Defamatory Post | ಬಿಜೆಪಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿದ ಟಬು ರಾವ್

ಸಕ್ರಿಯ ರಾಜಕಾರಣದಲ್ಲಿ ಇಲ್ಲದಿದ್ದರೂ ನನ್ನ ವಿರುದ್ಧ‌ ಬಿಜೆಪಿ ನಿರಂತರ ಅವಹೇಳನಕಾರಿ ಮತ್ತು ಕೋಮುವಾದಿ ಹೇಳಿಕೆ ನೀಡುತ್ತಿದೆ. ಹಾಗಾಗಿ ಕರ್ನಾಟಕ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದೇನೆ.;

Update: 2024-10-05 07:59 GMT
ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್ ಅವರ ಪತ್ನಿ ಟಬು ರಾವ್

ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಕಾಮೆಂಟ್‌‌ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿಯ ರಾಜ್ಯ ಘಟಕದ ಸಾಮಾಜಿಕ ಮಾಧ್ಯಮ ಸೆಲ್ ವಿರುದ್ಧ ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್ ಅವರ ಪತ್ನಿ ಟಬು ರಾವ್(ತಬಸ್ಸುಮ್ ರಾವ್) ಅವರು ರಾಜ್ಯ ಮಹಿಳಾ ಆಯೋಗಕ್ಕೆ ಶುಕ್ರವಾರ ದೂರು ಸಲ್ಲಿಸಿದ್ದಾರೆ.

ಈ ಬಗ್ಗೆ ತಮ್ಮ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, "ಸಕ್ರಿಯ ರಾಜಕಾರಣದಲ್ಲಿ ಇಲ್ಲದಿದ್ದರೂ ನನ್ನ ವಿರುದ್ಧ ಬಿಜೆಪಿ, ನಿರಂತರ ಅವಹೇಳನಕಾರಿ ಮತ್ತು ಕೋಮುವಾದಿ ಹೇಳಿಕೆ ನೀಡುತ್ತಿದೆ. ಈ ಬಗ್ಗೆ ಬಿಜೆಪಿ ವಿರುದ್ಧ ಕರ್ನಾಟಕ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದೇನೆ. ಮಹಿಳೆಯ ಮೇಲೆ ದಾಳಿ ಮಾಡುವುದು ಕ್ಷುಲ್ಲಕ. ಮಹಿಳೆಯರು ಗೌರವಕ್ಕೆ ಅರ್ಹರು, ನಿಂದನೆಗೆ ಅಲ್ಲ" ಎಂದು ಅವರು ಬರೆದುಕೊಂಡಿದ್ದಾರೆ.

ತಬಸ್ಸುಮ್ ರಾವ್ ಆರೋಪವೇನು?

ತಬಸ್ಸುಮ್ ರಾವ್ ಅವರು ತಮ್ಮ ದೂರಿನಲ್ಲಿ ಮಹಿಳಾ ಆಯೋಗಕ್ಕೆ ಈ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸುವಂತೆ ಕೋರಿದ್ದಾರೆ. ತನ್ನ ಘನತೆಯನ್ನು ಕಾಪಾಡಬೇಕು ಮತ್ತು ತಮಗೆ ನೀಡುತ್ತಿರುವ ನಿರಂತರ ಕಿರುಕುಳವನ್ನು ತಡೆಯಬೇಕು ಎಂದು ಮಹಿಳಾ ಆಯೋಗಕ್ಕೆ ಒತ್ತಾಯಿಸಿದ್ದಾರೆ.

ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್ ಅವರ ಪತ್ನಿಯಾಗಿರುವುದು ಮತ್ತು ಮುಸ್ಲಿಂ ಧರ್ಮದ ಕಾರಣಕ್ಕಾಗಿ ನನ್ನ ಮೇಲೆ ವಿನಾಕಾರಣ ಹಲ್ಲೆಗಳು ಮತ್ತು ಕೋಮುವಾದಿ ಉಲ್ಲೇಖಗಳು ನಡೆಯುತ್ತಿವೆ. ದುರದೃಷ್ಟವಶಾತ್, ಬಿಜೆಪಿ ನಾಯಕರು ಮತ್ತು ಅವರ ಸಾಮಾಜಿಕ ಮಾಧ್ಯಮಗಳು ನನ್ನನ್ನು ಪದೇಪದೆ ಗುರಿಯಾಗಿಸುತ್ತಿದ್ದು, ಅವರಿಗೆ ಇದು ವಾಡಿಕೆಯಾಗಿದೆ ಎಂದು ತಬಸ್ಸುಮ್ ಆರೋಪಿಸಿದ್ದಾರೆ.

"ನಾನು ರಾಜಕೀಯದಲ್ಲಿ ತೊಡಗಿಸಿಕೊಳ್ಳದ ವ್ಯಕ್ತಿಯಾಗಿ, ನನ್ನ ವೈಯಕ್ತಿಕ ಜೀವನ ಮತ್ತು ನನ್ನ ಸಮುದಾಯವನ್ನು ರಾಜಕೀಯ ಕ್ಷೇತ್ರಕ್ಕೆ ಎಳೆಯುತ್ತಿರುವುದು ಖಂಡನೀಯ ಎಂದು ನಾನು ಭಾವಿಸುತ್ತೇನೆ. ಕೇವಲ ಅವರ ಸಂಬಂಧದ ಕಾರಣಕ್ಕಾಗಿ ರಾಜಕಾರಣಿಗಳ ಕುಟುಂಬ ಸದಸ್ಯರನ್ನು ಗುರಿಯಾಗಿಸುವುದು ಸ್ವೀಕಾರಾರ್ಹವಲ್ಲ" ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ರಾಜ್ಯ ಬಿಜೆಪಿಯ ಪದಾಧಿಕಾರಿಗಳು ಮತ್ತು ಅವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ವಹಿಸುವವರ ವಿರುದ್ಧ "ತನ್ನ ವಿರುದ್ಧ ಅವಹೇಳನಕಾರಿ ಕಮೆಂಟ್ಸ್‌ಗಳನ್ನು ಮಾಡುವ, ತಮ್ಮ ಘನತೆಗೆ ಹಾನಿ ಮತ್ತು ಭಾವನಾತ್ಮಕ ಯಾತನೆ ಉಂಟುಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ" ಅವರು ಮಹಿಳಾ ಆಯೋಗಕ್ಕೆ ವಿನಂತಿಸಿಕೊಂಡಿದ್ದಾರೆ.

ಬಿಜೆಪಿ ಹೇಳಿದ್ದೇನು? 

ಸಾವರ್ಕರ್ ಕುರಿತು ಸಚಿವ ದಿನೇಶ್ ಗುಂಡೂರಾವ್ ಅವರು ಸಾವರ್ಕರ್ ದನದ ಮಾಂಸ ತಿನ್ನುತ್ತಿದ್ದರು ಎಂಬ ವಿವಾದಾತ್ಮಕ ಹೇಳಿಕೆಯ ಬಳಿಕ ಬಿಜೆಪಿ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದು, "ಬ್ರಾಹ್ಮಣ ಸಮಾಜದ ವೀರ ಸಾವರ್ಕರ್ ಅವರು ಗೋಮಾಂಸ ಸೇವಿಸುತ್ತಿದ್ದರು ಎಂದು ನಿಮಗೆ ಬ್ರಾಹ್ಮಣ ಸಮಾಜದ ನಿಮ್ಮ ತಂದೆ ಗುಂಡೂರಾವ್ ಹೇಳಿದ್ದರೋ ಅಥವಾ ಮುಸ್ಲಿಂ ಸಮಾಜದ ನಿಮ್ಮ ಪತ್ನಿ ತಬಸ್ಸುಮ್ ಅವರು ಹೇಳಿದ್ದರೋ..?" ಎಂದು ಪೋಸ್ಟ್‌ ಅನ್ನು ಹಂಚಿಕೊಂಡಿದೆ. ಈ ಪೋಸ್ಟ್‌ ವಿರುದ್ಧ ದಿನೇಶ್‌ ಗುಂಡೂರಾವ್‌ ಪತ್ನಿ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

 

ಏನಿದು ಸಾವರ್ಕರ್- ಗೋಮಾಂಸ ವಿವಾದ

ಅಕ್ಟೋಬರ್ 2 ರಂದು ʼಗಾಂಧಿ ಅಸಾಸಿನ್ʼ ದಿ ಮೇಕಿಂಗ್ ಆಫ್ ನಾಥೂರಾಮ್ ಗೋಡ್ಸೆ ಮತ್ತು ಅವರ ಐಡಿಯಾ ಆಫ್ ಇಂಡಿಯಾʼ ಎಂಬ ಕೃತಿಯ ಕನ್ನಡ ಆವೃತ್ತಿಯ ಬಿಡುಗಡೆಯ ಸಂದರ್ಭದಲ್ಲಿ ಸಚಿವ ದಿನೇಶ್ ಗುಂಡೂ ರಾವ್ ಅವರು "ಸಾವರ್ಕರ್ ಗೋಹತ್ಯೆಯನ್ನು ವಿರೋಧಿಸಲಿಲ್ಲ. ಅವರು ಚಿತ್ಪಾವನ ಬ್ರಾಹ್ಮಣರಾಗಿದ್ದರು. ಆದರೆ ಅವರು ಮಾಂಸವನ್ನು ತಿನ್ನುತ್ತಿದ್ದರು. ಅವರು ಆಧುನಿಕತಾವಾದಿಯಾಗಿದ್ದರು, ಅವರು ಬ್ರಾಹ್ಮಣರಾಗಿ ಮಾಂಸವನ್ನು ಸೇವಿಸುತ್ತಿದ್ದರು ಮತ್ತು ಅದನ್ನು ತಿನ್ನುವುದನ್ನು ಬಹಿರಂಗವಾಗಿ ಪ್ರಚಾರ ಮಾಡಿದರು" ಎಂದು ಹೇಳಿದ್ದರು.

ಇದಲ್ಲದೆ "ಗಾಂಧೀಜಿ ಅವರು ಸಸ್ಯಾಹಾರಿ ಮತ್ತು ಹಿಂದೂ ಧರ್ಮದಲ್ಲಿ ಬಲವಾದ ನಂಬಿಕೆಯನ್ನು ಹೊಂದಿದ್ದರು. ಆದರೆ ಅವರ ಕಾರ್ಯಗಳು ವಿಭಿನ್ನವಾಗಿವೆ. ಅವರು ಪ್ರಜಾಪ್ರಭುತ್ವದ ವ್ಯಕ್ತಿಯಾಗಿದ್ದರು. ಜಿನ್ನಾ ಅವರು ವೈನ್ ಸೇವಿಸುವ ಒಬ್ಬ ಕಟ್ಟಾ ಇಸ್ಲಾಮಿಸ್ಟ್ ಆಗಿದ್ದರು ಮತ್ತು ಕೆಲವರು ಅವರು ಹಂದಿಮಾಂಸವನ್ನು ಸಹ ತಿನ್ನುತ್ತಿದ್ದರು ಎಂದು ಹೇಳುತ್ತಾರೆ. ಆದರೆ ಅವರು ಮೂಲಭೂತವಾದಿಯಾಗಿರಲಿಲ್ಲ, ಆದರೆ ಸಾವರ್ಕರ್ ಅವರು ಜಾತ್ಯತೀತ ತತ್ವವನ್ನು ಅನುಸರಿಸಿ ರಾಷ್ಟ್ರಪತಿ ಅಥವಾ ಪ್ರಧಾನ ಮಂತ್ರಿಯಾಗಲು ತಮ್ಮ ತತ್ತ್ವಶಾಸ್ತ್ರವನ್ನು ರಾಜಿ ಮಾಡಿಕೊಂಡರು" ಎಂದು ದಿನೇಶ್‌ ಗುಂಡೂರಾವ್ ಹೇಳಿದ್ದರು.

ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಅವರು ಗೋಮಾಂಸ ತಿನ್ನುತ್ತಿದ್ದರು ಎಂಬ ಹೇಳಿಕೆಯ ಹಿನ್ನೆಲೆಯಲ್ಲಿ ಬಿಜೆಪಿ, ಸಚಿವ ದಿನೇಶ್‌ ಗುಂಡೂರಾವ್‌ ಅವರನ್ನು ತರಾಟೆಗೆ ತೆಗೆದುಕೊಂಡಿದೆ.

Tags:    

Similar News