Rain Damages | ಹಿಂಗಾರು ಬೆಳೆ ಹಾನಿ ಸಮೀಕ್ಷೆ; 15 ದಿನದಲ್ಲಿ ಪರಿಹಾರ: ಸಚಿವ ಕೃಷ್ಣ ಬೈರೇಗೌಡ
ರಾಜ್ಯದಲ್ಲಿ ಹಿಂಗಾರು ಹಂಗಾಮಿನ ಬೆಳೆಹಾನಿಯ ಕುರಿತು ಮೂರು ದಿನಗಳಲ್ಲಿ ಜಂಟಿ ಬೆಳೆ ಸಮೀಕ್ಷೆ ನಡೆಸಿ, 15ದಿನಗಳಲ್ಲಿ ರೈತರಿಗೆ ಬೆಳೆ ನಷ್ಟ ಪರಿಹಾರ ಒದಗಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಸಂಗೇನಹಳ್ಳಿ ಕೆರೆ ಕೋಡಿ, ಹಿರೇಮಲ್ಲನಹೊಳೆಯಲ್ಲಿ ಹಾನಿಯಾದ ಮನೆ ಹಾಗೂ ಬೆಳೆ ವೀಕ್ಷಿಸಿದ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಅಕ್ಟೋಬರ್ ಒಂದೇ ತಿಂಗಳಲ್ಲಿ ರಾಜ್ಯದಾದ್ಯಂತ ಶೇ. 66 ರಷ್ಟು ಅಧಿಕ ಮಳೆಯಾಗಿದೆ. ರಾಜ್ಯದಲ್ಲಿ ಈವರೆಗೆ 56,993 ಹೆಕ್ಟೇರ್ ಗೂ ಹೆಚ್ಚು ಪ್ರದೇಶದಲ್ಲಿ ಬೆಳೆಹಾನಿ ಉಂಟಾಗಿರುವ ಪ್ರಾಥಮಿಕ ವರದಿ ಇದೆ. ಇನ್ನೂ ಹೆಚ್ಚಿನ ಹಾನಿಯಾಗಿರುವ ಸಾಧ್ಯತೆ ಇದ್ದು, ಮೂರು ದಿನಗಳಲ್ಲಿ ಕೃಷಿ ಹಾಗೂ ಕಂದಾಯ ಇಲಾಖೆ ಜಂಟಿ ಸಮೀಕ್ಷೆ ನಡೆಸಲಿವೆ. ಬೆಳೆ ನಷ್ಟದ ನಿಖರತೆ ಆಧರಿಸಿ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ನಾಳೆ(ಶನಿವಾರ) ಮುಖ್ಯಮಂತ್ರಿ ನಡೆಸಲಿರುವ ಅಧಿಕ ಮಳೆಯಾದ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆಗಿನ ವೀಡಿಯೋ ಕಾನ್ಫರೆನ್ಸ್ ನಲ್ಲಿ ಈ ಸೂಚನೆ ನೀಡಲಾಗುತ್ತದೆ ಎಂದರು.
ಹಿಂಗಾರು ಹಂಗಾಮಿನಲ್ಲಿ ಒಟ್ಟು 21 ಜನರು ಮೃತಪಟ್ಟಿದ್ದಾರೆ. ಈ ಪೈಕಿ 9 ಜನರು ಸಿಡಿಲಿನಿಂದ ಮೃತಪಟ್ಟರೆ, 6 ಜನರು ಮನೆ ಕುಸಿತದಿಂದ ಸಾವನ್ನಪ್ಪಿದ್ದಾರೆ. 3 ರಿಂದ 4 ಜನರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಮುಂಗಾರು ಸೇರಿದಂತೆ ಇಲ್ಲಿಯವರೆಗೆ ರಾಜ್ಯದಲ್ಲಿ ಮಳೆ ಮತ್ತು ಪ್ರವಾಹಕ್ಕೆ 121 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವಿವರಿಸಿದರು.
ಅದೇ ರೀತಿ ಹಿಂಗಾರಿನಲ್ಲಿ 2,589 ಮತ್ತು ಹಿಂಗಾರಿನಲ್ಲಿ 121 ಮನೆಗಳು ಹಾನಿಗೆ ಒಳಗಾಗಿವೆ. ಇವರಿಗೂ ಮನೆ ಪರಿಹಾರದ ಜೊತೆಗೆ ಹೊಸದಾಗಿ ಮನೆ ನಿರ್ಮಿಸಿಕೊಡಲಾಗುವುದು. ಸರ್ಕಾರಿ ಜಾಗದಲ್ಲಿಅನಧಿಕೃತವಾಗಿ ಕಟ್ಟಿದ ಮನೆ ಹಾನಿಯಾದಲ್ಲಿ ಎಸ್.ಡಿ.ಆರ್.ಎಫ್ ನಡಿ ಒಂದು ಲಕ್ಷ ಪರಿಹಾರ ನೀಡಲಾಗುವುದು ಎಂದು ಹೇಳಿದರು.
ಇನ್ನು ಮುಂಗಾರು ಅವಧಿಯಲ್ಲಿ 1.18 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆನಷ್ಟವಾಗಿದ್ದು, ಈಗಾಗಲೇ ಪರಿಹಾರದ ಕಂತು ವಿತರಿಸಲಾಗಿದೆ. ಶೀಘ್ರವೇ ಪೂರ್ಣ ಪರಿಹಾರ ಪಾವತಿಸಲಾಗುವುದು ಎಂದು ಹೇಳಿದರು.