ಮುಡಾ ಪಾದಯಾತ್ರೆ ಸಮಾರೋಪ | ತಾಕತ್ತಿದ್ದರೆ ಸರ್ಕಾರ ವಿಸರ್ಜಿಸಿ ಚುನಾವಣೆಗೆ ಬನ್ನಿ: ಬಿಎಸ್ ವೈ ಸವಾಲು
ʻʻತಾಕತ್ತಿದ್ದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬನ್ನಿ, ಬಿಜೆಪಿ 130- 140 ಸ್ಥಾನ ಗೆಲ್ಲಲಿದೆʼʼ ಎಂದು ಮಾಜಿ ಸಿಎಂ, ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ನಡೆಸಿದ ಮೈಸೂರು ಚಲೋ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ʻʻನನ್ನ ಬದುಕಿನ ಕೊನೆಯ ಉಸಿರು ಇರುವರೆಗೂ ರಾಜಕೀಯದಲ್ಲಿ ಇದ್ದು ನಿಮ್ಮನ್ನು ಮನೆಗೆ ಕಳಿಸುವ ಕೆಲಸ ಮಾಡುತ್ತೇನೆʼʼ ಎಂದು ಗುಡುಗಿದರು.
ʻʻಇಡೀ ಸರ್ಕಾರ ದಿವಾಳಿ ಆಗಿದೆ. ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಶಿವಕುಮಾರ್ ತಾನು ಕಲ್ಲುಬಂಡೆ ಎನ್ನುತ್ತಾರೆ. ವಿಜಯೇಂದ್ರ, ಅಶೋಕ ಅವರ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾರೆ. ನಿಮ್ಮ ಪಾಪದ ಕೊಡ ತುಂಬಿ ತುಳುಕುತ್ತಿದೆ. ಯಾವಾಗ ಏನು ಆಗುತ್ತದೋ ಗೊತ್ತಿಲ್ಲ. ಮೊದಲು ನಿಮ್ಮ ಭವಿಷ್ಯದ ಕಡೆಗೆ ಗಮನ ಕೊಡಿʼʼ ಎಂದು ಹೇಳಿದರು.
ʻʻಹಿಂದಿನ ಯಾವ ಮುಖ್ಯಮಂತ್ರಿ ಕೂಡ ತನ್ನ ಕುಟುಂಬಕ್ಕೆ ನಿವೇಶನ ಕೊಟ್ಟಿಲ್ಲ. ಇದು ಯಾರ ಅಪ್ಪನ ಮನೆ ದುಡ್ಡು? ಇಷ್ಟಾದರೂ ಪ್ರಾಮಾಣಿಕ ಎನ್ನುತ್ತೀರಿ. ಇಂತಹ ಸಿ.ಎಂ, ಡಿಸಿಎಂ ರಾಜ್ಯದಲ್ಲಿ ಇರುವವರೆಗೆ ಅಭಿವೃದ್ಧಿ ಸಾಧ್ಯ ಇಲ್ಲ. ರಾಜ್ಯದ ಜನ ಬೇಗ ನಿಮ್ಮನ್ನು ಮನೆಗೆ ಕಳುಹಿಸುತ್ತಾರೆ. ತಾಕತ್ತಿದ್ದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬನ್ನಿ. ಈಗಲೂ ಚುನಾವಣೆ ನಡೆದರೆ ಬಿಜೆಪಿ 130- 140 ಸ್ಥಾನ ಗೆಲ್ಲಲಿದೆʼʼ ಎಂದು ಸವಾಲು ಹಾಕಿದರು.
"ಈ ಪಾದಯಾತ್ರೆ ನಿಮ್ಮನ್ನು ಮನೆಗೆ ಕಳುಹಿಸುವರೆಗೂ ನಿಲ್ಲದು. 82 ವರ್ಷ ಆಗಿದ್ದರೂ ರಾಜ್ಯದ ಉದ್ದಗಲ ಓಡಾಡುತ್ತೇನೆ ಎಂದರು. ಮೋದಿ, ದೇವೇಗೌಡರ ಬಗ್ಗೆಯೂ ಹಗುರವಾಗಿ ಮಾತನಾಡುತ್ತೀರಿ. ಇದು ನಿಮಗೆ ಶೋಭೆ ತರುವುದಿಲ್ಲ. ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ- ಜೆಡಿಎಸ್ ಸರ್ಕಾರ ತರಲು ಜನ ಕಾರಣಕರ್ತರಾಗಬೇಕಿದೆ" ಎಂದು ಕರೆ ಕೊಟ್ಟರು.