ಖಾಸಗಿ ವಾಹನ ಚಾಲಕರ ಕನಸು ನನಸು; ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ, ಅಸಂಘಟಿತರಿಗೂ ಸೌಲಭ್ಯ ವಿಸ್ತರಣೆ

ರಾಜ್ಯ ಖಾಸಗಿ ವಾಹನ ಚಾಲಕರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಸಾರಿಗೆ ಇಲಾಖೆ ಅಧೀನದ ಈ ನಿಗಮದದಿಂದ ಲಕ್ಷಾಂತರ ಖಾಸಗಿ ವಾಹನ ಚಾಲಕರು ಹಾಗೂ ವಾಹನ ಸಂಬಂಧಿತ ಕೆಲಸಗಳಲ್ಲಿ ತೊಡಗಿರುವವರಿಗೆ ಆರೋಗ್ಯ ಕಾರ್ಡ್ ಸೇರಿ ಹಲವು ಸೌಲಭ್ಯಗಳು ದೊರೆಯಲಿವೆ.

Update: 2024-12-21 13:15 GMT
ಖಾಸಗಿ ಬಸ್‌ ನಿಲ್ದಾಣ

ಪ್ರತ್ಯೇಕ ನಿಗಮ-ಮಂಡಳಿಗಾಗಿ ಖಾಸಗಿ ವಾಹನ ಚಾಲಕರ ಸಂಘಟನೆಗಳ ಒಕ್ಕೂಟ ನಡೆಸಿದ 22 ವರ್ಷಗಳ ಸುದೀರ್ಘ ಹೋರಾಟ ಇದೀಗ ಫಲ ನೀಡಿದೆ.

 ರಾಜ್ಯ ಖಾಸಗಿ ವಾಹನ ಚಾಲಕರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಸಾರಿಗೆ ಇಲಾಖೆ ಅಧೀನದ ಈ ನಿಗಮದದಿಂದ ಲಕ್ಷಾಂತರ ಖಾಸಗಿ ವಾಹನ ಚಾಲಕರು ಹಾಗೂ ವಾಹನ ಸಂಬಂಧಿತ ಕೆಲಸಗಳಲ್ಲಿ ತೊಡಗಿರುವವರಿಗೆ ಆರೋಗ್ಯ ಕಾರ್ಡ್ ಸೇರಿ ಹಲವು ಸೌಲಭ್ಯಗಳು ದೊರೆಯಲಿವೆ.

ಇದರಿಂದಾಗಿ ದೇಶದಲ್ಲಿಯೇ ಮೊದಲ ಬಾರಿಗೆ ಖಾಸಗಿ ವಾಹನ ಚಾಲಕರಿಗಾಗಿ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಿದ ಶ್ರೇಯ ಕರ್ನಾಟಕ್ಕೆ ಸಲ್ಲಲಿದೆ.

ಹೋರಾಟದ ಹಿನ್ನೆಲೆ ಏನು?

ಪ್ರತ್ಯೇಕ ನಿಗಮ ಮಂಡಳಿಗೆ ಒತ್ತಾಯಿಸಿ ಖಾಸಗಿ ವಾಹನ ಚಾಲಕರು 22 ವರ್ಷಗಳಿಂದ ಹೋರಾಟ ನಡೆಸುತ್ತಿದ್ದರು. ಖಾಸಗಿ ವಾಹನ ಚಾಲಕರ ಒಕ್ಕೂಟದಲ್ಲಿರುವ ಸುಮಾರು 30 ಸಂಘಟನೆಗಳು ಹೋರಾಟದಲ್ಲಿ ತೊಡಗಿದ್ದವು. 2021ರಿಂದ ಈಚೆಗೆ ಚಾಲಕರ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿತ್ತು. 2023ರಲ್ಲಿತೆರಿಗೆ ಏರಿಕೆ, ರಾಪಿಡೋ ಬೈಕ್ ವಿರೋಧಿಸಿ ಬೆಂಗಳೂರು ಬಂದ್ ಮಾಡಿದ್ದರು.

ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಶಕ್ತಿ ಯೋಜನೆ ಜಾರಿ ಬಳಿಕ ಖಾಸಗಿ ವಾಹನ ಚಾಲಕರ ಪರಿಸ್ಥಿತಿ ಶೋಚನೀಯ ಸ್ಥಿತಿಗೆ ತಲುಪಿತ್ತು. ಇದನ್ನು ಮನಗಂಡು ಖಾಸಗಿ ವಾಹನ ಚಾಲಕರ ಕುಟುಂಬಗಳಿಗೆ ರಕ್ಷಣೆ ನೀಡುವ ಸಲುವಾಗಿ ಕರ್ನಾಟಕ ರಾಜ್ಯ ಖಾಸಗಿ ಚಾಲಕರ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದೆ.

ನಿಗಮಕ್ಕೆ ಅನುದಾನ ಹಂಚಿಕೆ ಹೇಗೆ?

ರಾಜ್ಯ ಖಾಸಗಿ ಚಾಲಕರ ಅಭಿವೃದ್ಧಿ ನಿಗಮಕ್ಕೆ ಸರ್ಕಾರದಿಂದ ಯಾವುದೇ ಪ್ರತ್ಯೇಕ ಅನುದಾನ ಮೀಸಲಿಟ್ಟಿಲ್ಲ. ಬದಲಿಗೆ ಖಾಸಗಿ ವಾಹನ ಚಾಲಕರಿಂದಲೇ ಹಣ ಕ್ರೂಢೀಕರಣ ಮಾಡಿ ಹಂಚಿಕೆ ಮಾಡಲಾಗುತ್ತದೆ. ಪ್ರತಿ ವಾಹನದ ಮೇಲೆ ಶೇ 3ರಷ್ಟು ಸೆಸ್ ಸಂಗ್ರಹಿಸಲಾಗುತ್ತದೆ. ಹೊಸ ದ್ವಿಚಕ್ರ ವಾಹನಕ್ಕೆ 500ರೂ., ನಾಲ್ವು ಚಕ್ರದ ವಾಹನಗಳಿಗೆ 1000 ರೂ. ನೋಂದಣಿ ಶುಲ್ಕ ಸಂಗ್ರಹಿಸಲಾಗುತ್ತದೆ. ಇದರ ಜೊತೆಗೆ ವಾಹನದ ಮೇಲೆ 3000 ಸಾವಿರ ರೂ. ತೆರಿಗೆ ಹಣವೂ ನೇರವಾಗಿ ಮಂಡಳಿಗೆ ಸೇರಲಿದೆ. ಇಲ್ಲಿ ಸಂಗ್ರಹವಾಗುವ ಹಣದಲ್ಲಿ ಚಾಲಕರ ಕುಟುಂಬಗಳಿಗೆ ಆರೋಗ್ಯ, ಶಿಕ್ಷಣ ಹಾಗೂ ಮರಣ ಪರಿಹಾರವಾಗಿ ನೀಡಲಾಗುತ್ತದೆ.

ಸದಸ್ಯತ್ವಕ್ಕಾಗಿ ಏನು ಮಾಡಬೇಕು?

ಖಾಸಗಿ ವಾಹನ ಚಾಲಕರು ನಿಗಮದ ಸೌಲಭ್ಯ ಪಡೆಯಲು ಸೇವಾಸಿಂಧು ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಪ್ರಸ್ತುತ ಆನ್ಲೈನ್ ಮೂಲಕ ನೋಂದಣಿ ಕಾರ್ಯ ನಡೆಯುತ್ತಿದೆ. ಆದರೆ, ಬಹುತೇಕ ವಾಹನ ಚಾಲಕರು ಸುಶಿಕ್ಷಿತರಲ್ಲದ ಕಾರಣ ಆಫ್‌ಲೈನ್‌ನಲ್ಲಿ ನೋಂದಣಿಗೆ ಅವಕಾಶ ನೀಡುವಂತೆ ಚಾಲಕರ ಸಂಘಟನೆಗಳ ಒಕ್ಕೂಟ ಸರ್ಕಾರವನ್ನು ಕೋರಿದೆ. ಜೊತೆಗೆ ಆಂಡ್ರಾಯ್ಡ್ ಆಪ್ ಸಿದ್ಧಪಡಿಸುವಂತೆ ಮನವಿ ಮಾಡಿದೆ. ಈಗಾಗಲೇ ನೋಂದಣಿ ಕಾರ್ಯ ಆರಂಭವಾಗಿದೆ ಎಂದು ಖಾಸಗಿ ವಾಹನ ಚಾಲಕರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

ಡಿ. 26ಕ್ಕೆ ಪಿಂಚಣಿ ಸೌಲಭ್ಯದ ಕುರಿತು ಚರ್ಚೆ

ನಿಗಮದಲ್ಲಿ ಸದಸ್ಯರಾಗಿರುವವರಿಗೆ ಪಿಂಚಣಿ ಸೌಲಭ್ಯವೂ ನೀಡಬೇಕಿದೆ. ಆದರೆ, ಪಿಂಚಣಿ ಯೋಜನೆ ಸಂಬಂಧ ಯಾವುದೇ ನಿಯಮಾವಳಿ ರೂಪಿಸಿಲ್ಲ. ಡಿ.26 ರಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಅಂದಿನ ಸಭೆಯಲ್ಲಿ ಪಿಂಚಣಿ ಯೋಜನೆ ಅನುಷ್ಠಾನ ಕುರಿತಂತೆಯೂ ಚರ್ಚಿಸಲು ಒಕ್ಕೂಟ ನಿರ್ಧರಿಸಿದೆ.

ಯಾರೆಲ್ಲಾ ಸೌಲಭ್ಯಕ್ಕೆ ಅರ್ಹರು?

ರಾಜ್ಯದಲ್ಲಿ ಖಾಸಗಿ ವಾಹನ ಚಾಲಕರ ಸಂಘಟನೆಗಳ ಒಕ್ಕೂಟದಲ್ಲಿ 30 ಜಿಲ್ಲೆಗಳ ಸಂಘಟನೆಗಳಿವೆ. ಈ ಸಂಘಗಳಲ್ಲಿ ಒಟ್ಟು 1.50ರಿಂದ 2 ಲಕ್ಷ ಸದಸ್ಯರಿದ್ದಾರೆ. ಅಸಂಘಟಿತ ವಲಯದಲ್ಲಿ ಬರುವ ಪೇಂಟರ್, ಬಸ್ ಕವಚ ನಿರ್ಮಾಣದಲ್ಲಿ ತೊಡಗಿಸಿಕೊಂಡವರು, ಪಂಕ್ಚರ್ ಹಾಕುವವರು, ಆಟೋ ಚಾಲಕರು, ಕ್ಯಾಬ್ ಚಾಲಕರು, ಖಾಸಗಿ ಬಸ್ ಚಾಲಕರು, ಸ್ಕೂಲ್ ಬಸ್ ಚಾಲಕರು, ಲಾರಿ ಚಾಲಕರು, ಖಾಸಗಿ ಬಸ್ ನಿರ್ವಾಹಕರು, ಕ್ಲೀನರ್, ಮೆಕ್ಯಾನಿಕ್, ವೆಲ್ಡರ್ಗಳು ಕೂಡ ನಿಗಮದ ಸೌಲಭ್ಯಕ್ಕೆ ಅರ್ಹರಾಗಿದ್ದಾರೆ.

ಚಾಲಕರಿಗೆ ಸಿಗುವ ಸೌಲಭ್ಯ ಏನು?

ನಿಗಮದಲ್ಲಿ ನೋಂದಾಯಿತ ಸದಸ್ಯರಿಗೆ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು 5 ಲಕ್ಷ ರೂ.ವರೆಗೆ ನಗದುರಹಿತ ಸೇವೆ ದೊರೆಯಲಿದೆ. ಆರೋಗ್ಯ ಯೋಜನೆಯಡಿ 50 ರಿಂದ 1 ಲಕ್ಷದವರೆಗೆ ವೈದ್ಯಕೀಯ ಮರುಪಾವತಿಯ ಸೌಲಭ್ಯ ದೊರೆಯಲಿದೆ. ನೋಂದಾಯಿತ ಚಾಲಕರಿಗೆ ಅಪಘಾತದಲ್ಲಿ ಮೃತಪಟ್ಟರೆ 5 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ಚಾಲಕರ ಸಹಜ ಸಾವಾದರೂ 5 ಲಕ್ಷ ರೂ. ಪರಿಹಾರವನ್ನು ಕುಟುಂಬಸ್ಥರಿಗೆ ನೀಡಲಾಗುವುದು.

ಇನ್ನು ಮೃತ ಚಾಲಕರ ಮಕ್ಕಳಿಗೆ 1 ರಿಂದ 12 ನೇ ತರಗತಿವರೆಗೆ 10 ಸಾವಿರ, ಸ್ನಾತಕೋತ್ತರ ಪದವಿವರೆಗೆ 25 ಸಾವಿರದವರೆಗೆ ಶೈಕ್ಷಣಿಕ ನೆರವನ್ನು ಪ್ರತಿ ವರ್ಷ ನೀಡಲಾಗುವುದು.

ಮಹಿಳಾ ಚಾಲಕರಿಗೆ ಹೆರಿಗೆ ಭತ್ಯೆಯಾಗಿ ತಲಾ 10 ಸಾವಿರ ರೂ. ನೀಡಲಾಗುವುದು. ಚಾಲಕರು ಮೃತಪಟ್ಟರೆ ಅಂತ್ಯಕ್ರಿಯೆ ವೆಚ್ಚವಾಗಿ ತಕ್ಷಣವೇ 25ಸಾವಿರ ನೀಡಲಾಗುವುದು ಎಂದು ನಟರಾಜ್ ಶರ್ಮಾ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

Tags:    

Similar News