ಇಡಿ, ಸಿಬಿಐ ದುರುಪಯೋಗ ಆರೋಪ: ಕೇಂದ್ರದ ವಿರುದ್ಧ ದೆಹಲಿಯಲ್ಲಿ ಸಾಹಿತಿಗಳ ಪ್ರತಿಭಟನೆ
ಮೈಸೂರು ಲೋಕಾಯುಕ್ತ ಕಚೇರಿಯಲ್ಲಿ ಬುಧವಾರ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿಚಾರಣೆ ನಡೆದ ಬೆನ್ನಲ್ಲೇ, ನವದೆಹಲಿಯಲ್ಲಿ ಇಡಿ ಮತ್ತು ಸಿಬಿಐ ದುರ್ಬಳಕೆ ವಿಷಯದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಗುರುವಾರ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ.
ದೆಹಲಿಯ ಕರ್ನಾಟಕ ಸಂಘದಲ್ಲಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯಿಂದ ಪ್ರತಿಭಟನಾ ಸಭೆ ನಡೆಯಲಿದ್ದು, ಎಲ್. ಹನುಮಂತಯ್ಯ, ಎಸ್.ಜಿ ಸಿದ್ದರಾಮಯ್ಯ, ಕಾಳೇಗೌಡ ನಾಗವಾರ ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ.
ಮುಡಾ ಹಗರಣ ಸಂಬಂಧ ತಮ್ಮ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಡೆಯನ್ನು ಸಂವಿಧಾನಬಾಹಿರ ಎಂದು ಟೀಕಿಸಿದ್ದ ಸಿಎಂ ಸಿದ್ದರಾಮಯ್ಯ, ರಾಜಭವನಗಳನ್ನು ದುರುಪಯೋಗಪಡಿಸಿಕೊಂಡು ಬಿಜೆಪಿಯೇತರ ಸರ್ಕಾರಗಳನ್ನು ಉರುಳಿಸುವ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಬಿಜೆಪಿ ಕೇಂದ್ರ ಸರ್ಕಾರ ದೇಶದ ಹಲವು ರಾಜ್ಯಗಳಲ್ಲಿ ಇದೇ ರೀತಿ ಮಾಡಿದೆ. ಕರ್ನಾಟಕದ ನಮ್ಮ ಸರ್ಕಾರ ಉರುಳಿಸಲು ಬಿಜೆಪಿ ಮತ್ತು ಜೆಡಿಎಸ್ ಸೇರಿಕೊಂಡಿದ್ದಾರೆ. ಆದರೆ, ಇವರ ಇಂಥ ಷಢ್ಯಂತ್ರಗಳಿಗೆ ಸೊಪ್ಪು ಹಾಕುವುದಿಲ್ಲ. ಕಾನೂನು ಹೋರಾಟ ಮಾಡುತ್ತೇವೆ ಎಂದು ಹೇಳಿದ್ದರು.
ಮುಡಾ ನಿವೇಶನ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪತ್ನಿಯ ಹೆಸರು ಕೇಳಿಬಂದಿದ್ದು ವಿಪಕ್ಷ ಬಿಜೆಪಿಗೆ ಅಸ್ತ್ರವಾಗಿತ್ತು. ರಾಜ್ಯ ಬಿಜೆಪಿ ಅದೇ ವಿಷಯವನ್ನು ಮುಂದಿಟ್ಟುಕೊಂಡು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿತ್ತು. ಅದೇ ಹೊತ್ತಿಗೆ ಮುಡಾ ಪ್ರಕರಣದ ತನಿಖೆಯನ್ನು ಇಡಿ ಕೈಗೆತ್ತಿಕೊಂಡಿತ್ತು. ಜೊತೆಗೆ ದೂರುದಾರರು ಪ್ರಕರಣದ ಸಿಬಿಐ ತನಿಖೆಗೆ ನಿರ್ದೇಶನ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಆ ಹಿನ್ನೆಲೆಯಲ್ಲಿ ಕೇಂದ್ರದ ಬಿಜೆಪಿ ಸರ್ಕಾರ, ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಇಡಿ ಮತ್ತು ಸಿಬಿಐ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಬಿಜೆಪಿಯೇತರ ಸರ್ಕಾರಗಳ ಮುಖ್ಯಮಂತ್ರಿಗಳ ವಿರುದ್ಧ, ಅದರಲ್ಲೂ ದಕ್ಷಿಣ ರಾಜ್ಯಗಳ ನಾಯಕರ ವಿರುದ್ಧ ಬಿಜೆಪಿಯ ಈ ದ್ವೇಷ ರಾಜಕಾರಣವನ್ನು ಖಂಡಿಸಿ ದೆಹಲಿಯ ಕರ್ನಾಟಕ ಭವನದಲ್ಲಿ ಪ್ರತಿಭಟನಾ ಸಭೆ ಹಮ್ಮಿಕೊಂಡಿದ್ದೇವೆ ಎಂದು ಪ್ರತಿಭಟನೆಯ ನಾಯಕತ್ವ ವಹಿಸಿರುವ ಸಾಹಿತಿಗಳು ಮಾಹಿತಿ ನೀಡಿದ್ದಾರೆ.