Dengue Outbreak | ಸರ್ಕಾರಿ ಆಸ್ಪತ್ರೆಗಳಲ್ಲಿ ಅವ್ಯವಸ್ಥೆ: 'ದ ಫೆಡರಲ್‌ ಕರ್ನಾಟಕ' ರಿಯಾಲಿಟಿ ಚೆಕ್‌

ರಾಜ್ಯದಲ್ಲಿ ಡೆಂಗ್ಯೂ ಸೋಂಕಿತರ ಸಂಖ್ಯೆ ಭಾರೀ ಸಂಖ್ಯೆಯಲ್ಲಿ ಏರುತ್ತಿದ್ದು, ಒಂದು ಕಡೆ ಆರೋಗ್ಯ ಇಲಾಖೆ ಒಂದು ಕಡೆ ಸೋಂಕಿತರ ಸಂಖ್ಯೆಯನ್ನು ಕೆಲವೇ ಸಾವಿರ ಎನ್ನುತ್ತಿದೆ. ಆದರೆ, ವಾಸ್ತವವಾಗಿ ಏನಾಗುತ್ತಿದೆ? ಆಸ್ಪತ್ರೆಗಳ ಸ್ಥಿತಿ ಹೇಗಿದೆ? 'ದ ಫೆಡರಲ್ ಕರ್ನಾಟಕ' ರಿಯಾಲಿಟಿ ಚೆಕ್ ಬಹಿರಂಗಪಡಿಸಿದ ಸಂಗತಿಗಳು ಇಲ್ಲಿವೆ...

By :  Hitesh Y
Update: 2024-07-02 02:00 GMT
ಒಂದೇ ವಾರ್ಡ್‌ನಲ್ಲಿ ಚಿಕಿತ್ಸೆ

ಒ‌ಂದು ಕಡೆ ರಾಜ್ಯ ಆರೋಗ್ಯ ಇಲಾಖೆ ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ನಿಯಂತ್ರಣದಲ್ಲಿವೆ, ಈವರೆಗೆ ಬೆರಳೆಣಿಕೆ ಸಾವು ಸಂಭವಿಸಿವೆ, ಪಾಸಿಟಿವ್‌ ಪ್ರಕರಣಗಳೂ ನಾಲ್ಕೈದು ಸಾವಿರ ಮಿತಿಯಲ್ಲಿವೆ ಎಂದು ಹೇಳುತ್ತಿದೆ. ಆದರೆ, ಬೆಂಗಳೂರು ಮಹಾನಗರದಿಂದ ರಾಜ್ಯದ ಬೀದರ್‌ ಮೂಲೆಯ ತಾಲೂಕು ಆಸ್ಪತ್ರೆಯ ವರೆಗೆ ಡೆಂಗ್ಯೂ ಸೋಂಕಿತರ ಗೋಳುಗಳು ಸುದ್ದಿಯಾಗುತ್ತಲೇ ಇವೆ. ಹಾಗಾದರೆ, ವಾಸ್ತವ ಏನು? ಸರ್ಕಾರ ಏನು ಕ್ರಮ ಕೈಗೊಂಡಿದೆ? ಚಿಕಿತ್ಸೆ ಹೇಗೆ ನಡೆಯುತ್ತಿದೆ? ಎಂಬ ಮಾಹಿತಿ ಕೆದಕಿ 'ದ ಫೆಡರಲ್‌ ಕರ್ನಾಟಕ' ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಕಂಡದ್ದು ಬೇರೆಯದೇ ಚಿತ್ರಣ.

ಬೆಂಗಳೂರಿನ ಹೃದಯಭಾಗದಲ್ಲಿರುವ ವಿಕ್ಟೋರಿಯಾ ಹಾಗೂ ಕೆ.ಸಿ ಜನರಲ್ ಸೇರಿದಂತೆ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ 'ದ ಫೆಡರಲ್ ಕರ್ನಾಟಕ' ಸೋಮವಾರ(ಜು.1) ರಿಯಾಲಿಟಿ ಚೆಕ್ ನಡೆಸಿದ್ದು, ಆರೋಗ್ಯ ಇಲಾಖೆಯ ಹಲವು ಗಂಭೀರ ಲೋಪಗಳು ಬೆಳಕಿಗೆ ಬಂದಿವೆ.

ಡೆಂಗ್ಯೂ ಪ್ರಕರಣಗಳು ಮಿತಿ ಮೀರಿದ್ದು, ತುರ್ತು ಕ್ರಮ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಚೆಗೆ ನಡೆದ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಎಚ್ಚರಿಸಿದ್ದರು. ಆದರೆ, ಆರೋಗ್ಯ ಇಲಾಖೆ ಮುಖ್ಯಮಂತ್ರಿಗಳ ಆ ಸೂಚನೆಗೆ ಕ್ಯಾರೇ ಎಂದಿಲ್ಲ ಎಂಬುದಕ್ಕೆ  ದ ಫೆಡರಲ್ ಕರ್ನಾಟಕ ತಂಡದ ಈ ರಿಯಾಲಿಟಿ ಚೆಕ್‌ ಸಾಕ್ಷ್ಯ ನೀಡಿದೆ.

ಎಲ್ಲ ರೋಗಿಗಳಿಗೂ ಒಂದೇ ವಾರ್ಡ್‌ನಲ್ಲೇ ಚಿಕಿತ್ಸೆ!

ಡೆಂಗ್ಯೂ ಸೋಂಕಿತರನ್ನು ರಾಜ್ಯ ಸರ್ಕಾರ ಮತ್ತು ಆರೋಗ್ಯ ಇಲಾಖೆ ಯಾವ ರೀತಿ ನಿರ್ಲಕ್ಷಿಸುತ್ತಿದೆ ಎನ್ನುವುದಕ್ಕೆ ಡೆಂಗ್ಯೂ ರೋಗಿಗಳನ್ನು ಹಾಗೂ ಅನ್ಯ ಆರೋಗ್ಯ ಸಮಸ್ಯೆ ಇರುವವರನ್ನು ಒಂದೇ ವಾರ್ಡ್‌ನಲ್ಲಿ ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಚಿಕಿತ್ಸೆ ನೀಡುತ್ತಿರುವುದೇ ಸಾಕ್ಷಿ.

ವಿಕ್ಟೋರಿಯಾ ಸರ್ಕಾರಿ ಆಸ್ಪತ್ರೆಯ ಸಿ ಬ್ಲಾಕ್‌ನಲ್ಲಿ ಒಳ ರೋಗಿಗಳ ವಾರ್ಡ್‌ಗಳಲ್ಲೇ ಡೆಂಗ್ಯೂ ಸೋಂಕಿತರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಯಾವುದೇ ಮುಂಜಾಗ್ರತಾ ಕ್ರಮ ವಹಿಸದೆ ಡೆಂಗ್ಯೂ ಹಾಗೂ ಉಳಿದ ರೋಗಿಗಳನ್ನು ಅಕ್ಕಪಕ್ಕದ ಹಾಸಿಗೆಗಳಲ್ಲಿ ಮಲಗಿಸಲಾಗಿದೆ. ಡೆಂಗ್ಯೂ ವಾರ್ಡ್ ಎಲ್ಲಿದೆ ಎಂದು ಇಲ್ಲಿನ ಸಿಬ್ಬಂದಿಯನ್ನು ಪ್ರಶ್ನಿಸಿದರೆ, ಆ ರೀತಿ ಯಾವ ವಾರ್ಡ್ ಸಹ ಇಲ್ಲ ಎನ್ನುವ ಉತ್ತರ ಬರುತ್ತಿದೆ. ಡೆಂಗ್ಯೂ ರೋಗಿಗಳಿಗೆ ಪ್ರತ್ಯೇಕ ವಾರ್ಡ್ ಮೀಸಲಿರಿಸಿಲ್ಲ ಎಂದು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ (ಸೂಪರಿಂಟೆಂಡೆಂಟ್) ಡಾ. ದೀಪಕ್. ಎಸ್ ದ ಫೆಡರಲ್ ಕರ್ನಾಟಕಕ್ಕೆ ಖಚಿತಪಡಿಸಿದ್ದಾರೆ.


ಸೊಳ್ಳೆ ಪರದೆ ಇಲ್ಲ, ರೆಪಲೆಂಟ್ ಕೊಟ್ಟಿಲ್ಲ !

ಡೆಂಗ್ಯೂ ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ರೋಗ. ಡೆಂಗ್ಯೂ ಸೋಂಕು ಇರುವ ವ್ಯಕ್ತಿಯನ್ನು ಕಚ್ಚಿದ ಸೊಳ್ಳೆಯು ಮತ್ತೊಬ್ಬರನ್ನು ಕಚ್ಚಿದರೆ ಅವರಿಗೂ ಡೆಂಗ್ಯೂ ಕಾಣಿಸಿಕೊಳ್ಳಲಿದೆ. ಈ ರೀತಿಯ ಅಪಾಯದ ಮುನ್ಸೂಚನೆಗಳ ಅರಿವಿದ್ದರೂ, ಸರ್ಕಾರಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ಸೋಂಕಿನಿಂದ ಬಳಲುತ್ತಿರುವವರನ್ನು ಪ್ರತ್ಯೇಕವಾಗಿ ಇರಿಸಿಲ್ಲ.‌ ಕನಿಷ್ಟ ಅವರ ಬೆಡ್‌ಗಳಿಗೆ ಸೊಳ್ಳೆ ಪರದೆ ಹಾಕಿ ಪ್ರತ್ಯೇಕಿಸಿಲ್ಲ ಎಂಬುದು ರಿಯಾಲಿಟಿ ಚೆಕ್‌ ವೇಳೆ ಬಹಿರಂಗವಾಗಿದೆ.

ಡೆಂಗ್ಯೂ ಸೋಂಕಿಗೆ ಈಡಿಸ್ ಈಜಿಪ್ಟಿ ಸೊಳ್ಳೆಗಳು ಕಾರಣವಾಗಿದ್ದು, ಈ ಸೊಳ್ಳೆಗಳು ಕಚ್ಚಿದ 3 ರಿಂದ 5 ದಿನಗಳ ನಂತರ ಡೆಂಗ್ಯೂ ಜ್ವರ ಕಾಣಿಸಿಕೊಳ್ಳುತ್ತದೆ. ಈ ಸೊಳ್ಳೆಗಳು ಬೆಳಿಗ್ಗೆ ಮತ್ತು ಸಂಜೆ ಮಾತ್ರ ಮನುಷ್ಯರನ್ನು ಕಚ್ಚುತ್ತವೆ. ಆದರೆ, ಡೆಂಗ್ಯೂ ಸೋಂಕು ದೃಢಪಟ್ಟ ವ್ಯಕ್ತಿಯನ್ನು ಕಚ್ಚಿದ ಸೊಳ್ಳೆ ಮತ್ತೊಬ್ಬರಿಗೆ ಕಚ್ಚದಂತೆ ಎಚ್ಚರಿಕೆ ವಹಿಸಬೇಕು. ಇದಕ್ಕಾಗಿ ಸೊಳ್ಳೆ ಪರದೆ, ಸೊಳ್ಳೆ ಕಚ್ಚುವುದರಿಂದ ರಕ್ಷಣೆ ಪಡೆಯಲು ಸೊಳ್ಳೆ ರೆಫಲೆಂಟ್ (ಕ್ರೀಮ್)‌ ನೀಡಬೇಕು ಎನ್ನುವ ನಿಯಮವಿದೆ. ಆದರೆ, ಈ ಯಾವುದೇ ನಿಯಮ ಪಾಲಿಸದೆ ಸೋಂಕಿತರು, ಸೋಂಕಿತರಲ್ಲದವರು ಎನ್ನದೆ ಎಲ್ಲರನ್ನೂ ಒಂದೇ ವಾರ್ಡಿನಲ್ಲಿ ಯಾವ ಸುರಕ್ಷಾ ಕ್ರಮಗಳಿಲ್ಲದೆ ಕೂಡಿಹಾಕಿ ಆರೋಗ್ಯ ಇಲಾಖೆ ಜನರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದೆ.


ವಿಕ್ಟೋರಿಯಾ ಆಸ್ಪತ್ರೆಯೇ ಸೊಳ್ಳೆ ಉತ್ಪಾದನಾ ಕೇಂದ್ರ !

ದೀಪದ ಬುಡ ಕತ್ತಲು ಎನ್ನುವಂತೆ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲೇ ಸ್ವಚ್ಛತೆ ಕಾಪಾಡಿಕೊಂಡಿಲ್ಲ. ಊರಿಗೆಲ್ಲ ಬುದ್ಧಿ ಹೇಳುತ್ತಿರುವ ರಾಜ್ಯ ಆರೋಗ್ಯ ಇಲಾಖೆಯು ನಿತ್ಯ ಸಾವಿರಾರು ಜನ ಭೇಟಿ ನೀಡುವ ಆಸ್ಪತ್ರೆಗಳಲ್ಲೇ ಸ್ವಚ್ಛತೆ ಕಾಪಾಡಿಕೊಂಡಿಲ್ಲ. ವಿಕ್ಟೋರಿಯಾದ ಒಳ ರೋಗಿಗಳ ( ಸಿ ಬ್ಲಾಕ್‌) ಕೂಗಳತೆಯ ದೂರದಲ್ಲಿ ಐ ಲವ್ ವಿಕ್ಟೋರಿಯಾ ಆಸ್ಪತ್ರೆ ಎನ್ನುವ ಬೋರ್ಡ್‌ನ ಮುಂದೆ ಇರುವ ನೀರಿನ ಕಾರಂಜಿಯನ್ನು ಸ್ವಚ್ಛವಾಗಿ ಇರಿಸಿಕೊಂಡಿಲ್ಲ. ಹಾಗಾಗಿ ಆಸ್ಪತ್ರೆಯ ಆವರಣವೇ ಸೊಳ್ಳೆ ಉತ್ಪಾದನಾ ತಾಣವಾಗಿದೆ. ಸಮೀಪದಲ್ಲೇ ಕಾಮಗಾರಿ ನಡೆಯುತ್ತಿದ್ದು, ಮರದ ಹಲಗೆಗಳನ್ನು ವಿಲೇವಾರಿ ಮಾಡಿಲ್ಲ. ಅದೇ ರೀತಿ ಕೆ.ಸಿ ಜನರಲ್ ಆಸ್ಪತ್ರೆಯ ಪ್ರವೇಶದ್ವಾರದಲ್ಲೇ ಕಾಮಗಾರಿ ನಡೆಯುತ್ತಿದ್ದು, ಅಲ್ಲೂ ಮುಂಜಾಗ್ರತೆ ತೆಗೆದುಕೊಳ್ಳುವ ಅವಶ್ಯಕತೆ ಇದೆ.


ಕಣ್ಣಿಗೆ ಕಾಣದ ಜಾಗೃತಿ ಫಲಕ; ಪ್ರತ್ಯೇಕ ವ್ಯವಸ್ಥೆ

ಡೆಂಗ್ಯೂ ಜ್ವರ ಹೆಚ್ಚಳವಾಗುತ್ತಿದ್ದರೂ, ಸರ್ಕಾರಿ ಆಸ್ಪತ್ರೆಗಳಲ್ಲಿ, ಜನ ಹೆಚ್ಚಾಗಿ ಸೇರುವ ಪ್ರದೇಶದಲ್ಲಿ ಡೆಂಗ್ಯೂ ಜ್ವರದ ಕುರಿತಾದ ಜಾಗೃತಿ ಭಿತ್ತಿಪತ್ರ ಹಾಗೂ ಜಾಗೃತಿ ಮೂಡಿಸುವ ಬರಹ ಮತ್ತು ಚಿತ್ರಗಳು ಕಾಣಿಸುತ್ತಿಲ್ಲ. ಅಲ್ಲದೇ ರಾಜ್ಯದಲ್ಲಿ ಬಿಟ್ಟು ಬಿಟ್ಟು ಮಳೆಯಾಗುತ್ತಿದ್ದು, ಡೆಂಗ್ಯೂ ಸೇರಿದಂತೆ ಸಾಂಕ್ರಾಮಿಕ ರೋಗಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗ (ಒಪಿಡಿ) ದಲ್ಲಿ ಜನ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಆದರೆ, ಸಾಂಕ್ರಾಮಿಕ ರೋಗ ಸೋಂಕಿತರು ಹಾಗೂ ಉಳಿದ ಹೊರ ರೋಗಿಗಳಿಗೆ ಪ್ರತ್ಯೇಕ ಸಾಲನ್ನು ನಿಗದಿ ಮಾಡಿಲ್ಲ.


ಡೆಂಗ್ಯೂ ಸೋಂಕಿತರ ಸಂಖ್ಯೆ ಹೆಚ್ಚಳ

ʻಕಳೆದ 10 ದಿನಗಳಿಂದ ಡೆಂಗ್ಯೂ ಸೋಂಕಿನ ಲಕ್ಷಣ ಇರುವವರು ವಿಕ್ಟೋರಿಯಾ ಆಸ್ಪತ್ರೆಗೆ ಬರುವ ಪ್ರಮಾಣ ದುಪ್ಪಟ್ಟಾಗಿದೆʼ ಎಂದು ವಿಕ್ಟೋರಿಯಾ ಆಸ್ಪತ್ರೆಯ ಅಧ್ಯಾಪಕ (ಪ್ರೊ) ಮತ್ತು ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ನಾಗರಾಜ ಬಿ.ಎಸ್ ಹೇಳಿದರು.

ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿದ ಅವರು, ʻಜ್ವರ, ಮೈ –ಕೈ ನೋವು, ತಲೆ ನೋವು ವಾಂತಿ ಲಕ್ಷಣಗಳಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಳವಾಗಿದೆ. ಈ ಹಿಂದೆ 10ರಿಂದ 15 ಜನ ಚಿಕಿತ್ಸೆಗೆ ಬರುತ್ತಿದ್ದರು. ಇದೀಗ 20 ರಿಂದ 25 ಜನ ಬರುತ್ತಿದ್ದಾರೆ. ಇವರಲ್ಲಿ ನಾಲ್ಕನೇ ಒಂದು ಭಾಗದ ಜನರಿಗೆ ಡೆಂಗ್ಯೂ ಸೋಂಕು ದೃಢಪಡುತ್ತಿದೆ. ಇದೀಗ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 10ರಿಂದ 12 ಜನ ಡೆಂಗ್ಯೂ ಸೋಂಕಿತರು ಇದ್ದಾರೆ. ಎಲ್ಲರೂ ಆರೋಗ್ಯವಾಗಿದ್ದು, ಸೌಮ್ಯ ಸ್ವಭಾವದ ಲಕ್ಷಣ ಇದೆ. ಪ್ರತಿ ದಿನ 25ರಿಂದ 40 ಜನರನ್ನು ಡೆಂಗ್ಯೂ ಸೋಂಕು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ವಾರದ ಹಿಂದೆ ಪರೀಕ್ಷಾ ಪ್ರಮಾಣ ಕಡಿಮೆ ಇತ್ತುʼ ಎಂದು ಹೇಳಿದರು.

ಡೆಂಗ್ಯೂ ಚಿಕಿತ್ಸೆಗೆ ಸಂಬಂಧಿಸಿದಂತೆ ನಾಗರಾಜ ಅವರು ಯಾವುದೇ ನಿರ್ದಿಷ್ಟ ವಿಷಯದ ಅಂಕಿ – ಅಂಶವನ್ನೂ ನಿಖರವಾಗಿ ನೀಡಲಿಲ್ಲ.

ನಿಖರ ಮಾಹಿತಿ ನೀಡಲು ಅಧಿಕಾರಿಗಳ ಹಿಂದೇಟು

ರಾಜ್ಯದಲ್ಲಿ ಡೆಂಗ್ಯೂ ಪ್ರರಣಗಳು ಹೆಚ್ಚಾಗುತ್ತಿದ್ದು, ಆರೋಗ್ಯ ಇಲಾಖೆ ನಿಖರವಾದ ಮಾಹಿತಿಯನ್ನು ಹಂಚಿಕೊಳ್ಳುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಅದಕ್ಕೆ ಪುಷ್ಠಿ ನೀಡುವಂತೆ ನಿಖರ ಮಾಹಿತಿಯನ್ನು ನೀಡಲು ಸರ್ಕಾರಿ ಆಸ್ಪತ್ರೆಯ ಉನ್ನತ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಡೆಂಗ್ಯೂ ಪರೀಕ್ಷೆ ಪ್ರಮಾಣ ಎಷ್ಟು, ಆರ್‌ಟಿಪಿಸಿಆರ್ ಪರೀಕ್ಷೆ ನಡೆಯುತ್ತಿದೆಯೇ, ಇಲ್ಲಿಯವರೆಗೆ ಎಷ್ಟು ಜನರಿಗೆ ಡೆಂಗ್ಯೂ ಚಿಕಿತ್ಸೆ ನೀಡಲಾಗಿದೆ ಹಾಗೂ ಈಗ ಎಷ್ಟು ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವುದು ಸೇರಿದಂತೆ ಡೆಂಗ್ಯೂ ಚಿಕಿತ್ಸೆಗೆ ಸಂಬಂಧಿಸಿದಂತೆ ವಿವಿಧ ಮಾಹಿತಿ ನೀಡುವಂತೆ ದ ಫೆಡರಲ್ ಕರ್ನಾಟಕ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದೀಪಕ್. ಎಸ್ ಹಾಗೂ ಕೆ.ಸಿ ಜನರಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಇಂದಿರಾ ಆರ್ ಕಬಾಡೆ ಅವರನ್ನು ಸಂಪರ್ಕಿಸಿತು.

ಇಂದಿರಾ ಅವರು ಸಂಪರ್ಕಕ್ಕೆ ಸಿಗಲಿಲ್ಲ. ದೀಪಕ್ ಅವರು ಅಧೀಕ್ಷಕರಾಗಿದ್ದರೂ, ವೈದ್ಯಕೀಯ ವಿಭಾಗದವರಿಂದ ಮಾಹಿತಿ ಪಡೆದುಕೊಳ್ಳುವಂತೆ ತಿಳಿಸಿದರು. ವಿಕ್ಟೋರಿಯಾ ಆಸ್ಪತ್ರೆಯಾ ಸೂಪರಿಂಟೆಂಡೆಂಟ್ ಅವರ ನಿರ್ದೇಶನದ ನಂತರವೂ ವಿಕ್ಟೋರಿಯಾ ಆಸ್ಪತ್ರೆಯ ಸಿಬ್ಬಂದಿ ಸೂಕ್ತ ಮಾಹಿತಿ ನೀಡಲಿಲ್ಲ. ಇನ್ನು ಕೆ.ಸಿ ಜನರಲ್ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಇಂದಿರಾ ಅವರು ಸಹ ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ. ಅಲ್ಲದೇ ಈ ಸಂಬಂಧ ಪ್ರತಿಕ್ರಿಯೆ ಪಡೆಯಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ರಂದೀಪ್ ಅವರಿಗೆ ಹಲವು ಬಾರಿ ಕರೆ ಮಾಡಿದರೂ, ಪ್ರತಿಕ್ರಿಯೆ ನೀಡಲಿಲ್ಲ.

ಒಟ್ಟಾರೆ ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು, ಪರೀಕ್ಷೆ ಸೇರಿದಂತೆ ನಿಖರ ಮಾಹಿತಿ ನೀಡುವ ತನ್ನ ಹೊಣೆಗಾರಿಕೆಯಿಂದ ಆರೋಗ್ಯ ಇಲಾಖೆ ನುಣುಚಿಕೊಳ್ಳುತ್ತಿದೆ.

ಡೆಂಗ್ಯೂ ರೋಗಿಗಳಿಂದ ಮಿಶ್ರಪ್ರತಿಕ್ರಿಯೆ

ಸರ್ಕಾರಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ಜ್ವರದ ಚಿಕಿತ್ಸೆ ಯಾವ ರೀತಿ ಇದೆ ಎನ್ನವುದಕ್ಕೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ ಎಂದರೆ, ಇನ್ನೂ ಕೆಲವರು ಚಿಕಿತ್ಸೆ ವಿಧಾನ ಸುಧಾರಿಸಬೇಕು ಎಂದು ಆಗ್ರಹಿಸಿದ್ದಾರೆ.

ʻಪುತ್ರನಿಗೆ ಡೆಂಗ್ಯೂ ಜ್ವರ ತೀವ್ರವಾಗಿದ್ದ ಹಿನ್ನೆಲೆಯಲ್ಲಿ ಶನಿವಾರ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಿಸಿದ ಸಂದರ್ಭದಲ್ಲಿ ಪ್ಲೇಟ್‌ಲೆಟ್‌ ಪ್ರಮಾಣ ತುಂಬಾ ಕಡಿಮೆ ಇತ್ತು. ಈಗ ಚೇತರಿಸಿಕೊಂಡಿದ್ದು, ಡಿಸ್ಚಾರ್ಜ್ ಮಾಡುವುದಾಗಿ ಹೇಳಿದ್ದಾರೆ. ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆʼ ಎಂದು ರಾಮು ಎನ್ನುವವರು ಹೇಳಿದರು.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿ (ಹೆಸರು ಹೇಳಲು ಇಚ್ಛಿಸಲಿಲ್ಲ)ಯೊಬ್ಬರು ʻಡೆಂಗ್ಯೂ ಚಿಕಿತ್ಸೆ ವಿಧಾನ ಸಮರ್ಪಕವಾಗಿ ಇಲ್ಲ. ಸ್ವಚ್ಛತೆ ಕಾಪಾಡಿಕೊಂಡಿಲ್ಲʼ ಎಂದು ದೂರಿದರು. ಅಲ್ಲದೆ, "ಆಸ್ಪತ್ರೆಯ ವಾರ್ಡುಗಳಲ್ಲಿ ಎಲ್ಲ ರೋಗಿಗಳ ನಡುವೆಯೇ ಡೆಂಗ್ಯೂ ಸೋಂಕಿತರನ್ನೂ ಮಲಗಿಸಲಾಗುತ್ತಿದೆ. ಅವರಿಗೆ ಸೊಳ್ಳೆ ಪರದೆ, ಸೊಳ್ಳೆ ಕ್ರೀಮ್(ರೆಪಲೆಂಟ್)‌ ಮುಂತಾದ ಯಾವ ಸೌಕರ್ಯವನ್ನೂ ನೀಡಿಲ್ಲ. ಇನ್ನು ಜ್ವರ, ತಲೆನೋವು, ಮೈಕೈ ನೋವು ಎಂದು ಬಂದರೂ ಡಾಕ್ಟರು ಚೀಟಿ ಬರೆಯುವಾಗ ಬರೀ ಮಾತ್ರೆ ಬರೆದು ಮನೆಗೆ ಕಳಿಸುವುದೇ ಹೆಚ್ಚು. ತೀರಾ ಸೀರಿಯಸ್‌ ಆಗಿ ಆಂಬ್ಯುಲೆನ್ಸ್‌ ಮಾಡಿಕೊಂಡು ಬಂದವರಿಗೆ ಮಾತ್ರ ರಕ್ತ ಪರೀಕ್ಷೆಗೆ ಹೇಳುತ್ತಿದ್ದಾರೆ. ಹಾಗಾಗಿ ರೋಗ ಸೀರಿಯಸ್‌ ಆದ ಮೇಲೆ ಡೆಂಗ್ಯೂ ಗೆ ಟ್ರೀಟ್ಮೆಂಟ್‌ ಮಾಡುತ್ತಿದ್ದಾರೆ.. ಇದು ಸರಿಯಲ್ಲ" ಎಂದೂ ಅವರು ಅಲ್ಲಿನ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರು.

ಒಟ್ಟಾರೆ, ಬೆಂಗಳೂರಿನ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಗಳಲ್ಲಿ 'ದ ಫೆಡರಲ್‌ ಕರ್ನಾಟಕ' ನಡೆಸಿದ ರಿಯಾಲಿಟಿ ಚೆಕ್‌, ಆರೋಗ್ಯ ಇಲಾಖೆ ಡೆಂಗ್ಯೂ ನಿರ್ವಹಣೆಯ ವಿಷಯದಲ್ಲಿ ಎಸಗುತ್ತಿರುವ ಲೋಪಗಳನ್ನು ಮಾತ್ರವಲ್ಲದೆ, ವಾಸ್ತವಾಂಶಗಳನ್ನು ಮುಚ್ಚಿಟ್ಟು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಆಘಾತಕಾರಿ ಸಂಗತಿಯನ್ನೂ ಬಯಲುಮಾಡಿದೆ.

Tags:    

Similar News