ಬೆಂಗಳೂರು ಸ್ಕೈಡೆಕ್ | ಬುರ್ಜ್ ಖಲೀಫಾ, ಶಾಂಘೈ ಟವರ್ ವಿನ್ಯಾಸಗಾರ ಕೆನ್ನೆತ್ ಡ್ರಕರ್ ಸಲಹೆ ಪಡೆದ ಸರ್ಕಾರ
ಬೆಂಗಳೂರಿನ ಸ್ಕೈ ಡೆಕ್ ನಿರ್ಮಾಣ ವಿಚಾರವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಖ್ಯಾತ ವಾಸ್ತುಶಿಲ್ಪ ವಿನ್ಯಾಸಗಾರ ಹಾಗೂ ತಮ್ಮ ಜತೆ ಪ್ರವಾಸದಲ್ಲಿರುವ ಖ್ಯಾತ ವಿನ್ಯಾಸಗಾರ ಬಾಬು ಕೀಲಾರ ಅವರ ಜತೆಗೂಡಿ ಹಡ್ಸನ್ ಯಾರ್ಡ್ ಸೇರಿದಂತೆ ಹಲವು ಸ್ಕೈ ಡೆಕ್ ಗಗನಚುಂಬಿ ಕಟ್ಟಡಗಳ ವೀಕ್ಷಣೆ ನಡೆಸಿದರು. ಈ ವೇಳೆ ಡ್ರಕರ್ ಜತೆ ಅವರನ್ನು ಭೇಟಿಯಾಗಿ ಸ್ಕೈಡೆಕ್ ಸಂಬಂಧ ಚರ್ಚೆ ನಡೆಸಿದ್ದಾರೆ.;
ಬೆಂಗಳೂರಿನ ನೈಸ್ ರಸ್ತೆ ಬಳಿ ನಿರ್ಮಿಸಲು ಉದ್ದೇಶಿಸಲಾಗಿರುವ ಸ್ಕೈಡೆಕ್ ನಿರ್ಮಾಣ ಸಂಬಂಧ ಅಮೆರಿಕ ನ್ಯೂಯಾರ್ಕ್ ನಗರದ ಹಡ್ಸನ್ ಯಾರ್ಡ್ಸ್‌ನಲ್ಲಿರುವ ʼದ ಎಡ್ಜ್" ಸ್ಕೈಡೆಕ್ ನಿರ್ಮಿಸಿದ ವಾಸ್ತುಶಿಲ್ಪ ವಿನ್ಯಾಸಗಾರ ಕೆನ್ನೆತ್ ಡ್ರಕರ್ ಅವರ ಬಳಿಕ ಚರ್ಚೆ ನಡೆಸಿದೆ.
ನ್ಯೂಯಾರ್ಕಿನ ವಿಶ್ವ ವಾಣಿಜ್ಯ ಕಟ್ಟಡ, ಚೀನಾದ ಶಾಂಘೈ ಟವರ್, ದುಬೈನ ಬುರ್ಜ್ ಖಲೀಫಾದ ವಿನ್ಯಾಸ ಮಾಡಿರುವ ಕೆನ್ನೆತ್ ಡ್ರಕರ್ ಅವರು ವಿಶ್ವ ವಿಖ್ಯಾತ ವಿನ್ಯಾಸ, ವಾಸ್ತುಶಿಲ್ಪ, ಎಂಜಿನಿಯರಿಂಗ್ ಮತ್ತು ನಗರ ಯೋಜನಾ ಸಂಸ್ಥೆ ಎಚ್‌ಒಕೆ (Hellmuth, Obata + Kassabaum) ಸಂಸ್ಥೆಯ ಡಿಸೈನ್ ಮುಖ್ಯಸ್ಥರು.ಈ ಸಂಸ್ಥೆ 1955 ರಲ್ಲಿ ಸ್ಥಾಪನೆಯಾದ ವಿಶ್ವಮಾನ್ಯ ಸಂಸ್ಥೆ. ಬೆಂಗಳೂರಿನಲ್ಲಿ ಸ್ಥಾಪನೆಯಾಗಬೇಕಿರುವ ಸ್ಕೈಡೆಕ್‌ಗೂ ಅಂತಹುದೇ ವಿಶ್ವದರ್ಜೆ ಮಾನ್ಯತೆ ಸಿಗಬೇಕೆಂದು ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ (ಸದ್ಯ ಅಮೆರಿಕ ಪ್ರವಾಸದಲ್ಲಿರುವ) ಉಪ ಮುಖ್ದಮಂತ್ರಿ ಡಿ.ಕೆ. ಶಿವಕುಮಾರ್ ಅವರು ಡ್ರಕರ್ ಅವರ ಜತೆ ಚರ್ಚಿಸಿದ್ದಾರೆ.
ಬೆಂಗಳೂರಿನ ಸ್ಕೈ ಡೆಕ್ ನಿರ್ಮಾಣ ವಿಚಾರವಾಗಿ ಶಿವಕುಮಾರ್ ಅವರು ಖ್ಯಾತ ವಾಸ್ತುಶಿಲ್ಪ ವಿನ್ಯಾಸಗಾರ ಹಾಗೂ ತಮ್ಮ ಜತೆ ಪ್ರವಾಸದಲ್ಲಿರುವ ಖ್ಯಾತ ವಿನ್ಯಾಸಗಾರ ಬಾಬು ಕೀಲಾರ ಅವರ ಜತೆಗೂಡಿ ಹಡ್ಸನ್ ಯಾರ್ಡ್ ಸೇರಿದಂತೆ ಹಲವು ಸ್ಕೈ ಡೆಕ್ ಗಗನಚುಂಬಿ ಕಟ್ಟಡಗಳ ವೀಕ್ಷಣೆ ನಡೆಸಿದರು. ಈ ವೇಳೆ ಡ್ರಕರ್ ಜತೆ ಅವರನ್ನು ಭೇಟಿಯಾಗಿ ಸ್ಕೈಡೆಕ್ ಸಂಬಂಧ ಚರ್ಚೆ ನಡೆಸಿದ್ದಾರೆ.
ಪ್ರವಾಸಿಗರ ಆಕರ್ಷಣೆಗಾಗಿ ಬೆಂಗಳೂರಿನಲ್ಲಿ ಸ್ಕೈ ಡೆಕ್ ನಿರ್ಮಾಣ ಮಾಡುವ ಕನಸು ಕಂಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಮ್ಮ ಅಮೆರಿಕ ಪ್ರವಾಸದ ವೇಳೆ ನ್ಯೂಯಾರ್ಕ್ ನಗರದ "ದ ಎಡ್ಜ್" ಸ್ಕೈ ಡೆಕ್ ಗೆ ಭೇಟಿ ಮಾಡಿ ಅದರ ವಾಸ್ತುಶಿಲ್ಪ, ವಿನ್ಯಾಸ ಮತ್ತಿತರ ವಿಚಾರಗಳನ್ನು ಪರಿಶೀಲಿಸಿದರು. ಹಡ್ಸನ್ ಯಾರ್ಡ್ಸ್ 30 ವೆಸ್ಟರ್ನ್ ಹೆಮಿಸ್ಫರ್ ನಲ್ಲಿರುವ ಕಟ್ಟಡದ 100 ನೇ ಮಹಡಿಯಲ್ಲಿ 7500 ಚದರಡಿಬಯ ಈ ಡೆಕ್ ಅನ್ನು ವೀಕ್ಷಣೆ ನಡೆಸಿದರು. ಈ ಡೆಕ್ ಫ್ಲೋರ್ ನಿಂದ ಹಿಡಿದು ಸೀಲಿಂಗ್ ವರೆಗೂ ಪಾರದರ್ಶಕ ಗಾಜಿನಿಂದ ಕೂಡಿದ್ದು, ಇದು ನ್ಯೂಯಾರ್ಕ್ ನಗರದ ವಿಹಂಗಮ ನೋಟಕ್ಕೆ ವೇದಿಕೆಯಾಗಿದೆ.
ಈ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, "ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಸುಸ್ಥಿರ ಆಲೋಚನೆಗಳನ್ನು ಒಟ್ಟುಗೂಡಿಸಿದರೆ ಬೆಂಗಳೂರಿನ ಸ್ಕೈ ಲೈನ್ ಗೆ ಹೊಸ ವ್ಯಾಖ್ಯಾನ ನೀಡುವುದರ ಜೊತೆಗೆ ನಗರಾಭಿವೃದ್ಧಿಯ ಗುಣಮಟ್ಟವನ್ನು ಹೆಚ್ಚಿಸಲಿದೆ" ಎಂದು ಅಭಿಪ್ರಾಯಪಟ್ಟರು.
ಬೆಂಗಳೂರು ಸ್ಕೈಡೆಕ್ ಎಲ್ಲಿ? ಹೇಗೆ?
“ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಬೆಂಗಳೂರಿನಲ್ಲಿ 250 ಮೀ. ಸ್ಕೈಡೆಕ್ ನಿರ್ಮಿಸಲು ಸರ್ಕಾರ ಮುಂದಾಗಿದೆ. 250 ಮೀಟರ್ ಎತ್ತರದ ಈ ಸ್ಕೈಡೆಕ್ ಗಾಗಿ 25 ಎಕರೆ ಜಾಗ ಅಗತ್ಯವಿದೆ. ಕೊಮ್ಮಘಟ್ಟ ಹಾಗೂ ಬೆಂಗಳೂರು ವಿವಿ ಬಳಿಯ ಜಾಗವನ್ನು ಸರ್ಕಾರ ಸ್ಕೈಡೆಕ್ ನಿರ್ಮಾಣಕ್ಕಾಗಿ ಗುರುತಿಸಿತ್ತು. ಬೆಂಗಳೂರು ಬೆಳೆಯುತ್ತಿರುವಾಗ ಬೆಂಗಳೂರು ವಿವಿಯ ಬಳಿ 25 ಎಕರೆ ಭೂಮಿ ವ್ಯರ್ಥ ಮಾಡುವುದು ಬೇಡ, ವಿದ್ಯಾರ್ಥಿಗಳಿಗೆ ತೊಂದರೆಯಾಗಬಹುದು ಎಂಬ ಕಾರಣಕ್ಕೆ ನೈಸ್ ರಸ್ತೆಯ ಬಳಿ ಸ್ಕೈಡೆಕ್ ನಿರ್ಮಾಣ ಮಾಡಲು ಸರ್ಕಾರ ಯೋಚಿಸಿದೆ.
ಈ ಜಾಗ ನೈಸ್ ಸಂಸ್ಥೆ ಬಳಿ ಇದ್ದು ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಸರ್ಕಾರಕ್ಕೆ ನೈಸ್ ಸಂಸ್ಥೆ 200 ಎಕರೆ ಭೂಮಿ ವಾಪಸ್ ನೀಡಬೇಕಿದೆ. ಈ ವಿಚಾರವಾಗಿ ನೈಸ್ ಸಂಸ್ಥೆ ಬಳಿ ಚರ್ಚೆ ಮಾಡಲು ಸರ್ಕಾರ ನಿರ್ಧರಿಸಿದೆ. ವಾಯುಸೇನೆ, ವಿಮಾನಯಾನ ಸಚಿವಾಲಯದವರು 20 ಕಿ.ಮೀ ವ್ಯಾಪ್ತಿಯಲ್ಲಿ ಈ ಯೋಜನೆ ಮಾಡಲು ಅವಕಾಶವಿಲ್ಲ. ಹೀಗಾಗಿ ನೈಸ್ ರಸ್ತೆ ಬಳಿ ಮಾಡುವ ತೀರ್ಮಾನ ಮಾಡಲಾಗಿದೆ.
ನೈಸ್ ರಸ್ತೆ ಬಳಿ ಮಾಡುವುದರಿಂದ ಪ್ರವಾಸಿಗರು ಮೈಸೂರು, ಕೊಡಗು ಭಾಗಕ್ಕೆ ತೆರಳಲು ಮುಕ್ತವಾದ ಸಂಚಾರ ಮಾರ್ಗವಿರುತ್ತದೆ. ಇನ್ನು ನೈಸ್ ರಸ್ತೆ ಅಗಲೀಕರಣಕ್ಕೂ ಅವಕಾಶ ಇರುವುದರಿಂದ ಇದು ಸೂಕ್ತ ಜಾಗವಾಗಿದೆ.
ಮೊದಲು ಈ ಯೋಜನೆಯನ್ನು ಕಂಠೀರವ ಕ್ರೀಡಾಂಗಣದ ಎದುರು ಮಾಡಲು ಪ್ರಸ್ತಾವನೆ ನೀಡಲಾಗಿತ್ತು. ಸಂಚಾರಿ ದಟ್ಟಣೆ ಸಮಸ್ಯೆ ಹೆಚ್ಚಾಗುತ್ತದೆ ಹಾಗೂ ಹೆಚ್ಎಎಲ್ ನಿಂದ ಇದಕ್ಕೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಅಲ್ಲಿ ಮಾಡುತ್ತಿಲ್ಲ. ಈ ಯೋಜನೆಗೆ 400-500 ಕೋಟಿ ವೆಚ್ಚವಾಗಲಿದ್ದು, ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿರುವ ಉದ್ದೇಶದಿಂದ ಕನಿಷ್ಠ ಪಕ್ಷ 25 ಎಕರೆ ಜಾಗ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.