ಬಿಬಿಎಂಪಿ ವಿಂಗಡಣೆ: ವಿರೋಧ ಪಕ್ಷಗಳೊಂದಿಗೆ ಚರ್ಚಿಸಿದ ಬಳಿಕ ಸರ್ಕಾರ ನಿರ್ಧಾರ
ಮಹಾನಗರ ಪಾಲಿಕೆ ವಿಂಗಡಣೆ ಪ್ರಸ್ತುತ ಇರುವ ವ್ಯಾಪ್ತಿಯಲ್ಲೇ ವಿಂಗಡಣೆ ನಡೆಸಲಾಗುವುದು, ಆದಷ್ಟು ಬೇಗ ಕ್ಯಾಬಿನೆಟ್ ಸಭೆಯಲ್ಲಿ ಈ ವಿಷಯವನ್ನು ಮಂಡಿಸಿ, ಚುನಾವಣೆ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಡಿಕೆಶಿ ತಿಳಿಸಿದ್ದಾರೆ.;
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಂಗಡಣೆಯ ಕುರಿತು ಅಂತಿಮ ವರದಿ ಸಲ್ಲಿಕೆಯಾಗಿದ್ದು, ವಿರೋಧ ಪಕ್ಷಗಳೊಂದಿಗೆ ಚರ್ಚಿಸಿದ ಬಳಿಕವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಅವರು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಮಹಾನಗರ ಪಾಲಿಕೆ ವಿಂಗಡಣೆ ಪ್ರಸ್ತುತ ಇರುವ ವ್ಯಾಪ್ತಿಯಲ್ಲೇ ವಿಂಗಡಣೆ ನಡೆಸಲಾಗುವುದು, ಆದಷ್ಟು ಬೇಗ ಕ್ಯಾಬಿನೆಟ್ ಸಭೆಯಲ್ಲಿ ಈ ವಿಷಯವನ್ನು ಮಂಡಿಸಿ, ಚುನಾವಣೆ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ವರದಿ ಸಲ್ಲಿಕೆಯಾದ ಸಂದರ್ಭದಲ್ಲಿ ತಾವು ಹಾಜರಿಲ್ಲದ ಕಾರಣ, ವಿರೋಧ ಪಕ್ಷಗಳ ನಾಯಕರೊಂದಿಗೆ ಮಾತುಕತೆ ಸಾಧ್ಯವಾಗಿರಲಿಲ್ಲ. ಈಗ ಅಧಿಕಾರಿಗಳಿಗೆ ಸೂಚಿಸಿದ್ದು, ವಿರೋಧ ಪಕ್ಷಗಳ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಅಭಿಪ್ರಾಯಗಳನ್ನು ಆಲಿಸಿದ ನಂತರವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಭವಿಷ್ಯದಲ್ಲಿ ಅಗತ್ಯವಿದ್ದಲ್ಲಿ ಹೊಸ ಪ್ರದೇಶಗಳನ್ನು ಸೇರ್ಪಡೆ ಮಾಡುವ ಬಗ್ಗೆ ಪರಿಗಣಿಸಲಾಗುವುದು, ಆದರೆ ಸದ್ಯಕ್ಕೆ ಈಗಿರುವ ವ್ಯಾಪ್ತಿಯಲ್ಲೇ ಸಮಾನವಾಗಿ ವಿಂಗಡಣೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಪರಮೇಶ್ವರ್ ಭೇಟಿ
ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ, ಪರಮೇಶ್ವರ್ ಅವರ ತಾಲೂಕಿನಲ್ಲಿ ಯೋಜನೆಯಿಂದ ಉಂಟಾಗಬಹುದಾದ ಕೆಲವು ಸಮಸ್ಯೆಗಳಿದ್ದವು. ಅವರ ತಾಲೂಕನ್ನು ಯೋಜನೆಯಿಂದ ಹೊರಗಿಡುವ ಬಗ್ಗೆ ಪ್ರಸ್ತಾಪವಿತ್ತು. ಆದರೆ ನೀರು ಸಂಗ್ರಹಿಸಿದಾಗ ಯಾವ ಗ್ರಾಮಗಳು ಮುಳುಗಡೆ ಆಗುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು, ಅವರ ಅನುಮತಿಯನ್ನು ಪಡೆಯಲಾಗಿದೆ ಎಂದು ಡಿಕೆಶಿ ಸ್ಪಷ್ಟಪಡಿಸಿದರು.
ಸುಮಾರು 150 ಅಡಿ ಆಳದಲ್ಲಿರುವ ಕೆರೆಗಳ ಕುರಿತು ಅವರಿಗೆ ವಿವರಿಸಲಾಗಿದೆ. ನಾಳೆ ಪರಮೇಶ್ವರ್ ಅವರು ಕೂಡ ಕ್ಯಾಬಿನೆಟ್ ಸಭೆಯಲ್ಲಿ ಭಾಗವಹಿಸುವುದರಿಂದ, ಭೂಸ್ವಾಧೀನ ಪ್ರಕ್ರಿಯೆ ಆರಂಭಿಸುವ ಮೊದಲು ಅವರೊಂದಿಗೆ ಮಾತುಕತೆ ನಡೆಸಿ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆ ಅವರು ತಿಳಿಸಿದರು.
ದೆಹಲಿ ಪ್ರವಾಸ
ನಾಳೆಯಿಂದ ದೆಹಲಿಗೆ ಪ್ರಯಾಣ ಬೆಳೆಸಲಿರುವ ಡಿಕೆಶಿ, ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಅರಣ್ಯ ಸಚಿವರನ್ನು ಭೇಟಿ ಮಾಡುವುದಾಗಿ ತಿಳಿಸಿದ್ದಾರೆ. ಹಾಸನ ಮತ್ತು ತುಮಕೂರಿಗೆ ಇನ್ನೂ ಅನುಮತಿ ದೊರೆತಿಲ್ಲ. ಈ ಹಿಂದೆ ದೂರವಾಣಿ ಮೂಲಕ ಮಾತ್ರ ಮಾತನಾಡಿದ್ದೆ, ಈಗ ನೇರವಾಗಿ ಭೇಟಿ ಮಾಡಿ ಚರ್ಚಿಸಲಾಗುವುದು ಎಂದರು. ಅಲ್ಲದೆ, ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗಿಯೂ ಚರ್ಚಿಸುವುದಾಗಿ ಹೇಳಿದರು.
ಹೈಕಮಾಂಡ್ ನಾಯಕರ ಭೇಟಿ ಕುರಿತ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, "ಕಾಂಗ್ರೆಸ್ ಪಕ್ಷ ನಮಗೆ ದೇವಸ್ಥಾನ ಇದ್ದಂತೆ. ಹೋದಾಗ ಕೈಮುಗಿದು ಬರುತ್ತೇವೆ" ಎಂದು ಉತ್ತರಿಸಿದರು.