ಗೃಹಲಕ್ಷ್ಮಿ ಯೋಜನೆ ಹಣ ಕೂಡಿಟ್ಟು ಫ್ರಿಜ್ ಖರೀದಿಸಿದ ಮಹಿಳೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಡಿಸಿಎಂ
ಗೃಹಲಕ್ಷ್ಮಿ ಯೋಜನೆಯ ಹಣದಿಂದ ಯುಗಾದಿ ಹಬ್ಬಕ್ಕೆ 17,500 ರೂಪಾಯಿ ಕೊಟ್ಟು ಲತಾ ಹೊಸ ಫ್ರಿಜ್ ಖರೀದಿಸಿದ್ದಾರೆ.;
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಉಚಿತ ಗ್ಯಾರಂಟಿ ಯೋಜನೆಯಡಿ ಪ್ರತಿ ತಿಂಗಳು ಬರುವ 2000 ರೂ. ಹಣವನ್ನು ಕೂಡಿಟ್ಟು ಹಾವೇರಿ ಜಿಲ್ಲೆಯ ಶಿಗ್ಗಾಂವಿ ನಿವಾಸಿ ಲತಾ ಎಂಬವರು ಫ್ರಿಜ್ ಖರೀದಿ ಮಾಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಹಣದಿಂದ ಯುಗಾದಿ ಹಬ್ಬಕ್ಕೆ 17,500 ರೂಪಾಯಿ ಕೊಟ್ಟು ಹೊಸ ಫ್ರಿಜ್ ಖರೀದಿಸಿರುವ ಲತಾ, ಹಬ್ಬದಂದು ಮನೆಗೆ ಬಂದ ಫ್ರಿಜ್ಗೆ ಕುಟುಂಬಸಹಿತರಾಗಿ ಪೂಜೆ ಸಲ್ಲಿಸಿ, ಸಂತಸ ವ್ಯಕ್ತಪಡಿಸಿದ್ದರು. ಇದೀಗ
ಈ ವಿಷಯಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಡಿಕೆ ಶಿವಕುಮಾರ್, ಬಡವರ ಬದುಕಿನ ಗುಣಮಟ್ಟ ಹೆಚ್ಚಿಸಿದ ಸಾರ್ಥಕತೆ ಸಾಕು ನಮಗೆ ಎಂದು ಬರೆದುಕೊಂಡಿದ್ದಾರೆ.
‘ಹಾವೇರಿಯ ಮಹಿಳೆಯೊಬ್ಬರು ಗೃಹಲಕ್ಷ್ಮಿ ಗ್ಯಾರಂಟಿಯ ಹಣ ಕೂಡಿಟ್ಟು ಫ್ರಿಜ್ ಖರೀದಿಸಿದ ಸುದ್ದಿ ತಿಳಿದು ಮನಸ್ಸಿನಲ್ಲಿ ಒಂದು ಸಾರ್ಥಕತೆಯ ಭಾವ ಮೂಡಿದೆ. ರಾಜಕೀಯ ಮಾಡಲೆಂದೇ ಎಷ್ಟೋ ಜನ ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದರು. ನಾವು ಬಡವರ ಮೇಲೆ ರಾಜಕೀಯ ಮಾಡಲ್ಲ, ಬಡವರ ಬದುಕು ಕಟ್ಟುವ ಕೆಲಸ ಮಾಡುತ್ತಿದ್ದೇವೆ. ಅವರ ಬದುಕಿನ ಗುಣಮಟ್ಟ ಹೆಚ್ಚಿಸಿದ ಸಾರ್ಥಕತೆ ಸಾಕು ನಮಗೆ’ ಎಂದು ಡಿಕೆ ಶಿವಕುಮಾರ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಗೃಹಲಕ್ಷ್ಮಿ ಯೋಜನೆ ರಾಜ್ಯ ಸರ್ಕಾರದಿಂದ ಕರ್ನಾಟಕದ ಬಡ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಯೋಜನೆಯಾಗಿದೆ. ಈ ಯೋಜನೆಯಡಿ, ಫಲಾನುಭವಿ ಮಹಿಳೆಯರಿಗೆ ಪ್ರತಿ ವರ್ಷ ₹24,000/- ಹಣವನ್ನು 12 ಕಂತುಗಳಲ್ಲಿ ಒಂದೊಂದು ಕಂತಿಗೆ ₹2,000/- ರಂತೆ ನೀಡಲಾಗುತ್ತದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಈ ಯೋಜನೆಯನ್ನು 2023 ಜುಲೈ 19ರಿಂದ ಜಾರಿಗೆ ತರಲಾಗಿದ್ದು, ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಚಾಲನೆ ನೀಡಿದ್ದರು.