Fake Currency | ದಾಂಡೇಲಿ ಮನೆಯಲ್ಲಿ ನಕಲಿ ನೋಟು ಪತ್ತೆ; ಲಖನೌನಲ್ಲಿ ಆರೋಪಿ ಬಂಧನ
ನಕಲಿ ನೋಟುಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಅರ್ಷದ್ ಅಂಜುಂ ಖಾನ್ ಎಂಬಾತನನ್ನು ಪೊಲೀಸರು ಉತ್ತರ ಪ್ರದೇಶದ ಲಖನೌನಲ್ಲಿ ಬಂಧಿಸಿದ್ದಾರೆ.;
ನಕಲಿ ನೋಟುಗಳು
ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯ ಗಾಂಧಿನಗರ ಬಡಾವಣೆ ಮನೆ ಒಂದರಲ್ಲಿ ಕಂತೆ ಕಂತೆ ನಕಲಿ ನೋಟುಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಅರ್ಷದ್ ಅಂಜುಂ ಖಾನ್ ಎಂಬಾತನನ್ನು ಪೊಲೀಸರು ಉತ್ತರ ಪ್ರದೇಶದ ಲಖನೌನಲ್ಲಿ ಬಂಧಿಸಿದ್ದಾರೆ.
ಮನೆಯಲ್ಲಿ ನಕಲಿ ನೋಟುಗಳ ಪತ್ತೆಯಾದ 10 ದಿನಗಳ ಬಳಿಕ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆರಂಭದಲ್ಲಿ, ನಕಲಿ ನೋಟಿನ ಕಂತೆಗಳ ಮೇಲೆ ‘ಮೂವಿ ಪರ್ಪಸ್ ಓನ್ಲಿ’ ಎಂದು ಬರೆದಿದ್ದರಿಂದ ಪೊಲೀಸರು ಸುಮ್ಮನಾಗಿದ್ದರು. ಆದರೆ ಆರೋಪಿ ಹೈದರಾಬಾದ್‌ನಲ್ಲಿದ್ದೇನೆ, ಗೋವಾದಲ್ಲಿದ್ದೇನೆ ಎಂದು ಯಾಮಾರಿಸಿದ್ದರಿಂದ ಅನುಮಾನ ಹೆಚ್ಚಾಗಿತ್ತು. ಆರೋಪಿ ಬಂಧನಕ್ಕೆ ಬಲೆ ಬೀಸಿದ ಪೊಲೀಸರು ಕೊನೆಗೂ ಉತ್ತರಪ್ರದೇಶದ ಲಖನೌನಲ್ಲಿ ಬಂಧಿಸಿದ್ದಾರೆ.
ಆರೋಪಿಯನ್ನು ದಾಂಡೇಲಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಪ್ರಕರಣದ ಹಿನ್ನೆಲೆ
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದ ಗಾಂಧಿನಗರ ಬಡಾವಣೆಯಲ್ಲಿ ನೂರ್‌ಜಾನ್ ಜುಂಜುವಾಡ್ಕರ ಎಂಬುವವರ ಮನೆಯಲ್ಲಿ ಗೋವಾ ಮೂಲದ ಅರ್ಷದ್ ಖಾನ್ ಎಂಬಾತ ಬಾಡಿಗೆದಾರನಾಗಿ ವಾಸವಿದ್ದ. ಕಳೆದ ಒಂದು ತಿಂಗಳಿನಿಂದ ಈತ ಆ ಮನೆಯಲ್ಲಿ ಇಲ್ಲದೇ ಇರುವುದನ್ನು ಗಮನಿಸಿ ಮತ್ತು ಆ ಮನೆಯ ಹಿಂಬದಿಯ ಬಾಗಿಲ ಚಿಲಕ ಸರಿ ಹಾಕದೇ ಇರುವುದನ್ನು ತಿಳಿದು, ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು.
ದಾಂಡೇಲಿ ನಗರ ಠಾಣೆಯ ಪೊಲೀಸರು ಮನೆಗೆ ಬಂದು ಬಾಗಿಲು ತೆರೆಯುತ್ತಿದ್ದಂತೆಯೇ 500 ರೂ. ಮುಖಬೆಲೆಯ ಕಂತೆ ಕಂತೆ ನೋಟುಗಳು ಕಾಣಿಸಿದ್ದವು. ಈ ನೋಟುಗಳಲ್ಲಿ ʻಮೂವಿ ಶೂಟಿಂಗ್ ಪರ್ಪಸ್ ಓನ್ಲಿʼ ಎಂದು ಬರೆದಿರುವ ಶೈನಿಂಗ್ ಪೇಪರಿನಲ್ಲಿ ಮುದ್ರಿತ 500 ಮುಖಬೆಲೆಯ ನಕಲಿ ಐವತ್ತು ಬಂಡಲ್ ಅಂದಾಜು 14 ಕೋಟಿ ರೂ. ಮೌಲ್ಯದ ನಕಲಿ ನೋಟುಗಳು ಪತ್ತೆಯಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಸಂಪರ್ಕಿಸಿದ್ದರು. ಆಗ ಆತ ಗೋವಾದಲ್ಲಿದ್ದು ಬರುವುದಾಗಿ ಮಾಹಿತಿ ನೀಡಿದ್ದ. ಆದರೆ, ಆತ ಯಾಮಾರಿಸುತ್ತಿದ್ದಾನೆ ಎಂಬುದು ಅರಿವಾದ ಕೂಡಲೇ ಪೊಲೀಸರು ಮೊಬೈಲ್ ಟವರ್ ಲೊಕೇಶನ್ ಟ್ರೇಸ್ ಮಾಡಿದ್ದಾರೆ. ಆಗ ಆರೋಪಿ ಲಖನೌನಲ್ಲಿರುವುದು ತಿಳಿದುಬಂದಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.