ಜಾತಿಗಳ ಕ್ರಿಶ್ಚಿಯನ್ ಟ್ಯಾಗ್ ಕೈಬಿಡಿ: ಛಲವಾದಿ ನಾರಾಯಣಸ್ವಾಮಿ ಆಗ್ರಹ
ಯಾವ ಜಾತಿಯಿಂದ ಬಂದವರು, ಯಾವ ಧರ್ಮದಿಂದ ಬಂದವರೆಂದು ನೀವು ಸಮೀಕ್ಷೆಯಲ್ಲಿ ತಿಳಿಸಬೇಕಿಲ್ಲ. ಇದು ಸರಕಾರಿ ದಾಖಲೆಗೆ ಬೇಕಾಗಿಲ್ಲ. ಇದೆಲ್ಲ ಬಿಟ್ಟು ಕುರುಬ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್- ಹೀಗೆ ಮಾಡುವುದು ಕಾನೂನುಬಾಹಿರ ಎಂದು ಎಚ್ಚರಿಸಿದರು.
ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ
ರಾಜ್ಯ ಸರ್ಕಾರವು ನಡೆಸುತ್ತಿರುವ ಜಾತಿ ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿಗಳ ಹೆಸರಿನ ಮುಂದೆ 'ಕ್ರಿಶ್ಚಿಯನ್' ಎಂಬ ಪದವನ್ನು ಸೇರಿಸುತ್ತಿರುವುದನ್ನು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತೀವ್ರವಾಗಿ ಖಂಡಿಸಿದ್ದಾರೆ. "ಆದಿ ಆಂಧ್ರ ಕ್ರಿಶ್ಚಿಯನ್, ಆದಿ ಕರ್ನಾಟಕ ಕ್ರಿಶ್ಚಿಯನ್, ಆದಿದ್ರಾವಿಡ ಕ್ರಿಶ್ಚಿಯನ್ ಎಂದು ಹತ್ತಾರು ಜಾತಿಗಳನ್ನು ಸೇರಿಸಲು ನಿಮಗೆ ಯಾರು ಪ್ರೇರಣೆ ನೀಡಿದ್ದಾರೆ?" ಎಂದು ಅವರು ಸರ್ಕಾರವನ್ನು ಖಾರವಾಗಿ ಪ್ರಶ್ನಿಸಿದ್ದಾರೆ.
ಸೋಮವಾರ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಇದು ಜಾತಿ ಗಣತಿಯಲ್ಲ, ಬದಲಿಗೆ ಸಾಮಾಜಿಕ-ಆರ್ಥಿಕ ಸಮೀಕ್ಷೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಸಮೀಕ್ಷೆಯಲ್ಲಿ ಬಂಜಾರ ಕ್ರಿಶ್ಚಿಯನ್, ಬುಡಗ ಜಂಗಮ ಕ್ರಿಶ್ಚಿಯನ್, ಹೊಲೆಯ ಕ್ರಿಶ್ಚಿಯನ್ ಪರಿಶಿಷ್ಟ ಜಾತಿಗಳ ಹೆಸರಿನೊಂದಿಗೆ 'ಕ್ರಿಶ್ಚಿಯನ್' ಪದವನ್ನು ಸೇರಿಸಲಾಗುತ್ತಿದೆ. ಇದರ ಹಿಂದೆ ಈ ಸಮುದಾಯಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುವ ಉದ್ದೇಶವಿದೆಯೇ?" ಎಂದು ಅವರು ಅನುಮಾನ ವ್ಯಕ್ತಪಡಿಸಿದರು. ಕಾಂಗ್ರೆಸ್ ಸರ್ಕಾರದ ಈ ಸಮೀಕ್ಷೆಯು "ಬೂಟಾಟಿಕೆ ಮತ್ತು ಪುಂಡಾಟಿಕೆ"ಯಿಂದ ಕೂಡಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.
"ಒಂದು ನಿರ್ದಿಷ್ಟ ಧರ್ಮವನ್ನು ಬೆಳೆಸುವ ಉದ್ದೇಶ ಸರ್ಕಾರಕ್ಕಿದೆಯೇ? ಈ ಸಮೀಕ್ಷೆಯಲ್ಲಿ ಜಾತಿಗಳ ಹೆಸರಿನೊಂದಿಗೆ 'ಕ್ರಿಶ್ಚಿಯನ್' ಎಂಬ ಪದವನ್ನು ಸೇರಿಸಬಾರದು" ಎಂದು ಅವರು ಆಗ್ರಹಿಸಿದರು. "ಯಾವ ಜಾತಿ ಅಥವಾ ಧರ್ಮದಿಂದ ಬಂದವರು ಎಂದು ಸಮೀಕ್ಷೆಯಲ್ಲಿ ತಿಳಿಸುವ ಅಗತ್ಯವಿಲ್ಲ, ಇದು ಕಾನೂನುಬಾಹಿರ. ಕುರುಬ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್ ಎಂದು ವಿಭಜಿಸುವುದು ಸರಿಯಲ್ಲ" ಎಂದು ಅವರು ಎಚ್ಚರಿಸಿದರು.
ಟ್ರಂಪ್ ಮಾರ್ಗದರ್ಶನ ನೀಡಿದ್ದಾರೆಯೇ?
"ಈ ರೀತಿ ಸಮೀಕ್ಷೆ ನಡೆಸಲು ನಿಮಗೆ ಅಮೆರಿಕದ ಅಧ್ಯಕ್ಷ ಟ್ರಂಪ್ ಮಾರ್ಗದರ್ಶನ ನೀಡಿದ್ದಾರೆಯೇ? ಅಥವಾ ಸೋನಿಯಾ ಗಾಂಧಿ ಹೇಳಿದ್ದಾರೆಯೇ? ಜನಸಾಮಾನ್ಯರು ಬೀದಿಗಿಳಿದು 'ಕ್ರಿಶ್ಚಿಯನ್' ಎಂದು ಸೇರಿಸಲು ಒತ್ತಾಯ ಮಾಡಿದ್ದಾರೆಯೇ?" ಎಂದು ಅವರು ಸರ್ಕಾರದ ಉದ್ದೇಶವನ್ನು ಪ್ರಶ್ನಿಸಿದರು.
ಹಿಂದಿನ ವರದಿ ಎಲ್ಲಿ ಹೋಯಿತು?
"ರಾಜ್ಯದಲ್ಲಿ ಗೊಂದಲಗಳಿದ್ದರೂ, ಸರ್ಕಾರವು ಹಿಂದುಳಿದ ವರ್ಗಗಳ ಆಯೋಗದ ಮೂಲಕ ಜಾತಿ ಸಮೀಕ್ಷೆ ನಡೆಸಲು ಮುಂದಾಗಿದೆ. ಈ ಹಿಂದೆ ಕಾಂತರಾಜು ಆಯೋಗವು ಸಮೀಕ್ಷೆ ನಡೆಸಿ ವರದಿ ನೀಡಿತ್ತು. ಆದರೆ, ಸರ್ಕಾರ ಅದನ್ನು ಒಪ್ಪಿಕೊಳ್ಳಲಿಲ್ಲ. ಆ ವರದಿ ಎಲ್ಲಿ ಹೋಯಿತು ಎಂದು ಯಾರಿಗೂ ತಿಳಿದಿಲ್ಲ. ಅದು ಕಳುವಾಗಿದೆ ಎನ್ನುತ್ತಾರೆ, ಅದೇನು ಚಿನ್ನವೇ? ಕಳುವಾದ ವರದಿಯನ್ನು ಪತ್ತೆಹಚ್ಚಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಜನರ ಹಣ ಪೋಲು
"ಮೊದಲ ಆಯೋಗಕ್ಕೆ ಸುಮಾರು 180 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು. ಜಯಪ್ರಕಾಶ್ ಹೆಗ್ಡೆ ಆಯೋಗದ ವರದಿಗೆ ಎಷ್ಟು ಖರ್ಚಾಗಿದೆ ಎಂದು ಸರ್ಕಾರ ಹೇಳುತ್ತಿಲ್ಲ. ಈಗ ಮತ್ತೆ 425 ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಇದೇನು ನಿಮ್ಮ ಮನೆಯಿಂದ ತಂದು ಕೊಡುವ ಹಣವೇ? ಜನರ ತೆರಿಗೆ ಹಣವನ್ನು ಇಷ್ಟಬಂದಂತೆ ಪೋಲು ಮಾಡಲು ನಿಮಗೆ ಯಾರು ಅಧಿಕಾರ ಕೊಟ್ಟರು?" ಎಂದು ಅವರು ತೀವ್ರವಾಗಿ ಪ್ರಶ್ನಿಸಿದರು.
15 ದಿನಗಳಲ್ಲಿ ಸಮೀಕ್ಷೆ ಸಾಧ್ಯವೇ?
"ಕೇವಲ 15 ದಿನಗಳಲ್ಲಿ ಸುಮಾರು 7 ಕೋಟಿ ಜನರ ಸಮೀಕ್ಷೆ ಮುಗಿಸುವುದಾಗಿ ಹೇಳುತ್ತಿದ್ದಾರೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆಯೇ 1 ಕೋಟಿ 7 ಲಕ್ಷ ಇದೆ. ಈ ಸಮುದಾಯದ ಸಮೀಕ್ಷೆಯನ್ನೇ ಎರಡು-ಮೂರು ತಿಂಗಳು ನಡೆಸಿ, ಕೇವಲ 65% ಮಾತ್ರ ಪೂರ್ಣಗೊಳಿಸಿದ್ದೀರಿ. ಉಳಿದಿದ್ದೆಲ್ಲವೂ ಬೋಗಸ್ ಅಂಕಿ-ಅಂಶ. ಹೀಗಿರುವಾಗ ಪೂರ್ಣ ರಾಜ್ಯದ ಸಮೀಕ್ಷೆ 15 ದಿನಗಳಲ್ಲಿ ಹೇಗೆ ಸಾಧ್ಯ?" ಎಂದು ಅವರು ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿದರು.
ಈ ಸುದ್ದಿಗೋಷ್ಠಿಯಲ್ಲಿ ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್, ರಾಜ್ಯ ವಕ್ತಾರ ಹೆಚ್. ವೆಂಕಟೇಶ್ ದೊಡ್ಡೇರಿ, ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಕುಮಾರ್ ಹಾಗೂ ಇತರ ಮುಖಂಡರು ಉಪಸ್ಥಿತರಿದ್ದರು.