ಸಿಎಂ ಕಚೇರಿಯಿಂದಲೇ ಕೋವಿಡ್‌ ವರದಿ ಸೋರಿಕೆ: ಡಾ.ಸುಧಾಕರ್‌ ಆರೋಪ

ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಸ್ತಾನು ಇರಬೇಕಾಗಿದ್ದ 250 ಔಷಧಿಗಳ ಕೊರತೆ ಉಂಟಾಗಿದೆ. ಹಾಗಾದರೆ ಕಾಂಗ್ರೆಸ್ ಅವಧಿಯಲ್ಲಿ ಕೋವಿಡ್ ಬಂದಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎಂದು ಪ್ರಶ್ನಿಸಿದರು.

Update: 2024-11-20 08:16 GMT
ಡಾ.ಸುಧಾಕರ್‌

ನ್ಯಾಯಮೂರ್ತಿ ಜಾನ್ ಮೈಕಲ್ ಡಿ’ಕುನ್ಹಾ ಆಯೋಗದ ಕೋವಿಡ್ ತನಿಖಾ ವರದಿಯ ಒಂದೊಂದೇ ಅಂಶಗಳನ್ನು ಮುಖ್ಯಮಂತ್ರಿ ಕಚೇರಿಯಿಂದಲೇ ಕಾನೂನು ಬಾಹಿರವಾಗಿ ಮಾಧ್ಯಮಗಳಿಗೆ ಸೋರಿಕೆ ಮಾಡಲಾಗುತ್ತಿದೆ ಎಂದು ಸಂಸದ ಡಾ.ಕೆ.ಸುಧಾಕರ್ ಆರೋಪಿಸಿದರು. 

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾನೂನು ಪ್ರಕಾರ ಈ ವರದಿಯನ್ನು ಸಚಿವ ಸಂಪುಟದ ಮುಂದಿಟ್ಟು ನಂತರ ಸದನದಲ್ಲಿ ಮಂಡಿಸಬೇಕಾಗಿತ್ತು. ಮಾಧ್ಯಮಗಳಿಗೆ ಮಾಹಿತಿ ಸೋರಿಕೆ ಹಿಂದೆ ಯಾರು ಇದ್ದಾರೆ ಎನ್ನುವುದು ಗೊತ್ತು ಎಂದು ಹೇಳಿದರು.

ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಸ್ತಾನು ಇರಬೇಕಾಗಿದ್ದ 250 ಔಷಧಿಗಳ ಕೊರತೆ ಉಂಟಾಗಿದೆ. ಹಾಗಾದರೆ ಕಾಂಗ್ರೆಸ್ ಅವಧಿಯಲ್ಲಿ ಕೋವಿಡ್ ಬಂದಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎಂದು ಪ್ರಶ್ನಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಕೋವಿಡ್‌ ಹಗರಣದ ಆರೋಪಕ್ಕೆ ಸಂಬಂಧಿಸಿದಂತೆ ಜಸ್ಟಿನ್‌ ಜಾನ್‌ ಮೈಕಲ್‌ ಡಿ. ಕುನ್ಹಾ ನೇತೃತ್ವದ ಆಯೋಗವನ್ನು ರಚಿಸಲಾಗಿತ್ತು. ಆಯೋಗ ಸದ್ಯ ತನ್ನ ಮಧ್ಯಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ಅನ್ನು ನಿಭಾಯಿಸುವಲ್ಲಿ 7,000 ಕೋಟಿ ರೂಪಾಯಿಗೂ ಹೆಚ್ಚು ಅಕ್ರಮ ನಡೆದಿದೆ ಎಂದು ಆರೋಪಿಸಿರುವ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ’ಕುನ್ಹಾ ಆಯೋಗವು ತನ್ನ ಮಧ್ಯಂತರ ವರದಿಯನ್ನು ಸಲ್ಲಿಸಿದೆ. 

ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್‌ ವಿರುದ್ಧ ಅಕ್ರಮ ನಡೆಸಿರುವ ಆರೋಪ ಮಾಡಲಾಗಿದೆ. ವೆಂಟಿಲೇಟರ್‌, ಆಕ್ಸಿಜನ್‌ ಉಪಕರಣಗಳ ಖರೀದಿ, ನಿರ್ವಹಣೆ ಲೋಪ, ಕೋವಿಡ್‌-19 ನಿರ್ವಹಣಾ ಉಪಕರಣಗಳು, ರ್ಯಾಪಿಡ್‌ ಆಂಟಿಜೆನ್‌ ಟೆಸ್ಟ್‌ ಕಿಟ್‌ಗಳ ಖದೀದಿ ಮತ್ತು ಸಂಗ್ರಹಣೆಯಲ್ಲಿ ಅಕ್ರಮ ನಡೆದ ಆರೋಪಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಲಾಗಿದೆ.

ಈ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿದೆ. 

Tags:    

Similar News