ಸಿಎಂ ಕುರ್ಚಿಗೆ ಹೋರಾಟದ ನಡುವೆ ದೇವರ ಮೊರೆ ಹೋದ ಡಿಸಿಎಂ ಡಿ.ಕೆ. ಶಿವಕುಮಾರ್
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತ್ಯೇಕವಾಗಿ ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ ಮಾಡಲು ಸಮಯಾವಕಾಶ ಕೇಳಿದ್ದರು. ಆದರೆ ಇಬ್ಬರಿಗೂ ಹೈಕಮಾಂಡ್ ನಾಯಕರು ಭೇಟಿಗೆ ಅವಕಾಶ ನೀಡಿರಲಿಲ್ಲ.;
ಡಿಸಿಎಂ ಡಿ.ಕೆ. ಶಿವಕುಮಾರ್ ಕುಟುಂಬ ಸಮೇತ ಶಿರಡಿ ಸಾಯಿಬಾಬಾ ದೇವಾಲಯಕ್ಕೆ ಭೇಟಿ ನೀಡಿದರು.
ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಊಹಾಪೋಹಗಳು ತೀವ್ರಗೊಂಡಿರುವ ನಡುವೆಯೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕುಟುಂಬ ಸಮೇತ ವಿಶೇಷ ವಿಮಾನದಲ್ಲಿ ಶಿರಡಿ ಸಾಯಿಬಾಬಾ ಮಂದಿರಕ್ಕೆ ಭೇಟಿ ನೀಡುವ ಮೂಲಕ ದೇವರ ಮೊರೆ ಹೋಗಿದ್ದಾರೆ. ಇದು ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಕುತೂಹಲ ಕೆರಳಿಸಿದೆ.
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಇಬ್ಬರೂ ಪ್ರತ್ಯೇಕವಾಗಿ ದೆಹಲಿಗೆ ತೆರಳಿ ಕಾಂಗ್ರೆಸ್ ಹೈಕಮಾಂಡ್ ನಾಯಕರ ಭೇಟಿಗೆ ಸಮಯಾವಕಾಶ ಕೇಳಿದ್ದರು. ಆದರೆ, ಚುನಾವಣಾ ಪ್ರಚಾರದ ನಿಮಿತ್ತ ಬಿಹಾರಕ್ಕೆ ತೆರಳಿದ್ದ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಇಬ್ಬರಿಗೂ ಭೇಟಿಗೆ ಅವಕಾಶ ನೀಡಿರಲಿಲ್ಲ. ಈ ಬೆಳವಣಿಗೆಗಳ ನಡುವೆ, ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, "ಐದು ವರ್ಷಗಳ ಪೂರ್ಣಾವಧಿ ಸಿಎಂ ನಾನೇ, ಡಿ.ಕೆ. ಶಿವಕುಮಾರ್‌ಗೆ ಹೆಚ್ಚು ಶಾಸಕರ ಬೆಂಬಲವಿಲ್ಲ" ಎಂದು ಹೇಳಿಕೆ ನೀಡಿದ್ದು ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು.
ಡಿಕೆಶಿ ಸಂಯಮದ ಹೇಳಿಕೆ ಮತ್ತು ದೆಹಲಿ ಬೆಳವಣಿಗೆಗಳು
ರಾಹುಲ್ ಗಾಂಧಿಯವರ ಭೇಟಿಗೆ ಅವಕಾಶ ಸಿಗದೇ ಇದ್ದರೂ, ಸಿಎಂ ಸಿದ್ದರಾಮಯ್ಯ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು. ಇದೇ ವೇಳೆ, ಸೋನಿಯಾ ಗಾಂಧಿಯವರ ಭೇಟಿಗೆ ಸಮಯಾವಕಾಶ ಕೇಳಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಭೇಟಿಗೆ ಅವಕಾಶ ಸಿಗದ ಕಾರಣ, ಅವರು ಸಂಸದೆ ಪ್ರಿಯಾಂಕಾ ವಾದ್ರಾ ಅವರನ್ನು ಭೇಟಿ ಮಾಡಿ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದ್ದರು.
ಶುಕ್ರವಾರ ರಾಜ್ಯಕ್ಕೆ ಮರಳಿದ ಸಿಎಂ ಸಿದ್ದರಾಮಯ್ಯ, "ಮುಖ್ಯಮಂತ್ರಿ ಬದಲಾವಣೆ ವಿಚಾರ ಮಾಧ್ಯಮಗಳ ಸೃಷ್ಟಿ, ಹೈಕಮಾಂಡ್ ಮಟ್ಟದಲ್ಲಿ ಈ ಕುರಿತು ಯಾವುದೇ ಒಪ್ಪಂದವಾಗಿಲ್ಲ. ಡಿಸಿಎಂ ಡಿ.ಕೆ. ಶಿವಕುಮಾರ್ ಕೂಡ ಸಿಎಂ ಕುರ್ಚಿ ಖಾಲಿ ಇಲ್ಲ ಎಂದು ಹೇಳಿದ್ದಾರೆ" ಎಂದು ಸ್ಪಷ್ಟನೆ ನೀಡಿದ್ದರು. ಸಿಎಂ ಸಿದ್ದರಾಮಯ್ಯ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್, "ಸಿಎಂ ಕುರ್ಚಿ ಖಾಲಿ ಇಲ್ಲ. ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಸಿದ್ದರಾಮಯ್ಯ ಹಾಗೂ ನಾನು ಬದ್ಧವಾಗಿದ್ದೇವೆ. ಅವರಿಗೆ ನನ್ನ ಬೆಂಬಲ ಇರಲಿದೆ" ಎಂದು ಸಂಯಮದ ಮಾತುಗಳನ್ನಾಡಿದ್ದರು.
ಶಿರಡಿ ಸಾಯಿಬಾಬಾ ಮೊರೆ ಹೋದ ಡಿಕೆಶಿ ಕುಟುಂಬ
ಮುಖ್ಯಮಂತ್ರಿ ಅಧಿಕಾರದ ಹಂಚಿಕೆ ವಿಚಾರವಾಗಿ ಈ ಹಿಂದೆಯೂ ಹಲವು ಬಾರಿ ಪ್ರತಿಕ್ರಿಯಿಸಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್, "ಪ್ರಯತ್ನಗಳು ವಿಫಲವಾಗಬಹುದು, ಆದರೆ ಪ್ರಾರ್ಥನೆಗಳು ವಿಫಲವಾಗುವುದಿಲ್ಲ" ಎಂದು ಹೇಳಿದ್ದರು. ಈಗ ಅದರಂತೆ, ಡಿಕೆಶಿ ಕುಟುಂಬ ಸಮೇತವಾಗಿ ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಭೇಟಿಯು ರಾಜ್ಯ ರಾಜಕೀಯದಲ್ಲಿನ ಹಾಲಿ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.