ದೇವನಹಳ್ಳಿ ಭೂಸ್ವಾಧೀನ ವಿರೋಧಿ ಹೋರಾಟ | ರೈತರ ಒಗ್ಗಟ್ಟಿನ ಮಂತ್ರಕ್ಕೆ ದಕ್ಕಿದ ಜಯ
ಮೂರು ಬಾರಿ ಭೂಸ್ವಾಧೀನ ಪ್ರಕ್ರಿಯೆಯಿಂದ ಭೂಮಿ ಕಳೆದುಕೊಂಡಿದ್ದ ರೈತರು ರಾಜ್ಯ ಸರ್ಕಾರದ ಹೊಸ ಭೂ ಸ್ವಾಧೀನ ಪ್ರಕ್ರಿಯೆಗೆ ಪ್ರತಿರೋಧ ವ್ಯಕ್ತಪಡಿಸಿ ನಡೆಸಿದ್ದ ಅನಿರ್ದಿಷ್ಟಾವಧಿ ಹೋರಾಟ 1198ದಿನ ಮುಟ್ಟಿದೆ.;
ರಾಜ್ಯದಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ವಿರೋಧಿಸಿ ನಡೆದ ಬೃಹತ್ ಹೋರಾಟಕ್ಕೆ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ರೈತರ ಹೋರಾಟ ಸಾಕ್ಷಿಯಾಗಿ, ಜಯದ ಇತಿಹಾಸ ಬರೆದಿದೆ. ಹೋಬಳಿಯ 13 ಗ್ರಾಮಗಳ ರೈತರ 1200 ದಿನಗಳ ಅನಿರ್ದಿಷ್ಟ ಧರಣಿ ಕೊನೆಗೂ ಫಲ ನೀಡಿದ್ದು, ರಾಜ್ಯ ಸರ್ಕಾರ ಭೂ ಸ್ವಾಧೀನ ಪ್ರಕ್ರಿಯೆಯನ್ನು ರದ್ದುಪಡಿಸಿದೆ.
2022 ಜನವರಿ 1 ರಂದು ಇಡೀ ದೇಶವೇ ಹೊಸ ವರ್ಷದ ಸಂಭ್ರಮದಲ್ಲಿದ್ದರೆ, ಚನ್ನರಾಯಪಟ್ಟಣ ಹೋಬಳಿ ರೈತರಿಗೆ ಅಂದು ಕರಾಳ ದಿನವಾಗಿ ಮಾರ್ಪಟ್ಟಿತ್ತು. ಹರಳೂರು ಕೈಗಾರಿಕಾ ಪ್ರದೇಶಾಭಿವೃದ್ಧಿಯ ಎರಡನೇ ಹಂತದ ವಿಸ್ತರಣೆಗಾಗಿ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಚನ್ನರಾಯಪಟ್ಟಣ, ಪಾಳ್ಯ, ಮಟ್ಟು ಬಾರ್ಲು, ಪೋಲನಹಳ್ಳಿ, ಹರಳೂರು, ಟಿ. ತೆಲ್ಲೋಹಳ್ಳಿ, ನಲ್ಲೂರು, ಮುದ್ದೇನಹಳ್ಳಿ, ಚೀಮಾಚನಹಳ್ಳಿ, ನಲಪ್ಪನಹಳ್ಳಿ, ಮಲ್ಲೆಪುರ, ಹ್ಯಾಡಾಳು ಮತ್ತು ಗೊಕರೆ ಬಚ್ಚಹಳ್ಳಿ ಗ್ರಾಮಗಳ 1777.28 ಎಕರೆ ಭೂಸ್ವಾಧೀನಕ್ಕೆ ಕೆಐಎಡಿಬಿ ಜ. 28 ರಂದು ನೋಟೀಸ್ ನೀಡಿತು.
ಅದಾಗಲೇ ಮೂರು ಬಾರಿ ಭೂಸ್ವಾಧೀನ ಪ್ರಕ್ರಿಯೆಯಿಂದ ಭೂಮಿ ಕಳೆದುಕೊಂಡಿದ್ದ ರೈತರು ರಾಜ್ಯ ಸರ್ಕಾರ ಹೊಸ ಭೂಸ್ವಾಧೀನ ಪ್ರಕ್ರಿಯೆಗೆ ಪ್ರತಿರೋಧ ವ್ಯಕ್ತಪಡಿಸಿ, ಜ.28 ರಂದೇ ನೋಟಿಸ್‌ಗಳನ್ನು ಸುಟ್ಟು ಧರಣಿ ಆರಂಭಿಸಿದರು. ಅಂದು ಆರಂಭವಾದ ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟ ಇಂದು 1198ದಿನ ಮುಟ್ಟಿದೆ. ಅಂದರೆ ಬರೋಬ್ಬರಿ ಮೂರುವರೆ ವರ್ಷದದಲ್ಲಿ ಹಲವು ರೀತಿಯ ಹೋರಾಟಗಳನ್ನು ನಡೆಸುವ ಮೂಲಕ ರೈತರು ಸರ್ಕಾರದ ಮೇಲೆ ಒತ್ತಡ ಹೇರಿದ್ದರು.
ಚನ್ನರಾಯಪಟ್ಟಣ ಹೋರಾಟ ರಾಜ್ಯವಲ್ಲದೇ ದೇಶವ್ಯಾಪಿ ಹೆಚ್ಚು ಚರ್ಚೆಗೆ ಒಳಗಾಯಿತು. ಪಂಜಾಬ್-ಹರ್ಯಾಣ ರೈತ ಮುಖಂಡ ರಾಜೇಶ್ ಟಿಕಾಯತ್ ಸೇರಿದಂತೆ ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಕೂಡ ಇಲ್ಲಿನ ರೈತರ ಹೋರಾಟ ಬೆಂಬಲಿಸಿದರು. ದಿನ ಕಳೆದಂತೆ ಕಾರ್ಮಿಕ, ದಲಿತ ಹಾಗೂ ಪ್ರಗತಿ ಪರ ಸಂಘಟನೆಗಳ ಬೆಂಬಲ ಸಿಕ್ಕಿದಂತೆ ಹೋರಾಟದ ಕಾವು ತೀವ್ರವಾಯಿತು.
2022 ಫೆಬ್ರವರಿ 16 ರಂದು ಜಿಲ್ಲಾಧಿಕಾರಿ ಕಚೇರಿಗೆ ರೈತರು ಟ್ರ್ಯಾಕ್ಟರ್ ಯಾತ್ರೆ ನಡೆಸಿದರು. ಅಧಿಕೃತವಾಗಿ ಏಪ್ರಿಲ್ 4 ರಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು. ಅಂದಿನ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಭೂಸ್ವಾಧೀನ ಪ್ರಕ್ರಿಯೆ ಕೈಬಿಡಲು ನಾವೂ ಕೂಡ ಆಗ್ರಹಿಸುತ್ತೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರಕ್ರಿಯೆ ರದ್ದುಗೊಳಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡೂವರೆ ವರ್ಷ ಕಳೆದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹಾಗಾಗಿ ಹೋರಾಟ ದೀರ್ಘವಾಯಿತು. ಇತ್ತೀಚೆಗೆ 1000ದಿನ ಪೂರ್ಣಗೊಂಡಾಗಲೂ ರೈತರು ಜಿಲ್ಲಾಧಿಕಾರಿ ಕಚೇರಿಗೆ ಟ್ರ್ಯಾಕ್ಟರ್, ಎತ್ತಿನಗಾಡಿ ಮೂಲಕ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಭೂಮಿ ಕಳೆದುಕೊಳ್ಳುವ ಆತಂಕ ಎದುರಾಗಿತ್ತು
ಚನ್ನರಾಯಪಟ್ಟಣದ ಸುಮಾರು 387 ಕುಟುಂಬಗಳಿ ಸಂಪೂರ್ಣ ಭೂಮಿ ಕಳೆದುಕೊಳ್ಳುವ ಆತಂಕಕ್ಕೆ ಒಳಗಾಗಿದ್ದವು. ಭೂಸ್ವಾಧೀನ ಪ್ರಕ್ರಿಯೆ ನಡೆದರೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದ 162 ಕುಟುಂಬಗಳ 859 ಜನರು, ಒಕ್ಕಲಿಗ ಮತ್ತಿತರೆ ಓಬಿಸಿಯ 224 ಕುಟುಂಬಗಳಿಗೆ ಸೇರಿದ 2130 ಜನರು ಭೂರಹಿತರಾಗಬೇಕಾಗಿತ್ತು.
ಏರೋಸ್ಪೇಟ್ ಪಾರ್ಕ್ ಸ್ಥಾಪನೆಗಾಗಿ ಭೂಸ್ವಾಧೀನಕ್ಕೆ ಹೆಚ್ಚು ಉತ್ಸಾಹ ತೋರಿದ್ದ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಸರ್ಕಾರದ ಪರವಾಗಿ ಭೂಸ್ವಾಧೀನವನ್ನು ಸಮರ್ಥಿಸಿಕೊಂಡಿದ್ದರು. ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅವರು ಬೇರೆ ಬೇರೆ ಕಾರಣಗಳಿಂದ ಭೂಸ್ವಾಧೀನದ ಪರವಾಗಿದ್ದರು. ಚನ್ನರಾಯಪಟ್ಟಣ ರೈತರು ಹಲವು ಬಾರಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾದಾಗಲೂ ಯಾವುದೇ ರೀತಿಯ ಭರವಸೆ ನೀಡಿರಲಿಲ್ಲ. ಇದು ರೈತರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು.
ಮಂಗಳವಾರ ಸಿಎಂ ಸಿದ್ದರಾಮಯ್ಯ ಅವರು ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವ ತೀರ್ಮಾನ ಪ್ರಕಟ ಮಾಡುತ್ತಿದ್ದಂತೆ ಈ ಇಬ್ಬರು ಸಚಿವರ ಮುಖಭಾವವೇ ಬದಲಾಗಿತ್ತು.