Fake News Case | ರೈತನ ತಂದೆಯೇ ಮಾಹಿತಿ ನೀಡಿದ್ದಾರೆ: ಸಂಸದ ತೇಜಸ್ವಿ ಸೂರ್ಯ ಸ್ಪಷ್ಟನೆ
ರೈತ ಆತ್ಮಹತ್ಯೆಯ ವಿಷಯದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ಹಿನ್ನೆಲೆಯಲ್ಲಿ ಹಾವೇರಿ ಪೊಲೀಸರು ತಮ್ಮ ವಿರುದ್ಧ ಪ್ರಕರಣ ದಾಖಲಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ಸಂಸದ ತೇಜಸ್ವಿ ಸೂರ್ಯ, ಮೃತ ರೈತನ ಕುಟುಂಬದವರೇ ತನ್ನ ಜಮೀನಿನನ್ನು ವಕ್ಫ್ ಆಸ್ತಿ ಎಂದು ನಮೂದಿಸಿದ್ದನ್ನು ಕಂಡು ಆತ ಆತ್ಮಹತ್ಯೆ ಮಾಡಿದ್ದಾನೆ ಎಂದು ಹೇಳಿದ್ದರು ಎಂದು ತಿಳಿಸಿದ್ದಾರೆ.
ರೈತನ ಜಮೀನಿನ ಪಹಣಿಯಲ್ಲಿ ಮಾಲೀಕತ್ವದ ಕಾಲಂನಲ್ಲಿ ವಕ್ಫ್ ಬೋರ್ಡ್ ಎಂದು ನಮೂದಿಸಿದ್ದನ್ನು ನೋಡಿ ಕಂಗಾಲಾಗಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆತನ ಕುಟುಂಬಸ್ಥರೇ ಹೇಳಿದ್ದಾರೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ತನ್ನ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವುದನ್ನು ಕಂಡು ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಸುದ್ದಿ ಜಾಲತಾಣಗಳಲ್ಲಿ ಬಂದಿದ್ದ ವರದಿಯನ್ನು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದ ಹಿನ್ನೆಲೆಯಲ್ಲಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಹಾವೇರಿಯ ಸೆನ್ ಪೊಲೀಸ್ ಠಾಣೆಯಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆ ಮಾಡಿಕೊಂಡ ರೈತನ ಜಮೀನಿನ ಪಹಣಿಯಲ್ಲಿ ಮಾಲೀಕತ್ವ ಕಾಲಂನಲ್ಲಿ ʼವಕ್ಫ್ʼ ಎಂದು ನಮೂದಾಗಿದೆ. ಪಹಣಿಯ ಪ್ರಿಂಟ್ ತೆಗೆದುಕೊಡುತ್ತೇನೆ. ಈ ಕಾರಣಕ್ಕೆ ಮಗ ಆತ್ಮಹತ್ಯೆ ಮಾಡ್ಕೊಂಡಿದ್ದಾನೆಂದು ಅವರ ತಂದೆ ಹೇಳಿದ್ದಾರೆ. ಮಾಧ್ಯಮಗಳು ಕೂಡ ಅದನ್ನು ವರದಿ ಮಾಡಿವೆ. ಆದರೆ, ಸರ್ಕಾರ ಮಾಧ್ಯಮ ಸ್ವಾತಂತ್ರ್ಯ ಹತ್ತಿಕುವ ಕೆಲಸ ಮಾಡುತ್ತಿದೆ. ಒತ್ತಡಕ್ಕೆ ಒಳಗಾಗಿ ಪೊಲೀಸರು ಕೇಸ್ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂದು ತೇಜಸ್ವಿ ಸೂರ್ಯ ಹುಬ್ಬಳ್ಳಿಯಲ್ಲಿ ಆರೋಪ ಮಾಡಿದ್ಧಾರೆ.
“ನಾನು ಸಂಸದನಾಗಿ ಜವಾಬ್ದಾರಿ ಸ್ಥಾನದಲ್ಲಿ ಇರೋದ್ರಿಂದ ಪೋಸ್ಟ್ ಡಿಲೀಟ್ ಮಾಡಿದೆ. ರಾಜ್ಯದಲ್ಲಿ ರೈತರ ಜಾಗ ಕಬಳಿಸಲು ವಕ್ಫ್ ಬೋರ್ಡ್ಗೆ ಬೆಂಬಲ ನೀಡಲಾಗುತ್ತಿದೆ. ವಕ್ಫ್ ಬೋರ್ಡ್ನ ಹಳೆಯ ತಪ್ಪುಗಳನ್ನು ಮುಚ್ಚಿ ಹಾಕುತ್ತಿದ್ದಾರೆ ಎಂದ ಅವರು, ರೈತನ ಕುಟುಂಬಸ್ಥರು ಕೂಡ ಮಾಧ್ಯಮದ ಎದುರು ಮಾತಾಡಿದ್ದಾರೆ. ಮಾಧ್ಯಮಗಳಲ್ಲೂ ಕೂಡ ಈ ಸುದ್ದಿ ಪ್ರಸಾರವಾಗಿದೆ. ಕಾನೂನಿನ ಬಗ್ಗೆ ಗೌರವ ಇರುವುದರಿಂದ ಟ್ವೀಟ್ ಡಿಲೀಟ್ ಮಾಡಿದೆ” ಎಂದಿದ್ದಾರೆ.
“ಪ್ರಿಯಾಂಕ್ ಖರ್ಗೆ ಸಚಿವರಾದರೂ ಅವರಿಗೆ ಮಾಡಲು ಏನು ಕೆಲಸ ಇಲ್ಲ ಅನ್ಸುತ್ತೆ. ಹುಡುಕಿ ಹುಡುಕಿ ಎಫ್ಐಆರ್ ದಾಖಲಿಸುತ್ತಿದ್ದಾರೆ. ರಾಜ್ಯದ ಜನರ ಬಳಿ ಸಚಿವ ಪ್ರಿಯಾಂಕ್ ಖರ್ಗೆ ಕ್ಷಮೆ ಕೇಳಬೇಕು” ಎಂದು ತೇಜಸ್ವಿ ಸೂರ್ಯ ಒತ್ತಾಯಿಸಿದರು.