ನಾಡಪ್ರಭು ಕೆಂಪೇಗೌಡರ ಹೆಸರಿನಲ್ಲಿ ಪಕ್ಷಗಳ ರಾಜಕೀಯ| ಮಾಜಿ ಪ್ರಧಾನಿ ದೇವೇಗೌಡರ ಅವಗಣನೆ?

ಅಂತೂ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣವಿರಲಿ, ಜಯಂತಿಯಿರಲಿ, ಕನ್ನಡಿಗರ ಮೊದಲ ಪ್ರಧಾನಿ ಎಚ್‌.ಡಿ. ದೇವೇಗೌಡರಿಗೆ ಅನಾದರ ತೋರುವ ಪ್ರಕ್ರಿಯೆ ಹಿಂದಿನ ಬಿಜೆಪಿ ಸರ್ಕಾರ ಮತ್ತು ಈಗಿನ ಕಾಂಗ್ರೆಸ್‌ ಸರ್ಕಾರದಿಂದ ನಡೆದಿದೆ. ಒಕ್ಕಲಿಗರ ʼಐಕಾನ್‌ʼ ಆಗಿರುವ ಕೆಂಪೇಗೌಡ ಮತ್ತು ಒಕ್ಕಲಿಗರ ಪರಮೋಚ್ಛ ನಾಯಕ ಎಂದೇ ಕರೆಯಲಾಗುವ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ವಿಚಾರದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಜೆಪಿ ʼರಾಜಕೀಯ ಕೆಸೆರೆರಚಾಟʼ ನಡೆಸುತ್ತಲೇ ಇವೆ.

Update: 2024-06-27 09:30 GMT

ರಾಜ್ಯ ಸರಕಾರದಿಂದ ಇಂದು (ಗುರುವಾರ) ಆಯೋಜಿಸಿರುವ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಆಚರಣೆ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಹಾಗೂ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡದಿರುವುದು ವಿವಾದಕ್ಕೆ ಕಾರಣವಾಗಿದೆ.

ಅಂತೂ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣವಿರಲಿ, ಜಯಂತಿಯಿರಲಿ,   ಕನ್ನಡಿಗರ ಮೊದಲ ಪ್ರಧಾನಿ ಎಚ್‌.ಡಿ. ದೇವೇಗೌಡರಿಗೆ ಅನಾದರ ತೋರುವ ಪ್ರಕ್ರಿಯೆ ಹಿಂದಿನ ಬಿಜೆಪಿ ಸರ್ಕಾರ ಮತ್ತು ಈಗಿನ ಕಾಂಗ್ರೆಸ್‌ ಸರ್ಕಾರದಿಂದ ನಡೆದಿದೆ.  ಒಕ್ಕಲಿಗರ ʼಐಕಾನ್‌ʼ ಆಗಿರುವ ಕೆಂಪೇಗೌಡ ಮತ್ತು ಒಕ್ಕಲಿಗರ ಪರಮೋಚ್ಛ ನಾಯಕ ಎಂದೇ ಕರೆಯಲಾಗುವ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ವಿಚಾರದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಮತ್ತು ಬಿಜೆಪಿ ʼರಾಜಕೀಯ ಕೆಸೆರೆರಚಾಟʼ ನಡೆಸುತ್ತಲೇ ಇವೆ.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ನಡೆಸಲಾಗುತ್ತಿರುವ ಕೆಂಪೇಗೌಡರ ಜಯಂತಿ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ದೇವೇಗೌಡರನ್ನು ಕರೆದೇ ಇಲ್ಲ. ಜತೆಗೆ ಎರಡು ಬಾರಿ ಮುಖ್ಯಮಂತ್ರಿಯಾಗಿ ಈಗ ಕೇಂದ್ರ ಸಚಿವರಾಗಿರುವ ಗೌಡರ ಪುತ್ರ ಎಚ್‌.ಡಿ ಕುಮಾರಸ್ವಾಮಿ ಅವರನ್ನೂ ಕರೆದಿಲ್ಲ. ಈ ಬಗ್ಗೆ ಜೆಡಿಎಸ್‌ ಗಮನಸೆಳೆದು ಟೀಕಾಸ್ತ್ರ ಎಸೆದಿದೆ. ಆದರೆ, ಎರಡು ವರ್ಷಗಳ ಹಿಂದೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಕೆಂಪೇಗೌಡರ ಕಂಚಿನ ಪ್ರತಿಮೆ ಅನಾವರಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಸಂದರ್ಭದಲ್ಲಿ ದೇವೇಗೌಡರನ್ನು ಆಹ್ವಾನಿಸಲ್ಲ ಎಂದು ಜೆಡಿಎಸ್‌ ಬಿಜೆಪಿ ವಿರುದ್ಧ ಹರಿಹಾಯ್ದಿತ್ತು.  ಎರಡೂ ಸಂದರ್ಭಗಳಲ್ಲಿ ʼಒಕ್ಕಲಿಗ ನಾಯಕತ್ವʼಕ್ಕಾಗಿ ಬಿಜೆಪಿಯ ನಾಯಕರಾದ ಡಾ. ಸಿ.ಎನ್‌. ಅಶ್ವತ್ಥನಾರಾಯಣ (ಕೆಂಪೇಗೌಡರ ಪ್ರತಿಮೆ ಸ್ಥಾಪನೆಯ ಮುಂದಾಳುತ್ವ ವಹಿಸಿದ್ದರವರು) ಮತ್ತು ಆರ್‌. ಅಶೋಕ ಮತ್ತಿತರರು ವಿವಾದಕ್ಕೆ ಕಾರಣವಾಗಿದ್ದರೆ, ಈಗ ಒಕ್ಕಲಿಗರ ನಾಯಕತ್ವಕ್ಕಾಗಿ ಪ್ರಯತ್ನಿಸುತ್ತಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌  ಅವರು ದೇವೇಗೌಡರನ್ನು ಆಹ್ವಾನಿಸದೇ ಇರುವುದಕ್ಕೆ ಕಾರಣ ಎನ್ನಲಾಗಿದೆ.

ಕೆಂಪೇಗೌಡರ ಜಯಂತಿ ಅಂಗವಾಗಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ವಿಧಾನಸೌಧದ ಅವರಣದಲ್ಲಿರುವ ಕೆಂಪೇಗೌಡರ ಪ್ರತಿಮೆಗೆ ಗುರುವಾರ ಪುಷ್ಪನಮನ ಸಲ್ಲಿಸಿದರು

2022ರ ನವಂಬರ್‌ 11 ರಂದು ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಬೃಹತ್ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣ ಮಾಡಿದರು. ಈ ಸಮಾರಂಭಕ್ಕೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರನ್ನು ಆಹ್ವಾನಿಸದೇ ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಬಿಜೆಪಿ ಸರಕಾರದ ವಿರುದ್ಧ ಜೆಡಿಎಸ್‌ ಟೀಕಾಪ್ರಹಾರ ನಡೆಸಿತ್ತು. ಈ ಬಗ್ಗೆ ‌ಜೆಡಿಎಸ್ ಎಕ್ಸ್‌ನಲ್ಲಿ ಸರಣಿ ಪೋಸ್ಟ್‌ ಮಾಡಿತ್ತು. ʻʻನಾಡಪ್ರಭುಗಳ ಪ್ರತಿಮೆ ಅನಾವರಣಕ್ಕೆ ಮಾಜಿ ಪ್ರಧಾನಿಗಳಾದ ಹೆಚ್‌ಡಿ ದೇವೇಗೌಡರನ್ನು ಆಹ್ವಾನಿಸದೆ ರಾಜ್ಯ ಬಿಜೆಪಿ ಸರಕಾರ ಶಿಷ್ಟಾಚಾರ ಲೋಪ ಎಸಗಿದ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿ ಉತ್ತರ ನೀಡಬೇಕೇ ಹೊರತು ಬಿಜೆಪಿ ಅಲ್ಲ. ಇಷ್ಟಕ್ಕೂ ಅದು ಕೇಶವಕೃಪದ ಕಾರ್ಯಕ್ರಮವಲ್ಲʼʼ ಎಂದು ಜೆಡಿಎಸ್ ಕಿಡಿಕಾರಿತ್ತು.

 ಆಹ್ವಾನ ಪತ್ರಿಕೆಯಲ್ಲಿ ದೇವಗೌಡರ ಹೆಸರಿದ್ದರೂ, ಅವರನ್ನು ಆಹ್ವಾನಿಸುವ ʼರೀತಿʼ  ಸರಿಯಿರಲಿಲ್ಲ ಎಂದು ಜೆಡಿಎಸ್‌ ಅರೋಪಿಸಿತ್ತು. ಈ ವಿಚಾರದಲ್ಲಿ ಜೆಡಿಎಸ್‌ ಮತ್ತು ಬಿಜೆಪಿ ನಾಯಕರ ನಡುವೆ ಮಾತಿನ ಕದನ ಏರ್ಪಟ್ಟಿತ್ತು. ಜೆಡಿಎಸ್‌, ದೇವೇಗೌಡರನ್ನು ಆಹ್ವಾನಿಸಿಲ್ಲ ಎಂದು ಆಪಾದಿಸಿದರೆ, ಆಮಂತ್ರನ ಪತ್ರಿಕೆಯಲ್ಲಿ ಹೆಸರಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಸ್ವತಃ ದೇವೇಗೌಡರಿಗೆ ಕರೆ ಮಾಡಿದ್ದಾರೆ ಎಂದು ಬಿಜೆಪಿ ತಿರುಗೇಟು ನೀಡಿತ್ತು. ಆದರೆ, "ಕರೆ ಮಾಡಿದ್ದು ಹೌದು. ಆಮಂತ್ರಣವನ್ನು ದೇವೇಗೌಡರ ನಿವಾಸದ ಬಳಿಕ ಪೊಲೀಸ್‌ ಸಿಬ್ಬಂದಿ ಬಳಿ ನೀಡಲಾಗಿತ್ತು. ಅದರಲ್ಲಿ ಎಲ್ಲೋ ಒಂದು ಕಡೆ ದೇವೇಗೌಡರ ಹೆಸರಿತ್ತು," ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪ್ರತಿ ಆರೋಪ ಮಾಡಿದ್ದರು. ಆದರೆ, ಕೊನೆಗೂ ದೇವೇಗೌಡರು ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಹಾಜರಿರಲಿಲ್ಲ.

ಎಚ್‌ಡಿಕೆ ಹೇಳಿಕೆ

ಈ ಬಗ್ಗೆ ಸ್ವತಃ ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿ, ʻʻನಾಡಪ್ರಭುಗಳು ನನ್ನ ಹೃದಯದಲ್ಲಿದ್ದಾರೆ. ಕೆಂಪೇಗೌಡರು ಯಾರ ಸ್ವತ್ತು ಅಲ್ಲ, ಅವರು ಕನ್ನಡದ ಸ್ವತ್ತು. ಕನ್ನಡಿಗರ ಅಸ್ಮಿತೆ. ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ನನ್ನ ಹೆಸರು ಹಾಕಿಲ್ಲ ಎನ್ನುವ ಬಗ್ಗೆ ಬೇಸರ ಇಲ್ಲ. ನಾನು ಇದ್ದಲ್ಲಿಯೇ ನಾಡಪ್ರಭುಗಳನ್ನು ಸ್ಮರಿಸಿ ಗೌರವಿಸುತ್ತೇನೆʼʼ ಎಂದಿದ್ದಾರೆ.

ಗುರುವಾರ ದೆಹಲಿಯ ತಮ್ಮ ಕಚೇರಿಯಲ್ಲಿಯೇ ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಗೌರವ ಸಮರ್ಪಣೆ ಮಾಡುವ ಮೂಲಕ ಕುಮಾರಸ್ವಾಮಿ ಡಿ.ಕೆ. ಶಿವಕುಮಾರ್‌ ಅವರಿಗೆ ಪರೋಕ್ಷ ಸಂದೇಶ ರವಾನಿಸಿದ್ದಾರೆ. 

ಒಕ್ಕಲಿಗರ ಸಂಘ ಖಂಡನೆ

ಈ ನಡುವೆ ಒಕ್ಕಲಿಗರ ಸಂಘವೂ ಕಾಂಗ್ರೆಸ್‌ ಸರ್ಕಾರದ ನಡೆಯನ್ನು ಖಂಡಿಸಿದೆ. ʻʻರಾಜ್ಯ ಸರ್ಕಾರದ ವತಿಯಿಂದ ನಾಡಪ್ರಭು ಕೆಂಪೇಗೌಡರ 515 ನೇ ಜಯಂತಿಯನ್ನು ಆಚರಿಸುತ್ತಿರುವುದು ಸಂತೋಷ ವಿಚಾರ. ಆದರೆ, ಕಾರ್ಯಕ್ರಮಕ್ಕೆ ಒಕ್ಕಲಿಗ ಸಂಘದ ಹಿರಿಯ ನಾಯಕರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಮತ್ತು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಆಹ್ವಾನಿಸಿಲ್ಲ. ಇದು ಒಕ್ಕಲಿಗ ಸಮುದಾಯಕ್ಕೆ ಅವಮಾನದ ವಿಚಾರವಾಗಿದೆ. ಸರ್ಕಾರದ ಈ ಧೋರಣೆಯನ್ನು ಒಕ್ಕಲಿಗರ ಸಮುದಾಯ ಮತ್ತು ರಾಜ್ಯ ಒಕ್ಕಲಿಗರ ಸಂಘವು ತೀವ್ರ ಖಂಡಿಸುತ್ತದೆʼʼ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ.

ಪ್ರಧಾನಿ ಹುದ್ದೆ ಅಲಂಕರಿಸಿದ ಏಕೈಕ ಕನ್ನಡಿಗ ದೇವೇಗೌಡರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿಲ್ಲ ಹಾಗೂ ಅವರಿಗೆ ಆಹ್ವಾನ ಸಹ ನೀಡಿಲ್ಲ. ಹಾಗೆಯೇ ಎರಡು ಬಾರಿ ಮುಖ್ಯಮಂತ್ರಿಯಾಗಿ ಸದ್ಯ ಕೇಂದ್ರ ಸರಕಾರದಲ್ಲಿ ಉಕ್ಕು ಮತ್ತು ಬೃಹತ್‌ ಕೈಗಾರಿಕೆ ಸಚಿವರಾಗಿರುವ ಎಚ್‌.ಡಿ. ಕುಮಾರಸ್ವಾಮಿ ಅವರನ್ನೂ ಆಹ್ವಾನಿಸಿಲ್ಲ, ಆಹ್ವಾನ ಪತ್ರಿಕೆಯಲ್ಲೂ ಅವರ ಹೆಸರು ಮುದ್ರಿತವಾಗಿಲ್ಲ. ಸರಕಾರದ ಈ ನಡೆಗೆ ಸಮುದಾಯದಲ್ಲೇ ಆಕ್ಷೇಪ ಕೇಳಿಬಂದಿದೆ. ಜಾಲತಾಣಗಳಲ್ಲೂ ಈ ವಿಚಾರ ಸದ್ದು ಮಾಡಿದ್ದು, ಸರಕಾರ ಧೋರಣೆಯನ್ನು  ಒಕ್ಕಲಿಗರ ಸಂಘ ಖಂಡಿಸುವ ಮೂಲಕ ಪ್ರತಿರೋಧ ವ್ಯಕ್ತವಾಗಿವೆ.

Tags:    

Similar News