ಭೂಸ್ವಾಧೀನ ವಾಪಸ್: ಏರೋಸ್ಪೇಸ್ ಹೂಡಿಕೆಗಳಿಗೆ ಪರ್ಯಾಯಗಳೇನು? ಎಲ್ಲರೂ ಆಂಧ್ರಕ್ಕೆ ಹೋಗುತ್ತಾರೆಯೇ?

ಭೂಸ್ವಾಧೀನದ ಅಧಿಸೂಚನೆಯನ್ನು ಹಿಂಪಡೆದ ಕೂಡಲೇ, ಆಂಧ್ರಪ್ರದೇಶವು ತಕ್ಷಣ ಕಾರ್ಯಪ್ರವೃತ್ತವಾಯಿತು. ಐಟಿ ಸಚಿವ ನಾರಾ ಲೋಕೇಶ್ ಏರೋಸ್ಪೇಸ್ ಕಂಪನಿಗಳಿಗೆ ಆಂಧ್ರಕ್ಕೆ ಸ್ಥಳಾಂತರಗೊಳ್ಳಲು ಮುಕ್ತ ಆಹ್ವಾನವನ್ನು ನೀಡಿದ್ದಾರೆ.;

Update: 2025-07-16 13:26 GMT

ಬೆಂಗಳೂರು ವಿಮಾನ ನಿಲ್ದಾಣದ ಸಮೀಪದ ದೇವನಹಳ್ಳಿಯ ಚನ್ನರಾಯಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸುಮಾರು 1,777 ಎಕರೆ ಕೃಷಿ ಭೂಮಿಯನ್ನು ಕೈಗಾರಿಕಾ ಮತ್ತು ವಿಶೇಷವಾಗಿ ಏರೋಸ್ಪೇಸ್ ಕೈಗಾರಿಕೆಗಳಿಗಾಗಿ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಮಂಗಳವಾರ (ಜುಲೈ15ರಂದು) ರದ್ದುಗೊಳಿಸಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು. ಮೂರು ವರ್ಷಗಳಿಗೂ ಹೆಚ್ಚು ಕಾಲ ನಡೆದ ರೈತರ ನಿರಂತರ ಪ್ರತಿಭಟನೆಗಳ ಬಳಿಕ ಈ ಮಹತ್ವದ ನಿರ್ಧಾರಕ್ಕೆ ಬಂದಿದೆ. ಹೀಗಾಗಿ, ಪ್ರಸ್ತುತ ಈ ಪ್ರದೇಶದಲ್ಲಿ ಸ್ಥಾಪನೆಯಾಗಲು ಸಿದ್ದಗೊಂಡಿದ್ದ ಕಂಪನಿಗಳ ಕತೆ ಏನು ಎಂಬ ಚರ್ಚೆ ಆರಂಭಗೊಂಡಿದೆ. ಭೂಮಿ ಸಿಗದೇ ಏರೋಸ್ಪೇಸ್ ಕಂಪನಿ ಸ್ಥಾಪನೆ ಸಾಧ್ಯವಿಲ್ಲ. ಹಾಗಾದರೆ ಈ ಕಂಪನಿಗಳಿಗೆ ರಾಜ್ಯ ಸರ್ಕಾರ ಏನು ಪರಿಹಾರ ನೀಡುತ್ತದೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.

ಕರ್ನಾಟಕವು ಭೂಸ್ವಾಧೀನದ ಅಧಿಸೂಚನೆಯನ್ನು ಹಿಂಪಡೆದ ಕೂಡಲೇ, ಆಂಧ್ರಪ್ರದೇಶವು ತಕ್ಷಣ ಕಾರ್ಯಪ್ರವೃತ್ತವಾಯಿತು. ಐಟಿ ಸಚಿವ ನಾರಾ ಲೋಕೇಶ್ ಏರೋಸ್ಪೇಸ್ ಕಂಪನಿಗಳಿಗೆ ಆಂಧ್ರಕ್ಕೆ ಸ್ಥಳಾಂತರಗೊಳ್ಳಲು ಮುಕ್ತ ಆಹ್ವಾನವನ್ನು ನೀಡಿದ್ದಾರೆ, 8,000 ಎಕರೆ ಸಿದ್ಧವಾಗಿರುವ ಭೂಮಿ, ಆಕರ್ಷಕ ಪ್ರೋತ್ಸಾಹಗಳು ಮತ್ತು ವೇಗದ ಅನುಮೋದನೆಗಳನ್ನು ನೀಡುವ ಭರವಸೆಯನ್ನು ನೀಡಿದ್ದಾರೆ. ಹೀಗಾಗಿ ಕೈಗಾರಿಕೆಗಳನ್ನು ನೆರೆಯ ಆಂಧ್ರಕ್ಕೆ ಬಿಟ್ಟುಕೊಡಲಾಗಿದೆ ಎಂಬ ಅಪವಾದವೂ ರಾಜ್ಯ ಸರ್ಕಾರಕ್ಕೆ ಎದುರಾಗಲಿದೆ. ಈ ಬೆಳವಣಿಗೆಗಳ ಕುರಿತು ಬುಧವಾರ ಮಾತನಾಡಿದ ಕರ್ನಾಟಕ ಸರ್ಕಾರ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಎಲ್ಲಾ ಉದ್ಯಮಿಗಳಿಗೂ ರಾಜ್ಯದಲ್ಲಿ ಭೂಮಿ ಲಭ್ಯವಿದೆ ಎಂದು ಭರವಸೆ ನೀಡಿದ್ದಾರೆ. ಆಂಧ್ರಪ್ರದೇಶದ ಆಹ್ವಾನಕ್ಕೆ ಅವರು ತಿರುಗೇಟು ನೀಡಿದ್ದಾರೆ.

ಆಂಧ್ರಪ್ರದೇಶದ ಯೋಜನೆಯೇನು?

ಆಂಧ್ರದ ಕಾರ್ಯತಂತ್ರವು ಕೇವಲ ಭೂಮಿಯ ಲಭ್ಯತೆಗಿಂತಲೂ ಹೆಚ್ಚು ಗಮನಾರ್ಹವಾದರು. ಲೋಕೇಶ್ ಆಂಧ್ರಪ್ರದೇಶದ ಶ್ರೀ ಸತ್ಯ ಸಾಯಿ ಜಿಲ್ಲೆಯ ಪೆನುಕೊಂಡಾ ಮತ್ತು ಮಡಕಸಿರಾದ ಮೇಲೆ ಗಮನ ಹರಿಸಿದ್ದಾರೆ. ಈ ಎರಡೂ ಪಟ್ಟಣಗಳು ಕರ್ನಾಟಕದ ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಿಗೆ ಗಡಿಯಾಗಿವೆ. ಮುಖ್ಯವಾಗಿ, ಈ ಎರಡೂ ಸ್ಥಳಗಳು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ (BIAL) ಸುಮಾರು 80 ಕಿಲೋಮೀಟರ್ ದೂರದಲ್ಲಿವೆ. ಈ ಸಾಮೀಪ್ಯವು ಕಂಪನಿಗಳಿಗೆ ಆಂಧ್ರದಿಂದ ಕಾರ್ಯನಿರ್ವಹಿಸಲು ಮತ್ತು ಬೆಂಗಳೂರಿನ ವಿಮಾನ ನಿಲ್ದಾಣ, ರಸ್ತೆಗಳು ಮತ್ತು ಕಾರ್ಮಿಕರನ್ನು ಸಂಪೂರ್ಣವಾಗಿ ಅವಲಂಬಿಸಲು ನೆರವಾಗಲಿದೆ.

ಉಳಿದ ಕಡೆ ಮೂಲಸೌಕರ್ಯದ ಲಭ್ಯತೆ ಇದೆಯೇ? 

“1,000 ಎಕರೆ ಭೂಮಿಯ ಲಭ್ಯತೆಯೇ ಸಮಸ್ಯೆಯಲ್. ಕರ್ನಾಟಕದ ಬೇರೆಡೆಯೂ ಇದನ್ನು ಒದಗಿಸಬಹುದು,” ಎಂದು ಕರ್ನಾಟಕ ಕೈಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ದ ಫೆಡರಲ್‌ಗೆ ತಿಳಿಸಿದ್ದಾರೆ. “ಆದರೆ ಆಂಧ್ರದಿಂದ ಉಚಿತ ಭೂಮಿಯ ಕೊಡುಗೆ ಮತ್ತು ಬೆಂಗಳೂರಿನ ಮೂಲಸೌಕರ್ಯ ನಿಜವಾದ ಸವಾಲಾಗಿದೆ,” ಎಂದಿದ್ದಾರೆ. “ಕಿಯಾ ಮೋಟರ್ಸ್ ಕರ್ನಾಟಕದೊಂದಿಗೆ ಮಾತುಕತೆ ನಡೆಸಿ ಕಡಿಮೆ ಬೆಲೆಯಲ್ಲಿ ಭೂಮಿಯನ್ನು ಪಡೆದು ಪೆನುಕೊಂಡಾದಲ್ಲಿ ತನ್ನ ಕಾರ್ಖಾನೆಯನ್ನು ನಿರ್ಮಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಈಗ, ಇದೇ ರೀತಿಯ ಸನ್ನಿವೇಶವು ಮತ್ತೆ ತಲೆದೋರುತ್ತಿದೆ,” ಎಂದು ಅವರು ಹೇಳಿದ್ದಾರೆ

ಅಧಿಕಾರಿಗಳ ಪ್ರಕಾರ, ಕರ್ನಾಟಕವು ಈಗ ರದ್ದಾಗಿರುವ ಯೋಜನೆಯ ಮೂಲಕ 50,000 ಕೋಟಿ ರೂ.ನಿಂದ 60,000 ಕೋಟಿ ರೂ.ವರೆಗಿನ ಹೂಡಿಕೆ ನಿರೀಕ್ಷಿಸಿತ್ತು. ಇದು ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸುವುದರ ಜೊತೆಗೆ ರಾಜ್ಯಕ್ಕೆ ಗಣನೀಯ ತೆರಿಗೆ ಮತ್ತು ತೆರಿಗೇತರ ಆದಾಯವನ್ನು ತಂದುಕೊಡುತ್ತಿತ್ತು.

ರೈತರೊಂದಿಗಿನ ಸಭೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ, "ಮಣ್ಣನ್ನು ಉಳಿಸಬೇಕು ಹಾಗೂ ಉದ್ಯೋಗ ಸೃಷ್ಟಿಗೂ ಅವಕಾಶ ನೀಡಬೇಕು. ಯಾವುದೇ ಒತ್ತಾಯದಿಂದ ಭೂಸ್ವಾಧೀನ ಮಾಡುವುದಿಲ್ಲ, ಒಪ್ಪಿಗೆ ಇರುವ ರೈತರಿಂದ ಮಾತ್ರ ಭೂಮಿಯನ್ನು ಖರೀದಿ ಮಾಡಲಾಗುವುದು" ಎಂದು ಸ್ಪಷ್ಟಪಡಿಸಿದ್ದರು. ಹೀಗಾಗಿ ಉದ್ಯಮಗಳನ್ನು ಉಳಿಸಿವುದು ಸರ್ಕಾರದ ಏಕೈಕ ಉದ್ದೇಶ ಎಂಬುದು ಸಾಬೀತಾಗಿದೆ.

ಕಂಪನಿಗಳ ಮುಂದಿನ ಹೆಜ್ಜೆಗಳೇನು?

ಕಳೆದ ವರ್ಷಗಳಲ್ಲಿ ಕರ್ನಾಟಕದ ಏರೋಸ್ಪೇಸ್ ನೀತಿಯಡಿ ಹಲವಾರು ಕೈಗಾರಿಕಾ ಪ್ರದೇಶಗಳಲ್ಲಿ ಭೂಮಿಯನ್ನು ಮೀಸಲಿಡಲಾಗಿತ್ತು. ಬೆಂಗಳೂರು, ಬೆಳಗಾವಿ, ಮೈಸೂರು, ತುಮಕೂರು, ಚಾಮರಾಜನಗರ ಮೊದಲಾದ ಕಡೆಗಳಲ್ಲಿ ಏರೋಸ್ಪೇಸ್ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸುವ ಅವಕಾಶವಿದೆ. ಆದರೆ, ಬೆಂಗಳೂರು ಸಮೀಪದ ಭೂಮಿ ಲಭ್ಯವಾಗದ ಕಾರಣ ಕೆಲವು ಕಂಪನಿಗಳಿಗೆ ಅಗತ್ಯ ಭೂಮಿ ಸಿಗುವುದಿಲ್ಲ ಎಂಬ ಆತಂಕ ಸೃಷ್ಟಿಯಾಗಿದೆ.

ಆದರೆ, ಸರ್ಕಾರದ ಮೂಲಗಳ ಪ್ರಕಾರ, ನಿರ್ದಿಷ್ಟವಾಗಿ ಯಾವುದೇ ಕಂಪನಿಗಳು ಭೂಸ್ವಾಧೀನ ರದ್ದಾಗಿರುವ ಬಳಿಕ ವಾಪಸ್​ ಹೋಗುತ್ತೇವೆ ಅಥವಾ ಅನ್ಯ ರಾಜ್ಯಗಳ ಹಾದಿ ಹಿಡಿಯುತ್ತೇವೆ ಎಂದು ಹೇಳಿಲ್ಲ. ಅವರಿಗೆ ಭೂಮಿ ಒದಗಿಸಿಕೊಡುವ ಪ್ರಯತ್ನ ಮುಂದುವರಿದಿದೆ.

ಸಚಿವ ಎಂ.ಬಿ. ಪಾಟೀಲ್ ತಮ್ಮ ಹೇಳಿಕೆಯಲ್ಲಿ, ದೇವನಹಳ್ಳಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ರೈತರ ಹಿತದೃಷ್ಟಿಯಿಂದ ಕೈಬಿಡಲಾಗಿದೆ. ಆದರೆ, ಆ ಉದ್ಯಮಿಗಳಿಗೆ ಅವರು ಕೇಳಿದ ಕಡೆ ಜಮೀನು ಕೊಡಲಾಗುವುದು. ಆಂಧ್ರಪ್ರದೇಶದ ಸಚಿವ ನಾರಾ ಲೋಕೇಶ್ ಕರೆದ ತಕ್ಷಣ ಯಾವ ಉದ್ಯಮಿಯೂ ಇಲ್ಲಿಂದ ಅಲ್ಲಿಗೆ ಹೋಗಿಬಿಡುವುದಿಲ್ಲ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಿರಿಯ ಅಧಿಕಾರಿಗಳು, ಭೂಸ್ವಾಧೀನ ಹಿಂಪಡೆದಿರುವುದರಿಂದ ಕೈಗಾರಿಕಾ ಹೂಡಿಕೆಗಳ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. " ಕರ್ನಾಟಕದ ಬೇರೆ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ ಮತ್ತು ಮೌಲ್ಯವರ್ಧಿತ ಪಾರ್ಕ್‌ಗಳು ಲಭ್ಯವಿವೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾಗಲಕೋಟೆ/ಹತ್ತರಗಿ, ಮೈಸೂರಿನಂತಹ ಹಲವು ಏರೋಸ್ಪೇಸ್ ಪಾರ್ಕ್‌ಗಳನ್ನು ಸರ್ಕಾರ ಈಗಾಗಲೇ ಅಭಿವೃದ್ಧಿಪಡಿಸಿದ್ದು, ಇಲ್ಲಿನ ಕಂಪನಿಗಳನ್ನು ಅಲ್ಲಿಗೆ ಕಳುಹಿಸಲಾಗುತ್ತದೆ.

ಆಂಧ್ರಪ್ರದೇಶದ ಆಹ್ವಾನಕ್ಕೆ ಸಚಿವರ ಪ್ರತ್ಯುತ್ತರವೇನು?

ಕರ್ನಾಟಕದ ಈ ನಿರ್ಧಾರದ ನಂತರ, ಆಂಧ್ರಪ್ರದೇಶ ಸರ್ಕಾರದ ಮಾಹಿತಿ ತಂತ್ರಜ್ಞಾನ ಸಚಿವ ನಾರಾ ಲೋಕೇಶ್ ಅವರು ಏರೋಸ್ಪೇಸ್ ಕಂಪನಿಗಳಿಗೆ ಸಾರ್ವಜನಿಕ ಆಹ್ವಾನ ನೀಡಿ, "ನಮ್ಮ ಬಳಿ 8,000 ಎಕರೆ ಸಿದ್ಧ ಭೂಮಿ ಇದೆ, ಉನ್ನತ ಹೂಡಿಕೆ ಪ್ರೋತ್ಸಾಹಗಳು ಇವೆ, ಬನ್ನಿ" ಎಂದು ಕರೆ ನೀಡಿದ್ದರು. ಇದಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಪ್ರತಿಕ್ರಿಯಿಸಿದ ಸಚಿವ ಎಂ.ಬಿ. ಪಾಟೀಲ್, "ರಾಜ್ಯವು ವೈಮಾಂತರಿಕ್ಷ ವಲಯದಲ್ಲಿ ದೇಶದ ಶೇ.65ರಷ್ಟು ಪಾಲು ಹೊಂದಿದೆ. ಜಾಗತಿಕ ಮಟ್ಟದಲ್ಲಿ ನಮ್ಮದು ಮೂರನೇ ಅತ್ಯುತ್ತಮ ಕಾರ್ಯ ಪರಿಸರವಿದೆ. ಉದ್ಯಮಗಳಿಗೆ ಭೂಮಿ ಕೊಟ್ಟಮಾತ್ರಕ್ಕೆ ಅವು ಅಲ್ಲಿಗೆ ಹೋಗುವುದಿಲ್ಲ. ಕಾರ್ಯ ಪರಿಸರ ಕೂಡ ಮಹತ್ತ್ವದ ಪಾತ್ರ ವಹಿಸುತ್ತದೆ" ಎಂದು ತಿರುಗೇಟು ನೀಡಿದ್ದಾರೆ.

ನಾರಾ ಲೋಕೇಶ್ ಅವರ ಟ್ವೀಟ್ ಅನ್ನು ನೋಡಿದ್ದಾಗಿ ಹೇಳಿ, "ನಾನೂ ಅಲ್ಲೇ ಉತ್ತರ ಕೊಟ್ಟಿದ್ದೇನೆ. ಎಂ.ಬಿ. ಪಾಟೀಲನಿಗೂ ಸಾಮರ್ಥ್ಯವಿದೆ, ಕರ್ನಾಟಕ ರಾಜ್ಯವೂ ಸಮರ್ಥವಾಗಿದೆ. ರಾಜ್ಯದ ಅನೇಕ ಕಡೆಗಳಲ್ಲಿ ಏರೋಸ್ಪೇಸ್ ಮಾತ್ರವಲ್ಲ, ಎಐ, ಡೀಪ್-ಟೆಕ್, ಐಟಿ ಹೀಗೆ ಎಲ್ಲಾ ತರಹದ ಉದ್ಯಮಗಳಿಗೂ ಭೂಮಿ ಇದೆ. ಒಬ್ಬೇ ಒಬ್ಬ ಉದ್ಯಮಿಯೂ ಕರ್ನಾಟಕದಿಂದ ಹೊರಹೋಗಲು ನಾನು ಬಿಡುವುದಿಲ್ಲ" ಎಂದು ವಿಶ್ವಾಸ ಪ್ರಕಟಿಸಿದರು. ಏರೋಸ್ಪೇಸ್ ಉದ್ಯಮಿಗಳಿಗೆ ಬರೀ ಭೂಮಿಯಲ್ಲ, ಅದರ ಜತೆಗೆ ನೀರು, ವಿದ್ಯುತ್ ಎಲ್ಲವನ್ನೂ ಕೊಡುತ್ತೇವೆ. ರಾಜ್ಯದಲ್ಲಿ ಕೈಗಾರಿಕಾ ಪ್ರದೇಶಗಳಿಗೆ ನಮ್ಮ ಪಾಲಿನ ನೀರು ಬಳಸಿಕೊಳ್ಳಲು 3,600 ಕೋಟಿ ರೂಪಾಯಿ ವೆಚ್ಚದಲ್ಲಿ ಸಮಗ್ರ ಯೋಜನೆಯನ್ನೇ ರೂಪಿಸಲಾಗಿದೆ ಎಂದು ಪಾಟೀಲ ಹೇಳಿದ್ದಾರೆ.

ರಾಜ್ಯ ಬಿಜೆಪಿ ಮತ್ತು ಇಲಾಖೆಯ ಪ್ರಗತಿ

ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರು ಸಮಯ ಸಾಧಕರಂತೆ ಈಗ ಉದ್ಯಮಿಗಳ ಪರವಾಗಿ ಮಾತನಾಡುತ್ತಿದ್ದಾರೆ ಎಂದು ಸಚಿವ ಪಾಟೀಲ್ ಟೀಕಿಸಿದ್ದಾರೆ. "ಸರ್ಕಾರವೇನಾದರೂ ದೇವನಹಳ್ಳಿ ತಾಲ್ಲೂಕಿನಲ್ಲಿ ರೈತರ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದರೆ, ಆಗ ಅವರು ರೈತರ ಪರವಾಗಿ ಮಾತನಾಡುತ್ತಿದ್ದರು. ವಿರೋಧ ಪಕ್ಷಗಳು ಏನಾದರೂ ಮಾಡಿಕೊಳ್ಳಲಿ, ನನಗೆ ರಾಜ್ಯದ ಹಿತಾಸಕ್ತಿ ಮಾತ್ರ ಮುಖ್ಯ" ಎಂದು ಅವರು ಪ್ರತಿಪಾದಿಸಿದ್ದಾರೆ.ಈ ಮಧ್ಯೆ, ರಾಜಕೀಯ ವಿವಾದವೊಂದು ಭುಗಿಲೇಳಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸರ್ಕಾರವನ್ನು ಹೂಡಿಕೆದಾರರಿಗೆ ತಪ್ಪು ಸಂದೇಶ ಕಳುಹಿಸುತ್ತಿದೆ ಮತ್ತು “ಕರ್ನಾಟಕದಿಂದ ಕೈಗಾರಿಕೆಗಳನ್ನು ಓಡಿಸುತ್ತಿದೆ” ಎಂದು ಆರೋಪಿಸಿದ್ದಾರೆ. ಸಚಿವ ಎಂ.ಬಿ. ಪಾಟೀಲ್ ಪ್ರತಿಕ್ರಿಯಿಸಿ, ವಿರೋಧ ಪಕ್ಷವು ಅವಕಾಶವಾದಿಯಾಗಿದೆ ಮತ್ತು ಭೂಸ್ವಾಧೀನ ಮುಂದುವರೆದಿದ್ದರೆ ಅದನ್ನೂ ವಿರೋಧಿಸುತ್ತಿದ್ದರು ಎಂದು ತಿರುಗೇಟು ನೀಡಿದ್ದಾರೆ.

ಬೆಂಗಳೂರು ಇನ್ನೂ ದೇಶದ ಏರೋಸ್ಪೇಸ್ ಹಬ್ ಆಗಿ ಉಳಿದಿದೆ. ರಾಜ್ಯದಲ್ಲಿ ದೇಶದ 65% ಏರೋಸ್ಪೇಸ್ ರಫ್ತುಗಳು ಮತ್ತು 25% ದೇಶದ ವಿಮಾನ/ಆಕಾಶಯಾನ ಕೈಗಾರಿಕೆಗಳು ಕರ್ನಾಟಕದಲ್ಲಿಯೇ ನೆಲೆಸಿವೆ. ಹೇರಳವಾದ ಮಾನವ ಸಂಪನ್ಮೂಲ, ಸೌಲಭ್ಯಗಳು, ನಿರ್ವಹಣಾ ನೆಲೆಗಳು ಮತ್ತು ಪೂರೈಕೆ ಸರಪಳಿ ಸೇರಿದಂತೆ ಹಲವು ಆಕರ್ಷಕ ಗುಣಗಳು ಇಲ್ಲಿವೆ. ಹೀಗಾಗಿ ಏರೋಸ್ಪೇಸ್ ಕಂಪನಿಗಳು ಮಧ್ಯಮಾವಧಿಯಲ್ಲಿ ಕರ್ನಾಟಕವನ್ನು ಸಂಪೂರ್ಣವಾಗಿ ಬಿಡುವ ಸಾಧ್ಯತೆ ಕಡಿಮೆ. ಆದರೆ, ಭೂಸ್ವಾಧೀನ ನೆರವಿನ ಕೊರತೆಯಿಂದಾಗಿ ಕೆಲವು ಹೂಡಿಕೆಗಳು ಆಂಧ್ರಪ್ರದೇಶ ಅಥವಾ ತಮಿಳುನಾಡಿನಂತಹ ರಾಜ್ಯಗಳಿಗೆ ಗಮನ ಹರಿಸುವ ಸಾಧ್ಯತೆ ಇದೆ. ಪ್ರಮುಖವಾಗಿ ರಾಜ್ಯಗಳ ಗಡಿ ಪ್ರದೇಶಗಳಿಗೆ ಸೀಮಿತವಾಗಿರಲಿವೆ. 

Tags:    

Similar News