'ಮೊಬೈಲ್ ಬಿಡಿ, ಪುಸ್ತಕ ಹಿಡಿ': ಶಿಕ್ಷಕರ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ

ನಮ್ಮ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಮನಸ್ಥಿತಿಯನ್ನು ರೂಪಿಸುವುದು ವೈಚಾರಿಕ ಶಿಕ್ಷಣ. ಕೇವಲ ಪಾತ್ರೆ ತುಂಬಿಸುವುದು ಶಿಕ್ಷಣ ಅಲ್ಲ. ಮಕ್ಕಳಲ್ಲಿ ಅರಿವಿನ ಕಿಡಿ ಹೊತ್ತಿಸುವುದೇ ಶಿಕ್ಷಣದ ಉದ್ದೇಶ ಮತ್ತು ಮಹತ್ವವಾಗಿದೆ ಎಂದು ಸಿ.ಎಂ ಸಿದ್ದರಾಮಯ್ಯ ತಿಳಿಸಿದರು.;

Update: 2025-09-05 10:09 GMT

 ಸಿ.ಎಂ.ಸಿದ್ದರಾಮಯ್ಯ

Click the Play button to listen to article

"ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಮೊಬೈಲ್ ಗೀಳಿನಿಂದ ಅವರನ್ನು ಹೊರತರುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಆದ್ದರಿಂದ, ಪ್ರತಿ ಶಾಲೆ ಮತ್ತು ಮನೆಯಲ್ಲಿ 'ಮೊಬೈಲ್ ಬಿಡಿ, ಪುಸ್ತಕ ಹಿಡಿ' ಎಂಬ ಮೌಲ್ಯವನ್ನು ಜಾರಿಗೆ ತನ್ನಿ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಶುಕ್ರವಾರ ಬೆಂಗಳೂರಿನ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಅಭಿನಂದಿಸಿ ಅವರು ಮಾತನಾಡಿದರು.

"ಕೇವಲ ಪಾತ್ರೆ ತುಂಬುವುದು ಶಿಕ್ಷಣವಲ್ಲ, ಮಕ್ಕಳಲ್ಲಿ ಅರಿವಿನ ಕಿಡಿ ಹೊತ್ತಿಸುವುದೇ ನಿಜವಾದ ಶಿಕ್ಷಣ. ನಮ್ಮ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವಂತಹ ವೈಚಾರಿಕ ಶಿಕ್ಷಣ ನೀಡುವುದು ನಮ್ಮ ಸರ್ಕಾರದ ಗುರಿ" ಎಂದು ಮುಖ್ಯಮಂತ್ರಿಗಳು ಹೇಳಿದರು. ಸಂವಿಧಾನವು ಎಲ್ಲರಿಗೂ ಶಿಕ್ಷಣದ ಹಕ್ಕನ್ನು ನೀಡಿದೆ. ಸ್ವಾತಂತ್ರ್ಯ, ಸಮಾನತೆ, ಮತ್ತು ಭ್ರಾತೃತ್ವದಂತಹ ಸಂವಿಧಾನದ ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತಿ, ಉತ್ತಮ ನಾಗರಿಕರನ್ನು ರೂಪಿಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.

ಕಂದಾಚಾರ ಮತ್ತು ಮೌಢ್ಯದ ವಿರುದ್ಧ ಶಿಕ್ಷಣ

"ಶಿಕ್ಷಣ ಕಲಿತೂ ಜಾತಿ, ಕಂದಾಚಾರ ಮತ್ತು ಮೌಢ್ಯಗಳನ್ನು ಆಚರಿಸುವುದು ಶಿಕ್ಷಣಕ್ಕೆ ಮಾಡುವ ದ್ರೋಹ. ವೈಚಾರಿಕತೆ, ವೈಜ್ಞಾನಿಕತೆ ಮತ್ತು ಪರಧರ್ಮ ಸಹಿಷ್ಣುತೆಯನ್ನು ಬೋಧಿಸುವ ಶಿಕ್ಷಣವನ್ನು ನೀಡುವುದು ಶಿಕ್ಷಕರ ನೈತಿಕ ಹೊಣೆಗಾರಿಕೆ" ಎಂದು ಅವರು ಅಭಿಪ್ರಾಯಪಟ್ಟರು.

ಮಹಿಳಾ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ

ಒಂದು ಕಾಲದಲ್ಲಿ ಶೂದ್ರರು ಮತ್ತು ಮಹಿಳೆಯರನ್ನು ಶಿಕ್ಷಣದಿಂದ ಹೊರಗಿಡಲಾಗಿತ್ತು. ಆದರೆ ಇಂದು, ಶಿಕ್ಷಣದ ಹಕ್ಕಿನಿಂದಾಗಿ ಹೆಣ್ಣುಮಕ್ಕಳು ಹೆಚ್ಚು ಹೆಚ್ಚು ರ್ಯಾಂಕ್‌ಗಳನ್ನು ಪಡೆಯುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಶೇಖ್ ಅವರಂತಹ ಮೊದಲ ಶಿಕ್ಷಕಿಯರ ತ್ಯಾಗವನ್ನು ಸ್ಮರಿಸಿದ ಅವರು, ಎಲ್ಲಾ ಅವಮಾನಗಳನ್ನು ಸಹಿಸಿ ಅವರು ಶಿಕ್ಷಣ ನೀಡಿದ್ದನ್ನು ನೆನಪಿಸಿಕೊಂಡರು.

ತಮ್ಮ ವಿದ್ಯಾರ್ಥಿ ಜೀವನದ ಕಷ್ಟಗಳನ್ನು ನೆನಪಿಸಿಕೊಂಡ ಮುಖ್ಯಮಂತ್ರಿ, "ಯಾರಿಗೂ ಹಸಿವಿನ ಕಷ್ಟ ಬರಬಾರದು ಎಂಬ ಕಾರಣಕ್ಕಾಗಿಯೇ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದೇನೆ" ಎಂದು ವಿವರಿಸಿದರು.

ಈ ಸಂದರ್ಭದಲ್ಲಿ, ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಮತ್ತು ಎಂ.ಸಿ. ಸುಧಾಕರ್ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ ಅವರು, ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಆದರ್ಶಗಳನ್ನು ಪಾಲಿಸುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಹೇಳಿದರು.

ಸಾವಿತ್ರಿ ಫುಲೆ-ಫಾತಿಮಾ ಶೇಕ್ ಸ್ಮರಿಸಿದ ಸಿಎಂ

ಸಾವಿತ್ರಿ ಫುಲೆ ಮತ್ತು ಫಾತಿಮಾ ಶೇಕ್ ಇಬ್ಬರೂ ದಮನಿತ ಮಹಿಳೆಯರಿಗೆ ಶಿಕ್ಷಣ ಕೊಟ್ಟ ಮೊದಲ ಶಿಕ್ಷಕಿಯರು. ಇವರಿಗೆ ಸೆಗಣಿಯನ್ನೆಲ್ಲಾ ಎಸೆದು ಅವಮಾನಿಸಲಾಗಿತ್ತು. ಈ ಎಲ್ಲಾ ಅವಮಾನ ಸಹಿಸಿಕೊಂಡೂ ಶಿಕ್ಷಣ ನೀಡಿದರು ಎಂದು ಸಿಎಂ ಸ್ಮರಿಸಿದರು. 

Tags:    

Similar News