ಶಾಸಕ ಪಪ್ಪಿಗೆ ಇ.ಡಿ. ಕುಣಿಕೆ ಮತ್ತಷ್ಟು ಬಿಗಿತ : ಚಳ್ಳಕೆರೆ ಬ್ಯಾಂಕ್‌ಗಳಲ್ಲಿ ಖಾತೆಗಳ ತಪಾಸಣೆ
ಶಾಸಕ ವೀರೇಂದ್ರ ಅವರ ಹುಟ್ಟೂರಾದ ಚಳ್ಳಕೆರೆ ಪಟ್ಟಣದಲ್ಲಿ ಇ.ಡಿ. ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು. ಮೂವರು ಅಧಿಕಾರಿಗಳ ತಂಡವು ಪಟ್ಟಣದಲ್ಲಿರುವ ಫೆಡರಲ್ ಬ್ಯಾಂಕ್ ಹಾಗೂ ಕೋಟಕ್ ಮಹೀಂದ್ರ ಬ್ಯಾಂಕ್ ಶಾಖೆಗಳಿಗೆ ಬೆಳಿಗ್ಗೆ 10.30ರ ಸುಮಾರಿಗೆ ಭೇಟಿ ನೀಡಿತು
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ (ಪಪ್ಪಿ) ಅವರ ಸಂಕಷ್ಟ ಮತ್ತಷ್ಟು ಹೆಚ್ಚಾಗುವ ಲಕ್ಷಣಗಳು ಕಾಣಿಸುತ್ತಿವೆ. ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು, ಗುರುವಾರ ಶಾಸಕರ ಬ್ಯಾಂಕ್ ಖಾತೆಗಳ ಮೇಲೆ ತಮ್ಮ ದೃಷ್ಟಿ ನೆಟ್ಟಿದ್ದಾರೆ.
ಶಾಸಕ ವೀರೇಂದ್ರ ಅವರ ಹುಟ್ಟೂರಾದ ಚಳ್ಳಕೆರೆ ಪಟ್ಟಣದಲ್ಲಿ ಇ.ಡಿ. ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು. ಮೂವರು ಅಧಿಕಾರಿಗಳ ತಂಡವು ಪಟ್ಟಣದಲ್ಲಿರುವ ಫೆಡರಲ್ ಬ್ಯಾಂಕ್ ಹಾಗೂ ಕೋಟಕ್ ಮಹೀಂದ್ರ ಬ್ಯಾಂಕ್ ಶಾಖೆಗಳಿಗೆ ಬೆಳಿಗ್ಗೆ 10.30ರ ಸುಮಾರಿಗೆ ಭೇಟಿ ನೀಡಿತು. ಮಧ್ಯಾಹ್ನದವರೆಗೂ ಬ್ಯಾಂಕ್‌ಗಳಲ್ಲಿಯೇ ಇದ್ದು, ಶಾಸಕ ವೀರೇಂದ್ರ ಅವರ ಹೆಸರಿನಲ್ಲಿರುವ ಖಾತೆಗಳು ಹಾಗೂ ಅವರೊಂದಿಗೆ ಸಂಬಂಧ ಹೊಂದಿರುವ ವ್ಯವಹಾರಗಳ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದರು.
ತನಿಖೆಯ ಉದ್ದೇಶವೇನು?
ಅಕ್ರಮ ಹಣ ವರ್ಗಾವಣೆ ಪ್ರಕರಣದ ಭಾಗವಾಗಿ, ಹಣದ ಮೂಲ ಮತ್ತು ಹರಿವನ್ನು ಪತ್ತೆಹಚ್ಚಲು ಇ.ಡಿ. ಈ ಪರಿಶೀಲನೆ ನಡೆಸಿದೆ. ಶಾಸಕರ ಖಾತೆಗಳಿಗೆ ಹಣ ಜಮೆಯಾದ ಮೂಲ, ದೊಡ್ಡ ಮೊತ್ತದ ವರ್ಗಾವಣೆಗಳು ಹಾಗೂ ಅನುಮಾನಾಸ್ಪದ ಎನಿಸುವ ಪ್ರತಿಯೊಂದು ವ್ಯವಹಾರದ ವಿವರಗಳನ್ನು ಅಧಿಕಾರಿಗಳು ಕಲೆಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮಾಹಿತಿಯು ಪ್ರಕರಣದ ತನಿಖೆಗೆ ಮಹತ್ವದ ಸಾಕ್ಷ್ಯವಾಗುವ ಸಾಧ್ಯತೆಯಿದೆ.
ಬಿಗಿ ಪೊಲೀಸ್ ಬಂದೋಬಸ್ತ್
ಇ.ಡಿ. ಅಧಿಕಾರಿಗಳ ಪರಿಶೀಲನಾ ಕಾರ್ಯದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಬ್ಯಾಂಕ್ ಶಾಖೆಗಳ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಬ್ಯಾಂಕ್ ಖಾತೆಗಳ ಪರಿಶೀಲನೆಯಿಂದಾಗಿ ಶಾಸಕ ವೀರೇಂದ್ರ ಅವರ ಮೇಲಿನ ಕಾನೂನು ಕುಣಿಕೆ ಮತ್ತಷ್ಟು ಬಿಗಿಗೊಂಡಿದೆ.