CT Ravi Case | ಎನ್‌ಕೌಂಟರ್ ಉದ್ದೇಶ: ನ್ಯಾಯಾಲಯದಲ್ಲಿ ಸಿ.ಟಿ. ರವಿ ಹೇಳಿಕೆ; ಜಾಮೀನು ತೀರ್ಪು ಕಾಯ್ದಿರಿಸಿದ ಕೋರ್ಟ್
ಸಿ.ಟಿ.ರವಿ ಅವರ ಅರ್ಜಿ ವಿಚಾರಣೆ ನಂತರ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರಾದ ಸ್ಪರ್ಶ ಡಿಸೋಜಾ ಅವರು ತೀರ್ಪನ್ನು ಮಧ್ಯಾಹ್ನ 3 ಗಂಟೆಗೆ ಪ್ರಕಟಿಸುವುದಾಗಿ ತಿಳಿಸಿದರು.;
ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಗುರುವಾರ ವಿಧಾನ ಪರಿಷತ್ ನಲ್ಲಿ ಗುರುವಾರ ಅಶ್ಲೀಲ ಪದ ಬಳಕೆ ಮಾಡಿದ ಆರೋಪ ಮೇಲೆ ಬಿಜೆಪಿಯ ವಿಧಾನ ಪರಿಷತ್ ಸದಸ್ಯ, ಮಾಜಿ ಸಚಿವ ಸಿ.ಟಿ.ರವಿ ಅವರನ್ನು ಬೆಳಗಾವಿ ಗ್ರಾಮಾಂತರದ ಬಾಗೇವಾಡಿ ಪೊಲೀಸರು ಬಂಧಿಸಿದ್ದು, ಶುಕ್ರವಾರ ಬೆಳಗಾವಿಯ ಐದನೇ ಹೆಚ್ಚುವರಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದರು.
ಸಿ.ಟಿ.ರವಿ ಅವರ ಅರ್ಜಿ ವಿಚಾರಣೆ ನಂತರ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರಾದ ಸ್ಪರ್ಶ ಡಿಸೋಜಾ ಅವರು ತೀರ್ಪನ್ನು ಮಧ್ಯಾಹ್ನ 3 ಗಂಟೆಗೆ ಪ್ರಕಟಿಸುವುದಾಗಿ ತಿಳಿಸಿದರು.
ವಿಚಾರಣೆಯ ವೇಳೆ ಸಿ.ಟಿ ರವಿ ಪೊಲೀಸರು ಮಧ್ಯರಾತ್ರಿ ಸವದತ್ತಿ ಬಳಿಯ ಸ್ಟೋನ್ ಕ್ರಷರ್ ಬಳಿ ಕರೆದೊಯ್ದು ಎನ್‌ಕೌಂಟರ್ ಮಾಡುವ ಉದ್ದೇಶ ಹೊಂದಿದ್ದರು ಎಂದು ಸಿ ಟಿ ರವಿ ನ್ಯಾಯಾಧೀಶರ ಮುಂದೆ ಹೇಳಿದ್ದಾರೆ. ಸಾರ್ವಜನಿಕವಾಗಿ 20 ವರ್ಷಗಳಿಂದ ಕೆಲಸ ಮಾಡ್ತಿದ್ದೇನೆ. ವಿಧಾನಸೌಧದಲ್ಲಿ ನನ್ನ ಮೇಲೆ ಮೂರು ಸಲ ಅಟ್ಯಾಕ್ ಆಯಿತು. ನನ್ನ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ದೂರು ಕೊಟ್ಟರೂ ಬೆಳಗಾವಿ ಪೊಲೀಸರು ದೂರು ದಾಖಲಿಸಿಕೊಳ್ಳಲಿಲ್ಲ ಎಂದು ಹೇಳಿದ್ದಾರೆ.
ಖಾನಾಪುರ ಠಾಣೆಯಲ್ಲಿ ವಕೀಲರ ಭೇಟಿಗೆ ಅವಕಾಶ ನೀಡಲಿಲ್ಲ, ಆರ್ ಅಶೋಕ, ಚಲವಾದಿ ನಾರಾಯಣಸ್ವಾಮಿ ಬಂದ ಮೇಲೆ ವಕೀಲರ ಭೇಟಿಗೆ ಅವಕಾಶ ನೀಡಿದರು. ರಾತ್ರಿಯಿಡೀ ಸಿನಿಮೀಯ ರೀತಿಯಲ್ಲಿ ಸುತ್ತಾಡಿಸಿದರು. ನನ್ನನ್ನು ಕೊಲ್ಲಲು ಕೊರೆದೊಯ್ಯಲಾಗಿತ್ತು ಎಂಬ ಆತಂಕ ಎದುರಾಯಿತು. ದೇವರ ಮೇಲೆ ಭಾರ ಹಾಕಿ ವಾಹನದಲ್ಲಿ ಕುಳಿತಿದ್ದೆ. ಎಲ್ಲಿಗೆ ಕರೆದೊಯ್ತಿದ್ದೀರಿ ಎಂದು ಕೇಳಿದರೂ ಪೊಲೀಸರು ಹೇಳಲಿಲ್ಲ. ಸಭಾಪತಿ ಚೇಂಬರ್‌ನಲ್ಲಿ ಡಿಕೆಶಿ, ಹೆಬ್ಬಾಳ್ಕರ್ ನನಗೆ ಬೆದರಿಕೆ ಹಾಕಿದರು. ಜೀವನದಲ್ಲಿ ಎಂದೂ ಮರೆಯಬಾರದು ಹಾಗೆ ಮಾಡುತ್ತೇವೆ ಅಂದಿದ್ದರು. ಅವರ ಬೆದರಿಕೆಗೂ ಪೊಲೀಸರು ನಡೆದುಕೊಂಡ ರೀತಿ ಹಾಗೇ ಇತ್ತು ಎಂದು ನ್ಯಾಯಾಧೀಶರ ಮುಂದೆ ಹೇಳಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ ಟಿ ರವಿ ಅವರಿಗೆ ಜಾಮೀನು ನೀಡುವಂತೆ ಸಿ ಟಿ ರವಿ ಅವರ ಪರ ವಕೀಲ ಎಂ ಬಿ ಜಿರಲಿ ವಾದ ಮಂಡಿಸಿದರು. ಪರಿಷತ್ನಲ್ಲಿ ನಡೆದ ಘಟನೆ ಇದು. ಅಲ್ಲಿ ರೆಕಾರ್ಡ್ ಮಾಡುವ ಎಲ್ಲಾ ಅವಕಾಶ ಇರುತ್ತದೆ. ಪ್ರಕರಣ ಶಿಕ್ಷೆ ಪ್ರಮಾಣ ಮೂರು ವರ್ಷ ಇದೆ. ಆರೋಪಿಯ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ವಕೀಲರು ವಾದ ಮಾಡಿದರು. ಸಿ ಟಿ ರವಿಗೆ ಸರಿಯಾದ ಊಟ ನೀಡದೆ ಅವರನ್ನು ಪಶು ರೀತಿಯಲ್ಲಿ ಸುತ್ತಾಡಿಸಿದ್ದಾರೆ. ಅವರಿಗೆ ಆರೋಗ್ಯ ಸಮಸ್ಯೆ ಇದ್ದು, ತಕ್ಷಣವೇ ಚಿಕಿತ್ಸೆ ಕೊಡಿಸಬೇಕಾಗಿದೆ. ಹೀಗಾಗಿ ಜಾಮೀನು ಕೊಡುವಂತೆ ವಕೀಲ ಎಂ ಬಿ ಜಿರಲಿ ಮನವಿ ಮಾಡಿದರು.
ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶೆ ಸ್ಪರ್ಶಾ ಎಂ ಡಿಸೋಜಾ ಅವರು ಜಾಮೀನು ಆದೇಶವನ್ನು ಕಾಯ್ದಿರಿಸಿ ಮಧ್ಯಾಹ್ನಕ್ಕೆ ವಿಚಾರಣೆ ಮುಂದೂಡಿದರು. ನ್ಯಾಯಾಲಯದ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಇನ್ನು ಸಿ.ಟಿ.ರವಿ ಅವರ ಮೇಲಿನ ಹಲ್ಲೆ ಖಂಡಿಸಿ ವಿಜಯೇಂದ್ರ ನೇತೃತ್ವದಲ್ಲಿ ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆಗೆ ಬಿಜೆಪಿ ಕಾರ್ಯಕರ್ತರು ಮುಂದಾಗಿದ್ದಾರೆ.