ELECTORAL BOND | ಸರ್ಕಾರ ರಚನೆ ಬಳಿಕ ಕಾಂಗ್ರೆಸ್‌ ಗೆ ಹರಿದುಬಂತು ಕೋಟ್ಯಂತರ ʼಗಣಿ ದೇಣಿಗೆʼ

ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷ ಸರ್ಕಾರ ರಚಿಸಿದ ಬಳಿಕ ಗಣಿ ಕಂಪೆನಿಗಳು ಕೋಟ್ಯಂತರ ರೂ. ದೇಣಿಗೆ ನೀಡಿರುವ ಸಂಗತಿ ಚುನಾವಣಾ ಆಯೋಗವು ಬಿಡುಗಡೆಗೊಳಿಸಿರುವ ಚುನಾವಣಾ ಬಾಂಡ್‌ ವಿವರಗಳಲ್ಲಿ ಬಯಲಾಗಿದೆ.;

Update: 2024-03-30 13:31 GMT

ಅಧಿಕಾರಸ್ಥ ರಾಜಕೀಯ ಪಕ್ಷಗಳು  ಚುನಾವಣಾ ಬಾಂಡ್‌ಗಳನ್ನು ಪಡೆದು, ಬಳಿಕ ಬಾಂಡ್‌ಗಳನ್ನು  ನೀಡಿದ ಕಂಪೆನಿಗಳಿಗೆ  ತಮ್ಮ ಸರ್ಕಾರಗಳ  ಮೂಲಕ ʼಪ್ರತ್ಯುಪಕಾರʼ ಮಾಡುವ ಘಟನೆಗಳು ರಾಷ್ಟ್ರವ್ಯಾಪಿ ನಡೆದಿವೆ. ಕೆಲವು ಗಣಿ ಕಂಪೆನಿಗಳಿಂದ ಚುನಾವಣಾ ಬಾಂಡ್‌ಗಳನ್ನು  ಪಡೆದ ಕಾಂಗ್ರೆಸ್‌ ಪಕ್ಷ   ಕರ್ನಾಟಕದ   ಸಿದ್ದರಾಮಯ್ಯ ನೇತೃತ್ವದ  ಸರ್ಕಾರದ ಮೂಲಕ ಆಯ್ದ ಕಂಪೆನಿಗಳಿಗೆ ʼಪ್ರತ್ಯುಪಕಾರʼ ಮಾಡಿದೆಯೇ? ಈ  ಅನುಮಾನಗಳಿಗೆ ಚುನಾವಣಾ ಆಯೋಗ ಬಿಡುಗಡೆಗೊಳಿಸಿರುವ ಚುನಾವಣಾ ಬಾಂಡ್‌ ವಿವರಗಳು  ಪುಷ್ಟಿ ನೀಡಿವೆ.

ಅಕ್ರಮ ಗಣಿಗಾರಿಕೆಯಿಂದ ಸರ್ಕಾರಕ್ಕೆ 1.43 ಲಕ್ಷ ಕೋಟಿ ರೂ. ಬಾಕಿ ಇದ್ದರೂ ಗಣಿ ಕಂಪೆನಿಗಳಿಂದ ದುಡ್ಡು ವಸೂಲಾತಿಗೆ ಸರ್ಕಾರ ಮುತುವರ್ಜಿ ವಹಿಸುತ್ತಿಲ್ಲ ಎಂಬ ಆರೋಪವನ್ನು ವಿರೋಧ ಪಕ್ಷಗಳು  ಸರ್ಕಾರದ ಮೇಲೆ ಮಾಡುತ್ತಿವೆ.  ಈ ನಡುವೆ, ಚುನಾವಣಾ ಆಯೋಗವು ಬಿಡುಗಡೆಗೊಳಿಸಿರುವ ಚುನಾವಣಾ ಬಾಂಡ್‌ ವಿವರಗಳಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಗಣಿ ಕಂಪೆನಿಗಳು ಕೋಟ್ಯಂತರ ರೂ.ಗಳನ್ನು ದೇಣಿಗೆ ನೀಡಿರುವುದು ಬೆಳಕಿಗೆ ಬಂದಿದೆ.

ಕುತೂಹಲಕಾರಿ ಅಂಶವೆಂದರೆ, ಈ ದೇಣಿಗೆಗಳಲ್ಲಿ ಬಹುಪಾಲು ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಆದ ಬಳಿಕವೇ ಪಾವತಿಯಾಗಿದೆ.

ಅರಣ್ಯೀಕರಣಕ್ಕೆ ಗಣಿ ಕಂಪನಿಗಳು ಪರ್ಯಾಯ ಭೂಮಿ ನೀಡಲು ರೈತರ ಜಮೀನನ್ನು ಖರೀದಿಸಿ ಅರಣ್ಯ ಇಲಾಖೆಗೆ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರು ಇತ್ತೀಚೆಗೆ ಸಲಹೆ ನೀಡಿದ್ದರು. ಎಪ್ರಿಲ್‌ನಲ್ಲಿ  ಕೃಷಿ ಭೂಮಿಯನ್ನು ಮಾರಾಟ ಮಾಡಲು ಸಿದ್ಧರಿರುವ ರೈತರಿಂದ ಗಣಿ ಕಂಪನಿಗಳು ಭೂಮಿಯನ್ನು ಖರೀದಿಸಿ ಮತ್ತು ಅರಣ್ಯೀಕರಣಕ್ಕಾಗಿ ಅದನ್ನು ಮರುಹಂಚಿಕೆ ಮಾಡಲು ಸಿದ್ದರಾಮಯ್ಯ ಸರ್ಕಾರ ಅನುವು ಮಾಡಿಕೊಟ್ಟಿತ್ತು. ಅರಣ್ಯ ಪ್ರದೇಶಗಳಲ್ಲಿ ಗಣಿಗಾರಿಕೆ ಮಾಡುವ ತೊಡಕು ನಿವಾರಿಸಲು ಗಣಿ ಕಂಪೆನಿಗಳಿಗೆ ಸರ್ಕಾರದ ಈ ನಿಲುವು ನೆರವಾಗಿತ್ತು ಎನ್ನಲಾಗಿದೆ.

ವೇದಾಂತ ಲಿಮಿಟೆಡ್ ಕಂಪೆನಿಯು ಎಲ್ಲಾ ಪಕ್ಷಗಳಿಗೆ ಒಟ್ಟು 400 ಕೋಟಿ ರೂ. ದೇಣಿಗೆಯನ್ನು ಚುನಾವಣಾ ಬಾಂಡ್ ಗಳ ಮೂಲಕ ನೀಡಿದ್ದು, 2023ರ ಜುಲೈ-ಅಕ್ಟೋಬರ್ ಅವಧಿಯಲ್ಲಿ(ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ) 50 ಕೋಟಿ ರೂ. ದೇಣಿಗೆಯನ್ನು ಕಾಂಗ್ರೆಸ್ ಗೆ ಮಾತ್ರ ನೀಡಿದೆ. ಅದಕ್ಕೆ ಪೂರಕವಾಗಿ, ವೇದಾಂತ ಲಿಮಿಟೆಡ್ ಚಿತ್ರದುರ್ಗ ಜಿಲ್ಲೆಯ ಮೇಗಲಹಳ್ಳಿ ಗ್ರಾಮದಲ್ಲಿ ಕಬ್ಬಿಣದ ಅದಿರು ಖನಿಜ ಬೆನಿಫಿಶಿಯೇಷನ್ ಪ್ಲಾಂಟ್ ಅನ್ನು ಸ್ಥಾಪಿಸುವ ಯೋಜನೆಯನ್ನು ಮುಂದಿಟ್ಟಿದೆ. ಕಂಪೆನಿಯ ಉದ್ದೇಶಿತ ಈ ಯೋಜನೆಗೂ ಆಡಳಿತರೂಢ ಪಕ್ಷಕ್ಕೆ ದೇಣಿಗೆ ನೀಡಿರುವುದಕ್ಕೂ ಸಂಬಂಧ ಇದೆ ಎಂಬುದಕ್ಕೆ ಬಲವಾದ ಸಾಕ್ಷ್ಯಗಳಿಲ್ಲವಾದರೂ, ಕಂಪೆನಿಯೊಂದು ಈ ಪ್ರಮಾಣದಲ್ಲಿ ಆಡಳಿತಾರೂಢ ಪಕ್ಷಕ್ಕೆ ದೇಣಿಗೆ ನೀಡಿರುವುದು ಸಹಜವಾಗಿಯೇ ಅನುಮಾನಕ್ಕೆ ಕಾರಣವಾಗಿದೆ.

ಗಣಿಗಾರಿಕೆ ನಡೆಸುವ ವಿವಿಧ ಕಂಪೆನಿಗಳಿಂದ ಕಾಂಗ್ರೆಸ್ ಪಕ್ಷಕ್ಕೆ, ಅದರಲ್ಲೂ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಹೆಚ್ಚಿನ ದೇಣಿಗೆ ದೊರೆತಿರುವುದು ಚುನಾವಣಾ ಆಯೋಗ ಬಹಿರಂಗಪಡಿಸಿರುವ ಚುನಾವಣಾ ಬಾಂಡ್‌ ವಿವರಗಳಲ್ಲಿ ಬಯಲಾಗಿದೆ.

ಕಾಂಗ್ರೆಸ್ ಗೆ ದೇಣಿಗೆ ನೀಡಿರುವ, ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಂಪೆನಿಗಳು


ದೇಣಿಗೆ ನೀಡಿದ ಕಂಪೆನಿ

ದೇಣಿಗೆ ನೀಡಿದ ಮೊತ್ತ

ದೇಣಿಗೆ ನೀಡಿದ ವರ್ಷ

ಶ್ರೀ ಕುಮಾರಸ್ವಾಮಿ ಮಿನರಲ್ ಎಕ್ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ (SKMEPL)

 8.33 ಕೋಟಿ ರೂ.ಗಳು

2023 (ಅಕ್ಟೋಬರ್)

ವೀರಭದ್ರಪ್ಪ ಸಂಗಪ್ಪ ಮತ್ತು ಕಂಪೆನಿ

5.5 ಕೋಟಿ ರೂ.ಗಳು

2023 (ಅಕ್ಟೋಬರ್)

ರಾಮಗಢ ಮಿನರಲ್ಸ್

2 ಕೋಟಿ ರೂ.ಗಳು

2023 (ಎಪ್ರಿಲ್)

ಸಂಡೂರ್ ಮ್ಯಾಂಗನೀಸ್ & ಐರನ್ ಓರೆಸ್ ಲಿಮಿಟೆಡ್

5.6 ಕೋಟಿ ರೂ.ಗಳು

2023 (ಅಕ್ಟೋಬರ್)

ವೇದಾಂತ ಲಿಮಿಟೆಡ್*

50 ಕೋಟಿ ರೂ.ಗಳು

 2023 (ಅಕ್ಟೋಬರ್ ಮತ್ತು ಜುಲೈ)*

* ವೇದಾಂತ ಲಿಮಿಟೆಡ್ ಕಂಪೆನಿಯು ಎಲ್ಲಾ ಪಕ್ಷಗಳಿಗೆ ಒಟ್ಟು 400 ಕೋಟಿ ರೂ. ದೇಣಿಗೆಯನ್ನು ಚುನಾವಣಾ ಬಾಂಡ್ ಗಳ ಮೂಲಕ ನೀಡಿದ್ದು, 2023ರ ಜುಲೈ-ಅಕ್ಟೋಬರ್ ಅವಧಿಯಲ್ಲಿ(ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ) 50 ಕೋಟಿ ರೂ. ದೇಣಿಗೆಯನ್ನು ಕಾಂಗ್ರೆಸ್ ಗೆ ಮಾತ್ರ ನೀಡಿದೆ. 

Tags:    

Similar News