Mysore MUDA Scam | ಸೈಟ್ ಮುಟ್ಟುಗೋಲು: ಸಿಎಂ ಸಿದ್ದರಾಮಯ್ಯಗೆ ಬಿಗಿಯಾಗುತ್ತಿದೆಯೇ ಕಾನೂನಿನ ಕುಣಿಕೆ?
ಈ ಬೆಳವಣಿಗೆ ಸಿದ್ದರಾಮಯ್ಯ ಮಾತ್ರವಲ್ಲದೆ, ಮೈಸೂರು ಮುಡಾದ ವ್ಯವಹಾರದಲ್ಲಿ ಲಾಭ ಮಾಡಿಕೊಂಡಿರುವ ಮೂರೂ ಪಕ್ಷಗಳ ಮುಖಂಡರಲ್ಲೂ ಕಂಪನ ಹುಟ್ಟಿಸಿದೆ ಎನ್ನಲಾಗುತ್ತಿದೆ.;
ಮುಡಾದಿಂದ ಹಂಚಿಕೆಯಾಗಿದ್ದ ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಮೈಸೂರು ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಮತ್ತೊಂದು ದಾಳವನ್ನು ಉರುಳಿಸಿದೆ.
ಮುಡಾದಿಂದ ಪಡೆದುಕೊಂಡಿದ್ದ 14 ನಿವೇಶಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಈಗಾಗಲೇ ಹಿಂದಿರುಗಿಸಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕಲು ಇರುವ ಎಲ್ಲ ಕಾನೂನು ಸಾಧ್ಯತೆಗಳನ್ನು ಬಳಸಿಕೊಳ್ಳಲು ಇಡಿ ಮುಂದಾಗಿದೆ. ಹೀಗಾಗಿಯೇ ಜ. 18 ರಂದು ಬಿಡುಗಡೆ ಮಾಡಿರುವ ಮಾಧ್ಯಮ ಹೇಳಿಕೆಯಲ್ಲಿ ತನಿಖೆಯ ಮುಂದುವರಿದ ಭಾಗವಾಗಿ ಅಕ್ರಮವಾಗಿ ಪರಭಾರೆಯಾಗಿದ್ದ ಎಲ್ಲ 142 ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಎಲ್ಲ ನಿವೇಶನಗಳು ಬೇನಾಮಿ ಅಥವಾ ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ಎಜೆಂಟರ ಹೆಸರಿನಲ್ಲಿ ನೋಂದಣಿ ಆಗಿವೆ. ಈ ಎಲ್ಲ ನಿವೇಶನಗಳ ಪರಭಾರೆ ಹಿಂದೆ ಅಕ್ರಮ ಹಣ ವರ್ಗಾವಣೆ ಆಗಿದೆ ಎಂದು ಉಲ್ಲೇಖಿಸಿದೆ. ಆ ಮೂಲಕ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಕಾನೂನು ಕುಣಿಕೆಯನ್ನು ಬಿಗಿಗೊಳಿಸುವ ಸ್ಪಷ್ಟ ಸೂಚನೆಯನ್ನು ಇಡಿ ನೀಡಿದೆ.
ಇಡಿಯ ಈ ಕ್ರಮ ಸಿಎಂ ಸಿದ್ದರಾಮಯ್ಯ ವಿರುದ್ಧ ಕಾನೂನಾತ್ಮಕವಾಗಿ ಇರುವ ಎಲ್ಲ ಸಾಧ್ಯತೆಗಳನ್ನು ಬಳಸಿಕೊಳ್ಳುವ ಪ್ರಯತ್ನದ ಮುಂದುವರಿದ ಭಾಗ ಎಂದೇ ವಿಶ್ಲೇಷಿಸಲಾಗುತ್ತಿದೆ.
ಹಾಗಾದರೆ ಮುಟ್ಟುಗೋಲು ಹಾಕಿಕೊಂಡಿರುವ ಎಲ್ಲ ನಿವೇಶನಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಭಾವದಿಂದಲೇ ಪರಭಾರೆ ಆಗಿವೆಯಾ? ಇಡಿ ತನ್ನ ಮಾಧ್ಯಮ ಪ್ರಕಟಣೆಯಲ್ಲಿ ಹೇಳಿರುವಂತೆ ಎಲ್ಲ 142 ನಿವೇಶನಗಳನ್ನು ರಿಯಲ್ ಎಸ್ಟೇಟ್ ಉದ್ಯಮಿಗಳು, ಏಜೆಂಟರ ಹೆಸರಿನಲ್ಲಿ ನೋಂದಣಿ ಆಗಿವೆಯಾ? ಅವರೆಲ್ಲರೂ ಸಿಎಂ ಸಿದ್ದರಾಮಯ್ಯ ಅವರಿಗೆ ಆಪ್ತರಾ? ಹಿಂಬಾಲಕರಾ? ಅಥವಾ ಸಂಬಂಧಿಕರಾ?. ಮುಡಾದಿಂದ ಹಂಚಿಕೆ ಆಗಿರುವ ಎಲ್ಲ ನಿವೇಶನಗಳನ್ನು ಬಿಟ್ಟು ಈ 142 ನಿವೇಶನಗಳನ್ನು ಮಾತ್ರ ಯಾಕೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಮುಂದಿನ ಹಂತದಲ್ಲಿ ತನಿಖೆ ಹೇಗೆ ನಡೆಯಲಿದೆ? ಎಂಬ ಪ್ರಶ್ನೆಗಳು ಜನಸಾಮಾನ್ಯರಲ್ಲಿ ಮೂಡುವುದು ಸಹಜ. ಈ ಎಲ್ಲ ಬೆಳವಣಿಗೆಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
142 ನಿವೇಶನಗಳು ಸಿದ್ದರಾಮಯ್ಯ ಆಪ್ತರಿಕೆ ಹಂಚಿಕೆ?
ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ 14 ನಿವೇಶನಗಳನ್ನು ಪರಭಾರೆ ಮಾಡಿದಂತೆಯೆ ಉಳಿದ 128 ನಿವೇಶನಗಳನ್ನು ಪರಭಾರೆ ಮಾಡುವಾಗ ಅಕ್ರಮ ಹಣ ವರ್ಗಾವಣೆ ಆಗಿದೆ. ಈ ಎಲ್ಲ ನಿವೇಶನಗಳು ರಿಯಲ್ ಎಸ್ಟೇಟ್ ಉದ್ಯಮಿಗಳು, ಏಜಂಟರ ಹೆಸರಿನಲ್ಲಿವೆ ಎಂದು ಇಡಿ ಹೇಳಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಭಾವದಿಂದಲೇ ಇಷ್ಟೂ ನಿವೇಶನಗಳು ಹಂಚಿಕೆಯಾಗಿವೆ ಎಂದು ಇಡಿ ಹೇಳಿಲ್ಲ.
ಅಕ್ರಮ ಹಣ ವರ್ಗಾವಣೆ ಆಗಿರುವ ನಿವೇಶನಗಳನ್ನು ಮಾತ್ರ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಹೇಳಿದೆ. ಅಲ್ಲದೆ ಡಿ.ಬಿ. ನಟೇಶ್ ಮುಡಾ ಆಯುಕ್ತರಾಗಿದ್ದಾಗ ಬಿ.ಎಂ. ಪಾರ್ವತಿ ಅವರಿಗೆ ನಿವೇಶನಗಳು ಅಕ್ರಮವಾಗಿ ಪರಭಾರೆ ಮಾಡಲಾಗಿದೆ ಎಂದು ಇಡಿ ಹೇಳಿದೆ.
ಸೈಟ್ ಹಿಂದಿರುಗಿಸಿ ಪಾರಾದರೆ?
'ದ ಫೆಡರಲ್ ಕರ್ನಾಟಕ'ದೊಂದಿಗೆ ಮಾತನಾಡಿದ ಹೈಕೋರ್ಟ್ ವಕೀಲ ನಟರಾಜ ಶರ್ಮಾ, 'ಆರೋಪ ಎದುರಾದ ತಕ್ಷಣ ಸಿಎಂ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಅವರು ತಾವು ತೆಗೆದುಕೊಂಡಿದ್ದ ಎಲ್ಲ 14 ನಿವೇಶನಗಳನ್ನು ಮುಡಾಕ್ಕೆ ಹಿಂದಿರುಗಿಸಿದ್ದಾರೆ. ಆದರೆ ಹಾಗೆ ಹಿಂದಿರುಗಿಸುವುದರಿಂದ ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಈಗಾಗಲೇ ಇಡಿ ತನಿಖೆ ಆರಂಭಿಸಿದೆ. ಈಗ ಮೂಲ ಕಡತಗಳಿಂದ ತನಿಖೆ ನಡಯುತ್ತದೆ. ಭೂ ಸ್ವಾಧೀನ ಅಗತ್ಯವಿತ್ತಾ? ಸ್ವಾಧೀನ ಪಡಿಸಿಕೊಂಡ ಭೂಮಿಗೆ ಅಂದಿನ ಮಾರ್ಕೆಟ್ ದರದಂತೆ ಮುಡಾ ನಿಗದಿ ಮಾಡಿತ್ತಾ? ಈ ಎಲ್ಲ ವಿಷಯಗಳನ್ನು ಇಡಿ ಕೂಲಂಕಷವಾಗಿ ತನಿಖೆ ಮಾಡುತ್ತದೆ' ಎಂದು ಮಾಹಿತಿ ನೀಡಿದರು.
ಜೊತೆಗೆ ಸ್ವಾಧೀನಪಡಿಸಿಕೊಂಡ ಭೂಮಿಗೆ ಎಷ್ಟು ನಿವೇಶನಗಳನ್ನು ಪರಿಹಾರದ ರೂಪದಲ್ಲಿ ಕೊಡಬೇಕು? ಅದನ್ನು ಸರಿಯಾಗಿ ಪಾಲಿಸಲಾಗಿದೆಯಾ? ಜೊತೆಗೆ ಸ್ವಾಧೀನ ಪಡಿಸಿಕೊಂಡಿರುವ ಭೂಮಿಯಿಂದ ಎಷ್ಟು ದೂರದ ನಿವೇಶನಗಳನ್ನು ಕೊಡಲಾಗಿದೆ ಎಂಬುದರ ತನಿಖೆ ಆರಂಭವಾಗಲಿದೆ ಎನ್ನುತ್ತಾರೆ ನಟರಾಜ ಶರ್ಮಾ.
ನಿವೇಶನಗಳ ವರ್ಗಾವಣೆ ಮಾಡುವಂತಿಲ್ಲ
ತನಿಖೆ ಮುಗಿಯುವವರೆಗೆ ಇಡಿ ಮುಟ್ಟುಗೋಲು ಹಾಕಿಕೊಂಡಿರುವ 142 ನಿವೇಶನಗಳನ್ನು ವರ್ಗಾವಣೆ, ಪರಭಾರೆ, ಮಾರಾಟ ಮಾಡುವಂತಿಲ್ಲ. ಹೀಗಾಗಿ ಬಿ.ಎಂ. ಪಾರ್ವತಿ ಅವರು ಈಗಾಗಲೇ ಸೈಟ್ಗಳನ್ನು ಹಿಂದಿರುಗಿಸಿದ್ದರೂ ಇಡಿ ತನಿಖೆ ಮುಗಿಯುವರೆಗೆ ಅದು ಮಾನ್ಯವಾಗುವುದಿಲ್ಲ.
ಹಣ ಅಕ್ರಮ ವರ್ಗಾವಣೆ ಕಾಯ್ದೆ ಅಡಿಯಲ್ಲಿ ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲಾಗಿ ತನಿಖೆ ನಡೆಯುತ್ತಿದೆ. ಹೀಗಾಗಿ ತನಿಖೆ ಮುಗಿಯುವರೆಗೆ ನಿವೇಶನಗಳ ಪರಭಾರೆ, ನಿರ್ಮಾಣ ಅಥವಾ ಬೇರೆ ಏನನ್ನೂ ಮಾಡುವಂತಿಲ್ಲ. ಜೊತೆಗೆ ತನಿಖೆ ಮುಗಿಯುವುದು ಯಾವಾಗ ಎಂಬುದನ್ನೂ ಯಾರೂ ಹೇಳಲಾಗದು. ಹೀಗಾಗಿ ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾನೂನು ಕುಣಿಕೆ ಬಿಗಿಯುವ ಇಡಿ ಪ್ರಯತ್ನ ಎಂದೇ ಹೇಳಲಾಗುತ್ತಿದೆ.
ಅಕ್ರಮ ಹಣದಿಂದ ಐಶಾರಾಮಿ ಕಾರು, ಆಸ್ತಿ
ಈ 142 ನಿವೇಶನಗಳ ಪರಭಾರೆಯಲ್ಲಿ ಒಟ್ಟು ಸುಮಾರು 300 ಕೋಟಿ ರೂಪಾಯಿಗಳಷ್ಟು ಹಣದ ಅಕ್ರಮವಾಗಿದೆ. ಇದು ಹಣ ಅಕ್ರಮ ವರ್ಗಾವಣೆ ಕಾಯ್ದೆಯಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರರ ವಿರುದ್ಧ ನಡೆಯುತ್ತಿರುವ ತನಿಖೆಯ ಭಾಗವಾಗಿದೆ. ಸೈಟ್ಗಳನ್ನು ಬೇನಾಮಿಯಾಗಿ ನೋಂದಣಿ ಮಾಡಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ಮುಡಾ ಅಧ್ಯಕ್ಷ ಮರಿಗೌಡ, ಹಿಂದಿನ ಮುಡಾ ಆಯ್ತುಕ್ತ ಜಿ.ಟಿ. ದಿನೇಶ್ ಕುಮಾರ್ ಅವರಿಗೆ ಸೇರಿದ್ದು ಎನ್ನಲಾಗಿರುವ ಅಕ್ರಮ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜೊತೆಗೆ ಹಿಂದಿನ ಮುಡಾ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ಈ ಅಕ್ರಮದ ಹಣದಿಂದ ಖರೀಸಿದಿಸಿದ್ದಾರೆ ಎಂಬ ದೂರುಗಳ ಹಿನ್ನಲೆಯಲ್ಲಿ ಅವರ ಸಂಬಂಧಿಕರ ಹೆಸರಿನಲ್ಲಿದ್ದ ಐಶಾರಾಮಿ ಕಾರುಗಳು, ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೋ-ಆಪರೇಟಿವ್ ಸೊಸೈಟಿಯೊಂದರ ಮೂಲಕ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎಂಬುದನ್ನು ಇಡಿ ತನ್ನ ಮಾಧ್ಯಮ ಪ್ರಕಟಣೆಯಲ್ಲಿ ಹೇಳಿದೆ.
ಪದೇಪದೆ ಸಿದ್ದರಾಮಯ್ಯ ಹೆಸರು ಪ್ರಸ್ತಾಪ
ಇಡಿ ಜ.17 ರಂದು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಪದೇಪದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರನ್ನು ಪ್ರಸ್ತಾಪಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ರಾಜಕೀಯ ಪ್ರಭಾವ ಬಳಸಿಕೊಂಡು 3 ಎಕರೆ 16 ಗುಂಟೆ ಭೂಮಿಯನ್ನು ಮುಡಾಕ್ಕೆ ನೀಡಿ ಅದಕ್ಕೆ ಬದಲಾಗಿ 14 ನಿವೇಶನಗಳನ್ನು ತಮ್ಮ ಪತ್ನಿ ಬಿ.ಎಂ. ಪಾರ್ವತಿ ಹೆಸರಿನಲ್ಲಿ ನೋಂದಣಿ ಮಾಡಿಸಿದ್ದಾರೆ. ಸುಮಾರು 3,24,700 ರೂಪಾಯಿ ಮೌಲ್ಯದ ಭೂಮಿಯನ್ನು ಮುಡಾಕ್ಕೆ ಕೊಟ್ಟು ಸುಮಾರು 56 ಕೋಟಿ ರೂಪಾಯಿ ಬೆಲೆ ಬಾಳುವ 14 ನಿವೇಶನಗಳನ್ನು ಪಡೆಯಲಾಗಿದೆ. ಆಗಿನ ಮುಡಾ ಆಯುಕ್ತ ಡಿ.ಬಿ. ನಟೇಶ್ ಬಳಸಿಕೊಂಡು ಈ ಅಕ್ರಮವನ್ನು ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ ಎಂಬ ಆರೋಪದ ತನಿಖೆ ನಡೆಯುತ್ತಿದೆ ಎಂದು ಇಡಿ ಹೇಳಿದೆ. ಹೀಗೆ ಮೂರು ಕಡೆಗಳಲ್ಲಿ ಸಿದ್ದರಾಮಯ್ಯ ಹೆಸರನ್ನು ಪ್ರಸ್ತಾಪಿಸಲಾಗಿದೆ.
ಆದರೆ ಮುಡಾದ ಹಿಂದಿನ ಅಧ್ಯಕ್ಷ ಮರಿಗೌಡ ಹೆಸರನ್ನು ಉಲ್ಲೇಖಿಸಿಲ್ಲ. ಜೊತೆಗೆ ಇಬ್ಬರು ಅಧಿಕಾರಿಗಳ ಹೆಸರುಗಳನ್ನು ಒಂದೊಂದು ಬಾರಿ ಉಲ್ಲೇಖಿಸಲಾಗಿದೆ. ಈ ಎಲ್ಲವನ್ನು ಗಮನಿಸಿದಾಗ ಇಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಯನ್ನು ತೀವ್ರಗೊಳಿಸುವ ಮುನ್ಸೂಚನೆ ನೀಡಿದೆ. ಒಟ್ಟಾರೆ, ಈ ಬೆಳವಣಿಗೆ ಕೆಲ ದಿನಗಳಿಂದ ತೆರೆಮರೆಗೆ ಸರಿದಿದ್ದ ಮುಡಾ ಪ್ರಕರಣದ ಭೂತ ಮತ್ತೆ ಎದ್ದು ಕೂತಿದ್ದು, ಸಿಎಂ ವಿರುದ್ಧ ಕಾನೂನು ಕುಣಿಕೆ ಹಂತಹಂತವಾಗಿ ಬಿಗಿಯಾಗುತ್ತಿರುವ ಸೂಚನೆ ನೀಡಿದೆ.
ಅದರಲ್ಲೂ ಮುಖ್ಯವಾಗಿ ಸಿಎಂ ಪತ್ನಿ ಬಿ ಎಂ ಪಾರ್ವತಿ ಅವರಿಗೆ ಹಂಚಿರುವ 14 ನಿವೇಶನಗಳು ಮಾತ್ರವಲ್ಲದೆ ಮುಡಾದ ಈ ನಿವೇಶನ ಹಗರಣದಲ್ಲಿ ಭಾರೀ ಸಂಖ್ಯೆಯ ನಿವೇಶನಗಳನ್ನು ರಿಯಲ್ ಎಸ್ಟೇಟ್ ಉದ್ಯಮಿಗಳು, ಏಜೆಂಟರ ಮೂಲಕ ಬೇನಾಮಿಗಳ ಹೆಸರಿಗೆ ವರ್ಗಾಯಿಸಲಾಗಿದೆ. ಅದಕ್ಕೆ ಪ್ರತಿಯಾಗಿ ಪ್ರಭಾವಿಗಳಿಗೆ ಕಾರು, ನಗದು ಮುಂತಾದ ರೀತಿಯಲ್ಲಿ ಭಾರೀ ಪ್ರಮಾಣದ ಅಕ್ರಮ ಹಣಕಾಸು ವಹಿವಾಟು ನಡೆದಿದೆ. ಸಹಕಾರ ಸಂಘವೊಂದರ ಮೂಲಕ ಮುಡಾಕ್ಕೆ ಸಂಬಂಧಿಸಿದ ಈ ಅಕ್ರಮಗಳು ಸಕ್ರಮವಾಗಿ, ಕಪ್ಪುಹಣ ಪರಿವರ್ತನೆಯಾಗಿದೆ ಎಂದೂ ಹೇಳಿರುವ ಇಡಿ, ಆ ಅಕ್ರಮ ಪತ್ತೆಗೆ ತನಿಖೆ ಮುಂದುವರಿಸಿರುವುದಾಗಿ ಹೇಳಿದೆ.
ಆ ಹಿನ್ನೆಲೆಯಲ್ಲಿ ಪ್ರಕರಣ ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬಹುದಾದ ತಿರುವುಗಳು ಮತ್ತು ರಾಜ್ಯ ರಾಜಕಾರಣದ ಮೇಲೆ ಬೀರಬಹುದಾದ ಪರಿಣಾಮಗಳು ಭೀಕರವಾಗಿರುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ. ಜೊತೆಗೆ ಈ ಬೆಳವಣಿಗೆ ಸಿದ್ದರಾಮಯ್ಯ ಮಾತ್ರವಲ್ಲದೆ, ಮೈಸೂರು ಮುಡಾದ ವ್ಯವಹಾರದಲ್ಲಿ ಲಾಭ ಮಾಡಿಕೊಂಡಿರುವ ಮೂರೂ ಪಕ್ಷಗಳ ಮುಖಂಡರಲ್ಲೂ ಕಂಪನ ಹುಟ್ಟಿಸಿದೆ ಎನ್ನಲಾಗುತ್ತಿದೆ.