ಡಿಕೆಶಿ ಏನು ಬೇಕಾದರೂ ಮಾಡಬಹುದು, ನಾವು ಮಾಡಿದರೆ ಮಾತ್ರ ತಪ್ಪು- ಕೆ.ಎನ್‌.ರಾಜಣ್ಣ ಆಕ್ರೋಶ

ಡಿ.ಕೆ. ಶಿವಕುಮಾರ್‌ ಅವರು ಸದನದಲ್ಲಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದನ್ನು ತರಾಟೆಗೆ ತೆಗೆದುಕೊಂಡಿರುವ ಕೆ.ಎನ್‌. ರಾಜಣ್ಣ, ಅವರು ಮಾತ್ರ ಏನು ಬೇಕಾದರೂ ಮಾಡಬಹುದು, ಮಾತನಾಡಬಹುದು, ನಾವು ಮಾತ್ರ ಬಾಯಿಕಟ್ಟಿ ಕುಳಿತುಕೊಳ್ಳಬೇಕೇ ಎಂದು ವರಿಷ್ಠರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.;

Update: 2025-08-24 10:45 GMT

ಸಹಕಾರ ಸಚಿವ ಕೆ.ಎನ್‌. ರಾಜಣ್ಣ

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಇತ್ತೀಚೆಗೆ ವಿಧಾನಸಭೆ ಅಧಿವೇಶನದಲ್ಲಿ ಆರ್‌ಎಸ್‌ಎಸ್‌ ಗೀತೆ ಹಾಡಿದಕ್ಕೆ ಕಾಂಗ್ರೆಸ್ಸಿಗರಲ್ಲೇ ತೀವ್ರ ಆಕ್ರೋಶ ವ್ಯಕ್ತವಾಗಿದೆ. 

ಸರ್ಕಾರದಲ್ಲಿ ಹಿಂದಿನಿಂದಲೂ ಹಾವು-ಮುಂಗುಸಿಯಂತಿದ್ದ ಡಿ.ಕೆ. ಶಿವಕುಮಾರ್‌ ಹಾಗೂ ಸಿಎಂ ಆಪ್ತ ಕೆ.ಎನ್‌. ರಾಜಣ್ಣ ನಡುವೆ ಹಲವು ಸಂದರ್ಭದಲ್ಲಿ ಆಂತರಿಕ ಕಚ್ಚಾಟ ನಡೆದಿದೆ. 

ಡಿ.ಕೆ. ಶಿವಕುಮಾರ್‌ ಅವರು ಸದನದಲ್ಲಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದನ್ನು ತರಾಟೆಗೆ ತೆಗೆದುಕೊಂಡಿರುವ ಕೆ.ಎನ್‌. ರಾಜಣ್ಣ, ಅವರು ಮಾತ್ರ ಏನು ಬೇಕಾದರೂ ಮಾಡಬಹುದು, ಮಾತನಾಡಬಹುದು, ನಾವು ಮಾತ್ರ ಬಾಯಿಕಟ್ಟಿ ಕುಳಿತುಕೊಳ್ಳಬೇಕೇ ಎಂದು ವರಿಷ್ಠರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ತುಮಕೂರಿನಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರು ಆರ್‌ಎಸ್‌ಎಸ್ ಗೀತೆ ಹಾಡಬಹುದು, ಖಾಸಗಿ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕ ಅಮಿತ್ ಶಾ ಜತೆ ವೇದಿಕೆ ಹಂಚಿಕೊಳ್ಳಬಹುದು, ಏನು ಬೇಕಾದರೂ ಮಾಡಬಹುದು. ಆದರೆ, ನಾವು ಏನಾದರೂ ಹೇಳಿದರೆ ಮಾತ್ರ ಸಮಸ್ಯೆ ಉದ್ಭವಿಸುತ್ತದೆ ಎಂದು ಪರೋಕ್ಷವಾಗಿ ಹೈಕಮಾಂಡ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿಕೆಶಿ ನಡವಳಿಕೆ ಬಗ್ಗೆ ವಾಗ್ದಾಳಿ

ಅಧಿವೇಶನದ ವೇಳೆ ಡಿ.ಕೆ.ಶಿವಕುಮಾರ್ ಆರ್‌ಎಸ್‌ಎಸ್ ಗೀತೆ ಹಾಡಿದ ಬಗ್ಗೆ ಟೀಕಿಸಿದ ಕೆ.ಎನ್‌. ರಾಜಣ್ಣ ಅವರು, "ಪ್ರಯಾಗ್‌ರಾಜ್‌ ಗಂಗೆಯಲ್ಲಿ ಸ್ನಾನ ಮಾಡಿದ ಮಾತ್ರಕ್ಕೆ ಬಡತನ ಹೋಗುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು. ಆದರೂ ಡಿ.ಕೆ.ಶಿವಕುಮಾರ್ ಪುಣ್ಯ ಸ್ನಾನ ಮಾಡಲು ಹೋದರು. ಅಂಬಾನಿ ಮಗನ ಮದುವೆಯ ಆಹ್ವಾನವನ್ನು ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ತಿರಸ್ಕರಿಸಿದರು. ಆದರೆ, ಡಿ.ಕೆ.ಶಿವಕುಮಾರ್ ಕುಟುಂಬ ಸಮೇತ ಆ ಮದುವೆಗೆ ಹಾಜರಾದರು" ಎಂದು ಹೈಕಮಾಂಡ್‌ ವಿರುದ್ಧವಾದ ಡಿಕೆಶಿ ನಡೆಗೆ ಕಿಡಿಕಾರಿದರು.

ಕಾಂಗ್ರೆಸ್ ನಾಯಕರ ನಡುವಿನ ಭಿನ್ನಾಭಿಪ್ರಾಯದ ಕುರಿತಂತೆ ಮಾತನಾಡಿದ ಅವರು, "ನಾವು ಯಾವುದೇ ಶಾಸಕರ ಅಥವಾ ಮಂತ್ರಿಗಳ ಸಭೆ ಕರೆಯಲು ಸಾಧ್ಯವಿಲ್ಲ. ಆದರೆ, ಇತರರು ಕರೆಯಬಹುದು, ಮಾತನಾಡಬಹುದು. ಇದಕ್ಕೆಲ್ಲ ಸೂಕ್ತ ಸಮಯದಲ್ಲಿ ಉತ್ತರ ನೀಡುತ್ತೇನೆʼʼ ಎಂದು ಪ್ರತಿಕ್ರಿಯಿಸಿದರು.

Tags:    

Similar News