Accident | ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಭೀಕರ ಅಪಘಾತ; ಪತ್ರಕರ್ತೆ ಸೇರಿ ನಾಲ್ವರು ದುರ್ಮರಣ
ತೂಬಿನಕೆರೆ ಬಳಿಕ ಎಕ್ಸ್ಪ್ರೆಸ್ ವೇಯಿಂದ ನಿರ್ಗಮಿಸುವಾಗ ಕಾರಿಗೆ ಹಿಂದಿನಿಂದ ವೇಗವಾಗಿ ಬಂದ ಕೆಎಸ್ಆರ್ಟಿಸಿ ಐರಾವತ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟಾಟಾ ಪಂಚ್ ಕಾರು (KA 09, MG 4263) ಸಂಪೂರ್ಣ ನಜ್ಜುಗುಜ್ಜಾಗಿದೆ.;
ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ.
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಗುರುವಾರ ಸಂಭವಿಸಿದ ಭೀಕರ ಕಾರು - ಬಸ್ ಅಪಘಾತದಲ್ಲಿ ವಿಜಯ ಕರ್ನಾಟಕ ಬೆಂಗಳೂರು ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪತ್ರಕರ್ತೆ ನಿಶ್ಚಿತಾ ಅರಸ್ ಸೇರಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಂಡ್ಯ ತಾಲೂಕಿನ ತೂಬಿನಕೆರೆ ಗ್ರಾಮದ ಬಳಿ ನಡೆದಿದೆ.
ಮೃತರನ್ನು ಸತ್ಯಾನಂದ ರಾಜೇ ಆರಸ್ (51), ಅವರ ಪತ್ನಿ ನಿಶ್ಚಿತಾ ಅರಸ್ (45), ಚಂದ್ರು (62) ಅವರ ಪತ್ನಿ ಸುವೇದಿನಿ ರಾಣಿ(50) ಮೃತರು.
ಮೃತ ನಿಶ್ಚಿತಾ ಅರಸ್ ಅವರು ಬೆಂಗಳೂರಿನ ವಿಜಯ ಕರ್ನಾಟಕ ಪತ್ರಿಕಾ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಸೋದರ ಮಾವನ ಅಂತ್ಯಕ್ರಿಯೆಗೆ ತೆರಳುತ್ತಿದ್ದ ವೇಳೆ ಈ ಅಪಘಾತ ನಡೆದಿದೆ. ಸತ್ಯಾನಂದರಾಜೇ ಅರಸ್ ಅವರ ಮಾವ ನಿಧನರಾಗಿದ್ದರು. ಹೀಗಾಗಿ ಪಿರಿಯಾಪಟ್ಟಣ ತಾಲೂಕಿನ ಸಿಗೂರು ಗ್ರಾಮಕ್ಕೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ತೆರೆಳುತ್ತಿದ್ದರು.
ಮೃತ ಸತ್ಯಾನಂದರಾಜೇ ಅರಸ್ ಹಾಗೂ ಚಂದ್ರರಾಜೇ ಅರಸ್ ಅವರು ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳು. ಚಂದ್ರರಾಜೇ ಅರಸ್ ಕಾರು ಚಾಲನೆ ಮಾಡುತ್ತಿದ್ದರು. ಮೃತದೇಹಗಳನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ತೂಬಿನಕೆರೆ ಬಳಿಕ ಎಕ್ಸ್ಪ್ರೆಸ್ ವೇಯಿಂದ ನಿರ್ಗಮಿಸುವಾಗ ಕಾರಿಗೆ ಹಿಂದಿನಿಂದ ವೇಗವಾಗಿ ಬಂದ ಕೆಎಸ್ಆರ್ಟಿಸಿ ಐರಾವತ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟಾಟಾ ಪಂಚ್ ಕಾರು (KA 09, MG 4263) ಸಂಪೂರ್ಣ ನಜ್ಜುಗುಜ್ಜಾಗಿದೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಕ್ಸ್ಪ್ರೆಸ್ ವೇನಲ್ಲಿ ಪದೇ ಪದೇ ಅಪಘಾತಗಳು ನಡೆಯುತ್ತಿದ್ದು, ತೀವ್ರ ಕಳವಳ ಮೂಡಿಸಿದೆ. ಮಂಡ್ಯ ಜಿಲ್ಲೆ ವ್ಯಾಪ್ತಿಯಲ್ಲಿ 2023 ರಿಂದ ಈವರೆಗೆ ನೂರಾರು ಸಂಖ್ಯೆಯ ಅಪಘಾತ ಪ್ರಕರಣಗಳು ವರದಿಯಾಗಿದ್ದು, 2023 ರಲ್ಲಿ ಒಂದೇ 50 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.
ಅವೈಜ್ಞಾನಿಕ ತಿರುವು, ಅತಿಯಾದ ವೇಗವೇ ಅಪಘಾತಗಳಿಗೆ ಕಾರಣವಾಗಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.