ಧರ್ಮಸ್ಥಳ ಪ್ರಕರಣ 'ಆರ್ಎಸ್ಎಸ್ vs ಆರ್ಎಸ್ಎಸ್ ' ಕಿತ್ತಾಟ: ಪ್ರಿಯಾಂಕ್ ಖರ್ಗೆ
ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿಯ ನಿಲುವು ಬದಲಾಗುತ್ತಿರುವುದನ್ನು ಟೀಕಿಸಿದ ಖರ್ಗೆ ಅವರು, "ಹಿಂದೆ, ಸೌಜನ್ಯ ಪ್ರಕರಣವನ್ನು ಮರುತನಿಖೆ ಮಾಡಬೇಕೆಂದು ಆಗ್ರಹಿಸಿದ್ದವರೇ ಬಿಜೆಪಿ ನಾಯಕರು ಎಂದು ಹೇಳಿದರು.;
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಬೆಳವಣಿಗೆಗಳು ಒಂದು "ಆರ್ಎಸ್ಎಸ್ ಹಾಗೂ ಆರ್ಎಸ್ಎಸ್ ನಡುವಿನ ಕಿತ್ತಾಟ" ಎಂದು ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಬಿಜೆಪಿ ನಾಯಕರು ನಡೆಸುತ್ತಿರುವ 'ಧರ್ಮಸ್ಥಳ ಚಲೋ' ಹಾಗೂ ಸಿಬಿಐ ತನಿಖೆಗೆ ಆಗ್ರಹಿಸುತ್ತಿರುವ ಬಗ್ಗೆ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿಯ ನಿಲುವು ಬದಲಾಗುತ್ತಿರುವುದನ್ನು ಟೀಕಿಸಿದರು. "ಹಿಂದೆ, ಸೌಜನ್ಯ ಪ್ರಕರಣವನ್ನು ಮರುತನಿಖೆ ಮಾಡಬೇಕೆಂದು ಆಗ್ರಹಿಸಿದ್ದವರೇ ಬಿಜೆಪಿ ನಾಯಕರು. ಸರ್ಕಾರವು ವಿಶೇಷ ತನಿಖಾ ತಂಡ (SIT) ರಚನೆ ಮಾಡಿದಾಗಲೂ ಅವರು ಸುಮ್ಮನಿದ್ದರು. ಆದರೆ ಈಗ ಏಕಾಏಕಿ 'ಧರ್ಮಸ್ಥಳ ಚಲೋ' ನಡೆಸುತ್ತಿದ್ದಾರೆ. ಇದು ಅವರ ದ್ವಂದ್ವ ನಿಲುವನ್ನು ತೋರಿಸುತ್ತದೆ" ಎಂದು ಖರ್ಗೆ ಹೇಳಿದ್ದಾರೆ.
ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಗೆ (CBI) ವಹಿಸಬೇಕೆಂಬ ಬಿಜೆಪಿಯ ಬೇಡಿಕೆಯನ್ನು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. "ಈ ಹಿಂದೆ, ಸಿಬಿಐ ತಮಗಿರುವ ಮಾನವ ಸಂಪನ್ಮೂಲದ ಕೊರತೆಯ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತು. ಅಷ್ಟೇ ಅಲ್ಲದೆ, ರಾಜ್ಯದ 74 ಪ್ರಕರಣಗಳು ಈಗಾಗಲೇ ಸಿಬಿಐ ಮುಂದೆ ತನಿಖೆಗೆ ಬಾಕಿ ಇವೆ. ಈ ವಾಸ್ತವಾಂಶಗಳ ಬಗ್ಗೆ ಬಿಜೆಪಿಯವರು ಏನು ಹೇಳುತ್ತಾರೆ?" ಎಂದು ಅವರು ಸವಾಲು ಹಾಕಿದ್ದಾರೆ.