ಸಾಲ ತೀರಿಸಲು 20 ದಿನದ ಮಗುವನ್ನು ಮಾರಾಟ ಮಾಡಿದ ದಂಪತಿ
ಜುಲೈ 8ರಂದು ಈ ದಂಪತಿ ತಮ್ಮ ಮಗುವನ್ನು ಬೆಳಗಾವಿ ಜಿಲ್ಲೆ ಆನಗೋಳದ ನೂರ್ ಅಹಮದ್ ಅಬ್ದುಲ್ ಮಜೀದ್ ನಾಯ್ಕ ಎಂಬ ವ್ಯಕ್ತಿಗೆ 3 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.;
ಸಾಲ ತೀರಿಸಲು ತಮ್ಮ 20 ದಿನದ ಗಂಡು ಮಗುವನ್ನು 3 ಲಕ್ಷ ರೂಪಾಯಿಗೆ ಮಾರಾಟ ಮಾಡಿದ ಆಘಾತಕಾರಿ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಮಗು ಖರೀದಿಸಿದ ವ್ಯಕ್ತಿ ಮತ್ತು ಇದಕ್ಕೆ ಸಹಕರಿಸಿದ ಚಾಲಕನನ್ನು ದಾಂಡೇಲಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆದರೆ, ಮಗುವಿನ ಹೆತ್ತವರು ನಾಪತ್ತೆಯಾಗಿದ್ದಾರೆ.
ದಾಂಡೇಲಿಯ ಹಳೆ ಸಾಮಿಲ್ ರೋಡ್ ನಿವಾಸಿ ಮಾಹಿನ್ ವಸೀಂ ಎಂಬ ಮಹಿಳೆ ಜೂನ್ 17ರಂದು ದಾಂಡೇಲಿ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ, ಜುಲೈ 8ರಂದು ಈ ದಂಪತಿ ತಮ್ಮ ಮಗುವನ್ನು ಬೆಳಗಾವಿ ಜಿಲ್ಲೆ ಆನಗೋಳದ ನೂರ್ ಅಹಮದ್ ಅಬ್ದುಲ್ ಮಜೀದ್ ನಾಯ್ಕ ಎಂಬ ವ್ಯಕ್ತಿಗೆ 3 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.
ಪ್ರಕರಣ ಬೆಳಕಿಗೆ ಬಂದ ನಂತರ, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕಾನೂನುಬಾಹಿರವಾಗಿ ಮಗುವನ್ನು ಖರೀದಿಸಿದ ನೂರ್ ಅಹಮದ್ ಅಬ್ದುಲ್ ಮಜೀದ್ ನಾಯ್ಕ ಮತ್ತು ಈ ಕೃತ್ಯಕ್ಕೆ ಸಹಕರಿಸಿದ ಚಾಲಕ ಕಿಶನ್ ಶ್ರೀಕಾಂತ ಐರೇಕರ್ (ಎಸ್.ವಿ. ರೋಡ್ ನಿವಾಸಿ) ಎಂಬುವರನ್ನು ದಾಂಡೇಲಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಗುವಿನ ರಕ್ಷಣೆ ಮತ್ತು ದಂಪತಿಗಳ ಶೋಧ
ಮಾರಾಟ ಮಾಡಲಾಗಿದ್ದ ಮಗುವನ್ನು ಶಿರಸಿಯ ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರುಪಡಿಸಲಾಗಿದೆ. ಸಮಿತಿಯು ಮಗುವಿನ ಪೋಷಣೆ ಮತ್ತು ಮುಂದಿನ ಕ್ರಮಗಳ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ. ಆದರೆ, ಈ ಕೃತ್ಯದ ಪ್ರಮುಖ ಆರೋಪಿಗಳಾದ ಮಗುವಿನ ಹೆತ್ತವರು ಸದ್ಯಕ್ಕೆ ನಾಪತ್ತೆಯಾಗಿದ್ದು, ಅವರ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಸಾಲದ ಹೊರೆಯಿಂದ ಈ ರೀತಿ ಅಮಾನವೀಯ ಕೃತ್ಯಕ್ಕೆ ದಂಪತಿ ಮುಂದಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.