KEA Exam | ವಿಧಾನ ಪರಿಷತ್ ವಿವಿಧ ಹುದ್ದೆಗಳಿಗೆ ಪರೀಕ್ಷೆ; ಏ.15ಕ್ಕೆ ಕನ್ನಡ ಪರೀಕ್ಷೆ
10ನೇ ತರಗತಿಯಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿತವರು, ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಈ ಪರೀಕ್ಷೆ ಯಿಂದ ವಿನಾಯಿತಿ. ಕೆಇಎ ನಡೆಸಿದ ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೂ ವಿನಾಯಿತಿ ಇರುತ್ತದೆ.;
ಕರ್ನಾಟಕ ವಿಧಾನ ಪರಿಷತ್ತಿನ ವಿವಿಧ ಹುದ್ದೆಗಳ ಭರ್ತಿಗೆ ಕಡ್ಡಾಯ ಕನ್ನಡ ಪರೀಕ್ಷೆ ಏ.15ರಂದು ನಡೆಯಲಿದೆ.
ಈ ಹುದ್ದೆಗಳ ಸಲುವಾಗಿಯೇ ಮಾ.22ರಿಂದ 25ರವರೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿದ್ದು, ಅದಕ್ಕೆ ಹಾಜರಾದವರಿಗೆ ಮಾತ್ರ ಈ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ವಿನಾಯಿತಿ: 10ನೇ ತರಗತಿಯಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿತವರು, ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಈ ಪರೀಕ್ಷೆ ಯಿಂದ ವಿನಾಯಿತಿ. ಕೆಇಎ ನಡೆಸಿದ ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೂ ವಿನಾಯಿತಿ ಇರುತ್ತದೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಎಂಜಿನಿಯರಿಂಗ್ ತಂಡ ಸಿದ್ಧಪಡಿಸಿದ ಎಐ ತಾಂತ್ರಿಕತೆಯ ಮೊಬೈಲ್ ಆಧರಿತ ಅಭ್ಯರ್ಥಿ ದೃಢೀಕರಣ (ಮೊಬೈಲ್-ಬೇಸ್ಡ್ ಕ್ಯಾಂಡಿಡೇಟ್ ಅಥೆಂಟಿಕೇಷನ್) ವ್ಯವಸ್ಥೆಯನ್ನು ವಿಧಾನ ಪರಿಷತ್ ಸಚಿವಾಲಯದ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಬಳಸಿತ್ತು. ಈ ತಂತ್ರಜ್ಞಾನದಿಂದ ನಕಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯುವುದನ್ನು ತಡೆಯಬಹುದಾಗಿದೆ.
ಅಭ್ಯರ್ಥಿಗಳು ಪರೀಕ್ಷಾ ಕೊಠಡಿ ಪ್ರವೇಶಿಸುವಾಗ ಮೊಬೈಲ್ ಆ್ಯಪ್ ಬಳಸಿ ಅವರ ಮುಖದ ಚಿತ್ರ ಸೆರೆ ಹಿಡಿಯಲಾಗಿತ್ತು. ಇದು, ತಕ್ಷಣವೇ ಕೆಇಎ ಸರ್ವರ್ನೊಂದಿಗೆ ಆನ್ಲೈನ್ ಮೂಲಕ ಸಂಪರ್ಕಗೊಂಡು ಅಭ್ಯರ್ಥಿಗಳು ಅರ್ಜಿ ಹಾಕುವ ಸಂದರ್ಭದಲ್ಲಿ ಹಾಕಿದ್ದ ಭಾವಚಿತ್ರದೊಂದಿಗೆ ತಾಳೆ ನೋಡಿ, ಅಭ್ಯರ್ಥಿ ನೈಜತೆಯನ್ನು ದೃಢಪಡಿಸುತ್ತದೆ. ಇದರಿಂದ, ನಕಲಿ ಅಭ್ಯರ್ಥಿಗಳನ್ನು ಪರೀಕ್ಷಾ ಕೊಠಡಿ ಪ್ರವೇಶಿಸದಂತೆ ತಡೆಯಲು ಅನುಕೂಲ ಕಲ್ಪಿಸುತ್ತಿತ್ತು.