ಕುಲಸಚಿವ, ಇನ್‍ಸ್ಪೆಕ್ಟರ್ ವಜಾ ಮಾಡಿ: ಡಾ.ಅಶ್ವತ್ಥನಾರಾಯಣ್ ಆಗ್ರಹ

ಗಣೇಶೋತ್ಸವದಲ್ಲಿ ವಿದ್ಯಾರ್ಥಿಗಳು ಭಾಗವಹಿಸದಂತೆ ಸುತ್ತೋಲೆ ಹೊರಡಿಸಿ ವ್ಯಕ್ತಿ, ಸಮಾಜದ ಹಕ್ಕಿಗೆ ಧಕ್ಕೆ ತಂದ ತುಮಕೂರು ವಿಶ್ವವಿದ್ಯಾಲಯದ ಕುಲಸಚಿವ ಮತ್ತು ಈ ಕುರಿತು ಕುಲಸಚಿವರಿಗೆ ಪತ್ರ ಬರೆದ ಇನ್‍ಸ್ಪೆಕ್ಟರ್ ವಜಾ ಮಾಡಿ ಎಂದು ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ್ ಅವರು ಒತ್ತಾಯಿಸಿದರು.

Update: 2024-09-22 12:21 GMT
ಅಶ್ವಥ್‌ ನಾರಾಯಣ
Click the Play button to listen to article

ಗಣೇಶೋತ್ಸವದಲ್ಲಿ ವಿದ್ಯಾರ್ಥಿಗಳು ಭಾಗವಹಿಸದಂತೆ ಸುತ್ತೋಲೆ ಹೊರಡಿಸಿ ವ್ಯಕ್ತಿ, ಸಮಾಜದ ಹಕ್ಕಿಗೆ ಧಕ್ಕೆ ತಂದ ತುಮಕೂರು ವಿಶ್ವವಿದ್ಯಾಲಯದ ಕುಲಸಚಿವ ಮತ್ತು ಈ ಕುರಿತು ಕುಲಸಚಿವರಿಗೆ ಪತ್ರ ಬರೆದ ಇನ್‍ಸ್ಪೆಕ್ಟರ್ ವಜಾ ಮಾಡಿ ಎಂದು ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ್ ಒತ್ತಾಯಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಭಾಮುವಾರ ಮಾಧ್ಯಮ ಪ್ರತಿನಿಧಿಗಳ ಜೊತೆ  ಮಾತನಾಡಿದ ಅವರು, ಇವರಿಬ್ಬರನ್ನೂ ಸೇವೆಯಿಂದ ವಜಾ ಮಾಡಬೇಕು. ಈ ವಿಚಾರದಲ್ಲಿ ನಿರ್ಲಕ್ಷ್ಯ ಮಾಡುವಂತಿಲ್ಲ ಎಂದು ಎಚ್ಚರಿಸಿದರು. ಯುನಿವರ್ಸಿಟಿ ಇವರ ಕೈಗೊಂಬೆಯಾಗಿದೆ ಎಂದು ಅವರು ಆಕ್ಷೇಪಿಸಿದರು.

ಕಾನೂನಿನ ಮನವರಿಕೆ, ತಿಳುವಳಿಕೆ ಮಾಡಲಾಗದ ಇವರು ಇಂಥ ಜವಾಬ್ದಾರಿಯುತ ಸ್ಥಾನದಲ್ಲಿ ಮುಂದುವರೆಯಲು ಯೋಗ್ಯರಲ್ಲ. ಇಡೀ ಸಮಾಜದ ಭಾವನೆಗೆ ಇವರು ಧಕ್ಕೆ ತಂದಿದ್ದಾರೆ. ಸರಕಾರಕ್ಕೆ ನೈತಿಕತೆ ಇದ್ದಲ್ಲಿ ತಕ್ಷಣ ಈ ವ್ಯಕ್ತಿಗಳನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು. ಹಿಂದೂ ಸಮಾಜ, ಭಾರತದ ಜನರ ಭಾವನೆಗೆ, ಇಡೀ ಭಾರತಕ್ಕೆ ಹಾಗೂ ಇಡೀ ಕರ್ನಾಟಕದ ಭಾವನೆಗೆ ಧಕ್ಕೆ ಉಂಟಾಗಿದೆ. ಇಂಥ ಕಾಂಗ್ರೆಸ್ ಸರಕಾರದ ಕ್ರಮವನ್ನು ಸಂಪೂರ್ಣವಾಗಿ ಖಂಡಿಸುತ್ತೇವೆ ಎಂದು ತಿಳಿಸಿದರು.

ಸಾರ್ವಜನಿಕವಾಗಿ ವಿನಾಯಕ ಚತುರ್ಥಿಯನ್ನು ಆಚರಿಸಲಾಗುತ್ತಿದೆ. ವಿನಾಯಕನ ಚತುರ್ಥಿ ಮೂಲಕ ಸಮಾಜವನ್ನು ಸಂಘಟನೆ ಮಾಡಿದ್ದು, ಸ್ವಾತಂತ್ರ್ಯ ಚಳವಳಿಗೂ ಅದು ಸ್ಫೂರ್ತಿ ಕೊಟ್ಟಿದೆ. ಸ್ವಾತಂತ್ರ್ಯ ಪೂರ್ವ ಕಾಲದಿಂದ ಇದು ಮುಂದುವರೆಯುತ್ತಿದೆ ಎಂದು ವಿವರಿಸಿದರು.

ಇಂಥ ಸಂಸ್ಕೃತಿ, ಹಿನ್ನೆಲೆ, ಇತಿಹಾಸ ಉಳ್ಳ ವಿನಾಯಕ ಚತುರ್ಥಿಯ ಆಚರಣೆಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ. ಗೃಹ ಇಲಾಖೆಯು ವಿನಾಯಕ ಚತುರ್ಥಿ ಕಾರ್ಯಕ್ರಮವೇ ಇಲ್ಲದಂತೆ ನೋಡಿಕೊಳ್ಳುತ್ತಿದೆ. ಪ್ರತಿಭಟನೆಯಲ್ಲಿ ಗಣೇಶನ ಮೂರ್ತಿ ಇಟ್ಟುಕೊಂಡರೆ ಅದನ್ನು ಪೊಲೀಸ್ ಜೀಪಿನಲ್ಲಿ ಇಟ್ಟುಕೊಳ್ಳುತ್ತಾರೆ ಎಂದು ಆಕ್ಷೇಪಿಸಿದರು.

ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಕಂಟಕ ಆಗಬಹುದು; ಸಮಸ್ಯೆ ನಿರ್ಮಾಣ ಆಗಬಹುದು. ಸಮಾಜವಿರೋಧಿಗಳು, ಪ್ರಚೋದಕರ ಜೊತೆ ಕೈಜೋಡಿಸಿ ಸಮಸ್ಯೆ ನಿರ್ಮಾಣ ಆಗಬಹುದು ಎಂದು ಎಂದು ಪೊಲೀಸ್ ಇನ್‍ಸ್ಪೆಕ್ಟರ್ ತುಮಕೂರು ವಿವಿ ಮೌಲ್ಯಮಾಪನ ಕುಲಸಚಿವರಿಗೆ ಬರೆದ ಪತ್ರಕ್ಕೆ ಸ್ವಾಯತ್ತತೆ ಇರುವ ವಿಶ್ವವಿದ್ಯಾಲಯದ ಕುಲಸಚಿವರು ಸುತ್ತೋಲೆ ಹೇಗೆ ಹೊರಡಿಸಿದರು. ಇನ್‍ಸ್ಪೆಕ್ಟರ್ ಹೇಳಿದರೆ ಬರೆದು ಬಿಡ್ತಾರಾ? ಇನ್‍ಸ್ಪೆಕ್ಟರ್ ಎಂದರೆ ಜಿಲ್ಲಾಡಳಿತವೇ? ಅವರ ವ್ಯಾಪ್ತಿ ಏನು? ಎಂದು ಪ್ರಶ್ನಿಸಿದರಲ್ಲದೆ, ಇಂಥ ಕುಲಸಚಿವರು, ಉಪ ಕುಲಪತಿಗಳನ್ನು ಎಲ್ಲಿಂದ ಹುಡುಕಿ ತಂದಿದ್ದಾರೋ ಗೊತ್ತಿಲ್ಲ ಎಂದು ಟೀಕಿಸಿದರು.

ಕಾನೂನುಬಾಹಿರ ಶಕ್ತಿಗಳು ಮೆರವಣಿಗೆಯಲ್ಲಿ ಬರುವುದಾದರೆ ಮುಂಜಾಗ್ರತಾ ಕ್ರಮವಾಗಿ ಬಂಧಿಸಬೇಕಿತ್ತು ಎಂದು ತಿಳಿಸಿದರು. ಆದರೆ, ತುಷ್ಟೀಕರಣಕ್ಕಾಗಿ ಅಂಥವರನ್ನು ಅರೆಸ್ಟ್ ಮಾಡುವುದಿಲ್ಲ ಎಂದು ಅವರು ಆಕ್ಷೇಪಿಸಿದರು. ಕಾನೂನು ಪ್ರಕೋಷ್ಟದ ರಾಜ್ಯ ಸಂಚಾಲಕ ವಸಂತಕುಮಾರ್, ರಾಜ್ಯ ವಕ್ತಾರ ಮೋಹನ್ ವಿಶ್ವ, ಪ್ರಮುಖರು ಈ ಸಂದರ್ಭದಲ್ಲಿ ಇದ್ದರು.

Tags:    

Similar News