ಧರ್ಮಸ್ಥಳ ಪ್ರಕರಣ: ಬೆಳ್ತಂಗಡಿ ಠಾಣೆಯಲ್ಲಿ ವಿಚಾರಣೆಗೆ ಹಾಜರಾದ ಯೂಟ್ಯೂಬರ್​ ಎಂಡಿ ಸಮೀರ್​

ಅಧಿಕಾರಿಗಳು ಈ ವಿಡಿಯೋ ಸೃಷ್ಟಿಯ ಹಿಂದಿನ ಉದ್ದೇಶ, ತಂತ್ರಜ್ಞಾನದ ಬಳಕೆ ಮತ್ತು ಇತರ ಸಂಭಾವ್ಯ ಸಹಚರರ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.;

Update: 2025-08-24 08:55 GMT

ಧರ್ಮಸ್ಥಳ ಪ್ರಕರಣದ ಕುರಿತು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ವಿಡಿಯೋ ಸೃಷ್ಟಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮತ್ತು ಸಾರ್ವಜನಿಕ ಶಾಂತಿ ಕದಡಲು ಯತ್ನಿಸಿದ ಆರೋಪ ಎದುರಿಸುತ್ತಿರುವ ಯೂಟ್ಯೂಬರ್ ಸಮೀರ್ ಎಂ.ಡಿ. ಅವರನ್ನು ಭಾನುವಾರ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ವಿಶೇಷ ತನಿಖಾ ತಂಡ (SIT) ತೀವ್ರ ವಿಚಾರಣೆಗೆ ಒಳಪಡಿಸಿದೆ. ಪೊಲೀಸರು ನೀಡಿದ ನೋಟಿಸ್ ಹಿನ್ನೆಲೆಯಲ್ಲಿ ಸಮೀರ್ ವಿಚಾರಣೆಗೆ ಹಾಜರಾಗಿದ್ದಾರೆ.

ಈ ಪ್ರಕರಣವು, ಧರ್ಮಸ್ಥಳದ ಕುರಿತು ಸುಳ್ಳು ಮತ್ತು ಪ್ರಚೋದನಕಾರಿ ಮಾಹಿತಿಗಳನ್ನು ಒಳಗೊಂಡ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಪ್ರಕಟಿಸಿದ ಆರೋಪದ ಮೇಲೆ ಆರಂಭವಾಗಿದೆ. ಈ ವಿಡಿಯೋ ಸಮಾಜದಲ್ಲಿ ಗೊಂದಲ ಸೃಷ್ಟಿಸಿ, ಕೋಮು ಸೌಹಾರ್ದತೆಗೆ ಧಕ್ಕೆ ತರುವ ಸಾಧ್ಯತೆ ಇದೆ ಎಂದು ಪೊಲೀಸರು ಸ್ವಯಂಪ್ರೇರಿತವಾಗಿ (ಸುಮೋಟೋ) ಪ್ರಕರಣ ದಾಖಲಿಸಿಕೊಂಡಿದ್ದರು.

ಜಾಮೀನು ಪಡೆದಿದ್ದ ಸಮೀರ್​

ಪ್ರಕರಣ ದಾಖಲಾಗುತ್ತಿದ್ದಂತೆ ಬಂಧನ ಭೀತಿಯಲ್ಲಿದ್ದ ಸಮೀರ್, ಮಂಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಆಗಸ್ಟ್ 19 ರಂದು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ಸಮೀರ್‌ಗೆ ಜಾಮೀನು ಮಂಜೂರು ಮಾಡಿದ್ದರೂ, ತನಿಖೆಗೆ ಸಂಪೂರ್ಣ ಸಹಕಾರ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಜಾಮೀನು ಪಡೆದ ನಂತರವೂ ಸಮೀರ್ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಪ್ರತ್ಯಕ್ಷವಾಗಿ, ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದರು. ಇದೀಗ ನ್ಯಾಯಾಲಯದ ಆದೇಶ ಮತ್ತು ಪೊಲೀಸರ ಸೂಚನೆಯಂತೆ, ಅವರು ಬೆಳ್ತಂಗಡಿ ಠಾಣೆಯಲ್ಲಿ ಎಸ್‌ಐಟಿ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.

ಅಧಿಕಾರಿಗಳು ಈ ವಿಡಿಯೋ ಸೃಷ್ಟಿಯ ಹಿಂದಿನ ಉದ್ದೇಶ, ತಂತ್ರಜ್ಞಾನದ ಬಳಕೆ ಮತ್ತು ಇತರ ಸಂಭಾವ್ಯ ಸಹಚರರ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. 

Tags:    

Similar News