ವಾಯುವಿಹಾರಕ್ಕೆ ತೆರಳಿದ್ದಾಗ ಬೀದಿನಾಯಿಗಳ ದಾಳಿ; ವೃದ್ಧ ಸಾವು

ಬೆಳಗಿನ ಜಾವ ಸುಮಾರು 3 ಗಂಟೆಗೆ ವಾಯು ವಿಹಾರಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರ ಬಂದಿದ್ದಾರೆ. ಈ ವೇಳೆ ಸುಮಾರು ಎಂಟು ನಾಯಿಗಳು ಏಕಾಏಕಿ ದಾಳಿ ನಡೆಸಿವೆ.;

Update: 2025-07-30 06:42 GMT

ಸಾಂದರ್ಭಿಕ ಚಿತ್ರ

ಬೆಳಗಿನ ಜಾವ ವಾಯುವಿಹಾರಕ್ಕೆ ತೆರಳಿದ್ದ ವೃದ್ಧನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. ದಾಳಿಯಿಂದ ತೀವ್ರ ಗಾಯಗೊಂಡ ವೃದ್ಧ ಮೃತಪಟ್ಟಿರುವ ಘಟನೆ ಕೊಡಿಗೆಹಳ್ಳಿ ಟೆಲಿಕಾಂ ಲೇಔಟ್‌ನಲ್ಲಿ ನಡೆದಿದೆ. 

ಮೃತರನ್ನು ಸೀತಪ್ಪ(68) ಎಂದು ಗುರುತಿಸಲಾಗಿದೆ. ಮೃತ ಸೀತಪ್ಪ ಅವರು ಸೋಮವಾರ ಬೆಳಗಿನ ಜಾವ ಸುಮಾರು 3 ಗಂಟೆಗೆ ವಾಯುವಿಹಾರಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರ ಬಂದಿದ್ದರು. ಈ ವೇಳೆ ಸುಮಾರು ಎಂಟು ನಾಯಿಗಳು ಏಕಾಏಕಿ ದಾಳಿ ನಡೆಸಿವೆ. ವೃದ್ಧರ ಕೈ-ಕಾಲು ಸೇರಿದಂತೆ ಹಲವು ಭಾಗಗಳಿಗೆ ಕಚ್ಚಿದ್ದವು.  

ನಾಯಿಗಳಿಂದ ತಪ್ಪಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ನಾಯಿ ಬೊಗಳುವ ಶಬ್ಧ ಹಾಗೂ ವೃದ್ಧ ಕಿರುಚುವ ಶಬ್ಧ ಕೇಳಿ ಸುತ್ತಮುತ್ತಲಿನ ಮನೆಯವರು ಆಗಮಿಸುವ ವೇಳೆಗೆ ತೀವ್ರವಾಗಿ ಕಚ್ಚಿದ್ದವು. ತಕ್ಷಣ ಬೀದಿ ನಾಯಿಗಳನ್ನು ಓಡಿಸಿದ ಸಾರ್ವಜನಿಕರು, ವೃದ್ಧ ಸೀತಪ್ಪನನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟರು ಎಂದು ಹೇಳಲಾಗಿದೆ. 

ಬೀದಿ ನಾಯಿಗಳನ್ನು ಹಿಡಿದ ಬಿಬಿಎಂಪಿ

ಬೀದಿ ನಾಯಿಗಳ ದಾಳಿಯಿಂದ ವೃದ್ಧ ಮೃತಪಟ್ಟಿದ್ದರಿಂದ ಎಚ್ಚೆತ್ತುಕೊಂಡಿರುವ ಬಿಬಿಎಂಪಿಯ ಪಶುಪಾಲನೆ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿ ಕೊಡಿಗೇಹಳ್ಳಿ ವ್ಯಾಪ್ತಿಯಲ್ಲಿರುವ ಸುಮಾರು 16 ನಾಯಿಗಳನ್ನು ಹಿಡಿದಿದ್ದಾರೆ.

ಕಳೆದ ವರ್ಷ ದಾಳಿಗೆ ಬಲಿಯಾಗಿದ್ದ ವೃದ್ಧೆ

ಕಳೆದ ವರ್ಷ ಆಗಸ್ಟ್‌ 28 ರಂದು ನಗರದ ಜಾಲಹಳ್ಳಿ ವಾಯುಸೇನೆ ನೆಲೆಯ 7ನೇ ವಸತಿ ಗೃಹಗಳ ಕ್ಯಾಂಪ್‌ನ ಮೈದಾನದ ಬಳಿ ರಾಜ್‌ ದುಲಾರಿ ಸಿನ್ಹಾ(76) ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದರಿಂದ ಮೃತಪಟ್ಟಿದ್ದರು.

ಬೀದಿ ನಾಯಿಗಳಿಗೆ ಆಹಾರ ಪೂರೈಸಲು ಬಿಬಿಎಂಪಿ ಟೆಂಡರ್‌ ಕರೆದು, ಸಾರ್ವಜನಿಕರ ಟೀಕೆಗೆ ಗುರಿಯಾಗಿತ್ತು. ಅಲ್ಲದೇ ನಾಯಿಗಳಿಗೆ ಮಾಂಸಾಹಾರ ಪೂರೈಸುವ ಉದ್ದೇಶವನ್ನು ಬಿಬಿಎಂಪಿ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದರು. ಮಾಂಸಾಹಾರ ನೀಡುವುದರಿಂದ ಬೀದಿನಾಯಿಗಳ ದಾಳಿ ತಡೆಯಬಹುದು ಎಂಬ ಬಿಬಿಎಂಪಿ ಯೋಜನೆ ಬಗ್ಗೆ ಸಾರ್ವಜನಿಕರು ವೃದ್ಧ ಬಲಿಯಾದ ಘಟನೆಯನ್ನು ಉಲ್ಲೇಖಿಸಿ ಟೀಕಾಪ್ರಹಾರ ನಡೆಸಿದ್ದಾರೆ. 

Tags:    

Similar News