ದಸರಾ ಉದ್ಘಾಟಕರ ಆಯ್ಕೆ ವಿವಾದ ಆತಂಕಕಾರಿ ಬೆಳವಣಿಗೆ: ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್‌

ಚಾಮುಂಡೇಶ್ವರಿ ದೇವಸ್ಥಾನವು ಹಿಂದೂಗಳ ಆಸ್ತಿಯಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಹೇಳಿಕೆ ಸಂವೇದನಾರಹಿತವಾಗಿದ್ದು, ಅನಗತ್ಯವಾಗಿತ್ತು ಎಂದು ಪ್ರಮೋದಾದೇವಿ ಬೇಸರ ವ್ಯಕ್ತಪಡಿಸಿದ್ದಾರೆ.;

Update: 2025-08-28 07:19 GMT

ರಾಜವಂಶಸ್ಥೆ ಪ್ರಮೋದ ದೇವಿ ಒಡೆಯರ್‌ ಹಾಗೂ ಬಾನು ಮುಷ್ತಾಕ್‌

ವಿಶ್ವ ವಿಖ್ಯಾತ ದಸರಾ ಉದ್ಘಾಟನೆಗೆ ರಾಜ್ಯ ಸರ್ಕಾರ  ಬೂಕರ್‌ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್‌ ಅವರನ್ನು ಆಯ್ಕೆ ಮಾಡಿರುವುದು ರಾಜಕೀಯವಾಗಿ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ.

ವಿವಾದ ಕುರಿತಂತೆ ರಾಜವಶಂಸ್ಥೆ ಪ್ರಮೋದಾ ದೇವಿ ಒಡೆಯರ್‌ ಪ್ರತಿಕ್ರಿಯಿಸಿದ್ದು," ಈ ವರ್ಷದ ದಸರಾ ಆಚರಣೆಯ ಬಗ್ಗೆ ನಡೆಯುತ್ತಿರುವ ಬೆಳವಣಿಗೆಗಳು ಕಳವಳಕಾರಿಯಾಗಿವೆ. ವಿಶೇಷವಾಗಿ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದ ಬಗ್ಗೆ ನಡೆಯುತ್ತಿರುವ ರಾಜಕೀಯವು ತೀವ್ರ ಬೇಸರ ಮೂಡಿಸಿದೆ" ಎಂದು ತಿಳಿಸಿದ್ದಾರೆ. 

ನಾಡಹಬ್ಬ ಉದ್ಘಾಟನೆಗೆ ಸರ್ಕಾರ ಆಹ್ವಾನಿಸಿದ ಗಣ್ಯರ ಆಯ್ಕೆಯು ಪರ-ವಿರೋಧ ಅಭಿಪ್ರಾಯಗಳಿಗೆ ಕಾರಣವಾಗಿದೆ. ಚಾಮುಂಡೇಶ್ವರಿ ದೇವಸ್ಥಾನ ಹಿಂದೂಗಳಿಗೆ ಸೇರಿಲ್ಲ ಎಂಬಂತಹ ಸಂವೇದನಾರಹಿತ ಹೇಳಿಕೆ ಅನಗತ್ಯವಾಗಿತ್ತು. ಅದು ಹಿಂದೂ ದೇವಸ್ಥಾನ ಅಲ್ಲದಿದ್ದರೆ, ಅದನ್ನು ಎಂದಿಗೂ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ತರುತ್ತಿರಲಿಲ್ಲ' ಎಂದು ಹೇಳಿದರು.

ಸರ್ಕಾರದ ದಸರಾ ಸಾಂಸ್ಕೃತಿಕ ಆಚರಣೆಯಷ್ಟೆ ಎಂಬುದು ನಮ್ಮ ಅಭಿಪ್ರಾಯ. ರಾಜ್ಯ ಸರ್ಕಾರವು ಇಂತಹ ಉತ್ಸವವನ್ನು ನಡೆಸುವುದರಿಂದ ಧಾರ್ಮಿಕ ಪಾವಿತ್ರ್ಯ, ಸಂಪ್ರದಾಯ ಅಥವಾ ಪರಂಪರೆಯನ್ನು ಪ್ರತಿಪಾದಿಸಲು ಸಾಧ್ಯವಿಲ್ಲ. ಸರ್ಕಾರವು ಆಯೋಜಿಸುವ ಆಚರಣೆಗಳು ಧಾರ್ಮಿಕ ಸ್ವರೂಪದ್ದಾಗಿಲ್ಲ ಎಂದು ಹೇಳಿದ್ದಾರೆ.

ಸರ್ಕಾರದ ನಿರ್ಧಾರಕ್ಕೆ ಯದುವೀರ್‌ ಸ್ವಾಗತ

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ ಅವರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿದ್ದಕ್ಕೆ ಮೈಸೂರು ರಾಜ ವಂಶಸ್ಥ ಹಾಗೂ ಸಂಸದ ಯದುವೀರ್‌ ಇತ್ತೀಚೆಗೆ ಪ್ರತಿಕ್ರಿಯಿಸಿ, "ದಸರಾ ಕಾರ್ಯಕ್ರಮಕ್ಕೆ ಲೇಖಕಿ ಬಾನು ಮುಸ್ತಾಕ್‌ ಅವರನ್ನು ಆಯ್ಕೆ ಮಾಡಿದ್ದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಧಾರ್ಮಿಕ ಕಾರ್ಯಗಳಿಗೆ ಯಾವುದೇ ತೊಂದರೆಯಾಗಬಾರದು" ಎಂದು ತಿಳಿಸಿದ್ದರು.

ಬಿಜೆಪಿಯಿಂದ ತೀವ್ರ ವಿರೋಧ

ನಾಡಹಬ್ಬ ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್‌ ಅವರನ್ನು ಸಿಎಂ ಸಿದ್ದರಾಮಯ್ಯ ಆಯ್ಕೆ ಮಾಡಿರುವುದರ ಹಿಂದೆ ಟಿಪ್ಪು ಮನಸ್ಥಿತಿ ಕಾರಣ ಎಂದು ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ತಿಳಿಸಿದ್ದರು.

ಬೂಕರ್‌ ಪ್ರಶಸ್ತಿ ವಿಜೇತರಾದ ಬಾನು ಮುಷ್ತಾಕ್‌ ಒಬ್ಬರನ್ನು ಮಾತ್ರ ಆಯ್ಕೆ ಮಾಡಿರುವುದು ಸರಿಯಲ್ಲ. ಅನುವಾದಕಿ ದೀಪಾ ಭಾಸ್ತಿ ಅವರಿಗೂ ಆಹ್ವಾನ ನೀಡಬೇಕಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದರು. 

ಯಾವುದೇ ದೂರು ಬಂದಿಲ್ಲ

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ ಅವರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿದೆ. ಆದರೆ, ಈ ವಿವಾದಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ದೂರು ಬಂದಿಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ತಿಳಿಸಿದ್ದಾರೆ.

ಸೆಪ್ಟಂಬರ್‌ ಮೊದಲ ಅಥವಾ ಎರಡನೇ ವಾರದಲ್ಲಿ ಎಲ್ಲಾ ಗಣ್ಯರನ್ನು ಅಧಿಕೃತವಾಗಿ ಆಹ್ವಾನಿಸಲಾಗುವುದು ಎಂದು ಹೇಳಿದ್ದಾರೆ. 

ಆಯ್ಕೆಗೆ ಕಾಂಗ್ರೆಸ್‌ ಸಮರ್ಥನೆ

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ ಅವರನ್ನು ಆಯ್ಕೆ ಮಾಡಿದ್ದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಆದರೆ, ಕಾಂಗ್ರೆಸ್‌ ಮಾತ್ರ ಸಮರ್ಥನೆ ಮಾಡಿಕೊಳ್ಳುತ್ತಿದೆ. ಮೈಸೂರು ಸಂಸ್ಥಾನದಲ್ಲಿ ದಿವಾನರಾಗಿದ್ದ ಸರ್‌. ಮಿರ್ಜಾ ಇಸ್ಮಾಯಿಲ್‌ ಅವರ ಕಾಲದಲ್ಲಿ ದಸರಾ ನಡೆಸುತ್ತಿರಲಿಲ್ಲವೇ?, 2017 ರಲ್ಲಿ ನಿತ್ಯೋತ್ಸವ ಕವಿ ನಿಸಾರ್‌ ಅಹಮದ್‌ ಅವರು ದಸರಾ ಉದ್ಘಾಟಿಸಿದಾಗ ಯಾರೂ ಏಕೆ ವಿರೋಧ ಮಾಡಿರಲಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಪ್ರಶ್ನಿಸಿದ್ದಾರೆ. 

Tags:    

Similar News