋಕ್ಸೊ ಕಾಯ್ದೆಯಡಿ ಪರಿಗಣಿಸಲಾಗುತ್ತದೆ. ಅತ್ಯಾಚಾರ ರೀತಿಯ ಲೈಂಗಿಕ ಹಲ್ಲೆ, ಮಕ್ಕಳ ಮೇಲೆ ಅಪರಾಧ ಎಸಗುವ ಉದ್ದೇಶದಿಂದ ಮಕ್ಕಳಿಗೆ ರಾಸಾಯನಿಕ ಅಥವಾ ಹಾರ್ಮೋನ್‌ಗಳನ್ನು ನೀಡುವುದು. ಮಕ್ಕಳನ್ನು ಅಶ್ಲೀಲವಾಗಿ ಬಳಸಿಕೊಳ್ಳುವುದು ಅಪರಾಧವಾಗಿದೆ. ಅಲ್ಲದೇ ಯಾವುದಾದರೂ ಮಗುವಿನ ಅಶ್ಲೀಲ ಭಂಗಿಯ ವಸ್ತು ಅಥವಾ ಚಿತ್ರದ ಬಗ್ಗೆ ವರದಿ ಮಾಡುವುದು, ಈ ರೀತಿಯ ಚಿತ್ರಗಳನ್ನು ರವಾನಿಸುವುದು, ಪ್ರಚಾರ ಮಾಡುವುದು ಹಾಗೂ ಮಕ್ಕಳು ಒಳಗೊಂಡ ಯಾವುದಾದರೂ ಅಶ್ಲೀಲ ವಸ್ತುಗಳನ್ನುವಾಣಿಜ್ಯ ಉದ್ದೇಶಕ್ಕಾಗಿ ಬಳಸುವುದು ಅಪರಾಧ ಎಂದು ಪರಿಗಣಿಸಲಾಗುತ್ತದೆ. 

ಮಕ್ಕಳನ್ನು ಬಳಸಿ ಲೈಂಗಿಕ ಕ್ರಿಯೆ ನಡೆಸುವುದು, ಲೈಂಗಿಕ ಚೇಷ್ಟೆ, ಖಾಸಗಿ ಅಂಗಾಂಗ ಸ್ಪರ್ಶ, ಲೈಂಗಿಕ ಸಂಜ್ಞೆ, ಲೈಂಗಿಕ ಮಾತು, ಅಶ್ಲೀಲ ದೃಶ್ಯ ತೋರಿಸುವುದು, ಮಕ್ಕಳನ್ನು ಅಶ್ಲೀಲ ಭಂಗಿಯಲ್ಲಿ ತೋರಿಸುವುದು, ಚಿತ್ರಿಸುವುದು ಕೂಡ ಪೋಕ್ಸೊ ಕಾಯ್ದೆಯ ವ್ಯಾಪ್ತಿಗೆ ಬರುತ್ತದೆ.

ಪೋಕ್ಸೊ ಪ್ರಕರಣ ಸಾಬೀತಾದರೆ ಶಿಕ್ಷೆ ಏನು?

ಪೋಕ್ಸೊ ಪ್ರಕರಣದಡಿ ಅಪ್ರಾಪ್ತ ಮಕ್ಕಳೊಂದಿಗೆ ಅಪರಾಧಿ ನಡೆಸಿರುವ ಕೃತ್ಯದ ಗಂಭಿರತೆಯ ಆಧಾರದ ಮೇಲೆ ಕನಿಷ್ಟ 3 ರಿಂದ 20 ವರ್ಷಗಳವರೆಗೆ ಶಿಕ್ಷೆ ವಿಧಿಸಲು ಅವಕಾಶವಿದೆ. ಅಧಿಕಾರದಲ್ಲಿರುವ ವ್ಯಕ್ತಿ ತನ್ನ ಅಧಿಕಾರ, ಪ್ರಭಾವ ಬಳಸಿ ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಂಡರೆ, ಕಿರುಕುಳ ನೀಡಿದರೆ ಪ್ರಕರಣ ಇನ್ನಷ್ಟು ಗಂಭೀರ ಎಂದು ಪರಿಗಣಿಸಿ ಜೀವಾವಧಿ ಶಿಕ್ಷೆಗೆ ಗುರಿಪಡಿಸುವ ಅವಕಾಶ ಕೂಡ ಕಾಯ್ದೆಯಲ್ಲಿ ಇದೆ. 

Tags:    

Similar News