ಪೊಲೀಸ್‌ ಠಾಣೆಗೆ ಬರುವ ಸಾರ್ವಜನಿಕರೊಂದಿಗೆ ಸಂಯಮದಿಂದ ವರ್ತಿಸಲು ಡಿಜಿ-ಐಜಿಪಿ ಸೂಚನೆ

ಸಾರ್ವಜನಿಕರು ಪೊಲೀಸ್‌ ಠಾಣೆಗಳಿಗೆ ಹೋಗಲು ಇಂದಿಗೂ ಹಿಂಜರಿಯುತ್ತಾರೆ. ದೂರು ನೀಡಲು ಹೋಗವವರನ್ನೇ ಪೊಲೀಸರು ಆರೋಪಿಗಳಂತೆ ನೋಡುವುದು, ಅವರ ಬಳಿಯೇ ಲಂಚ ಪಡೆಯುವುದು, ಧಮ್ಕಿ ಹಾಕುವುದು, ಸುಳ್ಳು ಪ್ರಕರಣಗಳನ್ನು ದಾಖಲಿಸುವಂತೆ ಬೆದರಿಸಲಾಗುತ್ತದೆ ಎಂಬ ಆರೋಪವಿದೆ.;

Update: 2025-05-16 09:34 GMT

ಪೊಲೀಸ್‌ ಠಾಣೆ ಹಾಗೂ ಡಿಜಿ-ಐಜಿಪಿ ಪ್ರಕಟಿಸಿರುವ ಪತ್ರ

ರಾಜ್ಯದಲ್ಲಿನ ಪೊಲೀಸ್‌ ಠಾಣೆಗಳು ಸದಾ ಜನಸ್ನೇಹಿಯಾಗಿರಬೇಕು ಎಂಬ ಕಲ್ಪನೆಯೊಂದಿಗೆ ಸರ್ಕಾರ ಹಲವಾರು ನಿಯಮಗಳನ್ನು ಜಾರಿಗೊಳಿಸಿದೆ. ಠಾಣೆಗಳಗೆ ದೂರು ನೀಡಲು ಬರುವ ಜನರೊಂದಿಗೆ ಹೇಗಿರಬೇಕು ಎಂದು ಹಿರಿಯ ಅಧಿಕಾರಿಗಳು ಅನೇಕ ಸಲ ತಿಳಿಸಿದ್ದರೂ ಹಲವು ಠಾಣೆಗಳಲ್ಲಿ ಯಾವುದೇ ಸುಧಾರಣೆಯಾಗಿಲ್ಲ. ಇದೀಗ ಪೊಲೀಸ್‌ ಮಹಾನಿರ್ದೇಶಕರು ಠಾಣೆಗಳಿಗೆ ಬರುವ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಮತ್ತೊಮ್ಮೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಸಾರ್ವಜನಿಕರು ಪೊಲೀಸ್‌ ಠಾಣೆಗಳಿಗೆ ಹೋಗಲು ಇಂದಿಗೂ ಹಿಂಜರಿಯುತ್ತಾರೆ. ದೂರು ನೀಡಲು ಹೋಗವವರನ್ನೇ ಪೊಲೀಸರು ಆರೋಪಿಗಳಂತೆ ನೋಡುವುದು, ಅವರ ಬಳಿಯೇ ಲಂಚ ಪಡೆಯುವುದು, ಧಮ್ಕಿ ಹಾಕುವುದು, ಸುಳ್ಳು ಪ್ರಕರಣಗಳನ್ನು ದಾಖಲಿಸುವಂತೆ ಬೆದರಿಸಲಾಗುತ್ತದೆ ಎಂಬ ಆರೋಪಗಳಿವೆ. ಇದರಿಂದಾಗಿ ಎಷ್ಟೋ ಜನರು ಪೊಲೀಸ್‌ ಠಾಣೆಯ ಸಹವಾಸವೇ ಬೇಡ ಎಂದು ದೂರ ಉಳಿಯುತ್ತಾರೆ. 

ಠಾಣೆಗಳಿಗೆ ಬರುವ ಜನರನ್ನು ಬೆದರಿಸಿ ಲಂಚ ಪಡೆಯುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಬಸವನಗುಡಿ ಠಾಣೆಯಲ್ಲಿ ಪೊಲೀಸ್‌ ಇನ್ಸ್‌ಪೆಕ್ಟರ್‌  ದೂರುದಾರರೊಬ್ಬರಿಗೆ ಕುರ್ಚಿಯಲ್ಲಿ ಕುಳಿತುಕೊಳ್ಳಲು ಅವಕಾಶ ನೀಡದೆ ಅವರ ಹಕ್ಕುಗಳನ್ನು ನಿರಾಕರಿಸಿರುವುದು ತನಿಖೆಯಿಂದ ಸಾಬೀತಾಗಿತ್ತು. ಆದ್ದರಿಂದ ರಾಜ್ಯ ಮಾನವ ಹಕ್ಕುಗಳ ಆಯೋಗವು ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೌಜನ್ಯದಿಂದ ವರ್ತಿಸಲು ಸೂಚನೆ ನೀಡುವಂತೆ ಪೊಲೀಸ್‌ ಮಹಾ ನಿರ್ದೇಶಕರಿಗೆ ಪತ್ರ ಬರೆದು ಸೂಚಿಸಿತ್ತು. 

ಇದೀಗ ಎಲ್ಲ ಪೊಲೀಸ್‌ ಆಯುಕ್ತರು, ವಲಯ ಅಧಿಕಾರಿಗಳು, ಕೆ.ಜಿ.ಎಫ್‌, ರೈಲ್ವೇಸ್‌ ಸೇರಿದಂತೆ ಜಿಲ್ಲಾ ಪೊಲೀಸ್‌ ಅಧೀಕ್ಷಕರುಗಳಿಗೆ ಪತ್ರ ಬರೆದಿರುವ ಪೊಲೀಸ್‌ ಮಹಾನಿರ್ದೇಶಕರು ತಮ್ಮ ವ್ಯಾಪ್ತಿಯ ಠಾಣೆಗಳಿಗೆ ಬರುವ ಸಾರ್ವಜನಿಕರ ಹಕ್ಕುಗಳಿಗೆ ದಕ್ಕೆಯಾಗದಂತೆ ಸೌಜನ್ಯದಿಂದ ವರ್ತಿಸುವಂತೆ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಲು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್‌ ಕಳವಳ

ಪೊಲೀಸ್‌ ಠಾಣೆಗಳಲ್ಲೇ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದರ ಬಗ್ಗೆ ಹಲವು ಬಾರಿ ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸಿತ್ತು. ದೌರ್ಜನ್ಯಗಳನ್ನು ನಿಯಂತ್ರಿಸಲು ಹಾಗೂ ಸೌಜನ್ಯದಿಂದ ವರ್ತಿಸಲು ಪೊಲೀಸರಿಗೆ ತರಬೇತಿ ನೀಡುವ ಅವಶ್ಯಕತೆಯಿದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದರು.

ಪೊಲೀಸ್‌ ದೂರು ಪ್ರಾಧಿಕಾರ

ಠಾಣೆಗಳಲ್ಲಿ ಪೊಲೀಸರ ದೌರ್ಜನ್ಯ ತಡೆಯುವ ಉದ್ದೇಶದಿಂದ ರಾಜ್ಯ ಸರ್ಕಾರ ಪೊಲೀಸ್‌ ದೂರು ಪ್ರಾಧಿಕಾರ ರಚನೆ ಮಾಡಿದ್ದು ಪೊಲೀಸರಿಂದ ದೌರ್ಜನ್ಯಕ್ಕೆ ಒಳಗಾದವರು ಪ್ರಾಧಿಕಾರಕ್ಕೆ ದೂರು ನೀಡಬಹುದಾಗಿದೆ. ಮಾನವಹಕ್ಕುಗಳ ಕುರಿತು ರಾಜ್ಯ ಮಾನವ ಹಕ್ಕುಗಳ ಆಯೋಗವು ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದೆ. 


Tags:    

Similar News