ಧರ್ಮಸ್ಥಳ ಅಸ್ಥಿಪಂಜರ ವಿವಾದ: ಬಿಜೆಪಿ ಮೌನದ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಧರ್ಮಸ್ಥಳದ ಬಗ್ಗೆ ಬಿಜೆಪಿ ನಾಯಕರು ಏಕಾಏಕಿ ಮೌನಕ್ಕೆ ಜಾರಿರುವುದು ಏಕೆ? ಅವರ ಧರ್ಮ ರಕ್ಷಣೆಯ ನಾಟಕ ಕೇವಲ ನಾಲ್ಕು ದಿನದ ಪ್ರದರ್ಶನಕ್ಕೆ ಸೀಮಿತವೇ?" ಎಂದು ಸಚಿವ ಪ್ರಿಯಾಂಕ್ ಖರ್ಗೆ ಖಾರವಾಗಿ ಪ್ರಶ್ನಿಸಿದ್ದಾರೆ.;

Update: 2025-09-13 07:45 GMT

ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ

Click the Play button to listen to article

ಧರ್ಮಸ್ಥಳದಲ್ಲಿನ ಸೌಜನ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿಶೇಷ ತನಿಖಾ ತಂಡದ (SIT) ತನಿಖೆಯು ಹೊಸ ತಿರುವು ಪಡೆದುಕೊಂಡಿದ್ದು, ಸೌಜನ್ಯಾ ಅವರ ಸಂಬಂಧಿ ವಿಠಲ್ ಗೌಡ ಅವರು ಅಸ್ಥಿಪಂಜರಗಳ ರಾಶಿಯನ್ನೇ ನೋಡಿರುವುದಾಗಿ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ, ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ವಿಷಯದಲ್ಲಿ ಬಿಜೆಪಿ ವಹಿಸಿರುವ ಮೌನವನ್ನು ಪ್ರಶ್ನಿಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ತಮ್ಮ ಅಧಿಕೃತ 'ಎಕ್ಸ್' ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಪ್ರಿಯಾಂಕ್ ಖರ್ಗೆ, "ಹಿಂದೆ 'ಧರ್ಮಸ್ಥಳ ಚಲೋ' ಎಂದು ಹೋರಾಟ ಮಾಡಿದ್ದ ಬಿಜೆಪಿ, ಈಗ ಧರ್ಮಸ್ಥಳವನ್ನು ಮರೆತು 'ಮದ್ದೂರು ಚಲೋ' ಮಾಡುತ್ತಿದೆ. ಧರ್ಮಸ್ಥಳದ ಬಗ್ಗೆ ಬಿಜೆಪಿ ನಾಯಕರು ಏಕಾಏಕಿ ಮೌನಕ್ಕೆ ಜಾರಿರುವುದು ಏಕೆ? ಅವರ ಧರ್ಮ ರಕ್ಷಣೆಯ ನಾಟಕ ಕೇವಲ ನಾಲ್ಕು ದಿನದ ಪ್ರದರ್ಶನಕ್ಕೆ ಸೀಮಿತವೇ?" ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

"ಸೌಜನ್ಯಾ ಅವರ ಸಂಬಂಧಿ ವಿಠಲ್ ಗೌಡ ಅವರು ಧರ್ಮಸ್ಥಳದ ಬಂಗ್ಲೆಗುಡ್ಡದಲ್ಲಿ ಅಸ್ಥಿಪಂಜರಗಳ ರಾಶಿಯೇ ಪತ್ತೆಯಾಗಿದೆ ಎಂಬ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಆ ಸ್ಥಳವು ಅಕ್ಷರಶಃ ಯುದ್ಧಕಣದಂತೆ ಭಾಸವಾಗುತ್ತಿದೆ ಎಂದು ವರದಿಗಳು ಹೇಳುತ್ತಿವೆ. ಈ ಹಿಂದೆ ಸೌಜನ್ಯಾ ಮನೆಗೆ ಭೇಟಿ ನೀಡಿದ್ದ ಬಿಜೆಪಿ ನಾಯಕರು, ವಿಠಲ್ ಗೌಡರ ಈ ಹೇಳಿಕೆಯ ಬಗ್ಗೆ ಮೌನ ವಹಿಸಿರುವುದೇಕೆ?" ಎಂದು ಪ್ರಿಯಾಂಕ್ ಖರ್ಗೆ ಕೇಳಿದ್ದಾರೆ.

, "ಬಿಜೆಪಿ ಕರ್ನಾಟಕ ಪಕ್ಷದ ನಾಯಕರು ತಾವು ಸೌಜನ್ಯಾ ಕುಟುಂಬದ ಪರವಾಗಿದ್ದೀರೋ ಅಥವಾ ಅವರು ಆರೋಪಿಸುತ್ತಿರುವವರ ಪರವಾಗಿದ್ದೀರೋ ಎಂಬುದನ್ನು ಸ್ಪಷ್ಟಪಡಿಸುವ ಅಗತ್ಯವಿದೆ" ಎಂದು ಪ್ರಿಯಾಂಕ್ ಅವರು ನೇರವಾಗಿ ಸವಾಲು ಹಾಕಿದ್ದಾರೆ.

ವಿಠಲ್ ಗೌಡರ ಹೇಳಿಕೆಗಳೇನು?

ಪ್ರಕರಣದ ಸಾಕ್ಷಿ ಮತ್ತು ದೂರುದಾರರಲ್ಲಿ ಒಬ್ಬರಾದ ವಿಠಲ್ ಗೌಡ, ಇತ್ತೀಚೆಗೆ ಎಸ್‌ಐಟಿ ಅಧಿಕಾರಿಗಳು ತಮ್ಮನ್ನು ಸ್ಥಳ ಮಹಜರಿಗಾಗಿ ಕರೆದೊಯ್ದಿದ್ದಾಗ ಬಂಗ್ಲೆಗುಡ್ಡೆಯಲ್ಲಿ ಹಲವು ಮಾನವ ಅಸ್ಥಿಪಂಜರಗಳನ್ನು ನೋಡಿದ್ದಾಗಿ ಹೇಳಿದ್ದಾರೆ. "ನನ್ನನ್ನು ಎರಡು ಬಾರಿ ಕರೆದೊಯ್ದಾಗ, 10 ಅಡಿ ದೂರದಲ್ಲಿ ಮೂರು ವ್ಯಕ್ತಿಗಳ ಅಸ್ಥಿಪಂಜರಗಳು ಕಂಡುಬಂದವು. ಎರಡನೇ ಸ್ಥಳದಲ್ಲಿ ಕನಿಷ್ಠ ಐವರ ಅಸ್ಥಿಪಂಜರಗಳನ್ನು ನಾನು ನೋಡಿದ್ದೇನೆ, ಅದರಲ್ಲಿ ಒಂದು ಮಗುವಿನ ಮೂಳೆಗಳಿದ್ದವು. ಸ್ಥಳದಲ್ಲಿ ಮಾಟಮಂತ್ರದ ವಸ್ತುಗಳೂ ಇದ್ದವು. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ, ಅವರು ಅವನ್ನು ವಶಕ್ಕೆ ಪಡೆಯಲಿಲ್ಲ" ಎಂದು ವಿಠಲ್ ಗೌಡ ಆರೋಪಿಸಿದ್ದಾರೆ.

Tags:    

Similar News