Mysore MUDA Scam | 18 ಅಧಿಕಾರಿಗಳ ವಿರುದ್ಧ ಇಸಿಐಆರ್ ದಾಖಲಿಸಿದ ಇ.ಡಿ
ಮೈಸೂರು ಹೊರವಲಯದ ಹಿನಕಲ್ ಸರ್ವೆ ನಂ. 89ರಲ್ಲಿ 350ಕ್ಕೂ ಹೆಚ್ಚು ಪ್ರಭಾವಿಗಳಿಗೆ 7.18 ಎಕರೆಯಲ್ಲಿರುವ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಹಾಗೂ ಭ್ರಷ್ಟಾಚಾರದ ಆರೋಪದ ಮೇಲೆ ದೂರು ದಾಖಲಿಸಲಾಗಿದೆ;
ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಜಾರಿ ನಿರ್ದೇಶನಾಲಯ ಇಸಿಐಆರ್ (Enforcement case information report) ದಾಖಲಿಸಿದ ಬೆನ್ನಲ್ಲೇ ಪ್ರಾಧಿಕಾರದಲ್ಲಿ 2017ರಲ್ಲಿ ಕಾರ್ಯ ನಿರ್ವಹಿಸಿದ್ದ 18 ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿದೆ.
ಮೈಸೂರು ಹೊರವಲಯದ ಹಿನಕಲ್ ಸರ್ವೆ ನಂ. 89ರಲ್ಲಿ350ಕ್ಕೂ ಹೆಚ್ಚು ಪ್ರಭಾವಿಗಳಿಗೆ 7.18 ಎಕರೆಯಲ್ಲಿರುವ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಹಾಗೂ ಭ್ರಷ್ಟಾಚಾರದ ಆರೋಪದ ಮೇಲೆ ದೂರು ದಾಖಲಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಈ ಮಧ್ಯೆ, ಮುಡಾ ಪ್ರಕರಣಕ್ಕೆ ಸಂಬಂಧಿಸಿ ಎಲ್ಲ18 ಅಧಿಕಾರಿಗಳನ್ನು ವಿಚಾರಣೆಗೆ ಬರುವಂತೆ ಲೋಕಾಯುಕ್ತ ಪೊಲೀಸರು ಈಗಾಗಲೇ ನೋಟಿಸ್ ಜಾರಿ ಮಾಡಿದ್ದಾರೆ. ಯಾವುದಾದರೂ ಒಂದು ತನಿಖಾ ಸಂಸ್ಥೆಯಲ್ಲಿ ಪ್ರಕರಣ ದಾಖಲಿಸಿದ್ದಾಗ ಮಾತ್ರ ಜಾರಿ ನಿರ್ದೇಶನಾಲಯ ತನಿಖೆ ಮಾಡಬಹುದಾಗಿದೆ. ಪ್ರಸ್ತುತ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿರುವ ಆಧಾರದ ಮೇಲೆ ಇ.ಡಿ. ತನಿಖೆ ನಡೆಸಲಿದೆ.
ಏತನ್ಮಧ್ಯೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ 387 ಕೋಟಿ ರೂ. ಹಣವನ್ನು ಕಾನೂನು ಬಾಹಿರವಾಗಿ ಬೇರೆ ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗೆ ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಆರೋಪದಡಿ ಈಗಾಗಲೇ ಸಿದ್ದರಾಮಯ್ಯ ವಿರುದ್ಧ ಜಾರಿ ನಿರ್ದೇಶನಾಲಯ ಇಸಿಐಆರ್ ದಾಖಲು ಮಾಡಿಕೊಂಡಿದೆ.
ಸಿಎಂ ಸಿದ್ದರಾಮಯ್ಯ ಅವರ ಮೇಲೆ ವರುಣಾ ಮತ್ತು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಮುಡಾ ಹಣ ಬಳಕೆ ಮಾಡಿರುವ ಆರೋಪವಿದೆ. ಈ ಬಗ್ಗೆಯೂ ವಿಚಾರಣೆ ನಡೆಯಲಿದೆ.
ಜಾರಿ ನಿರ್ದೇಶಾನಲಯದ ಅಧಿಕಾರಿಗಳು ಕಳೆದ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ. ಪಾರ್ವತಿ, ಬಾಮೈದ ಮಲ್ಲಿಕಾರ್ಜುನ ಸ್ವಾಮಿ, ಭೂ ಮಾಲೀಕ ದೇವರಾಜ್ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (PMLA) ಇಸಿಐಆರ್ ದಾಖಲಿಸಿದ್ದರು.