ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ: 6ನೇ ಜಾಗದಲ್ಲಿ ಅಸ್ಥಿಪಂಜರ ಪತ್ತೆ

ದೂರು ಸಾಕ್ಷಿದಾರ ಗುರುತಿಸಿದ್ದ 6ನೇ ಪಾಯಿಂಟ್​ ನಲ್ಲಿ ಹಿಟಾಚಿ ಬಳಸಿ ಅಗೆಯುವಾಗ ಗುಂಡಿಯಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.;

Update: 2025-07-31 08:20 GMT

ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ನಡೆದ ʼಶವ ಶೋಧʼ ಕಾರ್ಯಾಚರಣೆಯಲ್ಲಿ ಎಸ್‌ಐಟಿ ತಂಡ ಮಹತ್ವದ ಪ್ರಗತಿ ಸಾಧಿಸಿದೆ. ದೂರು ಸಾಕ್ಷಿದಾರ ಗುರುತಿಸಿದ 6 ನೇ ಜಾಗದಲ್ಲಿ ಮನುಷ್ಯನ ಅಸ್ಥಿಪಂಜರ ತ್ತೆಯಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

ನೇತ್ರಾವತಿ ಸೇತುವೆ ಸಮೀಪದ 6ನೇ ಜಾಗದಲ್ಲಿ ಹಿಟಾಚಿ ಯಂತ್ರದ ಬಳಸಿ ಅಗೆಯುತ್ತಿದ್ದಾಗ ಗುಂಡಿಯಲ್ಲಿ ಅಸ್ತಿಪಂಜರ ಪತ್ತೆಯಾಗಿದೆ. ಅಸ್ಥಿಪಂಜರವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.  

ಕಳೆದ ಎರಡು ದಿನಗಳಿಂದ ದೂರು ಸಾಕ್ಷಿದಾರ ಗುರುತಿಸಿದ ಸ್ಥಳಗಳಲ್ಲಿ ಗುಂಡಿ ಅಗೆಯುವ ಕಾರ್ಯ ನಡೆಯುತ್ತಿತ್ತು. ಐದು ಜಾಗಗಳಲ್ಲಿ ಯಾವುದೇ ಕುರುಹು ಪತ್ತೆಯಾಗಿರಲಿಲ್ಲ. ಆರನೇ ಜಾಗದಲ್ಲಿ ಅಸ್ಥಿಪಂಜರ ಪತ್ತೆಯಾಗಿರುವುದರಿಂದ ಎಸ್‌ಐಟಿ ತನಿಖೆಗೆ ಮಹ್ವತದ ಸುಳಿವು ಸಿಕ್ಕಂತಾಗಿದೆ. ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಆರನೇ ಜಾಗದ ನಕ್ಷೆ ಪರಿಶೀಲನೆ ನಡೆಸಿದ್ದಾರೆ. 

ಶವ ಶೋಧ ನಡೆಸುವ ಸ್ಥಳದಲ್ಲಿ ನೇತ್ರಾವತಿ ನದಿ ನೀರಿನ ಒರತೆ ಇದ್ದ ಕಾರಣ, ಗುಂಡಿಯಲ್ಲಿ ನೀರು ತುಂಬಿತು. ನೀರನ್ನು ಹೊರ ತೆಗೆಯಲು ಪಂಪ್ ಸೆಟ್ ತರಿಸಿದ ಅಧಿಕಾರಿಗಳು ಮುಂದಿನ ಕ್ರಮ ಕೈಗೊಂಡರು ಎನ್ನಲಾಗಿದೆ. ಬುಧವಾರವಷ್ಟೇ ಮೊದಲ ಗುಂಡಿಯಲ್ಲಿ ಪಾನ್‌ ಕಾರ್ಡ್‌ ಹಾಗೂ ಬ್ಯಾಂಕ್‌ ಎಟಿಎಂ ಕಾರ್ಡ್‌ ಪತ್ತೆಯಾಗಿತ್ತು ಎಂದು ಹೇಳಲಾಗಿತ್ತು. ಆದರೆ, ಅಸ್ಥಿಗಳು ಪತ್ತೆಯಾಗಿರಲಿಲ್ಲ.

ಮೂರನೇ ದಿನದ ಶೋಧ ಕಾರ್ಯಾಚರಣೆಗೆ ಹಿಟಾಚಿ ಬಳಸಲಾಗಿತ್ತು. ಸಾಕ್ಷಿ ದೂರುದಾರ ಗುರುತಿಸಿದ 13 ಜಾಗಗಳಲ್ಲಿ ಈಗ ಆರು ಜಾಗಗಳಲ್ಲಿ ಶೋಧ ನಡೆಸಲಾಗಿದೆ. ಇನ್ನೂ 7 ಪಾಯಿಂಟ್‌ಗಳನ್ನು ಅಗೆಯುವುದು ಬಾಕಿ ಇದೆ. 

ಅಸ್ಥಿಪಂಜರ ವೀಕ್ಷಿಸಲು ಜನಜಂಗುಳಿ

ನೇತ್ರಾವತಿ ಸೇತುವೆ ಬಳಿ ಪತ್ತೆಯಾದ ಅಸ್ಥಿಪಂಜರ ವೀಕ್ಷಿಸಲು ಜನಜಾತ್ರೆಯೇ ಸೇರಿದೆ. ಆದರೆ, ಇದಕ್ಕೆ ಅವಕಾಶ ಕೊಡದ ಎಸ್‌ಐಟಿ ಅಧಿಕಾರಿಗಳು ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಸೂಕ್ಷ್ಮವಾಗಿ ಅಸ್ಥಿಪಂಜರವನ್ನು ಪರೀಕ್ಷೆಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ. 

ಇನ್ನು ಅಸ್ಥಿ ಪಂಜರ ದೊರೆತ ಸ್ಥಳದಲ್ಲಿಯೇ ಎಸ್‌ಐಟಿ ಅಧಿಕಾರಿಗಳು ಸಾಕ್ಷಿ ದೂರುದಾರನಿಂದ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯುತ್ತಿದ್ದಾರೆ.

Full View


 

Live Updates
2025-07-31 11:40 GMT

ಮಾನವನ ಮೂಳೆ ದೊರೆತಿರುವ ಆರನೇ ಪಾಯಿಂಟ್‌ ಸಂರಕ್ಷಣೆಗೆ ಎಸ್‌ಐಟಿ ಅಧಿಕಾರಿಗಳು ನಿರ್ಧರಿಸಿದ್ದು, ಹಿಟಾಚಿಯಲ್ಲಿ ಅಗೆದಿರುವ ಗುಂಡಿಯ ಮೇಲೆ ಶೀಟ್‌ ಅಳವಡಿಸುವ ಮೂಲಕ ನೀರು ನುಗ್ಗದಂತೆ ಕ್ರಮವಹಿಸಲಾಗಿದೆ. ಸ್ಥಳದಲ್ಲಿ 66ಕ್ಕೂ ಹೆಚ್ಚು ಪೌರ ಕಾರ್ಮಿಕರು ಕಂಬಿ ಹಾಗೂ ಶೀಟ್‌ ಅಳವಡಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

 

2025-07-31 11:08 GMT

ನೇತ್ರಾವತಿ ಸೇತುವೆ ಬಳಿಯ ಆರನೇ ಪಾಯಿಂಟ್‌ನಲ್ಲಿ ಮಹಜರ್‌ ಕಾರ್ಯ ಕೆಲವೇ ಕ್ಷಣದಲ್ಲಿ ಮುಕ್ತಾಯವಾಗಲಿದೆ. ಏಳನೇ ಪಾಯಿಂಟ್‌ ಶೋಧ ನಡೆಸಲು ಎಸ್‌ಐಟಿ ಅಧಿಕಾರಿಗಳ ತಂಡ ಪುತ್ತೂರು ಉಪ ವಿಭಾಗಾಧಿಕಾರಿ ಅನುಮತಿಗಾಗಿ ಕಾಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಎಸಿ ಅವರ ಅನುಮತಿ ದೊರೆತ ನಂತರ ಏಳನೇ ಪಾಯಿಂಟ್‌ಲ್ಲಿ ಶೋಧ ಕಾರ್ಯ ನಡೆಯಲಿದೆ.    

 

2025-07-31 09:35 GMT

ನೇತ್ರಾವತಿ ಸೇತುವೆ ಬಳಿಯ ಆರನೇ ಪಾಯಿಂಟ್‌ನಲ್ಲಿ ಎಸ್‌ಐಟಿ ಅಧಿಕಾರಿಗಳು ಶೋಧಕಾರ್ಯ ಮುಕ್ತಾಯಗೊಳಿಸಿದ್ದು ಸಂರಕ್ಷಿತ ಜಾಗ ಎಂದು ಅಧಿಕಾರಿಗಳು ಗುರುತಿಸಿದ್ದಾರೆ. ಈ ಜಾಗದ ಸುತ್ತಮುತ್ತ ಪರದೆಯನ್ನು ಕಟ್ಟಲಾಗಿದೆ. ಶ್ವಾನದಳವೂ ಸ್ಥಳಕ್ಕೆ ಆಗಮಿಸಿದ್ದು ಹೆಚ್ಚಿನ ತನಿಖೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ಮೂಳೆ ದೊರೆತ ನಂತರ ಎಸ್‌ಐಟಿ ಅಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿರುವ ನಾಪತ್ತೆ ಪ್ರಕರಣಗಳ ಮಾಹಿತಿ ನೀಡುವಂತೆ ತಿಳಿಸಿದೆ ಎಂದು ಮೂಲಗಳು ತಿಳಿಸಿವೆ.

 

 

2025-07-31 09:21 GMT

ಧರ್ಮಸ್ಥಳದಲ್ಲಿ ನಡೆದಿರುವ ಅಸಹಜ ಸಾವುಗಳ ಕುರಿತು ಮಾಹಿತಿ ನೀಡಲು ಎಸ್‌ಐಟಿ ಅಧಿಕಾರಿಗಳು ಸಹಾಯವಾಣಿ ಸಂಖ್ಯೆಯನ್ನು ಆರಂಭಿಸಿದ್ದಾರೆ. 82779 86369 ಸಂಖ್ಯೆಗೆ ವಾಟ್ಸ್‌ ಆಪ್‌ ಮೂಲಕ, ಇಲ್ಲವೇ 0824-2005301 ದೂರವಾಣಿ ಮೂಲಕ ಅಥವಾ sitdps@ksp.gov.in ನಲ್ಲಿ ಇಮೇಲ್ ಮೂಲಕ ಮಾಹಿತಿ ಹಂಚಿಕೊಳ್ಳಬಹುದು ಎಂದು ಎಸ್‌ಐಟಿ ಪ್ರಕಟಣೆಯಲ್ಲಿ ತಿಳಿಸಿದೆ.

ಮಂಗಳೂರಿನ ಕದ್ರಿಯ ಮಲ್ಲಿಕಟ್ಟೆಯಲ್ಲಿರುವ ಪ್ರವಾಸಿ ಮಂದಿರದಲ್ಲಿ ತೆರೆದಿರುವ ಎಸ್‌ಐಟಿ ತಾತ್ಕಾಲಿಕ ಕಚೇರಿಯಲ್ಲಿ ತಂಡವನ್ನು ಸಂಪರ್ಕಿಸಿ ಕೂಡ ಮಾಹಿತಿ ನೀಡಬಹುದು ಎಂದು ಎಸ್‌ಐಟಿ ಹೇಳಿದೆ.

 

2025-07-31 09:04 GMT

ನೇತ್ರಾವತಿ ಸೇತುವೆ ಬಳಿಯ ಆರನೇ ಪಾಯಿಂಟ್‌ನಲ್ಲಿ ಪುರುಷನ ಮೂಳೆ ದೊರೆತಿದ್ದು ಎಸ್‌ಐಟಿ ಅಧಿಕಾರಿಗಳು ವೈಜ್ಞಾನಿಕವಾಗಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಪೊಲೀಸ್‌ ಅಧಿಕಾರಿಗಳ ತಂಡ ಸ್ಥಳದ ಲೊಕೇಶನ್‌, ಪೋಟೊ ಹಾಗೂ ಮಾಹಿತಿಯನ್ನು ಲ್ಯಾಪ್‌ಟಾಪ್‌ನಲ್ಲಿ ದಾಖಲಿಸಿಕೊಂಡಿದ್ದಾರೆ. ಸ್ಥಳದಲ್ಲಿ ಮತ್ತೆ ಹಿಟಾಚಿ ಮೂಲಕ ಅಗೆಯುವ ಕಾರ್ಯ ನಡೆಯುತ್ತಿದೆ.  

 

2025-07-31 08:50 GMT

ಅನಾಮಿಕ ದೂರುದಾರ ನೀಡಿದ್ದ ಹೇಳಿಕೆಯಂತೆ ನೇತ್ರಾವತಿ ಸೇತುವೆ ಬಳಿಯ ಆರನೇ ಪಾಯಿಂಟ್‌ನಲ್ಲಿ ಪುರುಷನ ಮೂಳೆಗಳು ದೊರೆತಿವೆ. ದೂರುದಾರನ ಸಮ್ಮುಖದಲ್ಲೇ ಎಸ್‌ಐಟಿ ಅಧಿಕಾರಿಗಳು ಮೂಳೆಗಳು ಸಿಕ್ಕ ಜಾಗದಲ್ಲಿ ಮತ್ತಷ್ಟು ಆಳ ತೋಡಲು ತೀರ್ಮಾನಿಸಿದ್ದು ಮತ್ತಷ್ಟು ಮೂಳೆಗಳು ದೊರೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. 

 

2025-07-31 08:37 GMT

ಧರ್ಮಸ್ಥಳದಲ್ಲಿ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡಕ್ಕೆ ಆರನೇ ಜಾಗದಲ್ಲಿ ಸಿಕ್ಕಿರುವ ಮೃತದೇಹ ಗಂಡಸಿನ ಮೃತದೇಹದಂತಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ. ವಿಧಿ ವಿಜ್ಞಾನ ತಂಡ ಸ್ಥಳದಲ್ಲೇ ಇದ್ದು ಮೃತ ದೇಹವನ್ನು ವೈಜ್ಞಾನಿಕ ರೀತಿಯಲ್ಲಿ ಸಂಗ್ರಹಿಸಲು ಮುಂದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

2025-07-31 08:28 GMT

ಕೇಂದ್ರ ಸರ್ಕಾರದ ಡೆಪ್ಯೂಟೇಷನ್ ಪಟ್ಟಿಯಲ್ಲಿ ಎಸ್‌ಐಟಿ ಮುಖ್ಯಸ್ಥರಾಗಿರುವ ಪೊಲೀಸ್ ಮಹಾನಿರ್ದೇಶಕ ಪ್ರಣವ್ ಮೊಹಾಂತಿ ಹೆಸರಿದ್ದು, ಅವರನ್ನು ಕೇಂದ್ರ ಸೇವೆಗೆ ಕಳುಹಿಸುವ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಸ್ಪಷ್ಟಪಡಿಸಿದರು‌.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಗ್ಗೆ ಬಹಳಷ್ಟು ತಪ್ಪುಕಲ್ಪನೆಗಳನ್ನು ಹುಟ್ಟುಹಾಕಲಾಗುತ್ತಿದೆ. ಡಿಜಿ ಹಂತದ ಅಧಿಕಾರಿಯನ್ನು ಎಸ್‌ಐಟಿ ಮುಖ್ಯಸ್ಥರನ್ನಾಗಿ ಮಾಡಬೇಕು ಎಂದು ಸರ್ಕಾರ ತೀರ್ಮಾನ ಮಾಡಿತು. ಪ್ರಣವ್ ಮೊಹಾಂತಿ ಅವರನ್ನು ನೇಮಿಸಿದ್ದೇವೆ. ಕೇಂದ್ರ ಸರ್ಕಾರದ ಡೆಪ್ಯೂಟೇಷನ್ ಪಟ್ಟಿಯಲ್ಲಿ ಅವರ ಹೆಸರಿದೆ.‌ ಅವರನ್ನು ಕೇಂದ್ರದ ಸೇವೆಗೆ ಕಳುಹಿಸುವ ಬಗ್ಗೆ ರಾಜ್ಯ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಹೇಳಿದರು.

 

2025-07-31 08:27 GMT

ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣ ಸಂಬಂಧ ಬುಧವಾರ ಹೊಸ ಬೆಳವಣಿಗೆಯಾಗಿತ್ತು. 22 ವರ್ಷಗಳಿಂದ ಕಾಣೆಯಾಗಿರುವ ಅನನ್ಯಾ ಭಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ಕಾರ್ಯಗಳಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಸೈಟ್ ನಂ.1ನಲ್ಲಿ ಅಗೆತದ ವೇಳೆ ಸುಮಾರು 2.5 ಅಡಿಗಳ ಆಳದಲ್ಲಿ ಕೆಂಪು ಬಟ್ಟೆ, ಪ್ಯಾನ್ ಕಾರ್ಡ್ ಮತ್ತು ಎಟಿಎಂ ಕಾರ್ಡ್‌ಗಳು ಪತ್ತೆಯಾಗಿದ್ದವು ಎಂದು ಮೂಲಗಳು ತಿಳಿಸಿವೆ.

Tags:    

Similar News