ಈದ್ ಮಿಲಾದ್ | ಮೆರವಣಿಗೆಯಲ್ಲಿ ಡಿಜೆ ನಿಷೇಧ: ಬೆಂಗಳೂರು ಪೊಲೀಸ್ ಆದೇಶ
ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಕೆಲವು ಮಹತ್ವದ ಸೂಚನೆಗಳನ್ನು ಹೊರಡಿಸಿದ್ದು, ಡಿಜೆ ಬಳಸಬಾರದು, ದೇವಾಲಯ- ಚರ್ಚ್ ಎದುರು ಘೋಷಣೆ ಕೂಗಬಾರದು, ಮಾರಕಾಸ್ತ್ರ ಹೊಂದಿರಬಾರದು ಎಂಬುದೂ ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಿದ್ದಾರೆ.
ಪ್ರತಿ ವರ್ಷದಂತೆ ಈ ಬಾರಿಯೂ ಈದ್ ಮಿಲಾದ್ ಅಂಗವಾಗಿ ನಗರದ ವಿವಿಧೆಡೆ ಮೆರವಣಿಗೆ ನಡೆಸಲು ಮುಸ್ಲಿಮರು ಸಿದ್ಧತೆ ಮಾಡಿಕೊಂಡಿದ್ದಾರೆ. ಧಾರ್ಮಿಕ ಮೆರವಣಿಗೆಯ ವೇಳೆ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರು ಪೊಲೀಸರು ಕೆಲವು ಮಹತ್ವದ ಸೂಚನೆಗಳನ್ನು ನೀಡಿದ್ದಾರೆ.
ಮುಖ್ಯವಾಗಿ ನಗರದ ಮಿಲ್ಲರ್ನ ರಸ್ತೆ ಖುದ್ದುಸಾಬ್ ಈದ್ಗಾ ಮೈದಾನ, ಶಿವಾಜಿನಗರ ಛೋಟಾ ಮೈದಾನ, ಭಾರತೀನಗರದ ಸುಲ್ತಾನ್ಜೀ ಗುಂಟಾ ಮೈದಾನ, ವೈ.ಎಂ.ಸಿ.ಎ. ಮೈದಾನ ಮತ್ತಿತರ ಕಡೆಗಳಲ್ಲಿ ಈದ್ ಮಿಲಾದ್ ಸಾಮೂಹಿಕ ಪ್ರಾರ್ಥನೆ ಮತ್ತು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಲಿದೆ.
ಬೆಂಗಳೂರು ಪೊಲೀಸರು ಹೊರಡಿಸಿರುವ ಸೂಚನೆಗಳು ಇಂತಿವೆ;
- ಮೆರವಣಿಗೆಯಲ್ಲಿ ಪಾಲ್ಗೊಳ್ಳುವವರು ಯಾವುದೇ ರೀತಿಯ ಹರಿತ ವಸ್ತುಗಳನ್ನು ಹೊಂದಿರಬಾರದು
- ಮೆರವಣಿಗೆ ವೇಳೆ ಯಾವುದೇ ಕಾರಣಕ್ಕೂ ಡಿಜೆ ಬಳಸಬಾರದು
- ಸ್ತಬ್ದ ಚಿತ್ರಗಳಲ್ಲಿ ಪ್ರಚೋದನಾತ್ಮಕ ಅಂಶ ಇರಬಾರದು
- ಯಾವುದೇ ಪೂಜಾ ಸ್ಥಳ (ದೇವಸ್ಥಾನ/ಚರ್ಚಗಳ)ದ ಮುಂದೆ ಘೋಷಣೆ ಕೂಗಬಾರದು
- ಮೆರವಣಿಗೆ ಸಮಯದಲ್ಲಿ ವಿದ್ಯುತ್ ಇಲಾಖೆ ಸಿಬ್ಬಂದಿ ನೇಮಿಸಿಕೊಂಡು, ಯಾವುದೇ ವಿದ್ಯುತ್ ಸಂಪರ್ಕ ಅವ್ಯವಸ್ಥೆಯಾಗದಂತೆ ನೋಡಿಕೊಳ್ಳಬೇಕು
- ಮೆರವಣಿಗೆಯ ವೇಳೆ ಬೆಂಕಿ ನಂದಿಸುವ ಸಾಮಗ್ರಿ ಹೊಂದಿರಬೇಕು
- ಮೆರವಣಿಗೆ ಮುಗಿದ ನಂತರ ಬೈಕ್ನಲ್ಲಿ ಇಬ್ಬರಿಗಿಂತ ಹೆಚ್ಚು ಮಂದಿ ದ್ವಿ-ಚಕ್ರ ವಾಹನದಲ್ಲಿ ಚಲಿಸಬಾರದು
- ಹಿರಿಯ ನಾಗಕರಿಕರಿಗೆ ಶಾಲಾ ಮಕ್ಕಳಿಗೆ ಹಾಗೂ ಇತರರಿಗೆ ತೊಂದರೆಯಾಗದಂತೆ ಧ್ವನಿವರ್ಧಕಗಳನ್ನು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10ರವರೆಗೆ ಮಾತ್ರ ಬಳಸಿಕೊಳ್ಳಬೇಕು
- ಧ್ವನಿವರ್ಧಕಗಳನ್ನು ಬಳಸಲು ಸ್ಥಳೀಯ ಪೊಲೀಸರ ಅನುಮತಿ/ಪರವಾನಗಿ ಪಡೆದುಕೊಳ್ಳಬೇಕು
ಈ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಧ್ವನಿವರ್ಧಕಗಳ ಸದ್ದನ್ನು ಕಡಿಮೆ ಮಟ್ಟದಲ್ಲಿ ಇಟ್ಟುಕೊಳ್ಳಬೇಕು. ಹಾಗೂ ಯಾವುದೇ ಕಾರಣಕ್ಕೂ ಡಿ.ಜಿ. ಸೌಂಡ್ ಸಿಸ್ಟಂ ಅಳವಡಿಸಲು ಅವಕಾಶ ಇರುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಸಂಚಾರ ಮಾರ್ಗ ಬದಲಾವಣೆ
ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ನಗರದ ಕೆಲವು ರಸ್ತೆಗಳಲ್ಲಿ ಸೋಮವಾರ(ಸೆ.16) ಸಂಚಾರ ಮಾರ್ಗ ಬದಲಾವಣೆ ಮಾಡಿ ಬೆಂಗಳೂರು ಪೊಲೀಸರು ಆದೇಶ ಹೊರಡಿಸಿದ್ದಾರೆ.
ನಗರದ ನೃಪತುಂಗ ರಸ್ತೆಯ ವೈ.ಎಂ.ಸಿ.ಎ ಮೈದಾನದಲ್ಲಿ ಈದ್ ಮಿಲಾದ್ ಸಾಮೂಹಿಕ ಪ್ರಾರ್ಥನೆ ನಡೆಯಲಿದ್ದು, ಅಲ್ಲಿಗೆ ಸಾವಿರಾರು ಜನರು ಮೆರವಣಿಗೆ ಮೂಲಕ ಬಂದು ಸೇರಲಿದ್ದಾರೆ. ಆ ಹಿನ್ನೆಲೆಯಲ್ಲಿ ಸುಗಮ ಸಂಚಾರದ ಹಿತದೃಷ್ಟಿಯಿಂದ ಈ ಕೆಳಕಂಡಂತೆ ಸಂಚಾರ ಮಾರ್ಪಾಡುಗಳನ್ನು ಮಾಡಲಾಗಿದೆ ಎಂದು ಬೆಂಗಳೂರು ನಗರ ಸಂಚಾರಿ ಪೊಲೀಸರು ಮಾರ್ಗಸೂಚಿ ಹೊರಡಿಸಿದ್ದಾರೆ.
ಈದ್-ಮಿಲಾದ್ ಮೆರವಣಿಗೆ ಮಾರ್ಗಗಳು
- ಜೆ.ಸಿ ನಗರ ದರ್ಗಾದಿಂದ ಹೊರಟು ಶಿವಾಜಿನಗರ ಕಂಟೋನ್ ಮೆಂಟ್ ಕಡೆಗೆ ಸಾಗುವುದು
- ಯಲಹಂಕ ಓಲ್ಡ್ ಟೌನ್ ಮಸೀದಿಯಿಂದ ಯಲಹಂಕ ಓಲ್ಡ್ ಟೌನ್ ಮಸೀದಿಯವರೆಗೆ
- ಹಳೇ ಬಸ್ ನಿಲ್ದಾಣದಿಂದ ಸಣ್ಣ ಅಮಾನಿಕೆರೆಯವರೆಗೆ
- ಬೆಳ್ಳಳ್ಳಿ ಕ್ರಾಸ್ ನಿಂದ ನಾಗವಾರ ಸಿಗ್ನಲ್ವರೆಗೆ
- ರಾಜಗೋಪಾಲನಗರ ಮುಖ್ಯರಸ್ತೆಯಿಂದ ಪೀಣ್ಯ 2ನೇ ಹಂತದವರೆಗೆ
- ಸೌತ್ ಎಂಡ್ ಸರ್ಕಲ್ ನಿಂದ ಆರ್.ವಿ ರಸ್ತೆಯ ಲಾಲ್ ಭಾಗ್ ವೆಸ್ಟ್ ಗೇಟ್ ಸರ್ಕಲ್ವರೆಗೆ
- ಗೀತಾ ಜಂಕ್ಷನ್ (ಕೂಲ್ ಚಾಯಿಂಟ್ ಜಂಕ್ಷನ್)ನಿಂದ ಸೌತ್ ಎಂಡ್ ಸರ್ಕಲ್
- ಬೇಂದ್ರೆ ಜಂಕ್ಷನ್ ನಿಂದ ಓಬಳಪ್ಪ ಗಾರ್ಡನ್ ಜಂಕ್ಷನ್
- ಮಹಾಲಿಂಗೇಶ್ವರ ಬಡಾವಣೆ ನಿಂದ ಆಡುಗೋಡಿ
- ಈ ಮಾರ್ಗಗಳ ಮೂಲಕ ಎಲ್ಲ ಮೆರವಣಿಗೆಗಳೂ ವೈ.ಎಂ.ಸಿ.ಎ ಮೈದಾನಕ್ಕೆ ಬಂದು ಸೇರುತ್ತವೆ.
ಸಂಚಾರ ನಿರ್ಬಂಧ ಹೇರಿರುವ ಮಾರ್ಗಗಳು
- ನೇತಾಜಿ ಜಂಕ್ಷನ್ನಿಂದ ಪಾಟರಿ ಸರ್ಕಲ್ ಮೂಲಕ ಟ್ಯಾನರಿ ರಸ್ತೆ ಕಡೆಗೆ ಸಂಚಾರ ನಿರ್ಬಂಧ
- ಮಾಸ್ಕ್ ಜಂಕ್ಷನ್ ನಿಂದ ಎಂ.ಎಂ ರಸ್ತೆ ಮೂಲಕ ನೇತಾಜಿ ಜಂಕ್ಷನ್ವರೆಗೆ ಎಂ.ಎಂ.ರಸ್ತೆ ರಸ್ತೆಯಲ್ಲಿ ದ್ವಿಮುಖ ಸಂಚಾರಕ್ಕೆ ಬದಲಾಗಿ ಏಕಮುಖ ಸಂಚಾರವನ್ನಾಗಿ ತಾತ್ಕಾಲಿಕವಾಗಿ ಮಾರ್ಪಾಡು ಮಾಡಲಾಗಿದ್ದು, ನೇತಾಜಿ ಜಂಕ್ಷನ್ನಿಂದ ಮಾಸ್ಕ್ ಜಂಕ್ಷನ್ ಕಡೆಗೆ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ
- ನೇತಾಜಿ ಜಂಕ್ಷನ್ ನಿಂದ ಹೇನ್ಸ್ ಜಂಕ್ಷನ್ ವರೆಗೆ ಹೇನ್ಸ್ ರಸ್ತೆಯಲ್ಲಿ ಸಂಚಾರ ನಿರ್ಬಂಧ
- ನಾಗವಾರ ಜಂಕ್ಷನ್ನಿಂದ ಪಾಟರಿ ಸರ್ಕಲ್ ರಸ್ತೆಯ ವರೆಗೆ ಭಾಗಶಃ ಸಂಚಾರ ನಿರ್ಬಂಧ