ಹವಾಮಾನ ವೈಪರೀತ್ಯ | ಶಿವಮೊಗ್ಗದಲ್ಲಿ ವಿಮಾನ ಲ್ಯಾಂಡಿಂಗ್ ಆಗದೇ ವಾಪಸ್ಸಾದ ಗೃಹ ಸಚಿವ ಪರಮೇಶ್ವರ್

Update: 2024-07-13 13:05 GMT

ಹವಾಮಾನ ವೈಪರೀತ್ಯದಿಂದಾಗಿ ವಿಮಾನ ಲ್ಯಾಂಡ್ ಆಗಲು ಸಾಧ್ಯವಾಗದೆ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಗೃಹ ಸಚಿವ ಡಾ ಜಿ ಪರಮೇಶ್ವರ್‌ ಅವರು ಬೆಂಗಳೂರಿಗೆ ವಾಪಸ್ಸಾದ ಘಟನೆ ಶನಿವಾರ ನಡೆದಿದೆ.

ಪೂರ್ವನಿಗದಿತ ಪ್ರವಾಸ ಕಾರ್ಯಕ್ರಮದಂತೆ ಗೃಹ ಸಚಿವರು ಬೆಳಿಗ್ಗೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ವಿಮಾನದ ಮೂಲಕ ಆಗಮಿಸಿ ಜಿಲ್ಲೆಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಿತ್ತು. ಬೆಳಿಗ್ಗೆ ಬೆಂಗಳೂರಿನಿಂದ ಸುಮಾರು 11:30ಕ್ಕೆ ಹೊರಟು 12:30ಕ್ಕೆ ಶಿವಮೊಗ್ಗಕ್ಕೆ ತಲುಪಬೇಕಿತ್ತು. ಅದರಂತೆ ಬೆಂಗಳೂರಿನಿಂದ ಹೊರಟ ಇಂಡಿಗೋ ವಿಮಾನ ಶಿವಮೊಗ್ಗಕ್ಕೆ ಹೋದಾಗ, ದಟ್ಟ ಮೋಡ ಮತ್ತು ಮಳೆಯಿಂದಾಗಿ ವಿಮಾನ ಲ್ಯಾಂಡ್ ಮಾಡಿಸಲು ನಿಲ್ದಾಣದ ರವ್‌ ವೇ ಸ್ಪಷ್ಟವಾಗಿ ಕಾಣಿಸಿಲ್ಲ. ಹಾಗಾಗಿ ಪೈಲಟ್‌ ಸಾಕಷ್ಟು ಪ್ರಯತ್ನ ನಡೆಸಿ, ಇಳಿಸಲಾಗದೆ ವಿಮಾನವನ್ನು ವಾಪಸ್‌ ಬೆಂಗಳೂರಿಗೆ ತಂದಿದ್ದಾರೆ.

ಗೃಹ ಸಚಿವ ಜಿ.ಪರಮೇಶ್ವರ್ ಅವರು ಇಂದು ಸೊರಬದಲ್ಲಿ ಪೊಲೀಸ್ ವಸತಿ ಸಮುಚ್ಚಯ ಉದ್ಘಾಟನೆ ನಡೆಸಿ, ತೀರ್ಥಹಳ್ಳಿಗೆ ತೆರಳಬೇಕಿತ್ತು. ತೀರ್ಥಹಳ್ಳಿಯಲ್ಲಿ 20.50 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾದ ಕೋಣಂದೂರು ಪೊಲೀಸ್​ ವಸತಿ ಸಂಕೀರ್ಣ, ತೀರ್ಥಹಳ್ಳಿ ರಥಬೀದಿ ಪೊಲೀಸ್​ ಸ್ಟೇಷನ್, ಬೆಟ್ಟಮಕ್ಕಿಯಲ್ಲಿ ನೂತನವಾಗಿ ನಿರ್ಮಾಣ ಆಗಿರುವ ಫೈರ್ ಸ್ಟೇಷನ್ ಹಾಗೂ ಸೊಪ್ಪುಗುಡ್ಡೆಯಲ್ಲಿ 24 ಮನೆಗಳುಳ್ಳ ಪೊಲೀಸ್ ವಸತಿ ಸಮುಚ್ಚಯ ಕೂಡ ಉದ್ಘಾಟನೆ ಮಾಡಬೇಕಿತ್ತು.

ಈ ಕುರಿತು ಸೊರಬದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ʻʻಗೃಹ ಸಚಿವರು ಇಂದು ಸೊರಬಕ್ಕೆ ಬರಬೇಕಿತ್ತು. ಆದರೆ, ಹವಾಮಾನ ವೈಪರೀತ್ಯದಿಂದ ವಿಮಾನ ಲ್ಯಾಂಡ್ ಆಗದೆ ವಾಪಸ್ ಆಗಿದ್ದಾರೆ. ಗೃಹ ಸಚಿವರ ಗೈರಿನಲ್ಲಿ ನಾನು ಉದ್ಘಾಟನೆ ಮಾಡಲಿದ್ದೇನೆʼʼ ಎಂದು ತಿಳಿಸಿದರು.

ವಿಮಾನ ನಿಲ್ದಾಣದ ವ್ಯವಸ್ಥೆ ಕುರಿತು ಪ್ರತಿಕ್ರಿಯಿಸಿರುವ ಮಧು ಬಂಗಾರಪ್ಪ, ಬಿಜೆಪಿಯವರು ವಿಮಾನ ನಿಲ್ದಾಣವನ್ನು ತಮ್ಮ ಪಕ್ಷದ ಚಿಹ್ನೆ ಕಮಲದ ಆಕಾರದಲ್ಲೇ ವಿನ್ಯಾಸ ಮಾಡಿ ನಿರ್ಮಾಣ ಮಾಡಿದ್ದಾರೆ. ಅಂತಹ ವಿಷಯಗಳ ಬಗ್ಗೆ ತೋರುವ ಆಸಕ್ತಿಯನ್ನು ವಿಮಾನ ನಿಲ್ದಾಣದಲ್ಲಿ ಕನಿಷ್ಟ ಸೌಲಭ್ಯಗಳನ್ನು ನೀಡಲು ಯಾಕೆ ತೋರುತ್ತಿಲ್ಲ? ಮಳೆಗಾಲದಲ್ಲಿ ಮೋಡ, ಮಳೆ ಸಾಮಾನ್ಯ. ಅಂತಹ ಪರಿಸ್ಥಿತಿಯಲ್ಲಿ ವಿಮಾನ ಲ್ಯಾಂಡ್‌ ಮಾಡುವುದೇ ಸಾಧ್ಯವಿಲ್ಲ ಎಂದಾದರೆ ವಿಮಾನ ನಿಲ್ದಾಣವಿದ್ದೂ ಪ್ರಯೋಜನವೇನು? ಎಂದು ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದಾರೆ.

Tags:    

Similar News