Mysore Dasara 2025 | ʼಅರಿಶಿಣ-ಕುಂಕುಮʼ ಹಳೆಯ ಹೇಳಿಕೆಯ ಕಿಡಿ; ವಿವಾದ ಸೃಷ್ಟಿಸಿದ ಬಾನು ಮುಷ್ತಾಕ್ ಆಯ್ಕೆ
ಬಾನು ಮುಷ್ತಾಕ್ ಅವರು 2023 ರಲ್ಲಿ ಕನ್ನಡಾಂಬೆ, ಕನ್ನಡ ಭಾವುಟದ ಕುರಿತು ನೀಡಿದ್ದ ಹೇಳಿಕೆ ಇದೀಗ ವೈರಲ್ ಆಗುತ್ತಿದೆ. ಬಾನು ಮುಷ್ತಾಕ್ ಅವರ ಈ ಹೇಳಿಕೆಯು ರಾಜಕೀಯ ಮತ್ತು ಸಾಹಿತ್ಯಿಕ ವಲಯಗಳಲ್ಲಿ ಚರ್ಚೆಗೂ ಗ್ರಾಸವಾಗಿದೆ.;
ಬಾನು ಮುಷ್ತಾಕ್
ಜಗತ್ಪ್ರಸಿದ್ಧ ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ವಿಚಾರ ವಿವಾದದ ಸ್ವರೂಪ ಪಡೆದುಕೊಂಡಿದೆ.
ಕನ್ನಡಾಂಬೆ ಹಾಗೂ ಮೂರ್ತಿ ಪೂಜೆ ವಿರೋಧಿಸಿದ್ದ ಲೇಖಕಿಯನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವುದಕ್ಕೆ ಪ್ರತಿಪಕ್ಷಗಳು ಹಾಗೂ ಬಲಪಂಥೀಯ ಸಾಹಿತಿಗಳ ಗುಂಪು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಬಾನು ಮುಷ್ತಾಕ್ ಆಡಿದ್ದ ಮಾತುಗಳ ವಿಡಿಯೊವನ್ನು ಬಿಜೆಪಿ ನಾಯಕರು ಹಂಚಿಕೊಂಡು ಅವರ ಆಯ್ಕೆಯನ್ನು ಪ್ರಶ್ನಿಸಿದ್ದಾರೆ. ಹಾಗಾಗಿ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ.
ಬಾನು ಮುಷ್ತಾಕ್ ಆಯ್ಕೆಗೆ ವಿರೋಧ ಏಕೆ?
ಕನ್ನಡ ಭಾಷೆಯನ್ನು ಭುವನೇಶ್ವರಿಯನ್ನಾಗಿ ಮಾಡಿಬಿಟ್ಟಿದ್ದೀರಿ. ಕೆಂಪು-ಹಳದಿ (ಅರಿಶಿಣ-ಕುಂಕುಮ) ಬಾವುಟ ಕೈಗೆ ಕೊಟ್ಟು ಆಕೆಯನ್ನು ಮಂದಾಸನದ ಮೇಲೆ ಕೂರಿಸಿಬಿಟ್ಟಿದ್ದೀರಿ. ಹಾಗಾದರೆ, ಮುಸ್ಲಿಂ ಆಗಿ ನಾನು ಎಲ್ಲಿ ನಿಲ್ಲಬೇಕು, ಏನನ್ನು ನೋಡಬೇಕು ಎಂದು ಬಾನು ಮುಷ್ತಾಕ್ ಪ್ರಶ್ನಿಸಿದ್ದರು.
ಕನ್ನಡಾಂಬೆ ಹಾಗೂ ಕನ್ನಡ ಭಾವುಟವನ್ನು ಟೀಕಿಸಿರುವ ಹಿನ್ನೆಲೆಯಲ್ಲಿ ಅವರಿಂದ ನಾಡದೇವಿ ಚಾಮುಂಡೇಶ್ವರಿಯ ದಸರಾ ಉದ್ಘಾಟನೆ ಮಾಡಿಸುವುದು ಸರಿಯಲ್ಲ ಎಂದು ಬಿಜೆಪಿ ನಾಯಕರಾದ ಆರ್.ಅಶೋಕ್, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ಮಾಜಿ ಸಂಸದ ಪ್ರತಾಪ್ ಸಿಂಹ ಇತರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇನ್ನೂ ಮೈಸೂರು-ಕೊಡಗು ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಪ್ರತಿಕ್ರಿಯಿಸಿದ್ದು, ಬಾನು ಮುಷ್ತಾಕ್ ಆಯ್ಕೆಗೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಆದರೆ, ಧಾರ್ಮಿಕ ಭಾವನೆಗಳಿಗೆ ಚ್ಯುತಿ ಬಾರದಂತೆ ನೋಡಿಕೊಳ್ಳಿ ಎಂದು ಹೇಳಿದ್ದಾರೆ. ದಸರಾ ಸಂಭ್ರಮವು ಚಾಮುಂಡೇಶ್ವರಿಯ ಆರಾಧನೆಯ ಹಬ್ಬ. ಕನ್ನಡಾಂಬೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಸಾಹಿತಿಯಿಂದ ಉದ್ಘಾಟನೆ ಮಾಡಿಸುವುದು ಪರಂಪರೆಗೆ ಮಾಡಿದ ಅವಮಾನ ಎಂದು ಹಿಂದೂಪರ ಸಂಘಟನೆಗಳು ಆರೋಪಿಸಿವೆ.
ಯಾವ ಸಂದರ್ಭದಲ್ಲಿ ಹೇಳಿದ್ದು?
ಬಾನು ಮುಷ್ತಾಕ್ ಅವರು ಈ ವಿವಾದಾತ್ಮಕ ಹೇಳಿಕೆ ನೀಡಿದ್ದು 2023ರಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಜನ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ. 'ಅಲ್ಪಸಂಖ್ಯಾತ ಮಹಿಳೆಯಾಗಿ ನನ್ನ ಗ್ರಹಿಕೆ' ಎಂಬ ವಿಷಯದ ಕುರಿತು ಮಾತನಾಡುತ್ತಾ, ಕನ್ನಡ ಭಾಷೆಗೆ ಧಾರ್ಮಿಕ ಬಣ್ಣ ಬಳಿಯುತ್ತಿರುವ ಬಗ್ಗೆ ಅವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಕನ್ನಡವನ್ನು 'ಕನ್ನಡಾಂಬೆ' ಅಥವಾ 'ಭುವನೇಶ್ವರಿ' ಎಂಬ ದೇವತೆಯ ರೂಪಕ್ಕೆ ಸೀಮಿತಗೊಳಿಸಿ, ಅದಕ್ಕೆ ಅರಿಶಿನ-ಕುಂಕುಮದ ಧಾರ್ಮಿಕ ಲೇಪನ ನೀಡುವುದರಿಂದ ತನ್ನಂತಹ ಅಲ್ಪಸಂಖ್ಯಾತ ಸಮುದಾಯದವರನ್ನು ಭಾಷೆಯಿಂದ ಹೊರಗಿಡುವ ಹುನ್ನಾರ ನಡೆಯುತ್ತಿದೆ ಎಂದು ಅವರು ಆಕ್ಷೇಪಿಸಿದ್ದರು.
"ಕನ್ನಡವನ್ನು ಕೇವಲ ಭಾಷೆಯಾಗಿ ಬೆಳೆಯಲು ಅವಕಾಶ ಕೊಡದೆ, ಅದನ್ನು ಕೆಂಪು-ಹಳದಿ ಬಾವುಟ ಹಾಗೂ ಅರಿಶಿನ-ಕುಂಕುಮ ಹಚ್ಚಿ ಭುವನೇಶ್ವರಿಯನ್ನಾಗಿ ಸಿಂಹಾಸನದ ಮೇಲೆ ಕೂರಿಸಲಾಗಿದೆ. ಹೀಗಿರುವಾಗ ನಾನೆಲ್ಲಿ ನಿಲ್ಲಬೇಕು? ಇದರಲ್ಲಿ ಹೇಗೆ ತೊಡಗಿಸಿಕೊಳ್ಳಬೇಕು?" ಎಂದು ಅವರು ಪ್ರಶ್ನಿಸಿದ್ದರು. ಮುಂದುವರಿದು, ಮಹಿಳೆಯರನ್ನು ದೇವತೆಯೆಂದು ಪೂಜಿಸುತ್ತಲೇ ಅವರ ಮೇಲೆ ದೌರ್ಜನ್ಯ ಎಸಗುವಂತೆ, ಕನ್ನಡವನ್ನು ದೇವಸ್ಥಾನದಲ್ಲಿ ಕೂರಿಸಿ ಭಾಷೆಯ ಮೇಲೂ ದೌರ್ಜನ್ಯ ಮಾಡಲಾಗುತ್ತಿದೆ ಎಂದು ಅವರು ತೀಕ್ಷ್ಣವಾಗಿ ವಿಶ್ಲೇಷಿಸಿದ್ದರು.
ಸಾಹಿತ್ಯ ವಲಯದಲ್ಲೂ ಪರ-ವಿರೋಧ ಚರ್ಚೆ
ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ವಿಚಾರದ ಕುರಿತು ಸಾಹಿತ್ಯ ವಲಯದಲ್ಲೂ ಅಭಿಪ್ರಾಯ ಭೇದ ಕೇಳಿ ಬರುತ್ತಿದೆ. ಕೆಲ ಪ್ರಗತಿಪರರು, ಚಿಂತಕರು ಬಾನು ಮುಷ್ತಾಕ್ ಆಯ್ಕೆಯನ್ನು ʼಪ್ರಗತಿಶೀಲ ಚಿಂತನೆಯ ಪ್ರತಿನಿಧಿʼ ಎಂದು ಬಣ್ಣಿಸಿದರೆ, ಮತ್ತೊಂದು ಸಾಹಿತಿಗಳ ಗುಂಪು, ಸಾಮಾಜಿಕ ವಿಭಜನೆಗೆ ಕಾರಣವಾಗುವ ಹೇಳಿಕೆ ಕೊಟ್ಟವರಿಂದ ದಸರಾ ಉದ್ಘಾಟನೆ ಸಲ್ಲದು ಎಂದು ಹೇಳುತ್ತಿವೆ.
ಈ ಕುರಿತು ʼದ ಫೆಡರಲ್ ಕರ್ನಾಟಕʼದ ಜೊತೆ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು, ಮಹಿಳಾ ಲೇಖಕರಾಗಿ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಬಾನು ಮುಷ್ತಾಕ್ ಅವರಿಗಿದೆ. ಅವರು ಎಲ್ಲಿಯೂ ಕೋಮುವಾದಿಗಳಂತೆ ಮಾತನಾಡಲಿಲ್ಲ. ಮೈಸೂರು ದಸರಾ ಒಂದು ನಾಡಹಬ್ಬ. ಈ ಹಿಂದೆ ನಿಸಾರ್ ಅಹಮದ್ ಅವರು ದಸರಾ ಉದ್ಘಾಟನೆ ಮಾಡಿದಾಗ ಕೋಮುವಾದಿಗಳು ಎಲ್ಲಿದ್ದರು ಎಂದು ವಿರೋಧಿಗಳ ವಿರುದ್ಧ ಹರಿಹಾಯ್ದರು.
ಕೋಮುವಾದಿಗಳ ವಿರೋಧವು ಮಹಿಳಾ ವಾದವನ್ನೇ ಹತ್ತಿಕ್ಕುವಂತಿದೆ. ಚಾಮುಂಡಿ ದೇವಿಗೆ ಪೂಜೆ ಮಾಡುವುದು, ಬಿಡುವುದು ಅವರವರಿಗೆ ಬಿಟ್ಟ ವಿಚಾರ. ಒಳಗೊಳ್ಳುವಿಕೆ ವಿಚಾರ ಬಂದಾಗಲೆಲ್ಲಾ ಕೋಮುವಾದಿಗಳು ಸಿಡಿದೇಳುತ್ತಾರೆ. ಇದು ಸೃಜನಶೀಲ ಸಾಹಿತ್ಯವನ್ನು ಹತ್ತಿಕ್ಕುವ ಕೆಲಸ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜನ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡುವ ವೇಳೆ ಬಾನು ಮುಷ್ತಾಕ್ ಅವರು, ಅಲ್ಪಸಂಖ್ಯಾತರನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ಅಸಮಾಧಾನ ಹೊರಹಾಕಿದ್ದರು. ಅಭಿಪ್ರಾಯ ವ್ಯಕ್ತಪಡಿಸಲು ಎಲ್ಲರೂ ಸ್ವತಂತ್ರರು. ಅವರು ಕನ್ನಡ ಬಾವುಟ ನಿರಾಕರಿಸುತ್ತೇವೆ ಎಂದು ಹೇಳಿರಲಿಲ್ಲ. ಅಭಿಪ್ರಾಯ ವ್ಯಕ್ತಪಡಿಸಿದರೂ ಬಹುಜನರು ಒಪ್ಪಿಕೊಂಡ ನಿರ್ಧಾರವನ್ನು ಸಮ್ಮತಿಸಿದ್ದರು ಎಂದು ಹೇಳಿದರು.
ದೂರ ಇಟ್ಟವರನ್ನು ಹತ್ತಿರ ತರುವ, ಒಳಗೊಳ್ಳುವಿಕೆ ವಿಚಾರ ಬಂದಾಗ ಕೋಮುವಾದಿಗಳು ವೃಥಾ ಆರೋಪ ಮಾಡುತ್ತಿವೆ. ವಿಜಯನಗರದ ಮಹಾನವಮಿ ದಿಬ್ಬದಲ್ಲಿ ದಸರಾ ಆರಂಭವಾಯಿತು. ಅಂದು ಮುಸ್ಲಿಂ ಸೈನಿಕರು ಕೂಡ ದಸರಾದಲ್ಲಿ ಭಾಗಿಯಾಗುತ್ತಿದ್ದರು. ವಿಜಯನಗರ ಸಾಮ್ರಾಜ್ಯ ಪತನದ ನಂತರ ದಸರಾ ಆಚರಣೆ ಮೈಸೂರಿಗೆ ಸ್ಥಳಂತಾವಾಯಿತು. ಬಿಜೆಪಿ ನಾಯಕರ ಹೇಳಿಕೆಗಳು ಕೋಮುವಾದ ಅಲ್ಲದೇ ಬೇರೆನೂ ಅಲ್ಲ. ಮಹಿಳಾ ಪರ ಚಳವಳಿಯ ಆತಂಕ, ತಲ್ಲಣಗಳನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ವಿವಾದ ಏನು?
ಬಾನು ಮುಷ್ತಾಕ್ ಅವರು 2023 ರಲ್ಲಿ ಕನ್ನಡಾಂಬೆ, ಕನ್ನಡ ಭಾವುಟದ ಕುರಿತು ನೀಡಿದ್ದ ಹೇಳಿಕೆ ಇದೀಗ ವೈರಲ್ ಆಗುತ್ತಿದೆ. ಬಾನು ಮುಷ್ತಾಕ್ ಅವರ ಈ ಹೇಳಿಕೆಯು ರಾಜಕೀಯ ಮತ್ತು ಸಾಹಿತ್ಯಿಕ ವಲಯಗಳಲ್ಲಿ ಚರ್ಚೆಗೂ ಗ್ರಾಸವಾಗಿದೆ.
ಜನಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ್ದ ಬಾನು ಮುಷ್ತಾಕ್ ಅವರು, ʼಕನ್ನಡ ಭಾಷೆಯ ಕುರಿತು ಒಬ್ಬ ಅಲ್ಪಸಂಖ್ಯಾತ ಮಹಿಳೆಯಾಗಿ ನನ್ನ ಗ್ರಹಿಕೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ಇದು ನಿಮಗೆ ಹಿಡಿಸುತ್ತೆಯೋ, ಇಲ್ಲವೋ ಗೊತ್ತಿಲ್ಲ. ಕನ್ನಡ ಭಾಷೆ ಬೆಳೆಯಲು, ಕನ್ನಡ ಮಾತನಾಡಲು ಬಾನು ಮುಷ್ತಾಕ್ ಹಾಗೂ ಅವರ ಕುಟುಂಬಕ್ಕೆ ನೀವು ಅವಕಾಶವನ್ನೇ ಕೊಟ್ಟಿಲ್ಲ ಎಂದು ಅಸಮಾಧಾನ ಹೊರಹಾಕಿದ್ದರು.
ಕನ್ನಡವನ್ನು ಭುವನೇಶ್ವರಿಯನ್ನಾಗಿ ಮಾಡಿಬಿಟ್ಟಿದ್ದೀರಿ. ಕೆಂಪು-ಹಳದಿ (ಅರಿಶಿಣ-ಕುಂಕುಮ) ಬಾವುಟ ಕೈಗೆ ಕೊಟ್ಟು ಆಕೆಯನ್ನು ಮಂದಾಸನದ ಮೇಲೆ ಕೂರಿಸಿಬಿಟ್ಟಿದ್ದೀರಿ. ಹಾಗಾದರೆ, ಅಲ್ಪಸಂಖ್ಯಾತಳಾಗಿ ನಾನು ಎಲ್ಲಿ ನಿಲ್ಲಬೇಕು, ಏನನ್ನು ನೋಡಬೇಕು ಎಂದು ಪ್ರಶ್ನಿಸಿದ್ದರು.
ನನ್ನನ್ನು ಹೊರಗಟ್ಟುವ ಕೆಲಸ ಇವತ್ತಿನಿಂದ ನಡೆದಿದ್ದಲ್ಲ, ಬಹಳ ದಿನಗಳಿಂದಲೇ ಆರಂಭವಾಗಿದೆ. ಈ ವಿಚಾರದ ಬಗ್ಗೆ ನೀವು ಯೋಚನೆ ಮಾಡಬೇಕು. ಮಹಿಳೆಯನ್ನು ಮಂದಾಸನದ ಮೇಲೆ ಕೂರಿಸಿದ ತಕ್ಷಣ ದೇವತೆಗಳು ಸಂತುಷ್ಟರಾಗುತ್ತಾರೆ ಎಂಬ ಗ್ರಹಿಕೆ ಸರಿಯಲ್ಲ. ಕನ್ನಡಮ್ಮನನ್ನು ದೇವಸ್ಥಾನದಲ್ಲಿ ಕೂರಿಸಿ, ಮಹಿಳೆಯನ್ನು ಹೇಗೆ ತುಳಿಯುತ್ತೀದ್ದೀರಿ, ಹಿಂಸೆ ಮಾಡುತ್ತಿದ್ದೀರಿ ಎಂಬುದರ ಅರಿವಿದೆ. ಅದೇ ರೀತಿ ಕನ್ನಡಮ್ಮನ ಮೇಲೂ ನೀವು ದೌರ್ಜನ್ಯ ಮಾಡುತ್ತಿದ್ದೀರಿ. ಇದಕ್ಕೆ ನೀವು ಉತ್ತರ ಕೊಡಬೇಕಿದೆ. ಕನ್ನಡದ ರಥ ಎಳೆದು, ಜಾತ್ರೆ, ಪರಿಷೆ ಮಾಡಿ ಏನು ಮಾಡಿದ್ದೀರಿ, ನನ್ನನ್ನು ಹೊರಗಟ್ಟಲು ಇಷ್ಟು ಹುನ್ನಾರ ಮಾಡುವ ಅಗತ್ಯ ನಿಮಗೆ ಏನಿತ್ತು ಎಂದು ಕನ್ನಡ ಸಾಹಿತ್ಯ ಪರಿಷತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಸರ್ಕಾರದ ತಿರುಗೇಟು
ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟನೆ ಮಾಡಿಸುವುದಕ್ಕೆ ತಕರಾರು ತೆಗೆದಿರುವ ವಿಪಕ್ಷಗಳ ಟೀಕೆಗೆ ಸರ್ಕಾರ ತಿರುಗೇಟು ನೀಡಿದೆ. ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮಾತನಾಡಿ, ದಸರಾ ನಾಡ ಹಬ್ಬ. ಯಾವುದೇ ಜಾತಿ, ಧರ್ಮಕ್ಕೆ ಸೀಮಿತ ಅಲ್ಲ. ನಾಡ ಹಬ್ಬದಲ್ಲಿ ನಿರ್ದಿಷ್ಟವಾಗಿ ಒಂದು ಧರ್ಮವನ್ನು ಹೊರಗಿಟ್ಟು ದಸರಾ ಆಚರಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಈ ಹಿಂದೆ ಮೈಸೂರು ರಾಜಾಳ್ವಿಕೆಯಲ್ಲಿ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ದಸರಾ ಮಾಡಿಲ್ಲವೇ, ಕವಿ ನಿಸಾರ್ ಅಹಮದ್ ಅವರು ದಸರಾ ಉದ್ಘಾಟನೆ ಮಾಡಲಿಲ್ಲವೇ ಎಂದು ಪ್ರಶ್ನಿಸಿದ ಅವರು, ಯಾರೂ ಕೂಡ ತಕರಾರು ತೆಗೆಯಬಾರದು. ಚಾಮುಂಡಿ ತಾಯಿಯನ್ನು ನಂಬುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ. ಇದು ನಾಡ ಹಬ್ಬವಾಗಿದ್ದು, ಎಲ್ಲರೂ ಸೇರಿಯೇ ಮಾಡಬೇಕು ಎಂದು ಹೇಳಿದರು.
ಇಸ್ಲಾಂ ಧರ್ಮದವರಾದ ಭಾನು ಮುಷ್ತಾಕ್ ಅವರು ಮೂರ್ತಿ ಪೂಜೆ, ಹಿಂದೂ ದೇವತೆಗಳನ್ನು ನಂಬುವುದಿಲ್ಲ. ನನಗೆ ನಾಡದೇವತೆ ಚಾಮುಂಡಿಯ ಮೇಲೆ ನಂಬಿಕೆ ಇದೆ, ಹಿಂದೂ ಧರ್ಮದ ಮೇಲೆ ನಂಬಿಕೆ ಇದೆ, ಈ ಆಚಾರ-ವಿಚಾರಕ್ಕೆ ಬದ್ಧನಾಗಿದ್ದೇನೆ ಎಂದು ಬಾನು ಮುಷ್ತಾಕ್ ಹೇಳಬೇಕು ಎಂದು ವಿಧಾನಪರಿಷತ್ ಸದಸ್ಯ ವಿಶ್ವನಾಥ್ ಒತ್ತಾಯಿಸಿದರು.
ಕನ್ನಡದ ಕವಿ ನಿಸಾರ್ ಅಹಮದ್ ಅವರು ಈ ಹಿಂದೆ ದಸರಾ ಉದ್ಘಾಟಿಸಿದ್ದರು. ಆದರೆ, ಅವರು ಎಲ್ಲಿಯೂ ವಿವಾದ ಸೃಷ್ಟಿಸಿರಲಿಲ್ಲ. ಬಾನು ಮುಷ್ತಾಕ್ ಅವರು ಎಡಪಂಥೀಯ ಮಹಿಳೆ ಎಂದು ಸ್ವತಃ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಹಾಗಾಗಿ ಅವರಿಗೆ ಆಹ್ವಾನ ನೀಡಿದ್ದನ್ನು ವಿರೋಧಿಸಿದ್ದೇವೆ ಎಂದು ಹೇಳಿದರು.
ಮೈಸೂರು ದಸರಾವನ್ನು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಉದ್ಘಾಟಿಸಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದರೆ, ಇದಕ್ಕೆ ಸ್ಪಷ್ಟನೆ ನೀಡಿದ್ದ ಸಿಎಂ ಸಿದ್ದರಾಮಯ್ಯ ಅವರು ಸೋನಿಯಾ ಗಾಂಧಿ ಅವರಿಗೆ ನಾವು ಆಹ್ವಾನವನ್ನೇ ಕೊಟ್ಟಿಲ್ಲ. ಈ ಬಾರಿಯ ದಸರಾವನ್ನು ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರು ಉದ್ಘಾಟನೆ ಮಾಡಲಿದ್ದಾರೆ ಎಂದು ಹೇಳಿದ್ದರು.
ರಾಜ್ಯ ಸರ್ಕಾರದ ನಿರ್ಧಾರಕ್ಕೆ ಮೈಸೂರು-ಕೊಡಗು ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ವಿರೋಧ ವ್ಯಕ್ತಪಡಿಸಿದ್ದರು. ತಮ್ಮ ಎಕ್ಸ್ ಖಾತೆಯಲ್ಲಿ ಬಾನು ಮುಷ್ತಾಕ್ ಅವರ ವಿಡಿಯೋ ಹಂಚಿಕೊಂಡು ಕನ್ನಡವನ್ನು ಭುವನೇಶ್ವರಿಯಾಗಿ ಒಪ್ಪದ ಈಕೆ, ತಾಯಿ ಚಾಮುಂಡೇಶ್ವರಿಯನ್ನು ನಾಡದೇವತೆ ಎಂದು ಒಪ್ಪಿಕೊಂಡು ಪುಷ್ಪಾರ್ಚನೆ ಮಾಡುವರೇ ಎಂದು ಪ್ರಶ್ನಿಸಿದ್ದರು.