ಜೆಸಿ ರಸ್ತೆಯ 'ದೋಸೆ ಆಂಟಿ': ದೋಸೆಯೊಂದಿಗೆ ಪ್ರೀತಿ ಬಡಿಸುವ ವಿದ್ಯಾರ್ಥಿಗಳ ಅಮ್ಮ

ಜೈನ್‌ ಕಾಲೇಜಿನಿಂದ ಪಾಸಾಗಿ ಹೋದ ಹಳೆಯ ವಿದ್ಯಾರ್ಥಿಗಳು ಇಂದಿಗೂ ಲಕ್ಷ್ಮೀ ಆಂಟಿಯ ದೋಸೆ ಬಂಡಿಗೆ ತಮ್ಮ ಫ್ಯಾಮಿಲಿ ಸಮೇತ ಬಂದು ಭೇಟಿ ಮಾಡಿ ದೋಸೆಯನ್ನು ಚಪ್ಪರಿಸಿ ಹೋಗುತ್ತಾರೆ.;

Update: 2025-09-14 02:30 GMT

 ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ತಾಣ ʻದೋಸೆ ಆಂಟಿʼಯ ಅಡ್ಡ

Click the Play button to listen to article

ಬೆಂಗಳೂರಿನ ಗಲಭೆಯ ಜೆಸಿ ರಸ್ತೆಯಲ್ಲಿರುವ ಜೈನ್‌ ಕಾಲೇಜಿನ ಬಳಿ ಒಂದು ಪುಟ್ಟ ದೋಸೆ ಬಂಡಿಯಿದೆ. ಅದರ ಹೆಸರು 'ಜೈನ್‌ ಫಾಸ್ಟ್‌ಫುಡ್‌' ಆದರೂ, ವಿದ್ಯಾರ್ಥಿಗಳ ಬಾಯಲ್ಲಿ ಅದು ಪ್ರೀತಿಯ 'ದೋಸೆ ಆಂಟಿ ಬಂಡಿ'. ಕಳೆದ ಎರಡು ದಶಕಗಳಿಂದ ಲಕ್ಷ್ಮೀ ಎಂಬ 'ದೋಸೆ ಆಂಟಿ' ಇಲ್ಲಿ ಬರೀ ದೋಸೆಗಳನ್ನು ಮಾರುತ್ತಿಲ್ಲ, ಬದಲಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಅಮ್ಮನ ಮಮತೆಯನ್ನೂ ಬಡಿಸುತ್ತಿದ್ದಾರೆ.

ಬಾಯಲ್ಲಿ ನೀರೂರಿಸುವ 9 ಬಗೆಯ ದೋಸೆಗಳು

ಇಲ್ಲಿನ ಚೀಸ್ ಬರ್ಸ್ಟ್ ದೋಸೆ, ನೂಡಲ್ ದೋಸೆ, ಮಸಾಲ ದೋಸೆ ಸೇರಿದಂತೆ ಒಂಬತ್ತು ಬಗೆಯ ದೋಸೆಗಳು ವಿದ್ಯಾರ್ಥಿಗಳ ನೆಚ್ಚಿನ ತಿನಿಸು. ಕೇವಲ 60 ರೂಪಾಯಿಗಳಿಂದ 100 ರೂಪಾಯಿಗಳ ಒಳಗೆ ಸಿಗುವ ಈ ದೋಸೆಗಳು ರುಚಿಯಲ್ಲಿ ಅದ್ಭುತ. "ನಾನು ಹೊಸ ದೋಸೆಗಳನ್ನು ಪ್ರಯೋಗ ಮಾಡಿ, ಮೊದಲು ಮಕ್ಕಳಿಗೆ ರುಚಿ ನೋಡಲು ಕೊಡುತ್ತೇನೆ. ಅವರು ಇಷ್ಟಪಟ್ಟರೆ ಮಾತ್ರ ಅದನ್ನು ಮಾರಾಟ ಮಾಡುತ್ತೇನೆ," ಎನ್ನುವ ಲಕ್ಷ್ಮೀ ಆಂಟಿಯ ಮಾತುಗಳಲ್ಲಿ ಅವರ ಕಾಳಜಿ ವ್ಯಕ್ತವಾಗುತ್ತದೆ.

ನೆನಪುಗಳ ಮೆರವಣಿಗೆ ನಡೆಸುವ ತಾಣ

ಈ ದೋಸೆ ಬಂಡಿ ಕೇವಲ ಇಂದಿನ ವಿದ್ಯಾರ್ಥಿಗಳ 'ಅಡ್ಡ' ಮಾತ್ರವಲ್ಲ, ಹಳೆಯ ವಿದ್ಯಾರ್ಥಿಗಳ ನಾಸ್ಟಾಲ್ಜಿಯಾ ಕೂಡ ಹೌದು. ಕಾಲೇಜು ಮುಗಿಸಿ ಹೋದವರು, ವರ್ಷಗಳ ನಂತರ ತಮ್ಮ ಕುಟುಂಬದೊಂದಿಗೆ ಇಲ್ಲಿಗೆ ಬಂದು ದೋಸೆ ಸವಿದು ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. "ಹತ್ತು ವರ್ಷಗಳ ಹಿಂದೆ ಇದ್ದ ರುಚಿಯೇ ಇಂದಿಗೂ ಇದೆ. ಆಗ ನಾವು ದೋಸೆ ತಿಂದು ವಾರಾಂತ್ಯದಲ್ಲಿ ಹಣ ಕೊಡುತ್ತಿದ್ದೆವು. ಈ ಜಾಗ ನಮ್ಮ ಕಾಲೇಜು ದಿನಗಳ ಸಿಹಿ ನೆನಪು," ಎನ್ನುತ್ತಾರೆ ಹಳೆ ವಿದ್ಯಾರ್ಥಿ ಆರ್ಯನ್‌ ಸೊರಂಗಿ.

ವ್ಯಾಪಾರವಲ್ಲ, ವಿಶ್ವಾಸದ ಸಂಬಂಧ

ಹಳೆಯ ವಿದ್ಯಾರ್ಥಿಗಳು ಬಂದಾಗ ಪ್ರೀತಿಯಿಂದ ಆಂಟಿಗೆ ಕಾಣಿಕೆಗಳನ್ನು ನೀಡಿ ಹೋಗುತ್ತಾರೆ. ಇದು ಕೇವಲ ವ್ಯಾಪಾರವಲ್ಲ, ಪ್ರೀತಿ ಮತ್ತು ಗೌರವದ ಸಂಬಂಧ. ಲಕ್ಷ್ಮೀ ಆಂಟಿ ತಮ್ಮ ನಗು, ಪ್ರೀತಿಯ ಮಾತು ಮತ್ತು ಎಲ್ಲರನ್ನೂ ತಮ್ಮ ಮಕ್ಕಳಂತೆ ಕಾಣುವ ಗುಣದಿಂದಲೇ ವಿದ್ಯಾರ್ಥಿಗಳ ಹೃದಯದಲ್ಲಿ ಅಳಿಸಲಾಗದ ಸ್ಥಾನ ಪಡೆದಿದ್ದಾರೆ. 

Tags:    

Similar News