ಸಿಎಂ, ಡಿಸಿಎಂ ಶೀತಲ ಸಮರ ತೀವ್ರ, ಕುಣಿಗಲ್ ಶಾಸಕರಿಂದ ಡಿಕೆಶಿಗೆ ಬೆಂಬಲ
"ಐದು ವರ್ಷವೂ ನಾನೇ ಸಿಎಂ. ಡಿ.ಕೆ. ಶಿವಕುಮಾರ್‌ಗೆ ಹೆಚ್ಚು ಶಾಸಕರ ಬೆಂಬಲವಿಲ್ಲ" ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದು ಡಿಸಿಎಂ ಪಾಳಯದಲ್ಲಿ ಆತಂಕ ಮನೆ ಮಾಡಿದೆ.;
ಕುಣಿಗಲ್ ಶಾಸಕ ಡಾ. ರಂಗನಾಥ್
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಾಜ್ಯ ರಾಜಕೀಯದ ಚಟುವಟಿಕೆಗಳು ಗರಿಗೆದರಿವೆ. ಕಳೆದ ಎರಡು ದಿನಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಹೈಕಮಾಂಡ್ ಭೇಟಿಗಾಗಿ ಕಾದು ಕುಳಿತಿದ್ದಾರೆ. ಈ ನಡುವೆ, ಸಿದ್ದರಾಮಯ್ಯ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, "ಐದು ವರ್ಷವೂ ನಾನೇ ಸಿಎಂ, ಡಿ.ಕೆ. ಶಿವಕುಮಾರ್‌ಗೆ ಹೆಚ್ಚು ಶಾಸಕರ ಬೆಂಬಲವಿಲ್ಲ" ಎಂದು ಹೇಳಿಕೆ ನೀಡಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದು, ಡಿಸಿಎಂ ಪಾಳಯದಲ್ಲಿ ಆತಂಕ ಮನೆ ಮಾಡಿದೆ.
ಈ ಸಂದರ್ಭದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಪಾಳಯದಲ್ಲಿ ಗುರುತಿಸಿಕೊಂಡಿರುವ ಕುಣಿಗಲ್ ಶಾಸಕ ಡಾ. ರಂಗನಾಥ್ ಮಾಧ್ಯಮಗಳೊಂದಿಗೆ ಮಾತನಾಡಿ, "ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಇಬ್ಬರೂ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಸಿಎಂ ಕುರ್ಚಿ ಖಾಲಿ ಇಲ್ಲ, ನಾಯಕತ್ವ ಬದಲಾವಣೆ ವಿಚಾರಗಳನ್ನು ಸದ್ಯಕ್ಕೆ ಯಾವ ಶಾಸಕರೂ ಮಾತನಾಡಬಾರದು" ಎಂದು ತಿಳಿಸಿದ್ದಾರೆ. ಅಲ್ಲದೆ, "ಡಿ.ಕೆ. ಶಿವಕುಮಾರ್ ಚುನಾವಣೆಯಲ್ಲಿ ಬಹಳ ಶ್ರಮಪಟ್ಟು ಕೆಲಸ ಮಾಡಿದ್ದರು. ರಾಜ್ಯದಲ್ಲಿ 140 ಶಾಸಕ ಸ್ಥಾನ ಬರಲು ಡಿಕೆಶಿ ಪ್ರಮುಖ ಕಾರಣ. ಇಂದಲ್ಲ ನಾಳೆ ಇದಕ್ಕೆ ಪ್ರತಿಫಲ ಸಿಗಬೇಕು ಎಂಬ ಆಸೆ ಇದ್ದೇ ಇರುತ್ತದೆ" ಎಂದು ಹೇಳುವ ಮೂಲಕ ಪರೋಕ್ಷವಾಗಿ ಡಿಕೆಶಿಗೆ ಬೆಂಬಲ ಸೂಚಿಸಿದ್ದಾರೆ.
ಸಿಎಂ ಮತ್ತು ಡಿಸಿಎಂ ಹೈಕಮಾಂಡ್ ಭೇಟಿ ಮಾಡಲು ದೆಹಲಿಗೆ ತೆರಳಿದ್ದು, ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಬುಧವಾರ (ಜುಲೈ 9) ಶಾಸಕರ ಜೊತೆ ಅನುದಾನ, ಅಭಿವೃದ್ಧಿ ಮತ್ತಿತರ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದರು. "ನಾವು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದೇವೆ, ಇವುಗಳಿಗೆ ಮುಂದಿನ ದಿನಗಳಲ್ಲಿ ಪರಿಹಾರ ಸಿಗಬಹುದೆಂಬ ವಿಶ್ವಾಸವಿದೆ" ಎಂದು ಡಾ. ರಂಗನಾಥ್ ತಿಳಿಸಿದ್ದಾರೆ.
ಶಾಸಕರ ಅಸಮಾಧಾನ ಮತ್ತು ಸುರ್ಜೇವಾಲಾ ಸಭೆ
ಇತ್ತೀಚೆಗೆ ರಾಜ್ಯಕ್ಕೆ ಆಗಮಿಸಿದ್ದ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಶಾಸಕರ ಜೊತೆ ಪ್ರತ್ಯೇಕ ಸಭೆ ನಡೆಸಿದ್ದರು. ಈ ವೇಳೆ ಕೆಲವು ಶಾಸಕರು ತಮ್ಮ ಕ್ಷೇತ್ರಗಳಿಗೆ ಅನುದಾನ ದೊರೆತಿಲ್ಲ, ಮಂತ್ರಿಗಳು ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದು ಜನಪ್ರತಿನಿಧಿಗಳಿಗೆ ಸಮಯ ನೀಡುತ್ತಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೇ ಸಭೆಯಲ್ಲಿ ಕೆಲವು ಶಾಸಕರು ಸಿಎಂ ಸಿದ್ದರಾಮಯ್ಯ ಪರ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಪರ ಹೇಳಿಕೆಗಳನ್ನು ನೀಡಿದ್ದು ಗಮನ ಸೆಳೆದಿತ್ತು.
ಡಿಕೆಶಿ - ಪ್ರಿಯಾಂಕಾ ವಾದ್ರಾ ಭೇಟಿ
ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಬೀಡುಬಿಟ್ಟಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ ಅಧಿಕಾರ ಹಂಚಿಕೆ ಕುರಿತು ಚರ್ಚಿಸಲು ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿಯವರನ್ನು ಭೇಟಿಯಾಗಲು ಸಮಯಾವಕಾಶ ಕೇಳಿದ್ದರೂ, ಭೇಟಿಗೆ ಅವಕಾಶ ಸಿಕ್ಕಿರಲಿಲ್ಲ. ಸಂಸತ್ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬುಧವಾರ ಬಿಹಾರದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದರಿಂದ ಅವರ ಭೇಟಿಯೂ ಸಾಧ್ಯವಾಗಿಲ್ಲ. ಈ ನಡುವೆ, ಡಿಸಿಎಂ ಡಿ.ಕೆ. ಶಿವಕುಮಾರ್ ಸಂಸದೆ ಪ್ರಿಯಾಂಕಾ ವಾದ್ರಾ ಅವರನ್ನು ಭೇಟಿಯಾಗಿ ಮುಖ್ಯಮಂತ್ರಿ ಅಧಿಕಾರ ಹಂಚಿಕೆಯ ಕುರಿತು ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.