Save Karnataka Tigers | ಚಾಮರಾಜನಗರದಲ್ಲಿ ಐದು ಹುಲಿಗಳ ಸಾವು: ಮೂವರು ಅರಣ್ಯಾಧಿಕಾರಿಗಳಿಗೆ ಕಡ್ಡಾಯ ರಜೆ
ಕಳೆದ ನಾಲ್ಕು ದಿನಗಳ ಹಿಂದೆ, ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ಧಾಮದ ಹೂಗ್ಯಂ ವಲಯದ ಮೀಣ್ಯಂ ಸಮೀಪದ ಗಾಜನೂರು ಅರಣ್ಯದಲ್ಲಿ ಈ ಹುಲಿಗಳು ಮೃತಪಟ್ಟಿದ್ದವು.;
ಸಾಂದರ್ಭಿಕ ಚಿತ್ರ
ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿ ಧಾಮದಲ್ಲಿ ಕಳೆದ ಕೆಲ ದಿನಗಳ ಹಿಂದೆ ಐದು ಹುಲಿಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಗಂಭೀರ ಕ್ರಮ ಕೈಗೊಂಡಿದೆ. ಇಲಾಖೆಯ ಪ್ರಾಥಮಿಕ ತನಿಖೆಯಲ್ಲಿ ಕರ್ತವ್ಯ ಲೋಪ ಕಂಡಬಂದ ಹಿನ್ನೆಲೆಯಲ್ಲಿ, ಮಲೆ ಮಹದೇಶ್ವರ ವನ್ಯಜೀವಿಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೇರಿದಂತೆ ಒಟ್ಟು ಮೂವರು ಅಧಿಕಾರಿಗಳನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದೆ.
ಕಳೆದ ನಾಲ್ಕು ದಿನಗಳ ಹಿಂದೆ, ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ಧಾಮದ ಹೂಗ್ಯಂ ವಲಯದ ಮೀಣ್ಯಂ ಸಮೀಪದ ಗಾಜನೂರು ಅರಣ್ಯದಲ್ಲಿ ಈ ಹುಲಿಗಳು ಮೃತಪಟ್ಟಿದ್ದವು. ಘಟನೆ ನಡೆದ ಸ್ಥಳವು ಕಳ್ಳಬೇಟೆ ತಡೆ ಶಿಬಿರದಿಂದ ಕೇವಲ 800 ಮೀಟರ್ ಅಂತರದಲ್ಲಿತ್ತು ಎಂಬುದು ಮತ್ತು ಮುಖ್ಯ ಸಂಚಾರ ರಸ್ತೆಯಿಂದ 100 ಮೀಟರ್ ಸಮೀಪದಲ್ಲಿ ಹುಲಿಗಳ ಸಾವಿಗೆ ಕಾರಣವಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಅಲ್ಲದೆ, ಕಳೆದ ಮೂರು ತಿಂಗಳಿಂದ ಹೊರಗುತ್ತಿಗೆ ನೌಕರರಿಗೆ ವೇತನ ಪಾವತಿಯಾಗದಿರುವುದು ಭದ್ರತಾ ವ್ಯವಸ್ಥೆಯ ಲೋಪಕ್ಕೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆಯು ಮಲೆ ಮಹದೇಶ್ವರ ವನ್ಯಜೀವಿಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಕ್ರಪಾಣಿ ವೈ, ಹನೂರು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಜಾನನ ಹೆಗಡೆ, ಮತ್ತು ಹೂಗ್ಯಂ ವಲಯ ಅರಣ್ಯಾಧಿಕಾರಿ ಮಾದೇಶ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕಡ್ಡಾಯ ರಜೆಯ ಮೇಲೆ ಕಳುಹಿಸಿ ಆದೇಶ ಹೊರಡಿಸಿದೆ.
ಈ ಅಧಿಕಾರಿಗಳ ಅನುಪಸ್ಥಿತಿಯಲ್ಲಿ, ಅರಣ್ಯ ಇಲಾಖೆಯು ಹೊಸ ಪ್ರಭಾರಗಳನ್ನು ನಿಯೋಜಿಸಿದೆ. ಮಲೆ ಮಹದೇಶ್ವರ ವನ್ಯಜೀವಿಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಸಂತೋಷ್ ಕುಮಾರ್ ಜಿ ಅವರಿಗೆ ಹೆಚ್ಚುವರಿ ಪ್ರಭಾರ ನೀಡಲಾಗಿದೆ. ಹನೂರು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಸ್ವಪ್ನಿಲ್ ಮನೋಹರ್ ಅಹಿರೆ ಅವರಿಗೆ ಹೆಚ್ಚುವರಿ ಪ್ರಭಾರ ನೀಡಲಾಗಿದ್ದು, ತರಬೇತಿ ವಲಯ ಅರಣ್ಯಾಧಿಕಾರಿಯಾಗಿರುವ ಉಮಾಪತಿ ಕೆ ಅವರನ್ನು ಹೂಗ್ಯಂ ವಲಯದ ವಲಯ ಅರಣ್ಯಾಧಿಕಾರಿಯಾಗಿ ಹೆಚ್ಚುವರಿ ಪ್ರಭಾರದಲ್ಲಿ ಕರ್ತವ್ಯ ನಿರ್ವಹಿಸಲು ಆದೇಶಿಸಲಾಗಿದೆ.