ನಟ ಸಲ್ಮಾನ್‌ ಖಾನ್‌ಗೆ ಕೊಲೆ ಬೆದರಿಕೆ: ಹಾವೇರಿಯಲ್ಲಿ ಆರೋಪಿ ಬಂಧನ

ನಟ ಸಲ್ಮಾನ್‌ ಖಾನ್‌ಗೆ ಕೊಲೆ ಬೆದರಿಕೆ ಸಂದೇಶ ಕಳುಹಿಸಿರುವ ವ್ಯಕ್ತಿ ಹಾವೇರಿಯಲ್ಲಿರುವ ಕುರಿತು ಮುಂಬೈ ಪೊಲೀಸರು ಹಾವೇರಿ ಜಿಲ್ಲಾ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದನ್ನಾಧರಿಸಿ ಆರೋಪಿ ಬಿಕಾರಾಮ್‌ನನ್ನು ಬುಧವಾರ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಂಶುಕುಮಾರ್‌ ತಿಳಿಸಿದ್ದಾರೆ.;

Update: 2024-11-07 06:51 GMT

ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ ಹಾಕಿದ್ದ ರಾಜಸ್ಥಾನ ಮೂಲದ ಆರೋಪಿಯನ್ನು ಹಾವೇರಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ರಾಜಸ್ತಾನದ ಜಾಲೋರ್ ಮೂಲದ ಬಿಕಾರಾಮ್ ಬಂಧಿತ ಆರೋಪಿ. ಕಟ್ಟಡ ನಿರ್ಮಾಣ ಕಾರ್ಮಿಕನಾಗಿ ರಾಜ್ಯದ ಬೇರೆ ಬೇರೆ ನಗರಗಳಲ್ಲಿ ಕೆಲಸ ಮಾಡಿಕೊಂಡಿದ್ದ ಈತ ಇತ್ತೀಚೆಗೆ ಹಾವೇರಿಗೆ ಬಂದು ಗೌಡರ ಓಣಿಯಲ್ಲಿ ಇತರೆ ಕೂಲಿಕಾರರೊಂದಿಗೆ ವಾಸವಾಗಿದ್ದ.

ನಟ ಸಲ್ಮಾನ್‌ ಖಾನ್‌ಗೆ ಕೊಲೆ ಬೆದರಿಕೆ ಸಂದೇಶ ಕಳುಹಿಸಿರುವ ವ್ಯಕ್ತಿ ಹಾವೇರಿಯಲ್ಲಿರುವ ಕುರಿತು ಮುಂಬೈ ಪೊಲೀಸರು ಹಾವೇರಿ ಜಿಲ್ಲಾ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದನ್ನಾಧರಿಸಿ ಆರೋಪಿ ಬಿಕಾರಾಮ್‌ನನ್ನು ಬುಧವಾರ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಂಶುಕುಮಾರ್‌ ತಿಳಿಸಿದ್ದಾರೆ. ಸದ್ಯ ಆರೋಪಿಯನ್ನು ಮುಂಬೈ ಭಯೋತ್ಪಾದನಾ ನಿಗ್ರಹ ಪಡೆಗೆ ಒಪ್ಪಿಸಲಾಗಿದೆ.

ಸಲ್ಮಾನ್‌ ಖಾನ್‌ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಮಹಾರಾಷ್ಟ್ರದ ಮಾಜಿ ಶಾಸಕ ಬಾಬಾ ಸಿದ್ಧಿಕಿ ಅವರನ್ನು ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ ಹತ್ಯೆ ಮಾಡಿತ್ತು. ಬಿಷ್ಣೋಯಿ ಗ್ಯಾಂಗ್‌ ಸದಸ್ಯರಿಂದ ನಟ ಸಲ್ಮಾನ್‌ ಖಾನ್‌ಗೂ ಬೆದರಿಕೆ ಸಂದೇಶಗಳು ಬರುತ್ತಿದ್ದವು. ಕಳೆದ ತಿಂಗಳು ಮುಂಬೈನ ವರ್ಲಿ ಪೊಲೀಸರ ವಾಟ್ಸಾಪ್‌ ಸಹಾಯವಾಣಿಗೆ ಬೆದರಿಕೆ ಸಂದೇಶ ಕಳುಹಿಸಿದ್ದ ಆರೋಪಿ, ಸಲ್ಮಾನ್ ಖಾನ್‌ ಹತ್ಯೆ ಮಾಡದಿರಲು 5 ಕೋಟಿ ಹಣ ನೀಡುವಂತೆ ಒತ್ತಾಯಿಸಿದ್ದ. ಈ ಬಗ್ಗೆ ವರ್ಲಿ ಪೊಲೀಸರು  ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. 

ಆಗ ಆರೋಪಿಯು ಹಾವೇರಿಯಲ್ಲಿರುವ ಸಂಗತಿ ಮುಂಬೈ ಪೊಲೀಸರಿಗೆ ತಿಳಿದುಬಂದಿತ್ತು. ಮುಂಬೈ ಪೊಲೀಸರ ಮಾಹಿತಿ ಆಧರಿಸಿ ಹಾವೇರಿ ಜಿಲ್ಲಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Tags:    

Similar News