Mysore MUDA scam: ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಸ್‌ ದಾಖಲಿಸಿದ ಇ ಡಿ

ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿದ ಬೆನ್ನಲ್ಲೇ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರತಿಬಂಧಕ ಕಾಯ್ದೆಯಡಿ ಎಫ್‌ಐಆರ್ ದಾಖಲು ಮಾಡಿಕೊಂಡಿದೆ

Update: 2024-09-30 14:49 GMT

ಮುಡಾ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ.ಪಾರ್ವತಿ, ಸೋದರ ಮಾವ ಮಲ್ಲಿಕಾರ್ಜುನ ಸ್ವಾಮಿ ಮತ್ತು ದೇವರಾಜು ವಿರುದ್ಧ ಭ್ರಷ್ಟಾಚಾರ, ವಂಚನೆ ಮತ್ತು ಫೋರ್ಜರಿ ಆರೋಪದಡಿ ಜಾರಿ ನಿರ್ದೇಶನಾಲಯದ ಸೋಮವಾರ ಸಂಜೆ ಇಸಿಐಆರ್‌ (Enforcement Case Information Report) ದಾಖಲಿಸಿದೆ.

ಈಗಾಗಲೇ ಲೋಕಾಯುಕ್ತ ಪೊಲೀಸರು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಿಸಿದ್ದು, ಜಾರಿ ನಿರ್ದೇಶನಲಾಯ ಪ್ರಕರಣ ದಾಖಲಿಸಿರುವುದರಿಂದ ಮುಡಾ ಪ್ರಕರಣದ ತನಿಖೆ ಮತ್ತಷ್ಟು ಬಿಗಿಯಾಗುವ ಲಕ್ಷಣಗಳು ಕಂಡುಬಂದಿವೆ.

2021 ರಲ್ಲಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 14 ವಸತಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿದ ಬೆನ್ನಲ್ಲೇ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರತಿಬಂಧಕ ಕಾಯ್ದೆಯಡಿ ಎಫ್‌ಐಆರ್ ದಾಖಲು ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು ಸಿಎಂ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಿದ್ದರು.

ಸೋಮವಾರ (ಸೆ.30) ಸಂಜೆ ಎನ್ಫೋರ್ಸ್ಮೆಂಟ್ ಕೇಸ್ ಮಾಹಿತಿ ವರದಿಯನ್ನು (ಇಸಿಐಆರ್) ದಾಖಲಿಸಲಾಗಿದೆ. ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್ಐಆರ್ ಆಧರಿಸಿಯೇ ಜಾರಿ ನಿರ್ದೇಶನಾಲಯ ತನಿಖೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.

ಮುಡಾ ಪ್ರಕರಣದಲ್ಲಿಅಕ್ರಮ ಭೂ ವಿನಿಮಯದಿಂದಾಗಿ ರಾಜ್ಯ ಸರ್ಕಾರಕ್ಕೆ ₹ 56 ಕೋಟಿ ನಷ್ಟವಾಗಿದೆ ಎಂದು ಆರೋಪಿಸಿ ಆರ್‌ಟಿಐ ಕಾರ್ಯಕರ್ತ ಟಿ.ಜೆ.ಅಬ್ರಹಾಂ, ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು ಅನುಕ್ರಮವಾಗಿ ರಾಜ್ಯಪಾಲರು ಮತ್ತು ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದರು. 

Tags:    

Similar News