ಇಂದು ಮೈಸೂರಿಗೆ ದಸರಾ ಗಜಪಡೆ; ಆತಿಥ್ಯಕ್ಕೆ ನಡೆದಿವೆ ಸಕಲ ಸಿದ್ಧತೆ
ಆನೆಗಳ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ನಿಗಾ ವಹಿಸಲು ಮೈಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಡಾ. ಐ.ಬಿ. ಪ್ರಭುಗೌಡ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದೆ.;
ವಿಶ್ವವಿಖ್ಯಾತ ನಾಡಹಬ್ಬ ದಸರಾದ ಮುನ್ನುಡಿಯಾದ 'ಗಜಪಯಣ'ಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು (ಆಗಸ್ಟ್ 4ರಂದು) ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಿಂದ, ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಒಂಬತ್ತು ಆನೆಗಳ ಮೊದಲ ತಂಡವು ಮೈಸೂರಿನತ್ತ ವೈಭವದಿಂದ ಹೆಜ್ಜೆ ಹಾಕಲಿದೆ. ಮಧ್ಯಾಹ್ನ 12.34 ರಿಂದ 12.59ರ ತುಲಾ ಲಗ್ನದಲ್ಲಿ ಗಜಪಯಣಕ್ಕೆ ವಿಧ್ಯುಕ್ತ ಚಾಲನೆ ದೊರೆಯಲಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಸುಮಾರು ಐದು ಸಾವಿರ ಜನರು ಸೇರುವ ನಿರೀಕ್ಷೆಯಿದೆ.
ಆಗಸ್ಟ್ 4ರಂದು ವೀರನಹೊಸಹಳ್ಳಿಯಿಂದ ಹೊರಡುವ ಗಜಪಡೆಯು ಅಶೋಕಪುರಂನಲ್ಲಿರುವ ಅರಣ್ಯ ಇಲಾಖೆ ಆವರಣದಲ್ಲಿ ತಂಗಿ, ಬಳಿಕ ಸಾಂಪ್ರದಾಯಿಕ ಸ್ವಾಗತದೊಂದಿಗೆ ಅರಮನೆ ಅಂಗಳವನ್ನು ಪ್ರವೇಶಿಸಲಿವೆ. ಗಜಪಡೆಗೆ ರಾಜೋಚಿತ ಆತಿಥ್ಯ ನೀಡಲು ಅರಮನೆಯಲ್ಲಿ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಆನೆಗಳೊಂದಿಗೆ ಬರುವ ಮಾವುತರು, ಕಾವಾಡಿಗಳು ಹಾಗೂ ಅವರ ಕುಟುಂಬದ ಸುಮಾರು 70 ಸದಸ್ಯರಿಗಾಗಿ 24 ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಲಾಗುತ್ತಿದೆ. ಗಜಪಡೆಯ ನಾಯಕ, ಕ್ಯಾಪ್ಟನ್ ಅಭಿಮನ್ಯುವಿಗಾಗಿ ಅರಮನೆ ಆವರಣದ ಕೋಡಿ ಸೋಮೇಶ್ವರ ದೇವಸ್ಥಾನದ ಎದುರು ಪ್ರತ್ಯೇಕವಾದ ಮತ್ತು ಸುಸಜ್ಜಿತವಾದ ಶೆಡ್ ನಿರ್ಮಾಣವಾಗುತ್ತಿದ್ದರೆ, ಉಳಿದ ಆನೆಗಳಿಗೆ ಅರಮನೆಯ ಹಿಂಭಾಗದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.
ಆರೈಕೆಗಾಗಿ ವಿಶೇಷ ತಂಡ ರಚನೆ
ಎರಡು ತಿಂಗಳ ಕಾಲ ಅರಮನೆ ಆವರಣದಲ್ಲಿ ವಾಸ್ತವ್ಯ ಹೂಡುವ ಆನೆಗಳ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ನಿಗಾ ವಹಿಸಲು ಮೈಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಡಾ. ಐ.ಬಿ. ಪ್ರಭುಗೌಡ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದೆ. ಈ ತಂಡದಲ್ಲಿ ಎಸಿಎಫ್, ಆರ್ಎಫ್‌ಒ, ಡಿಆರ್‌ಎಫ್‌ಒ, ಪಶುವೈದ್ಯರು ಮತ್ತು ಸಹಾಯಕರು ಇದ್ದು, ಪ್ರತಿದಿನ ಆನೆಗಳ ಆರೋಗ್ಯವನ್ನು ತಪಾಸಣೆ ಮಾಡಲಿದ್ದಾರೆ.
ಆನೆಗಳ ಪೋಷಣೆಗೆ 'ತ್ರಿಸೂತ್ರ' ಪಾಲನೆ
ದಸರಾದ ಪ್ರಮುಖ ಆಕರ್ಷಣೆಯಾದ ಗಜಪಡೆಯ ನಿರ್ವಹಣೆಗಾಗಿ ಅರಣ್ಯ ಇಲಾಖೆಯು 'ಆಹಾರ, ಆರೈಕೆ ಮತ್ತು ತಾಲೀಮು' ಎಂಬ 'ತ್ರಿಸೂತ್ರ' ನೀತಿಯನ್ನು ಅನುಸರಿಸಲು ತೀರ್ಮಾನಿಸಿದೆ. ಕಾಡಿನಿಂದ ನಾಡಿಗೆ ಬರುವ ಆನೆಗಳ ಆರೋಗ್ಯದಲ್ಲಿ ಆರಂಭದಲ್ಲಿ ಸಣ್ಣಪುಟ್ಟ ಏರುಪೇರುಗಳು ಸಹಜ. ಸುಲಭವಾಗಿ ಸಿಗುವ ಪೌಷ್ಟಿಕ ಆಹಾರದಿಂದ ದೇಹದ ತೂಕ ಹೆಚ್ಚಾಗುವುದು ಮತ್ತು ಭೇದಿಯಾಗುವ ಸಾಧ್ಯತೆಗಳಿರುತ್ತವೆ. ಇದನ್ನು ಸಮತೋಲನಗೊಳಿಸಲು ಮತ್ತು ಆನೆಗಳನ್ನು ಲವಲವಿಕೆಯಿಂದ ಇರಿಸಲು ನಿತ್ಯವೂ ಎರಡು ಬಾರಿ ತಾಲೀಮು ನಡೆಸಲಾಗುತ್ತದೆ.
24 ಗಂಟೆ ನಿಗಾ ಮತ್ತು ಸಮತೋಲಿತ ಆಹಾರ
ಆನೆಗಳ ಆಹಾರ ಕ್ರಮ ಅತ್ಯಂತ ವೈಜ್ಞಾನಿಕವಾಗಿರುತ್ತದೆ. ಪ್ರತೀ ಆನೆಯ ತೂಕವನ್ನು ಆಧರಿಸಿ, ದಿನಕ್ಕೆ 450 ರಿಂದ 750 ಕೆ.ಜಿ.ಯಷ್ಟು ಆಹಾರವನ್ನು ನೀಡಲಾಗುತ್ತದೆ. "ಹೆಸರುಕಾಳು, ಉದ್ದಿನಕಾಳು, ಹುರುಳಿಕಾಳನ್ನು ಸುಮಾರು 12 ರಿಂದ 18 ಗಂಟೆಗಳ ಕಾಲ ಬೇಯಿಸಿ, ಅದಕ್ಕೆ ತೆಂಗಿನಕಾಯಿ, ಬೆಲ್ಲ ಮತ್ತು ವಿವಿಧ ತರಕಾರಿಗಳನ್ನು ಸೇರಿಸಿ ಉಂಡೆ ಮಾಡಿ ನೀಡಲಾಗುತ್ತದೆ. ಆಹಾರ ನೀಡುವ ಮೊದಲು ಪಶುವೈದ್ಯರು ಆನೆಗಳ ಆರೋಗ್ಯ, ತೂಕ ಮತ್ತು ನಡವಳಿಕೆಯನ್ನು ಪರಿಶೀಲಿಸುತ್ತಾರೆ," ಎಂದು ಡಿಸಿಎಫ್ ಡಾ. ಪ್ರಭುಗೌಡ ತಿಳಿಸಿದ್ದಾರೆ.
ಆನೆಗಳಿಗೆ ಇಷ್ಟವಾದ ಕಬ್ಬು, ಹಲಸು, ಆಲ, ಅರಳಿ ಮರದ ಸೊಪ್ಪು, ಹಸಿರು ಹುಲ್ಲು ಮತ್ತು ಒಣಹುಲ್ಲನ್ನು ಸಹ ನೀಡಲಾಗುತ್ತದೆ. ಅಗತ್ಯವಿರುವ ಪೋಷಕಾಂಶಗಳನ್ನು ಸಿರಿಪ್ ರೂಪದಲ್ಲಿಯೂ ಪೂರೈಸಲಾಗುತ್ತದೆ. ಈ ಆಹಾರ ತಯಾರಿಕೆಗಾಗಿಯೇ ಹತ್ತು ಜನರ ತಂಡವನ್ನು ನಿಯೋಜಿಸಲಾಗಿದೆ.
ಈ ಬಾರಿ ಸೆಪ್ಟೆಂಬರ್ 22ರಂದು ದಸರಾ ಉದ್ಘಾಟನೆಗೊಳ್ಳಲಿದ್ದು, ಅಕ್ಟೋಬರ್ 2ರಂದು ಜಂಬೂಸವಾರಿ ನಡೆಯಲಿದೆ. ಗಜಪಡೆಯು ಅಕ್ಟೋಬರ್ 4 ಅಥವಾ 5ರವರೆಗೆ ಅರಮನೆಯಲ್ಲಿ ವಾಸ್ತವ್ಯ ಹೂಡಲಿವೆ.