EXIT POLL 2024 | ರಾಜ್ಯದಲ್ಲಿ ಬಿಜೆಪಿ ಮತ್ತೆ ದಿಗ್ವಿಜಯ: ಎರಡಂಕಿ ದಾಟದ ಕಾಂಗ್ರೆಸ್‌!

ಬಹುತೇಕ ಎಲ್ಲಾ ಮತಗಟ್ಟೆ ಸಮೀಕ್ಷೆಗಳೂ ರಾಜ್ಯದ ಒಟ್ಟು 28 ಸ್ಥಾನಗಳ ಪೈಕಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಲಿದ್ದು, ಆಡಳಿತರೂಢ ಕಾಂಗ್ರೆಸ್ ಎರಡಂಕಿ ದಾಟುವುದಿಲ್ಲ ಎಂದೇ ಭವಿಷ್ಯ ನುಡಿದಿವೆ.;

Update: 2024-06-01 14:52 GMT

ಲೋಕಸಭಾ ಚುನಾವಣೆಯ ಅಂತಿಮ ಮತ್ತು 7ನೇ ಸುತ್ತಿನ ಮತದಾನ ಮುಗಿದ ಬೆನ್ನಲ್ಲೇ ವಿವಿಧ ಚುನಾವಣೋತ್ತರ ಸಮೀಕ್ಷಾ ಸಂಸ್ಥೆಗಳ ಸಮೀಕ್ಷೆಗಳ ಅಂಕಿಅಂಶಗಳು ಹೊರಬಿದ್ದಿವೆ. ದೇಶದ ವಿವಿಧ ರಾಜ್ಯಗಳಲ್ಲಿ ನಡೆಸಿದ ಮತಗಟ್ಟೆ ಸಮೀಕ್ಷೆಯ ಆಧಾರದ ಮೇಲೆ ಮಾಧ್ಯಮ ಸಹಯೋಗದ ಮತ್ತು ಸ್ವತಂತ್ರ ಸಮೀಕ್ಷಾ ಸಂಸ್ಥೆಗಳು ಮಾಹಿತಿ ಮತ್ತು ಡೇಟಾ ಸಮೀಕರಿಸಿ ನೀಡಿರುವ ಪಕ್ಷಗಳ ಸ್ಥಾನಬಲ ಭಾರೀ ಸಂಚಲನ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಕರ್ನಾಟಕದ 28 ಲೋಕಸಭಾ ಸ್ಥಾನಗಳ ಪೈಕಿ ಯಾವ ಪಕ್ಷ ಎಷ್ಟು ಸ್ಥಾನ ಗಳಿಸಲಿದೆ ಎಂಬ ಕುರಿತು ರಾಜ್ಯದ ವಿವಿಧ ಮಾಧ್ಯಮಗಳು ಮತ್ತು ಹೊರಗಿನ ಹಲವು ಏಜೆನ್ಸಿಗಳು ತಮ್ಮದೇ ಆದ ಅಂಕಿ- ಅಂಶಗಳನ್ನು ಎದುರಿಟ್ಟಿವೆ.

ಗಮನಿಸಬೇಕಾದ ಸಂಗತಿ ಎಂದರೆ; ಬಹುತೇಕ ಎಲ್ಲಾ ಮತಗಟ್ಟೆ ಸಮೀಕ್ಷೆಗಳೂ ರಾಜ್ಯದ ಒಟ್ಟು 28 ಸ್ಥಾನಗಳ ಪೈಕಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಲಿದ್ದು, ಆಡಳಿತರೂಢ ಕಾಂಗ್ರೆಸ್ ಎರಡಂಕಿ ದಾಟುವುದಿಲ್ಲ ಎಂದೇ ಭವಿಷ್ಯ ನುಡಿದಿವೆ.

ಬಿಜೆಪಿ ಮತ್ತು ಅದರ ಮಿತ್ರ ಪಕ್ಷ ಜೆಡಿಎಸ್ ಜಂಟಿಯಾಗಿ ಅತಿಹೆಚ್ಚು ಎಂದರೆ 26 ಸ್ಥಾನ ಗಳಿಸುವ ಸಾಧ್ಯತೆ ಇದ್ದು, ಕಾಂಗ್ರೆಸ್ ಅತಿ ಹೆಚ್ಚು ಎಂದರೆ 8 ಸ್ಥಾನ ಗಳಿಸಬಹುದು ಎಂದು ಮತಗಟ್ಟೆ ಸಮೀಕ್ಷೆಗಳ ಒಟ್ಟು ಅಭಿಪ್ರಾಯ. ಎನ್‌ಡಿಎ ಭಾಗವಾಗಿರುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಪೈಕಿ ಬಿಜೆಪಿ ಅತಿ ಹೆಚ್ಚು ಎಂದರೆ 25 ಸ್ಥಾನ ಗಳಿಸಬಹುದು ಎಂದು ಕೆಲವು ಸಮೀಕ್ಷೆಗಳು ಹೇಳಿದ್ದರೆ, ಜೆಡಿಎಸ್ ಅತಿ ಹೆಚ್ಚು ಎಂದರೆ 3 ಸ್ಥಾನ(ಸ್ಪರ್ಧಿಸಿರುವುದೇ ಮೂರು ಕ್ಷೇತ್ರಗಳಲ್ಲಿ) ಗಳಿಸಬಹುದು ಎಂದು ಕೆಲವು ಸಮೀಕ್ಷೆಗಳು ಹೇಳಿವೆ.

ಪ್ರಮುಖವಾಗಿ ಬಿಜೆಪಿ ಕನಿಷ್ಟವೆಂದರೂ 18 ಸ್ಥಾನ ಗಳಿಸಲಿದೆ ಎಂದು ಬಹುತೇಕ ಎಲ್ಲಾ ಎಕ್ಸಿಟ್ ಪೋಲ್ಗಳು ಹೇಳಿದ್ದರೆ, ಕಾಂಗ್ರೆಸ್ ಕನಿಷ್ಟವೆಂದರೆ 3 ಸ್ಥಾನ ಗಳಿಸಲಿದೆ ಎಂದು ಹೇಳಿವೆ. ಜೆಡಿಎಸ್ ವಿಷಯದಲ್ಲಿ ಬಹುತೇಕ ಸಮೀಕ್ಷೆಗಳು ಅದರ ಗಳಿಕೆ ಶೂನ್ಯ ಎಂದೇ ಭವಿಷ್ಯ ನುಡಿದಿವೆ.

ಒಟ್ಟಾರೆ, ಸಮೀಕ್ಷೆಗಳ ಸಮೀಕ್ಷೆ ಪ್ರಕಾರ, ರಾಜ್ಯದ 28 ಕ್ಷೇತ್ರಗಳ ಪೈಕಿ ಅತಿ ಹೆಚ್ಚು ಎಂದರೆ 8 ಸ್ಥಾನಗಳನ್ನು ಆಡಳಿತರೂಢ ಕಾಂಗ್ರೆಸ್ ಗಳಿಸುವ ಸಾಧ್ಯತೆ ಇದ್ದು, ಉಳಿದಂತೆ ಬಿಜೆಪಿ ಅತಿ ಹೆಚ್ಚು ಎಂದರೆ 26 ಸ್ಥಾನ ಗಳಿಸಲಿದೆ. ಅಂದರೆ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಲದ ಮೇಲೆ ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಸ್ಥಾನ ಗೆಲ್ಲುವ ಕಾಂಗ್ರೆಸ್ ನ ನಿರೀಕ್ಷೆಯನ್ನು ಈ ಎಕ್ಸಿಟ್ ಪೋಲ್ ಸಮೀಕ್ಷೆಗಳು ಹುಸಿಗೊಳಿಸಿವೆ.

ಆದರೆ, ಈ ಸಮೀಕ್ಷೆಗಳು ಪರಿಪೂರ್ಣವಲ್ಲ; ಚುನಾವಣಾ ಫಲಿತಾಂಶವೇ ಅಂತಿಮ. ಆದಾಗ್ಯೂ ಮತಗಟ್ಟೆಯ ಸಮೀಕ್ಷೆಗಳನ್ನು ಸಾರಾಸಗಟಾಗಿ ತಳ್ಳಿಹಾಕುವಂತಿಲ್ಲ ಎಂಬುದು ಕೂಡ ಗಮನಾರ್ಹ. ಆ ಹಿನ್ನೆಲೆಯಲ್ಲಿ ಈ ಎಕ್ಸಿಟ್ ಪೋಲ್ ವಾಸ್ತವಕ್ಕೆ ಹತ್ತಿರವಾಗಿದ್ದರೆ, ರಾಜ್ಯದಲ್ಲಿ ಮೋದಿ ಹವಾದ ಗೈರಿನ ನಡುವೆಯೂ ಬಿಜೆಪಿ ಅತಿ ಹೆಚ್ಚು ಸ್ಥಾನ ಗೆಲ್ಲುವುದು ಮತ್ತು ಗ್ಯಾರಂಟಿ ಯೋಜನೆಗಳ ಹವಾದ ಹೊರತಾಗಿಯೂ ಕಾಂಗ್ರೆಸ್ ಎರಡಂಕಿಯನ್ನೂ ದಾಟುವುದಿಲ್ಲ ಎಂಬುದು ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

Tags:    

Similar News