ಸರ್ಕಾರಿ ಆಸ್ಪತ್ರೆಗಳಲ್ಲಿ ಇಸ್ಕಾನ್‌ ಸಹಯೋಗದೊಂದಿಗೆ ಪೌಷ್ಟಿಕ ಆಹಾರ ವಿತರಣೆ; ದಿನೇಶ್‌ ಗುಂಡೂರಾವ್‌ ಚಾಲನೆ

ಈ ಯೋಜನೆಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಚಾಲನೆ ನೀಡಿದ್ದು, ಪ್ರಸ್ತುತ ಬೆಂಗಳೂರಿನ ಸಿ.ವಿ. ರಾಮನ್ ಜನರಲ್ ಆಸ್ಪತ್ರೆ, ಜಯನಗರ ಜನರಲ್ ಆಸ್ಪತ್ರೆ ಮತ್ತು ಕೆಸಿ ಜನರಲ್ ಆಸ್ಪತ್ರೆಗಳಲ್ಲಿ ಈ ಯೋಜನೆ ಜಾರಿಯಾಗಿದೆ.;

Update: 2025-09-06 07:29 GMT

 ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಿವಿ ರಾಮನ್ ಜನರಲ್ ಆಸ್ಪತ್ರೆಯಲ್ಲಿ ಹೊಸ ಆಹಾರ ಯೋಜನೆ ಉಪಕ್ರಮಕ್ಕೆ ಚಾಲನೆ ನೀಡಿದರು.

ಸರ್ಕಾರಿ ಆಸ್ಪತ್ರೆಗಳಿಗೆ ಇನ್ನು ಮುಂದೆ ದಾಖಲಾಗುವ ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಸಾಮಾನ್ಯ ಆಹಾರ ಬದಲು ಅವರ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಪೌಷ್ಟಿಕ ಆಹಾರ ದೊರೆಯಲಿದೆ.

ಆರೋಗ್ಯ ಇಲಾಖೆ ಇಸ್ಕಾನ್‌ ದೇವಾಲಯದ ಸಹಭಾಗಿತ್ವದಲ್ಲಿ ಐದು ಪ್ರತ್ಯೇಕ ಆಹಾರ ಯೋಜನೆಗಳನ್ನು ರೂಪಿಸಿದ್ದು, ಸಾಮಾನ್ಯ ಆಹಾರ, ಚಿಕಿತ್ಸಾ ಆಹಾರ, ಗರ್ಭಿಣಿ ಮತ್ತು ಬಾಣಂತಿಯರು, ಮಧುಮೇಹಿಗಳು ಹಾಗೂ ಮಕ್ಕಳಿಗೆ ಎಂದು ವಿಂಗಡಣೆ ಮಾಡಲಾಗಿದೆ.

ಈ ಯೋಜನೆಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಚಾಲನೆ ನೀಡಿದ್ದು, ಪ್ರಸ್ತುತ ಬೆಂಗಳೂರಿನ ಸಿ.ವಿ. ರಾಮನ್ ಜನರಲ್ ಆಸ್ಪತ್ರೆ, ಜಯನಗರ ಜನರಲ್ ಆಸ್ಪತ್ರೆ ಮತ್ತು ಕೆಸಿ ಜನರಲ್ ಆಸ್ಪತ್ರೆಗಳಲ್ಲಿ ಈ ಯೋಜನೆ ಜಾರಿಯಾಗಿದೆ.

ಇಸ್ಕಾನ್ ಜೊತೆ 3 ವರ್ಷಗಳ MOU ಮಾಡಿಕೊಂಡಿದ್ದು, ಊಟ ತಯಾರಿ, ಬಡಿಸುವುದು ಹಾಗೂ ಪಾತ್ರೆಗಳ ವ್ಯವಸ್ಥೆ ಎಲ್ಲವನ್ನೂ ಇಸ್ಕಾನ್ ನೋಡಿಕೊಳ್ಳಲಿದೆ. ಪ್ರತಿದಿನ ಬೆಳಗಿನ ಉಪಹಾರ, ಮಧ್ಯಾಹ್ನ ಊಟ, ಸಂಜೆ ತಿಂಡಿ ಮತ್ತು ರಾತ್ರಿ ಊಟ ಸಿಗಲಿದೆ.

ಊಟದ ಮೆನು ಬದಲಿಸಿದ ಆರೋಗ್ಯ ಇಲಾಖೆ

ಹೊಸ ಊಟದ ಮೆನುವಿನಲ್ಲಿ ಬೆಳಗ್ಗೆ ತಿಂಡಿಗೆ ರವೆ ಉಪ್ಪಿಟ್ಟು, ಗೋಧಿಯ ತಿನಿಸು, ಪೊಂಗಲ್, 100 ಗ್ರಾಂ ಬ್ರೆಡ್​, ಬಾಳೆಹಣ್ಣು ನೀಡಲಾಗುತ್ತದೆ. ಮಧ್ಯಾಹ್ನ ಊಟಕ್ಕೆ ರಾಗಿ ಮುದ್ದೆ, ಅನ್ನ, ಸಾಂಬಾರ್, ಸೋಯಾ ಚಂಕ್ಸ್ ನೀಡಿದರೆ, ಸಂಜೆ ತಿಂಡಿಗೆ ಟೀ ಹಾಗೂ ಬಿಸ್ಕೆಟ್ ನೀಡಲಾಗುತ್ತದೆ. ರಾತ್ರಿ ಊಟಕ್ಕೆ ಚಪಾತಿ, ತರಕಾರಿ ಪಲ್ಯ, ಅನ್ನ-ಸಾಂಬಾರ್​, ಕಾಳುಗಳ ಪಲ್ಯ ನೀಡಲಾಗುತ್ತದೆ.

ಈ ಯೋಜನೆಗೆ 9 ತಿಂಗಳಿಗೆ 9.37 ಕೋಟಿ ರೂ ವೆಚ್ಚ ನಿರೀಕ್ಷಿಸಲಾಗಿದೆ. ಪ್ರಸ್ತುತ ಬೆಂಗಳೂರು ನಗರದಲ್ಲಿ ಆರಂಭಗೊಂಡಿರುವ ಯೋಜನೆಯನ್ನು ಹಂತ ಹಂತವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸುವ ಉದ್ದೇಶವಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.

Tags:    

Similar News