ಲಕ್ಷ್ಮೀ ಹೆಬ್ಬಾಳ್ಕರ್‌ ಬಗ್ಗೆ ಸಿ.ಟಿ. ರವಿ ಅಸಭ್ಯ ಪದಬಳಕೆ; ಒಂದು ರೀತಿಯ ಲೈಂಗಿಕ ದೌರ್ಜನ್ಯ ಎಂದ ಸಿಎಂ

ಸಿ.ಟಿ. ರವಿ ತಮ್ಮ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿದರು. ಸುಮಾರು ಹತ್ತು ಬಾರಿ ಆ ಪದ ಬಳಸಿ ತಮ್ಮನ್ನು ನಿಂದಿಸಿದರು. ಅವರನ್ನು ಸದನದಿಂದ ಅಮಾನತು ಮಾಡಬೇಕು ಎಂದು ಸಭಾಪತಿಗೆ ಹೆಬ್ಬಾಳ್ಕರ್ ದೂರು ನೀಡಿದ್ದಾರೆ.;

Update: 2024-12-19 12:53 GMT

ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ವಿರುದ್ಧ ಅಸಭ್ಯಪದ ಬಳಕೆ ಮಾಡಿರುವುದು ಕ್ರಿಮಿನಲ್‌ ಅಪರಾಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದ ಬಳಕೆ ಮಾಡಿರುವ ಬಗ್ಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಯವರ ವಿರುದ್ಧ ಸಭಾಪತಿಯವರಿಗೂ ಹಾಗೂ ಪೊಲೀಸ್ ಠಾಣೆಗೂ ದೂರು ಸಲ್ಲಿಸಿರುವ ಮಾಹಿತಿ ದೊರೆತಿದ್ದು, ಪೊಲೀಸರು ಈ ಕ್ರಿಮಿನಲ್ ಅಪರಾಧ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲಿದ್ದಾರೆ ಎಂದು ಸಿಎಂ ಬೆಳಗಾವಿಯಲ್ಲಿ ಹೇಳಿದ್ದಾರೆ.

ಇಂತಹ ಪದಪ್ರಯೋಗದಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮನನೊಂದಿದ್ದು, ಇಂತಹ ಪದಬಳಕೆ ಒಂದು ರೀತಿಯ ಲೈಂಗಿಕ ದೌರ್ಜನ್ಯವಾಗಿದೆ. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಘಟನೆ ಹಿನ್ನೆಲೆ

ಸಂವಿಧಾನ ಶಿಲ್ಪಿ ಬಿ ಆರ್ ಅಂಬೇಡ್ಕರ್ ವಿರುದ್ಧ ರಾಜ್ಯಸಭೆಯಲ್ಲಿ ಅವಮಾನಕರ ಹೇಳಿಕೆ ನೀಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದರು. ಕಾಂಗ್ರೆಸ್ ಹಿರಿಯ ನಾಯಕ ಬಿ ಕೆ ಹರಿಪ್ರಸಾದ್ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರು ಅಂಬೇಡ್ಕರ್ ಅವರ ಫೋಟೋ ಹಿಡಿದು ಬಿಜೆಪಿ ವಿರುದ್ಧ ಘೋಷಣೆ ಕೂಗುತ್ತಿದ್ದರು. ಆಡಳಿತ ಪಕ್ಷದ ಪ್ರತಿಭಟನೆಗೆ ಪ್ರತಿಯಾಗಿ ಬಿಜೆಪಿ ಸದಸ್ಯರು ಕೂಡ ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಕಾಂಗ್ರೆಸ್ ಎಂದು ಘೋಷಣೆ ಕೂಗಿದರು. ಈ ವೇಳೆ ಸದನ ತೀವ್ರ ಗದ್ದಲದಲ್ಲಿ ಮುಳುಗಿತ್ತು.

ಆ ಹಿನ್ನೆಲೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಕಲಾಪವನ್ನು ಕೆಲ ಕಾಲ ಮುಂದೂಡಿದರು. ಕಲಾಪ ಮುಂಡೂಡಿದ ಬಳಿಕವೂ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ಪರಸ್ಪರ ಏರಿದ ದನಿಯ ವಾಗ್ವಾದದಲ್ಲಿ ಮುಳುಗಿದ್ದರು. ಮಾತಿನ ಚಕಮಕಿಯ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಬಿಜೆಪಿ ನಾಯಕ ಸಿ ಟಿ ರವಿ ನಡುವೆ ಕೂಡ ಪರಸ್ಪರ ವಾಗ್ವಾದ ನಡೆಯಿತು.

ತಮ್ಮ ವಿರುದ್ಧ ಪ್ರತಿಪಕ್ಷ ಮುಖಂಡ ಪ್ರಯೋಗಿಸಿದ ಪದದಿಂದ ನೊಂದುಕೊಂಡ ಸಚಿವೆ, ಸದನದಲ್ಲೇ ಕಣ್ಣೀರು ಹಾಕುತ್ತಲೇ ಸದನದಿಂದ ಹೊರ ನಡೆದರು. ಬಳಿಕ, ಸಿ ಟಿ ರವಿ ಅವರು ತಮ್ಮ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿದರು. ಸುಮಾರು ಹತ್ತು ಬಾರಿ ಆ ಪದ ಬಳಸಿ ತಮ್ಮನ್ನು ನಿಂದಿಸಿದರು. ಹಾಗಾಗಿ ಅವರ ವಿರುದ್ಧ ಕ್ರಮಕೈಗೊಳ್ಳಬೇಕು. ಅವರನ್ನು ಸದನದಿಂದ ಅಮಾನತು ಮಾಡಬೇಕು ಎಂದು ಸಭಾಪತಿ ಹೊರಟ್ಟಿ ಅವರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ದೂರು ನೀಡಿದ್ದಾರೆ.

ಆದರೆ, ಆ ಆರೋಪದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಿ ಟಿ ರವಿ, ನಾನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಆಕ್ಷೇಪಾರ್ಹ ಪದ ಬಳಸಿಲ್ಲ. ಅಂತಹ ಪದ ಬಳಸಿದ ಸಾಕ್ಷಿ ಇದ್ದರೆ ಕೊಡಲಿ. ಕಪೋಲ ಕಲ್ಪಿತ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದ್ದಾರೆ.

 

Tags:    

Similar News